Saturday, May 18, 2024

ಪ್ರಾಯೋಗಿಕ ಆವೃತ್ತಿ

ತಮಿಳುನಾಡಿನಲ್ಲಿ ಭಾರೀ ಮಳೆ: 4 ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಣೆ

ಮಿಚಾಂಗ್ ಚಂಡಮಾರುತದ ಪರಿಣಾಮ ಅಸ್ತವ್ಯಸ್ತಗೊಂಡಿದ್ದ ಜೀವನ ಚೇತರಿಸಿಕೊಳ್ಳುವ ಹೊತ್ತಿಗೆ ತಮಿಳುನಾಡಿನ ಜನತೆ ಮಳೆಯ ಆರ್ಭಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳು ಜಲಾವೃತವಾಗಿವೆ.

ರಾಜ್ಯದ ತಿರುನಲ್ವೇಲಿ, ತೂತುಕುಡಿ, ಕನ್ಯಾಕುಮಾರಿ, ತೆಂಕಶಿ ಮತ್ತು ವಿರುದನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಎಲ್ಲಾ ಶಾಲಾ-ಕಾಲೇಜುಗಳು, ಖಾಸಗಿ ಸಂಸ್ಥೆ, ಬ್ಯಾಂಕ್‌, ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಇಂದು (ಸೋಮವಾರ) ರಜೆ ಘೋಷಿಸಲಾಗಿದೆ.

ಇಂದು (ಡಿಸೆಂಬರ್ 18) ತಮಿಳುನಾಡು, ಕೇರಳ ಮತ್ತು ಮಾಹೆಯ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)ಮುನ್ಸೂಚನೆ ನೀಡಿದೆ. ದಕ್ಷಿಣ ತಮಿಳುನಾಡು, ದಕ್ಷಿಣ ಕೇರಳ ಮತ್ತು ಲಕ್ಷದ್ವೀಪದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದಿದೆ.

“>

ಮಳೆಯಿಂದ ತೂತುಕುಡಿ ಜಲಾವೃತವಾಗಿದೆ. ಇಲ್ಲಿನ ಕೋವಿಲ್‌ಪಟ್ಟಿ, ಎಟ್ಟಾಯಪುರಂ, ವಿಲಾತಿಕುಲಂ, ಕಲುಗುಮಲೈ, ಕಯತಾರ್, ಕಡಂಬೂರ್, ವೆಂಬಾರ್, ಸುರಂಗುಡಿ ಮತ್ತು ಇತರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ತೂತುಕುಡಿಯ ಕಾಯಲ್‌ಪಟ್ಟಿಣಂನಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ಒಂದೇ ದಿನದಲ್ಲಿ ದಾಖಲೆಯ ಮಳೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 932 ಮಿ.ಮೀ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಿರಂತರ ಮಳೆಯಿಂದಾಗಿ ತೂತುಕುಡಿ ಜಿಲ್ಲೆಯ ಕೋವಿಲ್‌ಪಟ್ಟಿ ಸುತ್ತಮುತ್ತಲಿನ ನದಿಗಳು ಮತ್ತು ಕೆರೆಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಮುಳುಗಡೆಯ ಆತಂಕದಲ್ಲಿವೆ. ಕೋವಿಲ್‌ಪಟ್ಟಿಯ 40 ಕೆರೆಗಳು ತುಂಬಿವೆ. ಎರಡು ಕೆರೆಗಳು ಹಾಳಾಗಿದ್ದು, ದುರಸ್ತಿ ಮಾಡಿದ್ದೇವೆ. ಉಳಿದ ಕೆರೆಗಳ ಮೇಲೂ ನಿರಂತರ ನಿಗಾ ವಹಿಸಿದ್ದೇವೆ. ಕೆರೆ ಒತ್ತುವರಿ ಕಂಡು ಬಂದರೆ ಕೂಡಲೇ ಸರಿಪಡಿಸಲು ಸಿದ್ಧರಿದ್ದೇವೆ ಎಂದು ಜಿಲ್ಲಾ ಅಭಿವೃದ್ಧಿ ಅಧಿಕಾರಿ ರಾಜೇಶ್ ತಿಳಿಸಿದ್ದಾರೆ.

ಕನ್ಯಾಕುಮಾರಿ, ತಿರುನಲ್ವೇಲಿ, ತೂತುಕುಡಿ, ರಾಮನಾಥಪುರಂ, ಪುದುಕೊಟ್ಟೈ ಮತ್ತು ತಂಜಾವೂರು ಜಿಲ್ಲೆಗಳಲ್ಲಿ ಡಿ.18 ಮತ್ತು 19 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕನ್ಯಾಕುಮಾರಿ, ತೂತುಕುಡಿ, ತೆಂಕಶಿ ಮತ್ತು ತಿರುನಲ್ವೇಲಿ ಜಿಲ್ಲೆಗಳಲ್ಲಿ 250 ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿಯನ್ನು ನಿಯೋಜಿಸುವುದು ಸೇರಿದಂತೆ ಸರ್ಕಾರವು ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ತಮಿಳುನಾಡಿನ ಕಂದಾಯ ಮತ್ತು ವಿಪತ್ತು ನಿರ್ವಹಣೆ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ಹೇಳಿದ್ದಾರೆ.

ತಿರುನಲ್ವೇಲಿಯಲ್ಲಿ 19, ಕನ್ಯಾಕುಮಾರಿಯಲ್ಲಿ ನಾಲ್ಕು, ತೂತುಕುಡಿಯಲ್ಲಿ ಎರಡು ಮತ್ತು ತೆಂಕಶಿ ಜಿಲ್ಲೆಯಲ್ಲಿ ಒಂದು ಶಿಬಿರವನ್ನು ವಿಪತ್ತಿನ ಸಮಯದಲ್ಲಿ ಸಾರ್ವಜನಿಕರಿಗೆ ವಸತಿ ಕಲ್ಪಿಸಲು ಸ್ಥಾಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!