Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಹಿಳಾ ಆಯೋಗವನ್ನು ತಲುಪಿದ ಹಾಸನದ ‘ಪೆನ್‌ಡ್ರೈವ್’| ಎಸ್ಐಟಿ ರಚಿಸಲು ಸಿಎಂ ಸಿದ್ದರಾಮಯ್ಯಗೆ ಪತ್ರ

ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಹಾಸನದ ಪೆನ್‌ಡ್ರೈವ್‌ ಬಗ್ಗೆ ಮಹಿಳಾ ಆಯೋಗ ಅಧಿಕೃತ ಹೇಳಿಕೆ ನೀಡಿದ್ದು, “ಹಾಸನದ ಪೆನ್‌ಡ್ರೈವ್ ನಮ್ಮ ಕಚೇರಿಗೂ ತಲುಪಿದೆ” ಎಂದು ತಿಳಿಸಿದೆ.

ಇಂದು(ಗುರುವಾರ) ಬೆಂಗಳೂರಿನ ಕಾವೇರಿ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, “ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಇರುವ ಪೆನ್ ಡ್ರೈವ್ ಮಹಿಳಾ ಆಯೋಗದ ಕಚೇರಿಗೂ ತಲುಪಿದೆ. ದೇಶದಲ್ಲೇ ತಲೆ ತಗ್ಗಿಸಲು ತಗ್ಗಿಸುವ ಘಟನೆ ಇದು. ಹೆದರಿಸಿ, ನಂಬಿಸಿ ಈ ವೀಡಿಯೋ ಮಾಡಲಾಗಿದೆ. ಈವರೆಗೆ ಮಹಿಳಾ ಆಯೋಗಕ್ಕೆ ಸಂತ್ರಸ್ತರು ಯಾರು ಕೂಡ ಬಂದಿಲ್ಲ. ಆದರೂ ಎರಡು ದೂರುಗಳು ಬಂದಿದೆ. ಈ ಬಗ್ಗೆ ಎಸ್ಐಟಿ ರಚಿಸಲು ಸಿಎಂಗೆ ಮನವಿ ಮಾಡಲಾಗಿದೆ” ಎಂದು ತಿಳಿಸಿದರು.

“ಹರಿದಾಡುತ್ತಿರುವ ಪೆನ್‌ಡ್ರೈವ್‌ನಲ್ಲಿ ಮಹಿಳೆಯರ ಮೇಲೆ ನಡೆಸಲಾಗುತ್ತಿರುವ ಲೈಂಗಿಕ ಹಿಂಸೆಯ ಕುರಿತು ಮತ್ತು ಸಾವಿರಾರು ಅಮಾಯಕ ಹೆಣ್ಣು ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು. ಮೊಬೈಲ್‌ನಲ್ಲಿ ಖಾಸಗಿ ವಿಡಿಯೋವನ್ನು ಚಿತ್ರೀಕರಿಸಿಕೊಂಡು, ಬ್ಲಾಕ್‌ಮೇಲ್ ಮಾಡುತ್ತಿರುವುದಾಗಿ ಸಮೂಹ ಮಾಧ್ಯಮಗಳಲ್ಲಿ ಪ್ರಚಾರವಾಗಿರುತ್ತದೆ. ಅಲ್ಲದೇ ಪ್ರಭಾವಿ ರಾಜಕಾರಣಿಗಳು ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ, ಕೆಲವರ ಮೇಲೆ ಅತ್ಯಾಚಾರ ಸಹ ಮಾಡುತ್ತಿರುವ ತುಣುಕುಗಳಿರುವ ಪೆನ್‌ಡ್ರೈವ್‌ಗಳು ಈಗ ಜನ ಸಾಮಾನ್ಯರ ಕೈಗೆ ಸಿಕ್ಕಿ, ಇಡೀ ಸಮಾಜ ತಲೆ ತಗ್ಗಿಸುವ ಸ್ಥಿತಿ ಏರ್ಪಟ್ಟಿದೆ” ಎಂದು ನಾಗಲಕ್ಷ್ಮಿ ಚೌಧರಿ ಬೇಸರಿಸಿದ್ದಾರೆ.

“ಮಹಿಳೆಯರ ಬದುಕು ಹಾಗೂ ಘನತೆಯನ್ನು ನಾಶ ಮಾಡುತ್ತಿರುವ ಬಗ್ಗೆ ಸಮೂಹ ಮಾಧ್ಯಮಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದಲ್ಲೂ ಸಹ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಸಂಘಟನೆಗಳಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಗಳು ಸ್ವೀಕೃತವಾಗಿದೆ. ಎಸ್‌ಡಿಪಿಐ ಹಾಗೂ ಮಹಿಳಾ ದೌರ್ಜನ್ಯ ವೇದಿಕೆಯವರು ಈಗಾಗಲೇ ಲಿಖಿತ ದೂರು ನೀಡಿದ್ದಾರೆ. ವಿಡಿಯೋ ಮಾಡಿದವರು, ವೈರಲ್ ಮಾಡಿದವರ ವಿರುದ್ಧವೂ ಸೂಕ್ತ ಕ್ರಮಕ್ಕೆ ಆಯೋಗವು ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ” ಎಂದು ಆಯೋಗದ ಅಧ್ಯಕ್ಷೆ ತಿಳಿಸಿದ್ದಾರೆ.

“ಹಲವು ಮಹಿಳೆಯರನ್ನು ಬಲವಂತದಿಂದ ಲೈಂಗಿಕ ಕ್ರಿಯೆಗೆ ಒತ್ತಾಯಪಡಿಸುವ ಮೂಲಕ ಚಿತ್ರೀಕರಿಸಲಾಗಿದೆ ಎನ್ನಲಾಗುತ್ತಿದ್ದು, ಚಿತ್ರೀಕರಣ ಮಾಡಿದ ವ್ಯಕ್ತಿ ಮತ್ತು ಅದನ್ನು ಸಾರ್ವಜನಿಕಗೊಳಿಸಿದ ವ್ಯಕ್ತಿಯನ್ನು ತನಿಖೆಗೆ ಒಳಪಡಿಸುವ ಮೂಲಕ ಮಹಿಳೆಯರ ಘನತೆ ಹಾಗೂ ಆಸ್ತಿತ್ವಕ್ಕೆ ಹಾನಿ ಉಂಟು ಮಾಡುತ್ತಿರುವವರನ್ನು ಶೀಘ್ರವಾಗಿ ಪತ್ತೆಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಲು ಆದೇಶ ನೀಡಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಆದೇಶ ನೀಡುವಂತೆ ತಿಳಿಸಿದ್ದೇನೆ” ಎಂದು ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!