Thursday, September 19, 2024

ಪ್ರಾಯೋಗಿಕ ಆವೃತ್ತಿ

ಜುಲೈ ಕೊನೆಯ ವಾರದಲ್ಲಿ ಮೈಷುಗರ್ ಆರಂಭವಾಗುವ ವಿಶ್ವಾಸ

ಜುಲೈ ಕೊನೆಯ ವಾರದ ಹೊತ್ತಿಗೆ ಮೈಷುಗರ್ ಪ್ರಾರಂಭವಾಗುವ ವಿಶ್ವಾಸವಿದೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ತಿಳಿಸಿದರು. ಮಂಡ್ಯ ನಗರದಲ್ಲಿರುವ ಮೈಷುಗರ್ ಕಾರ್ಖಾನೆಗೆ ಭೇಟಿ ನೀಡಿದ ವಿವಿಧ ಸಂಘಟನೆಗಳ ಮುಖಂಡರು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಪಾಟೀಲ ಅಪ್ಪಾಸಾಹೇಬ ಅವರ ಜೊತೆ ಕಾರ್ಖಾನೆಯಲ್ಲಿ ನಡೆಯುತ್ತಿರುವ ರಿಪೇರಿ ಕೆಲಸಗಳನ್ನು ವೀಕ್ಷಣೆ ಮಾಡಿದರು.

ಈ ಬಗ್ಗೆ ನುಡಿ ಕರ್ನಾಟಕ.ಕಾಮ್ ಜೊತೆ ಮಾತನಾಡಿದ ರೈತ ನಾಯಕಿ ಸುನಂದಾ ಜಯರಾಮ್ ಜುಲೈ ಕೊನೆಯ ವಾರದಲ್ಲಿ ಕಾರ್ಖಾನೆ ಆರಂಭವಾಗುವ ಹಿನ್ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳ ನಾಯಕರು ಇಂದು ಕಾರ್ಖಾನೆಗೆ ಭೇಟಿ ನೀಡಿದ್ದೇವೆ.

ಬಾಯ್ಲರ್, ಕಬ್ಬು ಅರೆಯುವ ಮಿಲ್ ಗಳು, ಕಬ್ಬು ಹೋಗುವ ಲೈನಿಂಗ್, ವಿವಿಧ ಯಂತ್ರಗಳ ದುರಸ್ತಿ ಮೊದಲಾದ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ್ದೇವೆ. ಇದರಿಂದ ಜುಲೈ ಕೊನೆಯಲ್ಲಿ ಕಾರ್ಖಾನೆ ಪ್ರಾರಂಭವಾಗುವ ವಿಶ್ವಾಸ ನಮಗೆ ಮೂಡಿದೆ ಎಂದರು.

ಕಾರ್ಖಾನೆ ಪ್ರಾರಂಭಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರು 50ಕೋಟಿ ರೂ.ಹಣಕಾಸಿನ ನೆರವನ್ನು ಘೋಷಣೆ ಮಾಡಿದ್ದು,ಅದರಲ್ಲಿ 3.50 ಕೋಟಿ ರೂಪಾಯಿಗಳನ್ನು ಬಿಡುಗಡೆ ಆಗಿದೆ. ಈ ಹಣದಲ್ಲಿ ಕಾರ್ಖಾನೆಯ ರಿಪೇರಿ ಕೆಲಸಗಳು ನಡೆಯುತ್ತಿವೆ. ಸರ್ಕಾರ ಘೋಷಿಸಿರುವ ಸಂಪೂರ್ಣ ಹಣ ಕಾರ್ಖಾನೆಗೆ ಬಳಕೆಯಾಗಬೇಕು. ಮೂಲ ಬಂಡವಾಳ, ಇನ್ನಿತರ ಬಂಡವಾಳಕ್ಕೆ ಬಳಕೆಯಾಗಬೇಕು ಎಂದರು.

ಮೈಷುಗರ್ ಕಾರ್ಖಾನೆ ವ್ಯಾಪ್ತಿಯಲ್ಲಿ 8ಲಕ್ಷ ಟನ್ ಕಬ್ಬು ಬೆಳೆಯಲಾಗಿದೆ. ಈಗಾಗಲೇ ಕಾರ್ಖಾನೆಯಲ್ಲಿ ಒಂದು ಲಕ್ಷ ಟನ್ ಕಬ್ಬಿಗೆ ರೈತರು ಒಪ್ಪಿಗೆ ಮಾಡಿಕೊಂಡಿದ್ದಾರೆ. ಮೈಷುಗರ್ ನಮ್ಮ ಕಾರ್ಖಾನೆ ಎಂದು ರೈತರು ಕಬ್ಬನ್ನು ಒಪ್ಪಿಗೆ ಮಾಡಿಸಬೇಕು. ಎಲ್ಲರ ಸಹಕಾರ ನೀಡಿದರೆ 5ಲಕ್ಷ ಟನ್ ಅರೆಯಬಹುದು ಎಂದು ತಿಳಿಸಿದರು.

ಖಾಸಗಿ ಕಾರ್ಖಾನೆಗಳು ಕಬ್ಬು ಒಪ್ಪಿಗೆ ಮಾಡಿಕೊಳ್ಳಲು ತೆರೆದಿರುವ ಕಚೇರಿಗಳನ್ನು ಮುಚ್ಚಿಸಲು ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದೇವೆ.ಅವರು ಆದೇಶ ಹೊರಡಿಸಿದ್ದಾರೆ. ಇದರಿಂದ ನಮ್ಮ ಕಬ್ಬು ಕಾರ್ಖಾನೆಗೆ ಸಿಗಲಿದೆ. ಕಾರ್ಖಾನೆಗೆ ಕೋಣನಹಳ್ಳಿ ಕೆರೆಯಿಂದ ನೀರು ಸರಬರಾಜು ಮಾಡುವ ಕಾಮಗಾರಿ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು ಕಾಮಗಾರಿಯನ್ನು ಶೀಘ್ರ ಮುಗಿಸಿ ಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಖಾನೆಯ ಉತ್ತಮವಾಗಿರುವ ಒಂದು ಮಿಲ್ಲನ್ನು ಸಿದ್ಧಗೊಳಿಸಲಾಗುತ್ತಿದೆ. ಪುಣೆ ಹಾಗೂ ಹೈದರಾಬಾದ್‌ನ ಎರಡು ಕಂಪನಿಗಳಿಂದ ಈಗಾಗಲೇ ಯಂತ್ರಗಳ ದುರಸ್ತಿ ಕಾರ್ಯ ಭರದಿಂದ ಸಾಗಿದೆ. 200 ಮಂದಿ ಕಾರ್ಮಿಕರ ಅಗತ್ಯವಿದೆ. ಈಗಾಗಲೇ 100 ಮಂದಿ ಕಾರ್ಮಿಕರು ಆಗಮಿಸಿದ್ದು, ಶನಿವಾರದೊಳಗೆ ಇನ್ನುಳಿದ 10೦ ಮಂದಿ ಕಾರ್ಮಿಕರು ಆಗಮಿಸಲಿದ್ದಾರೆ. ಎಲ್ಲ ಕಾರ್ಮಿಕರಿಗೂ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಎಂಡಿ ಪಾಟೀಲ ಅಪ್ಪಾ ಸಾಹೇಬ್ ಹೇಳಿದರು.

ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರಲ್ಲಿ ವಿಆರ್‌ಎಸ್ ತೆಗೆದುಕೊಂಡ ನೌಕರರಿಗೆ ಬಾಕಿ ಉಳಿದಿರುವ 3.9 ಕೋಟಿ ರೂ.ಗಳನ್ನು ತೀರುವಳಿ ಮಾಡಬೇಕಾಗಿದೆ. ಇನ್ನುಳಿದ ಅನುದಾನದಲ್ಲಿ ಕಾರ್ಖಾನೆ ಆರಂಭಿಸುವ ಸರ್ಕಾರದ ಆದೇಶದ ಇದೆ ಎಂದು ತಿಳಿಸಿದರು.

ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣಶಂಭೂನಹಳ್ಳಿ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ರೈತ ಮುಖಂಡಾದ ಮುದ್ದೇಗೌಡ,ಬೋರಲಿಂಗಯ್ಯ ,ಕನ್ನಡ ಸೇನೆ ಸಂಘಟನೆಯ ಮಂಜುನಾಥ್, ಸಿಐಟಿಯುನ ಸಿ.ಕುಮಾರಿ, ಕೃಷಿ ಪ್ರಾಂತ ರೈತಸಂಘದ ಟಿ.ಎಲ್.ಕೃಷ್ಣೇಗೌಡ, ಟಿ.ಯಶವಂತ, ಕೃಷಿ ಕೂಲಿಕಾರರ ಸಂಘದ ಪುಟ್ಟಮಾಧು, ದಸಂಸ ಮುಖಂಡ ಎಂ.ವಿ.ಕೃಷ್ಣ ಸೇರಿದಂತೆ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!