Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾಯಕತತ್ವ ಪಾಲಿಸಿ ಬಸವಜಯಂತಿ ಆಚರಿಸಿ : ಚಂದ್ರಶೇಖರ ಸ್ವಾಮೀಜಿ

ವಿಶ್ವಗುರು ಬಸವಣ್ಣನವರ ಕಾಯಕ, ದಾಸೋಹ ತತ್ವದಂತೆ ಪ್ರತಿಯೊಬ್ಬರೂ ಸೋಮಾರಿಗಳಾಗದೆ ಕಾಯಕವನ್ನೇ ಜೀವನದ ಗುರಿಯನ್ನಾಗಿಸಿಕೊಂಡು ದೇಶದ ಅಭಿವೃದ್ಧಿಗೆ ಮುನ್ನಡೆಯಬೇಕೆಂದು ಬಿ.ಜಿ.ಪುರ ಹೊರಮಠದ ಪೀಠಾಧ್ಯಕ್ಷ ಶ್ರೀಚಂದ್ರಶೇಖರ ಮಹಾಸ್ವಾಮೀಜಿ ಕರೆ ನೀಡಿದರು.

ಮದ್ದುರು ತಾಲ್ಲೂಕಿನ ಎಸ್.ಐ.ಹೊನ್ನಲಗೆರೆಯ ಸಂಸ್ಕೃತಿ ಭವನದಲ್ಲಿ ಶರಣರಸಂಘಟನಾ ವೇದಿಕೆ ಹಾಗೂ ಹಿಂದೂ ದೇವಾಲಯಗಳ ಅರ್ಚಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತ್ಯೋತ್ಸವ ಹಾಗೂ ಪೂಜ್ಯಸಿದ್ದಗಂಗಾಶ್ರೀಗಳ ಜನ್ಮದಿನಾಚರಣೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಹನ್ನೆರಡನೇ ಶತಮಾನದಲ್ಲೇ ವಿಶ್ವಕ್ಕೆ ದುಡಿಮೆಯ ಮಹತ್ವವನ್ನು ಸಾರಿದ ಬಸವಣ್ಣನವರು ಪ್ರತಿಯೊಬ್ಬರ ಏಳ್ಗೆ ಕಾಯಕದಿಂದ ಮಾತ್ರ ಸಾಧ್ಯ ಎಂಬುದನ್ನು ತಮ್ಮ ವಚನಸಾರದಲ್ಲಿ ತಿಳಿಸಿದ್ದಾರೆ. ಬಸವಣ್ಣನವರು ದುಡಿಯುವ ವರ್ಗದ ಪರವಾಗಿ ನಿಂತು ಮೌಢ್ಯವನ್ನು ವಿರೋಧಿಸಿ ಸಮಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ಮಹಾಮಾನವತಾವಾದಿ ಎಂದು ಹೇಳಿದರು.

ಕಾಯಕವೇ ಕೈಲಾಸ ಎಂದು ದುಡಿಮೆಯ ಮಹತ್ವವನ್ನು ಅಣ್ಣನವರು ಸಾರಿದ್ದಾರೆ. ಇಂದಿನ ಯುವಜನತೆ ಯಾವುದೇ ಕೆಲಸವನ್ನು ಮೇಲು ಕೀಳೆಂದು ನೋಡದೆ ದುಡಿಯುವ ಮೂಲಕ ತಮ್ಮ ಬದುಕು ಹಸನಾಗಿಸಿಕೊಳ್ಳಬೇಕು. ದುಡಿದು ತಿನ್ನುವುದು ಪ್ರಸಾದ ದುಡಿಯದೆ ತಿನ್ನುವುದು ಕೂಳು ಎಂಬ ಸಿದ್ದಗಂಗಾಶ್ರೀಗಳ ವಾಣಿಯನ್ನು ಅರಿತಾಗ ಮಾತ್ರ ಸಾರ್ಥಕ ಬದುಕು ನಡೆಸಲು ಸಾಧ್ಯ ಎಂದರು.

ವಚನಗಳ ಮೂಲಕ ಮೇಲು ಕೀಳೆಂಬ ಭಾವನೆಯನ್ನು ಕಿತ್ತೊಗೆಯುವ ಸಂದೇಶ ಸಾರಿದ ಜಗಜ್ಯೋತಿ ಬಸವಣ್ಣನವರನ್ನು ಜಯಂತಿ ಆಚರಿಸುವ ಮೂಲಕ ಸ್ಮರಣೆ ಮಾಡುವ ಬದಲು ಪ್ರತಿನಿತ್ಯ ಅಣ್ಣನವರ ಆದರ್ಶಗಳನ್ನು ಪಾಲಿಸಿದಾಗ ದೇಶ ಶಾಂತಿ, ಸಮೃದ್ಧಿಯಿಂದ ಕೂಡಿರಲು ಸಾಧ್ಯವಾಗುತ್ತದೆ. ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಸ್ವಾಮೀಜಿ ತಿಳಿಸಿದರು.

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಪಂಡಿತಪಾಮರರಿಗೆ ಸೀಮಿತವಾಗಿದ್ದ ಸಾಹಿತ್ಯ, ಧಾರ್ಮಿಕ, ರಾಜಕೀಯ ಕ್ಷೇತ್ರವನ್ನು ಸಾಮಾಜಿಕ ಕ್ರಾಂತಿಯ ಮೂಲಕ ಸರ್ವರೂ ಸಮಾನರೆಂದು ಸಾರಿದ ಬಸವಣ್ಣನವರು ಜನಸಾಮಾನ್ಯರ ಕೈಯಲ್ಲೂ ವಚನಗಳನ್ನು ಬರೆಸಿ ಕನ್ನಡ ಭಾಷೆಯನ್ನು ದೈವಭಾಷೆಯನ್ನಾಗಿಸಿದ ವಿಶ್ವಕಂಡ ಏಕೈಕ ದಾರ್ಶನಿಕ ಎಂದರು.

ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ ಮಾತನಾಡಿ, ಸಿಎಂ ಸಿದ್ಧರಾಮಯ್ಯನವರು ಬಸವಣ್ಣನವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕೆಂಬ ಆದೇಶ ಪಾಲನೆಯಾಗಬೇಕಿದೆ. ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯವಹಿಸಿರುವುದು ಖಂಡನೀಯ. ಪೊಲೀಸ್ ಠಾಣೆ, ಆಸ್ಪತ್ರೆಗಳು, ಶಾಲಾಕಾಲೇಜುಗಳು ಸೇರಿದಂತೆ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಅಣ್ಣನವರ ಭಾವಚಿತ್ರ ಹಾಕಿ ಬಸವಜಯಂತಿ ಆಚರಿಸಬೇಕೆಂದು ಆಗ್ರಹಿಸಿದರು.

ಅಖಿಲಭಾರತ ವೀರಶೈವಲಿಂಗಾಯತ ಮಹಾಸಭಾ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿದರು. ಎಸ್.ಐ.ಹೊನ್ನಲಗೆರೆ ಶಿವಕ್ಷೇತ್ರ ಮಠದ ಪೀಠಾಧ್ಯಕ್ಷ ಶ್ರೀ ಶಿವಲಿಂಗಶಿವಾಚಾರ್ಯಸ್ವಾಮೀಜಿ ಆಶೀರ್ವಚನ ನೀಡಿದರು. ಕಾಂಗ್ರೆಸ್ ಮುಖಂಡ ಹೆಬ್ಬಣಿ ಬಬ್ರುವಾಹನ ಮಾತನಾಡಿದರು.

ಇದೇ ಸಂದರ್ಭದಲ್ಲಿ ಉತ್ತಮಸಮಾಜ ಸೇವಾಪ್ರಶಸ್ತಿಯನ್ನು ಸಮಾಜಸೇವಕ ಎಂ.ಆರ್.ಮಂಜುನಾಥ್, ಡಿ.ಸುನೀಲ್, ನಿಜಗುಣಬಿದರಹಳ್ಳಿ, ಆರ್.ಪ್ರಭುಸ್ವಾಮಿಯವರಿಗೆ ನೀಡಿ ಗೌರವಿಸಲಾಯಿತು.

ಶರಣರ ಸಂಘಟನೆ ವೇದಿಕೆ ಅಧ್ಯಕ್ಷ ಕಾಡುಕೊತ್ತನಹಳ್ಳಿ ನಂದೀಶ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾಧ್ಯಕ್ಷೆ ಕವಿತಾ ಶ್ರೀಕಂಠಸ್ವಾಮಿ ನಿರೂಪಿಸಿ ವಂದಿಸಿದರು. ಅರ್ಚಕರ ಸಂಘದ ಅಧ್ಯಕ್ಷ ಶಿವಲಿಂಗಯ್ಯ ಮೆಣಸಗೆರೆ, ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ, ಡಾ.ಮನೋಹರ್, ಚಂದಗಾಲು ಅರುಣ್‌ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!