Saturday, May 18, 2024

ಪ್ರಾಯೋಗಿಕ ಆವೃತ್ತಿ

ಅಕ್ರಮ ದಾಸ್ತಾನು ಮಾಡಿದ್ದ 58.65 ಮೆ.ಟನ್ ಯೂರಿಯಾ ವಶ


  • 1173 ಯೂರಿಯಾ ಚೀಲಗಳನ್ನು ವಶಪಡಿಸಿಕೊಂಡ ಕೃಷಿ ಇಲಾಖೆಯ ಅಧಿಕಾರಿಗಳು 

  • ನಾಗಮಂಗಲ ತಾಲ್ಲೂಕಿನ ಹೊಣಕೆರೆ ಸಮೀಪದ ಚೀಣ್ಯ ಗ್ರಾಮದಲ್ಲಿ ಪತ್ತೆಯಾದ ಅಕ್ರಮ ದಾಸ್ತಾನು

ನಾಗಮಂಗಲ ತಾಲ್ಲೂಕಿನ ಹೊಣಕೆರೆ ಹೋಬಳಿ ಚೀಣ್ಯ ಗ್ರಾಮದ ಕೋಳಿ ಫಾರಂನ ಪಕ್ಕದಲ್ಲಿರುವ ಕೊಟ್ಟಿಗೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 58.65 ಮೆ. ಟನ್ (1173 ಚೀಲಗಳು) ಯೂರಿಯಾ ಚೀಲಗಳನ್ನು ಕೃಷಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಚೀಣ್ಯ ಗ್ರಾಮದ ರಮೇಶ್ ಬಿನ್ ಕರಿಸಿದ್ದೇಗೌಡ ಮತ್ತು ಅವರ ಮಗ ದರ್ಶನ್ ಬಿನ್ ರಮೇಶ್ ಅವರ ಜಮೀನಿನಲ್ಲಿರುವ ಕೋಳಿಫಾರಂನಲ್ಲಿ ಸರ್ಕಾರದ ವತಿಯಿಂದ ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸುವ ಅಗತ್ಯ ವಸ್ತುವಾದ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಖಚಿತ ಮಾಹಿತಿ ಬಂದ ಮೇರೆಗೆ ಕೃಷಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಗೊಬ್ಬರವನ್ನು ವಶಕ್ಕೆ ಪಡೆದಿದ್ದಾರೆ

ಜಂಟಿ ಕೃಷಿ ನಿರ್ದೇಶಕ ಅಶೋಕ.ವಿ.ಎಸ್, ಉಪ ಕೃಷಿ ನಿರ್ದೇಶಕರಾದ ನಾಗರಾಜು, ಮಮತ, ಸಹಾಯಕ ಕೃಷಿ ನಿರ್ದೇಶಕರಾದ (ಜಾರಿದಳ) ಪ್ರತಿಭಾ, ಶ್ರೀಹರ್ಷ (ವಿಷಯ ತಜ್ಞ), ಜಯರಾಮ್ ಮತ್ತಿತರರ ತಂಡ ಜ.18ರ ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಿದಾಗ ಈ ಅಕ್ರಮ ದಾಸ್ತಾನು ಪತ್ತೆಯಾಗಿದೆ.

ಕೋಳಿ ಫಾರಂನ ಕಟ್ಟಡದಲ್ಲಿರುವ ರೂಂ ಅನ್ನು ಪರಿಶೀಲಿಸಲಾಗಿ ಅದರಲ್ಲಿ ಸರ್ಕಾರದ ವತಿಯಿಂದ ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸುವ ಅಗತ್ಯ ವಸ್ತು ಯೂರಿಯಾ ರಸಗೊಬ್ಬರದ ವಿವಿಧ ಕಂಪನಿಯ ಖಾಲಿ ಚೀಲಗಳು ಮತ್ತು ವಿವಿಧ ಬ್ರಾಂಡ್‍ನ ಖಾಲಿ ಚೀಲಗಳು ಮತ್ತು ಎರಡು ಹೊಲಿಗೆ ಯಂತ್ರಗಳು, ಒಂದು ಜನರೇಟರ್ ಹಾಗೂ ದಾರದ ಉಂಡೆಗಳು ಇರುವುದು ಕಂಡು ಬಂದಿದ್ದು, ಇವುಗಳನ್ನು ಸೀಜ್ ಮಾಡಲಾಗಿದೆ.

ಸರ್ಕಾರದ ವತಿಯಿಂದ ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸುವ ಅಗತ್ಯ ವಸ್ತು ಯೂರಿಯಾ ರಸಗೊಬ್ಬರವನ್ನು ಯಾವುದೇ ಪರವಾನಗಿ ಇಲ್ಲದೇ, ಎಲ್ಲಿಂದಲೋ ತಂದು ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಲುವಾಗಿ ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡು ಬಂದಿರುವುದರಿಂದ ಆರೋಪಿಗಳ ಮೇಲೆ ಅಗತ್ಯ ವಸ್ತುಗಳ ಕಾಯ್ದೆಯಡಿ ಕಲಂ-25(1), 19(ಅ) ಮತ್ತು ಕಲಂ-420 ಐಪಿಸಿ ಅಡಿಯಲ್ಲಿ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಅಕ್ರಮ ದಾಸ್ತಾನು ಕಂಡು ಬಂದರೆ ದೂರು ನೀಡಿ

ಯಾವುದೇ ವ್ಯಕ್ತಿ ಅನಧಿಕೃತವಾಗಿ ರಸಗೊಬ್ಬರ ದಾಸ್ತಾನು, ಅಕ್ರಮ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಶಂಕೆ ಅಥವಾ ಅನುಮಾನ ಬಂದಲ್ಲಿ, ರೈತರು ಹಾಗೂ ಸಾರ್ವಜನಿಕರು ದೂರು ನೀಡವಂತೆ ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಂಡ್ಯ ವಿಭಾಗದ ಜಂಟಿ ಕೃಷಿ ನಿರ್ದೇಶಕ ಅಶೋಕ.ವಿ.ಎಸ್ ಮೊ.8277933600, ಮಂಡ್ಯ ವಿಭಾಗದ ಉಪ ಕೃಷಿ ನಿರ್ದೇಶಕಿ ಕೆ.ಮಾಲತಿ ಮೊ.8277933601, ಪಾಂಡವಪುರ ವಿಭಾಗದ ಉಪ ಕೃಷಿ ನಿರ್ದೇಶಕಿ ಹೆಚ್.ಎನ್.ಮಮತ ಮೊ. 8277933602, ಮಂಡ್ಯ ಸಹಾಯಕ ಕೃಷಿ ನಿರ್ದೇಶಕಿ (ಜಾರಿದಳ) ಪ್ರತಿಭಾ.ಹೆಚ್.ಜಿ ಮೊ.8277933609 ಇವರಿಗೆ ಕರೆ ಮಾಡಿ ದೂರು ನೀಡಬಹುದು.

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸೌಮ್ಯಶ್ರೀ (ಮಂಡ್ಯ ತಾಲ್ಲೂಕು) ಮೊ.8277933612, ಪರಮೇಶ (ಮದ್ದೂರು ತಾಲ್ಲೂಕು) ಮೊ.8277933626, ಜಯರಾಮಯ್ಯ (ಮಳವಳ್ಳಿ ತಾಲ್ಲೂಕು) ಮೊ.8277933648, ನಿಶಾಂತ್ ಕೀಲಾರ (ಶ್ರೀರಂಗಪಟ್ಟಣ ತಾಲ್ಲೂಕು) ಮೊ.8277933656, ಪ್ರಿಯದರ್ಶಿನಿ (ಪಾಂಡವಪುರ ತಾಲ್ಲೂಕು)ಮೊ.8277933667, ಮಂಜುನಾಥ್ (ಕೆ.ಆರ್.ಪೇಟೆ ತಾಲ್ಲೂಕು) ಮೊ.8277933676, ಜಯರಾಮ ಬಿ.ಡಿ (ನಾಗಮಂಗಲ ತಾಲ್ಲೂಕು) ಮೊ.8277933687 ಈ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮಂಡ್ಯ ಜಂಟಿ ಕೃಷಿ ನಿರ್ದೇಶಕ ಅಶೋಕ್.ವಿ.ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!