Saturday, May 18, 2024

ಪ್ರಾಯೋಗಿಕ ಆವೃತ್ತಿ

ಸ್ನೇಹಿತೆ ಮನೆಯಲ್ಲೆ ಹಣ-ಚಿನ್ನಾಭರಣ ದೋಚಿದ ಮಹಿಳೆಗೆ 6 ವರ್ಷ ಜೈಲು


  • 6 ವರ್ಷ ಕಠಿಣ ಸಜೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು

  • ತೊರೆಶೆಟ್ಟಹಳ್ಳಿ ಗ್ರಾಮದ ಹೊನ್ನಯ್ಯನ ಪತ್ನಿ ಜಯಮ್ಮ ಶಿಕ್ಷೆಗೊಳಗಾದ ಮಹಿಳೆ

     

ಮದ್ದೂರು ತಾಲೂಕಿನ ತೊರೆಶೆಟ್ಟಹಳ್ಳಿಯಲ್ಲಿ ಕಳೆದ 9 ವರ್ಷಗಳ ಹಿಂದೆ ಸ್ನೇಹಿತೆಯ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದ ಮಹಿಳೆಯೊಬ್ಬಳಿಗೆ ಪಟ್ಟಣದ ಜೆಎಂಎಫ್ಸಿ 1ನೇ ಅಪರ ಸಿವಿಲ್ ನ್ಯಾಯಾಲಯ 6 ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.

ಗ್ರಾಮದ ಹೊನ್ನಯ್ಯನ ಪತ್ನಿ ಜಯಮ್ಮ (45) ಶಿಕ್ಷೆಗೊಳಗಾದ ಮಹಿಳೆ. ಈಕೆಗೆ 1ನೇ ಅಪರ ಸಿವಿಲ್ ನ್ಯಾಯಾಧೀಶ ಕೆ.ವಿ.ಕೋನಪ್ಪ ಅವರು 6 ವರ್ಷ ಕಠಿಣ ಸಜೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಘಟನೆ ವಿವರ 

ತೊರೆಶೆಟ್ಟಹಳ್ಳಿ ಗ್ರಾಮದ ಕೆಂಪೇಗೌಡರ ಪತ್ನಿ ಸುಮಿತ್ರಾ ಹಾಗೂ ಜಯಮ್ಮ ಪರಸ್ಪರ ಸ್ನೇಹಿತರಾಗಿದ್ದರು. 2012ರ ಡಿಸೆಂಬರ್ 31ರಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಸುಮಿತ್ರ ಅವರು ನೀರು ತರಲು ಮನೆಯಿಂದ ಹೊರ ಹೋದ ಸಂದರ್ಭದಲ್ಲಿ ಆಕೆಯ ಮನೆಯಲ್ಲಿ ಜಯಮ್ಮ ಅಡಗಿ ಕುಳಿತಿದ್ದಳು. ಈ ಸಂದರ್ಭದಲ್ಲಿ ಮನೆಯ ಬೀರುವಿನಲ್ಲಿದ್ದ 1.16 ಲಕ್ಷ ರೂ. ಮೌಲ್ಯದ 58 ಗ್ರಾಂ ತೂಕದ ಚಿನ್ನದ ಆಭರಣ ಮತ್ತು 18 ಸಾವಿರ ನಗದು ಹಣವನ್ನು ಕಳವು ಮಾಡಿ, ನಂತರ ಮನೆಯ ಹಿತ್ತಲ ಬಾಗಿಲಿನಿಂದ ಜಯಮ್ಮ ಪರಾರಿಯಾಗಿದ್ದಳು.

ಸುಮಿತ್ರ ಮನೆಗೆ ಮರಳಿ ಬಂದು ನೋಡಲಾಗಿ ಚಿನ್ನ ಮತ್ತು ನಗದು ಹಣ ಕಳುವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಸುಮಿತ್ರಳ ಗಂಡ ಕೆಂಪೇಗೌಡ ಕೆಸ್ತೂರು ಪೊಲೀಸರಿಗೆ ದೂರು ನೀಡಿದ್ದರು. ಅಂದಿನ ಪಿಎಸ್‌ಐ ಆಗಿದ್ದ ಯಶ್ವಂತ್‌ಕುಮಾರ್ ಜಯಮ್ಮಳ ಮೇಲೆ ಅನುಮಾನಗೊಂಡು ಆಕೆಯ ಬೆರಳಚ್ಚು ಪರಿಶೀಲನೆ ನಡೆಸಿದಾಗ ಈಕೆಯೇ ಚಿನ್ನಾಭರಣ ಕಳವು ಮಾಡಿರುವ ವಿಚಾರ ಗೊತ್ತಾಯಿತು. ನಂತರ ಜಯಮ್ಮಳ ವಿರುದ್ಧ 454 ಹಾಗೂ 380ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೋನಪ್ಪ ಅವರು, ಆರೋಪಿ ಜಯಮ್ಮಳಿಗೆ 454ರಡಿ 3 ವರ್ಷ ಕಠಿಣ ಸಜೆ ಹಾಗೂ ದಂಡ ಮತ್ತು 380ರಡಿಯಲ್ಲಿ ಮತ್ತೆ 3 ವರ್ಷ ಕಠಿಣ ಸಜೆ ಹಾಗೂ 5 ಸಾವಿರ ಸೇರಿದಂತೆ ಒಟ್ಟು 6 ವರ್ಷ ಕಠಿಣ ಸಜೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಜಿ.ಸುರೇಶ್ ವಾದ ಮಂಡಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!