Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ದೇವಾಲಯಗಳ ಅಭಿವೃದ್ಧಿಗೆ 4.33 ಕೋಟಿ ರೂ.‌ ಖರ್ಚು: ರಾಮಲಿಂಗರೆಡ್ಡಿ

ಕಳೆದ ಎರಡು ವರ್ಷಗಳಲ್ಲಿ ಮಂಡ್ಯ ಜಿಲ್ಲೆಯ ಮುಜರಾಯಿ ದೇಗುಲಗಳ ಅಭಿವೃದ್ಧಿಗೆ ಸರ್ಕಾರ 4.33 ಕೋಟಿ ರೂ. ಗಳನ್ನು ಖರ್ಚು ಮಾಡಿದೆ ಎಂದು ಸಾರಿಗೆ ಮತ್ತು ಧಾರ್ಮಿಕ ದತ್ತಿ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.
ವಿಧಾನ ಪರಿಷತ್‌ ಶಾಸಕ ದಿನೇಶ ಗೂಳಿಗೌಡ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ವಿಧಾನ ಪರಿಷತ್‌ನಲ್ಲಿ ಉತ್ತರ ನೀಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಎ ವರ್ಗದ 10, ಬಿ ವರ್ಗದ 13 ಹಾಗೂ ಸಿ ವರ್ಗದ 2099 ದೇವಾಲಯಗಳಿವೆ. 2022-23 ರಲ್ಲಿ ಈ ದೇವಾಲಯಗಳ ಅಭಿವೃದ್ಧಿಗೆ 90 ಲಕ್ಷ ಮಾತ್ರ ಖರ್ಚು ಮಾಡಲಾಗಿತ್ತು. 2024-25 ರಲ್ಲಿ 1.28 ಕೋಟಿ ರೂ.ಗಳನ್ನು, 2024-25 ರಲ್ಲಿ 3.05 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

nudikarnataka.com Dinesh Gooligowda

ಎಲ್ಲಿ ಎಷ್ಟು ದೇವಾಲಯಗಳಿವೆ…?

ಕೆ.ಆರ್‌.ಪೇಟೆ, ಪಾಂಡವಪುರ, ಮತ್ತು ಮಳವಳ್ಳಿಯಲ್ಲಿ ತಲಾ 2, ಮಂಡ್ಯದಲ್ಲಿ 1, ಶ್ರೀರಂಗಪಟ್ಟಣದಲ್ಲಿ 3 ಸೇರಿ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 10 ಎ ದರ್ಜೆಯ ದೇವಾಲಯಗಳಿವೆ. ಮಂಡ್ಯದಲ್ಲಿ-3, ಮದ್ದೂರಿನಲ್ಲಿ-5 ಮಳವಳ್ಳಿ ಮತ್ತು ಶ್ರೀರಂಗಪಟ್ಟಣದಲ್ಲಿ ತಲಾ-2, ನಾಗಮಂಗಲದಲ್ಲಿ-1 ಸೇರಿ ಒಟ್ಟು 13 ಬಿ ದರ್ಜೆಯ ದೇವಾಲಯಗಳಿವೆ. ಮಂಡ್ಯ-287, ಮದ್ದೂರು-280, ಮಳವಳ್ಳಿ-261, ಶ್ರೀರಂಗಪಟ್ಟಣ-143, ಪಾಂಡವಪುರ-227,  ನಾಗಮಂಗಲ- 561, ಕೆ.ಆರ್‌.ಪೇಟೆ-340 ಸೇರಿ ಒಟ್ಟು 2099 ಸಿ ದರ್ಜೆಯ ದೇವಾಲಯಗಳಿವೆ.

ಎಷ್ಟು ಖರ್ಚು..?

ಮಂಡ್ಯ ತಾಲೂಕಿಗೆ 2022-23 ರಲ್ಲಿ 4 ಲಕ್ಷ ರೂ., 2023-24 ರಲ್ಲಿ 21 ಲಕ್ಷ ರೂ., 2024-25 ನೇ ಸಾಲಿನಲ್ಲಿ 76.60 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಮದ್ದೂರು ತಾಲೂಕಿನ ದೇವಾಲಯಗಳಿಗೆ 2022 ರಲ್ಲಿ 10 ಲಕ್ಷ ರೂ. ಖರ್ಚು ಮಾಡಲಾಗಿತ್ತು. 2023-24 ನೇ ಸಾಲಿನಲ್ಲಿ 17.50 ಲಕ್ಷ ರೂ. ಖರ್ಚು ಮಾಡಲಾಯಿತು. 2024-25 ನೇ ಸಾಲಿಗೆ 35 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಮಳವಳ್ಳಿ ತಾಲೂಕಿಗೆ 2022 ರಲ್ಲಿ 33 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. 2023-24 ರಲ್ಲಿ 37.75 ಲಕ್ಷ ರೂ. ಬಿಡುಗಡೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಇನ್ನೂ ಹಣ ಬಿಡುಗಡೆಯಾಗಿಲ್ಲ.

ಪಾಂಡವಪುರ ತಾಲೂಕಿನ ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿಗಾಗಿ 2022- ರಲ್ಲಿ 15 ಲಕ್ಷ ರೂ. ಬಿಡುಗಡೆ ಆಗಿತ್ತು. 2023-24 ರಲ್ಲಿ 5 ಲಕ್ಷ ರೂ. ಬಿಡುಗಡೆಯಾಗಿತ್ತು. ಈ ವರ್ಷ ಇನ್ನೂ ಹಣ ಬಂದಿಲ್ಲ. ಶ್ರೀರಂಗಪಟ್ಟಣಕ್ಕೆ 2022 ರಲ್ಲಿ ಯಾವುದೇ ಅನುದಾನ ದೊರೆತಿರಲಿಲ್ಲ. 2023 ರಲ್ಲಿ 10 ಲಕ್ಷ ರೂ. 2024 ನೇ ಸಾಲಿನಲ್ಲಿ 1.79 ಕೋಟಿ ರೂ., ನಾಗಮಂಗಲ ತಾಲೂಕಿಗೆ 2022 ರಲ್ಲಿ 28 ಲಕ್ಷ ರೂ. ಬಿಡುಗಡೆ ಆಗಿತ್ತು. 2023 ರಲ್ಲಿ 35 ಲಕ್ಷ ರೂ., 2024 ರಲ್ಲಿ 14.50 ಲಕ್ಷ ರೂ. ಬಿಡುಗಡೆಯಾಗಿದೆ. ಕೆ.ಆರ್‌.ಪೇಟೆ ತಾಲೂಕಿಗೆ 2022 ರಲ್ಲಿ ಹಣ ಬಿಡುಗಡೆ ಆಗಿರಲಿಲ್ಲ. 2023 ರಲ್ಲಿ 2.50 ಲಕ್ಷ ರೂ. ಬಿಡುಗಡೆ ಆಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.

ಆದಾಯವೂ ಹೆಚ್ಚಳ

ದೇವಾಲಯಗಳ ಆದಾಯವೂ ಹೆಚ್ಚಿದೆ. 2022-23 ನೇ ಸಾಲಿನಲ್ಲಿ ಮುಜರಾಯಿ ದೇವಸ್ಥಾನಗಳ ಹುಂಡಿಯಿಂದ ಒಟ್ಟು 8.48 ಕೋಟಿ ರೂ. ಸಂಗ್ರಹಿಸಲಾಗಿತ್ತು. 2023-24 ನೇ ಸಾಲಿನಲ್ಲಿ ಆ ಆದಾಯ 9.59 ಕೋಟಿ ರೂ.ಗೆ ಹೆಚ್ಚಳವಾಗಿದೆ. 2024-25 ರಲ್ಲಿ 18.08 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಎಂದು ಅವರು ವಿವರಿಸಿದ್ದಾರೆ. ಮೇಲು ಕೋಟೆಯ ಚೆಲುವನಾರಾಯಣ ಸ್ವಾಮಿ ದೇವಸ್ಥಾನವು ಅತಿ ಹೆಚ್ಚು ಆದಾಯ ಗಳಿಸಿದೆ. 2022-23 ಹಾಗೂ 2023-24 ನೇ ಸಾಲಿನ ಎರಡು ವರ್ಷಗಳಲ್ಲಿ 3.89 ಕೋಟಿ ರೂ. ಆದಾಯಗಳಿಸಿದೆ. ಶ್ರೀರಂಗ ಪಟ್ಟಣದ ಗಂಜಾಂ ವಿಷಾಂಬಾ ದೇವಾಲಯ 3.73 ಕೋಟಿ ರೂ. ಆದಾಯ ಗಳಿಸುವ ಮೂಲಕ 2 ನೇ ಸ್ಥಾನದಲ್ಲಿದೆ. ಶ್ರೀರಂಗಪಟ್ಟಣ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ 2.60 ಕೋಟಿ ರೂ. ಆದಾಯ ಬಂದಿದೆ. ಆರತಿ ಉಕ್ಕಡ ಗ್ರಾಮದ ಅಹಲ್ಯಾದೇವಿ ದೇವಸ್ಥಾನವು 2.54 ಕೋಟಿ ರೂ., ಮುತ್ತತ್ತಿ ಆಂಜನೇಯ ಸ್ವಾಮಿ ದೇವಸ್ಥಾನವು 1.01 ಕೋಟಿ ರೂ. ಆದಾಯ ಗಳಿಸಿದೆ ಎಂದು ಸಚಿವರು ಪ್ರತಿ ದೇವಾಲಯದ ಆದಾಯದ ಪಟ್ಟಿ ನೀಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ