Thursday, September 19, 2024

ಪ್ರಾಯೋಗಿಕ ಆವೃತ್ತಿ

ಮುಡಾ ಹಗರಣ : ಸಿಎಂ ಕುಟುಂಬದ ವಿರುದ್ಧ ದಾಖಲೆ ಸಮೇತ ಆರೋಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿ

ಮೈಸೂರಿನ ಮುಡಾದಿಂದ ಮುಖ್ಯಮಂತ್ರಿಗಳ ಧರ್ಮಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ ಸ್ವತ್ತು. ಡಿನೋಟಿಫಿಕೇಷನ್ ಬಳಿಕ ನಾಲ್ಕು ವರ್ಷ ಏನೂ ಬೆಳವಣಿಗೆಯೇ ಆಗಿಲ್ಲ. ಸತ್ತವರ ಹೆಸರಿನಲ್ಲಿ ಜಮೀನು ಡಿ ನೋಟಿಫಿಕೇಷನ್ ಆಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಶನಿವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಭಾಮೈದ ಖರೀದಿ ಮಾಡಿರುವ ಮೈಸೂರಿನ ಕೆಸರೆ ಬಳಿಯ ಜಮೀನಿಗೆ ಮುಡಾ ಭೂಸ್ವಾಧೀನ ಮಾಡಿ ಪರಿಹಾರ ನೀಡಲಾಗಿದೆ. ಈಗಿರುವಾಗ ಇದು ಖಂಡಿತವಾಗಿಯೂ ಮುಡಾಗೆ ಸೇರಿದ ಜಮೀನು ಆಗುತ್ತದೆ. ಈ ಜಮೀನನ್ನು ಡಿ ನೋಟಿಫಿಕೇಷನ್ ಮಾಡಿ ಖರೀದಿಸಲಾಗಿದೆ. ಇದು ಕಾನೂನುಬಾಹಿರ ಎಂದು ಕೇಂದ್ರ ಸಚಿವರು ದೂರಿದರು.

ಇದೇ ವೇಳೆ ಕೇಂದ್ರ ಸಚಿವರು ಮಾಧ್ಯಮಗಳ ಮುಂದೆ ಹಗರಣಕ್ಕೆ ಸಂಬಂಧಿಸಿದ ಕೆಲ ಮಹತ್ವದ ದಾಖಲೆಗಳನ್ನು ಪ್ರದರ್ಶಿಸಿದರು.

ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು

ಸಿಎಂ ಸಿದ್ಧರಾಮಯ್ಯ ಅವರ ಧರ್ಮಪತ್ನಿಗೆ ದಾನ ಮಾಡಿದಾಗ ಕೃಷಿ ಭೂಮಿ ಎಂದು ತೋರಿಸುತ್ತಾರೆ. ಆದರೆ, ಆ ಜಾಗ ಭೂ ಪರಿವರ್ತನೆ ಆಗಿತ್ತು. ಜಮೀನಿನ ಹಿನ್ನಲೆಯನ್ನು ಯಾರೂ ಪರಿಶೀಲಿಸಲಿಲ್ಲ ಏಕೆ? ಭೂಮಿ ಬದಲಾವಣೆಯಾದಾಗ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದರು? ಎಂದು ಅವರು ಪ್ರಶ್ನಿಸಿದರು.

ಈ ಜಮೀನಿನ ಮೂಲದಾರರು ಲಿಂಗ ಆಲಿಯಾಸ್ ಜವರ ಎಂದಿದೆ. ಈ ಜಮೀನನ್ನು 1992ರಲ್ಲಿ ಮುಡಾ ತನ್ನ ವಶಕ್ಕೆ ಪಡೆಯುವ ನೋಟಿಫಿಕೇಷನ್ ಹೊರಡಿಸಿತ್ತು. 1995ರಲ್ಲಿ ಜಮೀನಿನ ಅಂತಿಮ ಭೂಸ್ವಾಧೀನದ ನೋಟಿಫಿಕೇಷನ್ ಆಗಿದೆ. ಆಗ 3 ಎಕರೆ 16 ಗುಂಟಗೆ 1992 ರಲ್ಲೇ ಈ ಜಮೀನಿಗೆ ಮುಡಾದಿಂದ ಕೋರ್ಟ್‌ಗೆ ಹಣ ಸಂದಾಯ ಆಗಿದೆ. ಜಮೀನಿನ ಪೋತಿಯೂ ಆಗಿದೆ. ಆದರೂ 1998ರಲ್ಲಿ ಲಿಂಗನ ಹೆಸರು ಬರುತ್ತದೆ. ಡಿ ನೋಟಿಫಿಕೇಷನ್ ಆಗುತ್ತದೆ. ಈ ಜಮೀನು ಡಿ ನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದರು ಎಂದು ಮಾಹಿತಿ ನೀಡಿದರು.

1988ರಲ್ಲಿ ಲಿಂಗ ಅಲಿಯಾಸ್ ಜವರ ಹೆಸರಿನಲ್ಲಿ ಡಿ ನೋಟಿಫಿಕೇಷನ್ ಆಗಿದೆ. 2004ರಲ್ಲಿ ಮಲ್ಲಿಕಾರ್ಜುನಸ್ವಾಮಿ ಜಮೀನು ಖರೀದಿ ಮಾಡುತ್ತಾರೆ. 2005ರಲ್ಲಿ ಮಲ್ಲಿಕಾರ್ಜುನಸ್ವಾಮಿ ಭೂಮಿ ಬದಲಾವಣೆಗೆ ಅರ್ಜಿ  ಸಲ್ಲಿಸುತ್ತಾರೆ. ಆಗ ಸಿದ್ಧರಾಮಯ್ಯನವರೇ ಉಪ ಮುಖ್ಯಮಂತ್ರಿ ಆಗಿದ್ದರು. ಭೂಮಿ ಬದಲಾವಣೆಗೆ ಅರ್ಜಿ ಸಲ್ಲಿಸಿದಾಗ ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು. ಜಮೀನಿನ ಹಿನ್ನಲೆ ಪರಿಶೀಲಿಸಲಿಲ್ಲವೆ ಏಕೆ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

₹62 ಕೋಟಿ ಯಾರಪ್ಪನ ಆಸ್ತಿ?

ಮುಡಾದಿಂದ ತಮಗೆ ₹62 ಕೋಟಿ ಪರಿಹಾರ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಯಾರಪ್ಪನ ಆಸ್ತಿ ಎಂದು ₹62 ಕೋಟಿ ಕೊಡಬೇಕು. ಇದು ಪಿತಾರ್ಜಿತ ಆಸ್ತಿನಾ? ಯಾರ ಬಳಿ ಖರೀದಿ ಮಾಡಿದ್ದಾರೆ ಎಲ್ಲವೂ ಗೊತ್ತಿದೆ, ನನ್ನ ಬಳಿ ಎಲ್ಲ ದಾಖಲೆ ಇದೆ ಎಂದು ದಾಖಲೆಗಳನ್ನು ಪ್ರದರ್ಶಿಸಿದ ಕುಮಾರಸ್ವಾಮಿ ಅವರು, ಇದು ಹಿಟ್ ಅಂಡ್ ರನ್ ಅಲ್ಲ. ದಾಖಲೆ ಸಮೇತ ಮಾಹಿತಿ ಕೊಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು.

ವಾಲ್ಮಿಕಿ ನಿಗಮದ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ ಡಿಕೆ ಅವರು, ಆಡಳಿತದಲ್ಲಿ ಬಿಗಿ ಇದ್ದಿದ್ದರೆ ಇದು ಆಗುತ್ತಿರಲಿಲ್ಲ. ಚುನಾವಣಾ ನೀತಿ ಸಂಹಿತೆ ಇರುವ ಸಂದರ್ಭದಲ್ಲೇ ₹94 ಕೋಟಿ ವರ್ಗಾವಣೆಯಾಗಿದೆ. ಚಂದ್ರಶೇಖರ್ ಅವರ ಡೆತ್ ನೋಟ್ ಇಲ್ಲದಿದ್ದರೆ ಸಿದ್ಧರಾಮಯ್ಯ ಅವರೇ ಈ ಪ್ರಕರಣ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರದ್ದು ಆತ್ಮಹತ್ಯೆ ಅಲ್ಲ. ಅದು ಈ ಸರ್ಕಾರವೇ ಮಾಡಿದ ಕೊಲೆ. ಯಾವ ರೀತಿ ವರ್ಗಾವಣೆ ದಂಧೆಯ ವ್ಯವಸ್ಥೆ ತಂದಿದ್ದೀರಾ? ನನಗೆ ಅನುಭವ ಆಗಿದೆ. ನಾನು ಇದ್ದ 14 ತಿಂಗಳು ನಾನು ಕೆಲಸ ಮಾಡಲು ಬಳಸಿಕೊಂಡಿಲ್ಲ. ಇಲಾಖೆಗೆ ಸಚಿವರು ಹೇಳಿದ್ದವರನ್ನು ಹಾಕಬೇಕು. ವರ್ಗಾವಣೆ ದಂಧೆ ಬೀದಿಯಲ್ಲಿ ಇಟ್ಟಿದ್ದೀರಾ? ಎಂದು ಅವರು ಪ್ರಶ್ನಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!