Thursday, September 19, 2024

ಪ್ರಾಯೋಗಿಕ ಆವೃತ್ತಿ

”ಮಂಡ್ಯದ ಜೋಡೆತ್ತುಗಳಾದ ಚಲುವರಾಯಸ್ವಾಮಿ – ನರೇಂದ್ರಸ್ವಾಮಿಗೆ ಸಚಿವ ಸ್ಥಾನ ನೀಡಲು ಆಗ್ರಹ”

ಕಳೆದ 5 ವರ್ಷಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ತುಂಬಿದ ಜೋಡೆತ್ತುಗಳಾದ ನಾಗಮಂಗಲ ಶಾಸಕ ಎನ್.ಚಲುವರಾಯಸ್ವಾಮಿ ಹಾಗೂ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಿದರೆ, ಜಿಲ್ಲೆಯಲ್ಲಿ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆ ಆಗಲಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯವಾಗಿದೆ.

ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ಜಯಭೇರಿ ಬಾರಿಸಿತ್ತು. ಜೆಡಿಎಸ್ ಅಭ್ಯರ್ಥಿಗಳು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಹುದೊಡ್ಡ ಅಂತರದಿಂದ ಸೋಲಿಸಿದ್ದರು. ಈ ಸೋಲಿನ ಆಘಾತದಿಂದ ಕಾಂಗ್ರೆಸ್ಸಿಗರು ಬಹುಬೇಗ ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಉದ್ಭವಿಸಿತ್ತು. ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದ ಚಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿಯವರ ಸೋಲು ಜಿಲ್ಲಾ ರಾಜಕಾರಣಕ್ಕೆ ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಿರಲಿಲ್ಲ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೀನಾಯ ಸೋಲಿನಿಂದ ಕಂಗಾಲಾಗಿ ಕುಳಿತಿದ್ದ ಸಂದರ್ಭದಲ್ಲಿ ಪ್ರವೇಶ ಮಾಡಿದ ಚಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದರು. ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಜೋಡೆತ್ತುಗಳು ನಿಧಾನವಾಗಿ ಕಾಂಗ್ರೆಸ್ ಪಕ್ಷವನ್ನು ಸೋಲಿನ ಸುಳಿಯಿಂದ ಮೇಲೆತ್ತಲು ನಿರ್ಧರಿಸಿದರು. ಅದರಂತೆ ಮೊದಲು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿನೇಶ್ ಗೂಳಿಗೌಡ ಅವರನ್ನು ಮೊದಲು ಗೆಲ್ಲಿಸಿಕೊಂಡರು.

ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಬೆಂಬಲಿತ ಸುಮಾರು 600 ಕ್ಕೂ ಹೆಚ್ಚು ಸದಸ್ಯರಿದ್ದರೂ, ತಂತ್ರಗಾರಿಕೆ ಮಾಡಿ ಜೆಡಿಎಸ್ ಪಕ್ಷದ ಅಪ್ಪಾಜಿ ಗೌಡರನ್ನು ಸೋಲಿಸಿ ದಿನೇಶ್ ಗೂಳಿಗೌಡರನ್ನು ಗೆಲ್ಲಿಸಿಕೊಂಡರು. ಇದು ಮಂಕಾಗಿದ್ದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿತು. ನಂತರ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಮಧು ಜಿ. ಮಾದೇಗೌಡರನ್ನು ಜೆಡಿಎಸ್ ಅಭ್ಯರ್ಥಿ ಎಚ್.ಕೆ. ರಾಮು ಎದುರು ಗೆಲ್ಲಿಸಿಕೊಳ್ಳುವ ಮೂಲಕ ಎರಡನೇ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದು ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ತುಂಬಿತು. ಎರಡು ಚುನಾವಣೆಗಳಲ್ಲೂ ಚಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಇಬ್ಬರೂ ತಮ್ಮ ಶಕ್ತಿ ಮೀರಿ ಕೆಲಸ ಮಾಡಿದ ಪರಿಣಾಮ ವಿಧಾನ ಪರಿಷತ್ ನ ಎರಡು ಸ್ಥಾನಗಳು ಕಾಂಗ್ರೆಸ್ ಪಾಲಾಯಿತು.

ಈಗ ನಡೆದ ವಿಧಾನಸಭಾ ಚುನಾವಣೆಯಲ್ಲೂ ಈ ಜೋಡೆತ್ತುಗಳು ಶ್ರಮವಹಿಸಿ ದುಡಿದ ಪರಿಣಾಮ ಆರು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದೆ. ಇದಕ್ಕೆ ಕಾರಣರಾದ ಚಲುವರಾಯಸ್ವಾಮಿ ಹಾಗೂ ಪಿ.ಎಂ‌. ನರೇಂದ್ರಸ್ವಾಮಿ ಇಬ್ಬರಿಗೂ ಸಚಿವ ಸ್ಥಾನ ನೀಡಬೇಕೆಂಬುದು ಕಾಂಗ್ರೆಸ್ ಕಾರ್ಯಕರ್ತರ ಪ್ರಬಲವಾದ ಒತ್ತಾಯವಾಗಿದೆ.

ಜಿಲ್ಲೆಯ ಹಿರಿಯ ರಾಜಕಾರಣಿ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿರುವ ಚಲುವರಾಯಸ್ವಾಮಿ ಅವರು ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.ಕೆಪಿಸಿಸಿ ಉಪಾಧ್ಯಕ್ಷ, ಎಐಸಿಸಿ ಸದಸ್ಯರಾಗಿರುವ
ಅವರಿಗೆ ಸಚಿವ ಸ್ಥಾನ ನೀಡಿದರೆ ಒಕ್ಕಲಿಗ ಸಮುದಾಯ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷದ ಕಡೆಗೆ ಶಾಶ್ವತವಾಗಿ ಬರುವಂತೆ ಮಾಡಬಹುದು. ಒಕ್ಕಲಿಗ ಪಾಳೇಪಟ್ಟಿನ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ವರಿಷ್ಠರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ನಾಯಕತ್ವಕ್ಕೆ ಸೆಡ್ಡು ಹೊಡೆದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭದ್ರ ಬುನಾದಿ ಹಾಕಿದ ಶ್ರೇಯಸ್ಸು ಚಲುವರಾಯಸ್ವಾಮಿ ಅವರದ್ದು. ಹಾಗಾಗಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಕಾಂಗ್ರೆಸ್ ಕಾರ್ಯಕರ್ತರು ಮನವಿಯಾಗಿದೆ.

ಹಾಗೇಯೇ ಪಿ.ಎಂ‌. ನರೇಂದ್ರಸ್ವಾಮಿ ಅವರು ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಒಮ್ಮೆ ಸಚಿವರಾಗಿಯೂ ಸೇವೆ ಸಲ್ಲಿಸಿದ ಹಿರಿಮೆ ಅವರದ್ದಾಗಿದೆ. ಕೆಪಿಸಿಸಿ ಉಪಾಧ್ಯಕ್ಷರು, ಎಐಸಿಸಿ ಸದಸ್ಯರೂ ಆಗಿರುವ ನರೇಂದ್ರಸ್ವಾಮಿ ಅವರ ಯುವ ನಾಯಕತ್ವಕ್ಕೆ ಜಿಲ್ಲೆಯಲ್ಲಿ ಉತ್ತಮ ಜನ ಬೆಂಬಲವಿದೆ. ಯಾವುದೇ ಚುನಾವಣೆ ಇರಲಿ, ಶಕ್ತಿ ಮೀರಿ ಶ್ರಮ ಹಾಕುವ ನರೇಂದ್ರಸ್ವಾಮಿ ಅವರ ಕಾರ್ಯವೈಖರಿ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಗೊತ್ತಿದೆ. ಹಳೇ ಮೈಸೂರು ಭಾಗದ ಪರಿಶಿಷ್ಟ ಜಾತಿ ಮುಖಂಡರಲ್ಲಿ ನರೇಂದ್ರಸ್ವಾಮಿ ಅವರು ಅಗ್ರಗಣ್ಯರು. ಪಕ್ಷ ನಿಷ್ಠೆ, ಸಂಘಟನೆ, ನಾಯಕತ್ವದ ವಿಚಾರದಲ್ಲಿ ಹಳೆ ಮೈಸೂರು ಭಾಗದ ದಲಿತ ರಾಜಕಾರಣಿಗಳಲ್ಲೇ ಮುಂಚೂಣಿಯಲ್ಲಿರುವ ಅವರ ಪಕ್ಷ ನಿಷ್ಠೆಯನ್ನು ಗುರುತಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಕಾರ್ಯಕರ್ತರ ಒತ್ತಾಯವಾಗಿದೆ.

ಈ ಬಾರಿ ಮಳವಳ್ಳಿ ಕ್ಷೇತ್ರದಲ್ಲಿ 46,862 ಮತಗಳ ಭಾರಿ ಅಂತರದಿಂದ ಆಯ್ಕೆಯಾಗಿರುವ ಪಿ.ಎಂ‌ ನರೇಂದ್ರ ಸ್ವಾಮಿಯವರ ವರ್ಚಸ್ಸು ಹಳೇ ಮೈಸೂರು ಭಾಗದಲ್ಲೂ ಪಸರಿಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಲಾಭವನ್ನೇ ತರಲಿದೆ. ಹಳೇ ಮೈಸೂರು ಭಾಗದ ದಲಿತ ಸಮುದಾಯದ ಆಶಾಕಿರಣ ವಾಗಿರುವ ನರೇಂದ್ರ ಸ್ವಾಮಿಯವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗುವ ಜೊತೆಗೆ ಹಳೆ ಮೈಸೂರು ಭಾಗದಲ್ಲೂ ದಲಿತ ಸಮುದಾಯದ ಮತ ಬ್ಯಾಂಕ್ ಕಾಂಗ್ರೆಸ್ ಪರವಾಗಿ ನಿಲ್ಲಲಿದೆ ಎಂಬು ಕಾಂಗ್ರೆಸ್ ಮುಖಂಡರ ವಾದವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯಲ್ಲಿ ಜೋಡೆತ್ತುಗಳಂತೆ ಪಕ್ಷ ಸಂಘಟನೆ ಮಾಡುತ್ತಿರುವ ಚಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಇಬ್ಬರಿಗೂ ಸಚಿವ ಸ್ಥಾನ ಕೊಡಬೇಕೆಂಬುದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಮನವಿಯಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!