Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ ಚಂದು ಅವರಿಗೆ ಅಭಿನಂದನೆ

ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ಪ್ರೇಮಿ, ರೈತಪರ ಹೋರಾಟಗಾರ, ಸಾಹಿತಿ, ಸಹಕಾರ ಸಂಘಟಕ, ಗಾಂಧಿವಾದಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ ಚಂದು ಅವರನ್ನು ಶಾಸಕ ದಿನೇಶ್ ಗೂಳಿಗೌಡ ಅವರು ಅಭಿನಂದಿಸಿದರು.

ಬಳಿಕ ಮಾತನಾಡಿದ ಶಾಸಕ ದಿನೇಶ್ ಗೂಳಿಗೌಡ, ಮದ್ದೂರಿನವರೇ ಆದ ಕೆ.ಟಿ. ಚಂದು ಅವರ ಸೇವೆಯನ್ನು ಪರಿಗಣಿಸಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ರಾಜ್ಯ ಸರ್ಕಾರ ಗೌರವಿಸಿದೆ. ಇದರಿಂದ ಒಬ್ಬ ನೈಜ ಸಾಧಕರನ್ನು ಗುರುತಿಸಿದಂತೆ ಆಗಿದೆ ಎಂದು ಹೇಳಿದರು.

94 ವರ್ಷ ವಯಸ್ಸಿನ ಹಿರಿಯ ಚೇತನರಾಗಿರುವ ಇವರು ಶಿಕ್ಷಣ ಪ್ರೇಮಿಯಾಗಿದ್ದು ಗ್ರಾಮೀಣ ರೈತ ಮಕ್ಕಳ ಅನುಕೂಲಕ್ಕಾಗಿ ಪ್ರಾಥಮಿಕ ಹಂತದಿಂದ ಪದವಿ ಹಂತದವರೆಗೆ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಸಂಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಮಾಡುತ್ತಿದ್ದಾರೆ. ಇಂಥವರ ಸೇವೆ ನಮಗೆಲ್ಲರಿಗೂ ಆದರ್ಶ ಎಂದರು.

ಸಾಹಿತ್ಯದಲ್ಲೂ ಅಪಾರ ಕೊಡುಗೆ

ಇದರ ಹೊರತಾಗಿಯೂ ಅವರು ಸಾಕಷ್ಟು ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಸ್ವತಃ ಬರಹಗಾರರಾಗಿರುವ ಕೆ.ಟಿ.ಚಂದು ಅವರು, ಹಲವು ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರ, ರಾಜ್ಯ ಮತ್ತು ಸ್ಥಳೀಯ ಪತ್ರಿಕೆಗಳಿಗೆ ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಸಾಹಿತ್ಯಾಭಿಮಾನಿಯಾದ ಇವರು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ 3 ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಯಶಸ್ವಿಗೊಳಿಸಿದ್ದಾರೆ. ತಾಲ್ಲೂಕು ಕನ್ನಡ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು ಎಂದು ಶ್ಲಾಘಿಸಿದರು.

ಯುವಜನತೆಗೆ ಮಾರ್ಗದರ್ಶನ 

ಗಾಂಧಿವಾದಿಯಾದ ಇವರು ಖಾದಿಧಾರಿಯಾಗಿ ಗಾಂಧೀಜಿಯವರ ನಡೆ-ನುಡಿ, ತತ್ವ-ಸಿದ್ಧಾಂತಗಳಿಂದ ಸ್ಪೂರ್ತಿಗೊಂಡು ಗಾಂಧೀ ಪ್ರೇರಿತ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದಾರೆ. ಗಾಂಧಿ ಅನುಯಾಯಿಯೂ ಆಗಿರುವ ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಬಣ್ಣಿಸಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರೀಯ ಕಾಂಗ್ರೆಸ್ ನಾಯಕರೂ ಆಗಿದ್ದ ಎಚ್.ಕೆ ವೀರಣ್ಣಗೌಡರ ದತ್ತು ಪುತ್ರರೂ ಆಗಿರುವ ಇವರು ನಾಡಿಗೆ ಅನೇಕ ಅವಿಸ್ಮರಣೀಯ ಕೊಡುಗೆಯನ್ನು ನೀಡಿದ್ದಾರೆ. ಇಂಥ ಒಬ್ಬ ಸಾಧಕರು ನಮ್ಮ ಮದ್ದೂರು ತಾಲೂಕಿನವರು ಎಂಬುದು ನನಗೆ ಮತ್ತು ನಮ್ಮ ತಾಲೂಕಿನ ಹಾಗೂ ಜಿಲ್ಲೆಯ ಜನತೆಗೆ ಮತ್ತೊಂದು ಹೆಮ್ಮೆಯ ವಿಷಯವಾಗಿದೆ ಶಾಸಕ ದಿನೇಶ್ ಗೂಳಿಗೌಡ ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಮದ್ದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕದಲೂರು ರಾಮಕೃಷ್ಣ, ಪುರಸಭಾ ಸದಸ್ಯರಾದ ಅಮರ್‌ ಮತ್ತು ಅರುಣ್‌, ಮಂಡ್ಯ ಜಿಲ್ಲೆಯ ರೈತ ಕಿಸಾನ್‌ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್‌ ಕುಮಾರ್‌, ಕೌಡ್ಲೆ ಚನ್ನಪ್ಪ, ಎಂ.ಎಲ್. ಸಂತೋಷ್‌ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಮಹಾಲಿಂಗು, ಎಚ್.ಕೆ.ವೀರಣ್ಣ ಗೌಡ ಕಾಲೇಜಿನ ಉಪನ್ಯಾಸಕ ವರ್ಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!