Tuesday, May 21, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ರೈತ ವಿರೋಧಿ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ ರದ್ಧತಿಗೆ ಆಗ್ರಹಿಸಿ ಪ್ರತಿಭಟನೆ

ಅರಣ್ಯ ಹಕ್ಕು ಕಾಯ್ದೆ-2006 ಖಾತರಿ ಪಡಿಸಿರುವ ರೈತರ, ಕೃಷಿ ಕೂಲಿಕಾರರ, ಆದಿವಾಸಿಗಳ ಭೂಮಿ ಹಕ್ಕನ್ನು ಹಾಗೂ ಗ್ರಾಮ ಸಭಾ, ಸ್ಥಳೀಯ ಸಮುದಾಯಗಳ ಹಕ್ಕುಗಳನ್ನು ಕಡೆಗಣಿಸುವ, ಕಲ್ಲಿದ್ದಲು ಹಾಗೂ ಇನ್ನಿತರೆ ಗಣಿಗಾರಿಕೆಗೆ ಅವಕಾಶ ನೀಡಲು ಬೃಹತ್ ಪ್ರಮಾಣದಲ್ಲಿ ಅರಣ್ಯ ನಾಶಕ್ಕೆ ಅವಕಾಶ ನೀಡುವ ಕಾರ್ಪೋರೇಟ್ ಪರ ರೈತ-ಕೂಲಿಕಾರರ-ಆದಿವಾಸಿ ವಿರೋಧಿ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ-2023 ಅನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಮಳವಳ್ಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್ ಎಲ್ ಭರತ್ ರಾಜ್ ಮಾತನಾಡಿ, ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ-2023 ಅತ್ಯಂತ ಆದಿವಾಸಿ ವಿರೋಧಿಯಾದ ಮಸೂದೆಯಾಗಿದ್ದು, ಆದಿವಾಸಿ ಹಾಗೂ ಇತರ ಸಾಂಪ್ರದಾಯಿಕ ಅರಣ್ಯ ವಾಸಿಗಳ ಮೇಲಿನ ಐತಿಹಾಸಿಕವಾದ ಅನ್ಯಾಯವನ್ನು ಮತ್ತಷ್ಟು ಉತ್ತೇಜಿಸಲಿದೆ ಹಾಗೂ ಅರಣ್ಯ ಹಕ್ಕಿಗೆ ಗಂಭೀರವಾದ ಧಕ್ಕೆಯನ್ನು ಉಂಟು ಮಾಡಿ, ಆದಿವಾಸಿಗಳು ಮತ್ತು ಇತರ ಪಾರಂಪರಿಕ ಸಮುದಾಯಗಳ ಹಿತರಕ್ಷಣೆಗೆ ಇದ್ದ ಅವಕಾಶವನ್ನು ಕಿತ್ತುಕೊಳ್ಳುವ ಅಂಶಗಳನ್ನು ಒಳಗೊಂಡಿದೆ ಎಂದು ದೂರಿದರು.

ಅರಣ್ಯ ಸಂರಕ್ಷಣಾ ಕಾಯ್ದೆಯ ಪ್ರಸ್ತಾಪಿತ ತಿದ್ದುಪಡಿಯು ಪರಿಶಿಷ್ಟ ಪಂಗಡ ಹಾಗೂ ಇತರ ಪಾರಂಪರಿಕ ಅರಣ್ಯ ವಾಸಿಗಳ ಹಕ್ಕನ್ನು ಎತ್ತಿ ಹಿಡಿಯುವ ಸಂವಿಧಾನಾತ್ಮಕ ಅವಕಾಶಗಳಿಗೆ ಗಂಭೀರವಾದ ಚ್ಯುತಿ ಉಂಟು ಮಾಡಲಿದೆ. ಬಹಳ ಸ್ಪಷ್ಟವಾಗಿ ಪರಿಶಿಷ್ಟ ಪ್ರದೇಶಗಳಿಗೆ ಪಂಚಾಯಿತಿ ವಿಸ್ತರಣೆ ಕಾಯ್ದೆ-1996, ಅರಣ್ಯ ಸಂರರಕ್ಷಣಾ ಕಾಯ್ದೆ-1980, ಭೂ ಸ್ವಾಧೀನ ಪರಿಹಾರ ಹಾಗು ಪುನರ್ವಸತಿ ಕಾಯ್ದೆ 2013, ರಾಷ್ಟ್ರೀಯ ಅರಣ್ಯ ಧೋರಣೆ-1988 ಹಾಗೂ ಅರಣ್ಯ ಹಕ್ಕು ಕಾಯ್ದೆ-2006 ಹಾಗೂ ಸಂವಿಧಾನದ 5 ಮತ್ತು 6ನೇ ಪಟ್ಟಿಯ ಖಾತರಿಗಳನ್ನು ಕೂಡ ಕಡೆಗಣಿಸುತ್ತದೆ. ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ 4(1), 3 ಮತ್ತು 5ರ ಪ್ರಕಾರ ಪರಿಶಿಷ್ಟ ಪಂಗಡ ಹಾಗೂ ಇತರೆ ಅರಣ್ಯ ವಾಸಿಗಳು ಪಡೆದಿರುವ ಅರಣ್ಯ ಹಕ್ಕನ್ನು ಅಮಾನ್ಯಗೊಳಿಸುತ್ತದೆ ಎಂದು ವಿವರಿಸಿದರು.

ಅರಣ್ಯ ಭೂಮಿಯನ್ನು ಅರಣ್ಯತೇರ ಬಳಕೆಗೆ ಅವಕಾಶ ಕಲ್ಪಿಸಲು ಅರಣ್ಯದ ವ್ಯಾಖ್ಯಾನವನ್ನೇ ವಿರೂಪಗೊಳಿಸುತ್ತದೆ ಹಾಗೂ ಅರಣ್ಯ ಭೂಮಿಯನ್ನು ಅರಣ್ಯತೇರ ಎಂದು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ರಾಜ್ಯಾದ್ಯಂತ ಆದಿವಾಸಿಗಳುಹಾಗೂ ಇನ್ನಿತರ ಪಾರಂಪರಿಕ ಅರಣ್ಯ ವಾಸಿಗಳು, ಬಗ‌ರ್ ಹುಕುಂ ಸಾಗುವಳಿದಾರರು, ದಲಿತರು, ಕೃಷಿಕೂಲಿಕಾರರು ತಮ್ಮ ಜೀವನೋಪಾಯಕ್ಕಾಗಿ ಅವಲಂಭಿಸಿರುವ ಅರಣ್ಯ ಭೂಮಿ ಹಕ್ಕನ್ನು ಅತ್ಯಂತ ಬಲವಾದ ದೌರ್ಜನ್ಯದ ಮೂಲಕ ನಿರಾಕರಿಸುವ ಸರ್ಕಾರಗಳು, ಕಾರ್ಪೋರೇಟ್ ಕಂಪನಿಗಳ ಭೂ ದಾಹಕ್ಕೆ ಬೃಹತ್ ಪ್ರಮಾಣದಲ್ಲಿ ಅರಣ್ಯ ನಾಶವನ್ನು ನಡೆಸಲು ಅವಕಾಶ ಮಾಡಿಕೊಡುತ್ತಿರುವುದು ಜನವಿರೋಧಿ ಪರಿಸರ ವಿರೋಧಿ, ಕಾರ್ಪೋರೇಟ್ ಹಿತಾಸಕ್ತಿಯ ನಗ್ನ ಪ್ರದರ್ಶನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಪತ್ರವನ್ನು ಉಪ ತಹಶೀಲ್ದಾರ್ ಉಮೇಶರವರ ಮೂಲಕ ಪ್ರಧಾನ ಮಂತ್ರಿಗೆ ಸಲ್ಲಿಸಲಾಯಿತು. ಉಪ ವಲಯ ಅರಣ್ಯ ಅಧಿಕಾರಿ ಉಮೇಶ್, ಶಿವರಾಜ್ ಅವರಿಗೂ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ, ರಾಜ್ಯ ಸಮಿತಿ ಸದಸ್ಯರಾದ ಪ್ರಮೀಳಾ, ಗುರುಸ್ವಾಮಿ, ಶಿವಪ್ಪ, ಗಣೇಶ್ ಗೊಲ್ಲರಹಳ್ಳಿ, ಮಹದೇವು ಮಾರಗೌಡನಹಳ್ಳಿ,
ಕುಮಾರ್‌ ದಾಳನಕಟ್ಟೆ, ಬಿ.ಎಸ್.ಮಹೇಶ್‌ಕುಮಾರ್, ಬಸವರಾಜ್, ಸಿ.ಪಿ ಪ್ರಕಾಶ್,
ಚಿಕ್ಕೀರಪ್ಪ, ಶಿವಕುಮಾರ್, ಶಾಂತರಾಜ್, ಜಡೆ ಮಾದಯ್ಯ,  ರಾಜು ಮುಂತಾದವರು ಭಾಗವಹಿಸಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!