Friday, November 20, 2026

ಪ್ರಾಯೋಗಿಕ ಆವೃತ್ತಿ

ರೈತರ ಬೇಡಿಕೆ ಈಡೇರಿಸದೆ ಬಂಧಿಸಿರುವುದು ನಾಚಿಕೆಗೇಡು : ಮಧುಚಂದನ್

ಕಾರ್ಪೊರೇಟ್ ಉದ್ಯಮಿಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡುವ ಸರ್ಕಾರ ರೈತರ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸದೆ ಅವರನ್ನು ಬಂಧಿಸಿರುವುದು ನಾಚಿಕೆಗೇಡು ಎಂದು ರೈತ ನಾಯಕ ಎಸ್.ಸಿ‌ ಮಧು ಚಂದನ್ ಆರೋಪಿಸಿದರು.

ಮಂಡ್ಯ ನಗರದ ವಿ.ಸಿ. ಫಾರಂ ಬಳಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬೆಂಗಳೂರು-ಮೈಸೂರು ರಸ್ತೆ ತಡೆ ಚಳುವಳಿ ನಡೆಸಿದ ನೂರಾರು ರೈತ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿ ಚಾಮುಂಡೇಶ್ವರಿ ನಗರದ ಬಳಿ ಇರುವ ಡಿಎಆರ್ ಮೈದಾನಕ್ಕೆ ಪೊಲೀಸರು ಕರೆತಂದಿದ್ದರು.

ಈ ಸಂದರ್ಭದಲ್ಲಿ ನುಡಿ ಕರ್ನಾಟಕ.ಡಾಟ್ ಕಾಮ್ ನೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಕಬ್ಬು ಬೆಲೆ ಜಾಸ್ತಿಯಾಗಿಲ್ಲ. ಕಳೆದ ಹತ್ತು ವರ್ಷಗಳ ಹಿಂದೆ ಪ್ರತಿ ಲೀಟರ್ ಎಣ್ಣೆ ಬೆಲೆ 60 ರೂಪಾಯಿ ಇತ್ತು. ಈಗ 150ರೂ. ಆಗಿದೆ. ಪೆಟ್ರೋಲ್, ಡೀಸೆಲ್ ದರ ಡಬಲ್ ಆಗಿದೆ. ಗೊಬ್ಬರ ಮೂರು ಪಟ್ಟು ಜಾಸ್ತಿಯಾಗಿದೆ. ಸರ್ಕಾರಿ ಮತ್ತು ಖಾಸಗಿ ಶಾಲೆಯ ಫೀಸ್ ಹೆಚ್ಚಾಗಿದೆ, ಎಂಎಲ್ಎ ಮತ್ತು ಎಂಪಿಗಳು ಪಡೆಯುವ ಭತ್ಯೆಗಳು ಹೆಚ್ಚಾಗಿವೆ. ಆದರೆ ಕಳೆದ ಹತ್ತು ವರ್ಷಗಳಿಂದ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆಯಲ್ಲಿ ಹೆಚ್ಚಳ ಮಾಡದಿರುವುದು ನಾಚಿಕೆಗೇಡು ಎಂದರು.

ವ್ಯವಸಾಯಕ್ಕೆ ರೈತರು ಖರೀದಿಸುವ ಎಲ್ಲಾ ವಸ್ತುಗಳ ಬೆಲೆಗಳು ಜಾಸ್ತಿಯಾಗಿದೆ. ರೈತರು ಜಿಎಸ್‌ಟಿ ಕಟ್ಟುತ್ತಿಲ್ವಾ? ರೈತರು ಬದುಕಬಾರದು, ಅವರು ಆತ್ಮಹತ್ಯೆಗೆ ಶರಣಾಗಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಯಸುತ್ತಿವೆ. ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಬಂಡವಾಳಶಾಹಿಗಳ ಸಾಲ ಮನ್ನ ಮಾಡುವ ಸರ್ಕಾರ ದಿನ ಬೆಳಗಾದರೆ ಇಂಥವರಿಗೆ ಆಹಾರ ನೀಡುವ ರೈತರನ್ನು ಕಡೆಗಣಿಸಿದೆ. ಅವರ ಸಣ್ಣ ಬೇಡಿಕೆಗಳನ್ನು ಈಡೇರಿಸಲು ಅಶಕ್ತವಾಗಿದೆ ಎಂದು ಕಿಡಿ ಕಾರಿದರು.

ಮಾತು ತಪ್ಪಿದ ಸಿಎಂ

ಕಳೆದ ಒಂದು ವರ್ಷದಿಂದ ರೈತ ಸಂಘ ಪ್ರತಿ ಟನ್ ಕಬ್ಬಿಗೆ 4,500 ನೀಡಬೇಕು, ಹಾಲಿಗೆ ಲೀಟರಿಗೆ 40ರೂ. ನೀಡಬೇಕು,ಕೆ ಆರ್ ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಬೇಕು, ಪಂಪುಸೆಟ್ಟುಗಳಿಗೆ ಮೀಟರ್ ಅಳವಡಿಸಬಾರದು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವು ಬಾರಿ ಚಳುವಳಿ, ಮುತ್ತಿಗೆ ಪ್ರತಿಭಟನೆ ನಡೆಸಿದೆ. ಕಳೆದ ಸಪ್ಟಂಬರ್ 9ರಂದು ಐದಾರು ಸಾವಿರ ರೈತರು ಮಂಡ್ಯದ ಸಿಲ್ವರ್ ಜುಗುಲಿ ಪಾರ್ಕ್ ನಲ್ಲಿ ಸೇರಿ ರೈತರ 18 ಬೇಡಿಕೆಗಳನ್ನು ಈಡೇರಿಸದಿದ್ದರೆ ದಸರಾ ದಿನದಂದು ರಸ್ತೆ ತಡೆ ಚಳುವಳಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದೆವು‌. ಆದರೆ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಲು ಸ್ಪಂದಿಸಿಲ್ಲ ಇದೊಂದು ರೈತ ವಿರೋಧಿ ಸರ್ಕಾರ ಎಂದು ಆರೋಪಿಸಿದರು.

ಜುಲೈ 11ರಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಒಂದು ವಾರ ಸಮಯ ಕೊಡಿ ರೈತರ ಸಮಸ್ಯೆಗಳನ್ನು ಬಗೆಹರಿಸುವೆ ಎಂದು ಹೇಳಿದ್ದರು. ಆದರೆ ಅವರು ಸುಳ್ಳು ಹೇಳಿ ಕಳಿಸಿದ್ದರೆಂಬುದು ಸಾಬೀತಾಗಿದೆ. ಪ್ರಮಾಣವಚನ ಮಾಡುವ ಸಂದರ್ಭದಲ್ಲಿ ರೈತರ ಶಾಲು ಹಾಕಿಕೊಂಡು ರೈತರೇ ದೇಶದ ಬೆನ್ನೆಲುಬು, ರೈತರಿಲ್ಲದೆ ದೇಶವಿಲ್ಲ ಎಂದು ಹೇಳುತ್ತಾರೆ. ಆದರೆ ರೈತರಿಗೆ ಕನಿಷ್ಠ ಬೆಂಬಲ ಕೊಡದೆ ಸಾಯಿಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಬೇಸರದಿಂದ ನುಡಿದರು.

ಸರ್ಕಾರದ ಸಂಭ್ರಮ

ದಸರಾ ದಿನ ರೈತರನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ಸಂಭ್ರಮ ಆಚರಿಸುತ್ತಿದೆ. ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗದ ಸರ್ಕಾರ ರೈತರನ್ನು ಬಂಧಿಸುವ ಮೂಲಕ ಅವರ ಹೋರಾಟವನ್ನು ಹತ್ತಿಕ್ಕಲು ಹೊರಟಿದೆ. ಆದರೆ ರೈತರ ಹೋರಾಟ ಎಂದಿಗೂ ನಿಲ್ಲುವುದಿಲ್ಲ ರೈತರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಇನ್ನೂ ಉಗ್ರವಾದ ಹೋರಾಟವನ್ನು ಮಾಡುವುದಾಗಿ ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ