Saturday, May 18, 2024

ಪ್ರಾಯೋಗಿಕ ಆವೃತ್ತಿ

ನೇರ ನಿಷ್ಠುರ ನಡೆನುಡಿಯ ದಲಿತ ಶೋಷಿತರ ಮಹಾಚೇತನ ‘ಹೂಡಿ ವೆಂಕಟೇಶ್’

✍️ ಹನುಮೇಶ್ ಗುಂಡೂರ್, ವಕೀಲರು

ಬುದ್ದ, ಬಸವ, ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ನೈಜ್ಯ ಅನುಯಾಯಿ. ಬಹುಜನರ ಆಶಾಕಿರಣ, ಬಿಎಸ್ಪಿಯ ಸಂಸ್ಥಾಪಕ ಕಾನ್ಸಿರಾಮ್ ಜೀ ಹಾಗೂ ಕರ್ನಾಟಕದಲ್ಲಿ ದಲಿತ ಚಳವಳಿಯ ಸಂಸ್ಥಾಪಕ  ಪ್ರೊ. ಬಿ.ಕೃಷ್ಣಪ್ಪ ಅವರ ಆದರ್ಶಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಸಾಗುತ್ತಿದ್ದ ಹೂಡಿ ವೆಂಕಟೇಶ್ ಅವರು ಇನ್ನಿಲ್ಲ ಎಂದಾಗ ಜೀರ್ಣಿಸಿಒಕೊಳ್ಳಲು ಆಗುತ್ತಿಲ್ಲ. ಶೋಷಿತರ, ದಮನಿತರ ಆಶಾ ಕೊಂಡಿ ಕಳಚಿ ಕೊಂಡಿದೆ ಎಂಬ ವಿಷಯ ನಂಬಲಾಗುತ್ತಿಲ್ಲ ಬಹಳ ದುಃಖವಾಗುತ್ತಿದೆ.

ಹೂಡಿ ವೆಂಕಟೇಶ್ ಅವರ ವಿಶೇಷ ಭಾಷಣ ಶೈಲಿಯ ಕಲೆ ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸುವಂತಿತ್ತು. ನಿಜವಾದ ಬುದ್ದನ ಆದರ್ಶಗಳು, ಹಾಗೆಯೇ ಬಾಬಾ ಸಾಹೇಬರ ಮಾರ್ಗದರ್ಶನ ಅನುಸರಿಸಿಕೊಂಡು ಬಂದ ಆಧುನಿಕ ಕಾಲದ ವಿಮರ್ಶಕ ಮತ್ತು ನೇರ, ನಿಷ್ಠುರ ಮತ್ತು ನಿಷ್ಠಾವಂತ ದಲಿತ ನಾಯಕರಾಗಿದ್ದರು ಅವರು.

ಯಾವುದೇ ತೆರನಾದ ಮಹನೀಯರ ಸಾಧನೆಗಳನ್ನು ಅವರ ಜೀವನಾಧಾರ ಚರಿತ್ರೆಗಳನ್ನು ಕಣ್ಣಿಗೆ ಕಟ್ಟುವಂತೆ ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಡುತ್ತಿದ್ದದ್ದು ಹೂಡಿ ವೆಂಕಟೇಶ್ ಅವರ ವಿಶೇಷ ಗುಣಗಳಲ್ಲಿ ಒಂದು. ಎದುರಿಗೆ ಕುಳಿತುಕೊಂಡವರು ಸಮಯದ ಪರಿವೆಯೇ ಇಲ್ಲದೆ ಅವರ ಭಾಷಣವನ್ನು ಕೇಳಲು ಕಾದು ಕುಳಿತುಕೊಳ್ಳುತ್ತಿದ್ದರು. ಅಂತಹ ಭಾಷಣ ಕಲೆ ಅವರಿಗೆ ಸಿದ್ದಿಸಿತ್ತು.

ಹೂಡಿ ಅವರ ಹೋರಾಟದ ಹಿನ್ನೆಲೆ ಬಹಳ ಅನುಭವ ಮತ್ತು ಅಳ ಆಗಲವನ್ನು ಹೊಂದಿತ್ತು. ಬೆಂಗಳೂರಿನ ವೈಟ್ ಫೀಲ್ದ್ ಬಳಿ ಇರುವ ಹೂಡಿ ಗ್ರಾಮದಲ್ಲಿ ಭೂಮಿ ಹೋರಾಟ ಮಾಡಿ, ನೂರಾರು ಎಕರೆ ಭೂಮಿಯನ್ನು ದಲಿತರಿಗೆ ಸಿಗುವಂತೆ ಮಾಡಿದ್ದು ಇತಿಹಾಸ. ಮೂಲತಃ ಅವರು ಕಮ್ಯುನಿಸ್ಟ್ ಚಳವಳಿ ಭಾಗವಾಗಿ ಒಂದು ರೀತಿ ಕಮ್ಯುನಿಸ್ಟ್ ಎಂದು ಕರೆಯಬಹುದಾದ ರೀತಿಯಲ್ಲೆ ಬದುಕುತ್ತಿದ್ದರು.

ಅನಂತರ ಪ್ರೊ.ಬಿ ಕೃಷ್ಣಪ್ಪ ಅವರ ಸಂಪರ್ಕಕ್ಕೆ ಬಂದ ಹೂಡಿ, ಕರ್ನಾಟಕದ ಮೂಲೆ ಮೂಲೆಗಳಲ್ಲಿ ದಲಿತರ ಸ್ವಾಭಿಮಾನ ಚಳವಳಿ ಆರಂಭದ ಪ್ರವರ್ಧಮಾನ ಕಾಲದ ಸಂದರ್ಭದಲ್ಲಿ ಪ್ರೊ.ಬಿ ಕೃಷ್ಣಪ್ಪ ಅವರ ಜೊತೆಗೆ ಅನೇಕ ರೀತಿಯ ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ, ಬೆತ್ತಲೆ ಸೇವೆ, ದೇವದಾಸಿ ಪದ್ಧತಿ, ಸಾಮಾಜಿಕ ಹೋರಾಟ ಅಧ್ಯಯನ ಶಿಬಿರಗಳಲ್ಲಿ ಪಾಲ್ಗೊಂಡು ಪ್ರೊ.ಬಿ.ಕೆ ಅವರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡರು.

ರಾಜ್ಯದಲ್ಲಿ ಡಾ.ಅಂಬೇಡ್ಕರ್ ಅವರ ಚಿಂತನೆಯನ್ನು ಹುಟ್ಟು ಹಾಕಿದ ಪ್ರೊ. ಬಿ ಕೆ ಪ್ರಭಾವದಿಂದಾಗಿ ಹೂಡಿ ಅವರು ತಮ್ಮ ಚಿಕ್ಕವಯಸ್ಸಿನಲ್ಲೇ ಅನೇಕ ಹೋರಾಟ, ಸಭೆ ಸಮಾರಂಭಗಳ ಆಯೋಜನೆ ಮಾಡಿ, ಭಾಷಣ ಮಾಡುವುದನ್ನು ಸಿದ್ದಿಸಿಕೊಂಡರು. ಕರ್ನಾಟಕದಲ್ಲಿ ದಲಿತರ ಬಗ್ಗೆ ಅತ್ಯಂತ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ಜೊತೆಗೆ ಬಹುಜನ ಸಮಾಜ ಚಳುವಳಿಯನನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡರು.

ಕಾನ್ಸಿರಾಮ್ ಅವರೊಂದಿಗೆ ನಿಕಟ ಸಂಪರ್ಕ 

ಹೂಡಿ ಅವರು ಪ್ರೊ. ಬಿ.ಕೃಷ್ಣಪ್ಪ ಹಾಗೂ ಬಹುಜನ ಸಿದ್ದಾಂತ ಚಳವಳಿಯ ಪಿತಾಮಹ ದಾದಾ ಸಾಹೇಬ್ ಕಾನ್ಸಿರಾಮ್ ಜೀ ಅವರ ಜೊತೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದರು. ವಿಶೇಷವಾಗಿ ಕಾನ್ಸಿರಾಮ್ ಜೀ ಅವರಿಗೆ ಹೂಡಿ ಅವರ ಜ್ಞಾನ ಪಾಂಡಿತ್ಯ, ಬಹುಭಾಷಾ ಜ್ಞಾನವು ಅತ್ಯಂತ ಇಷ್ಟವಾಗಿ ಅವರು ಇನ್ನಷ್ಟು ಹತ್ತಿರವಾಗುವಂತೆ ಮಾಡಿತು. ಅಂತಹ ರಾಜಕೀಯ ಸಂತನ ಜೊತೆಗೆ ಇರಬೇಕು ಎಂದರೆ, ಅದು ದೂಡಿ ಅವರ ಜ್ಞಾನಕ್ಕೆ ದೊರೆತ ಅವಕಾಶಗಳಾಗಿದ್ದವು.

ಹೂಡಿ ಅವರು ಕರ್ನಾಟಕದಲ್ಲಿ ದಲಿತ ಚಳವಳಿಯು ಒಡೆದು ಹೋದ ಸಂದರ್ಭದಲ್ಲಿ ಆಗಿರುವ ಅನೇಕ ಘಟನೆಗಳಿಗೆ ಸಾಕ್ಷಿ ಎಂದು ಹೇಳಬಹುದು, ದಲಿತರ ಚಳವಳಿಯ ಹಿನ್ನಡೆಗೆ ಇವರು ಮಾಡುತ್ತಿದ್ದ ವಿಮರ್ಶೆಯನ್ನು ಇನ್ನು ಯಾರು ಮಾಡಲಾರರು ಎನ್ನುವುದು  ನನ್ನ ಭಾವನೆ. ಪ್ರೊ.ಬಿ ಕೆ ಗೆ ಆದ ನೋವು, ನಲಿವು, ಸಂಕಟ ಯಾತನೆ ಬಗ್ಗೆ ಸಂಪೂರ್ಣ ಮಾಹಿತಿ ಇದ್ದ ವ್ಯಕ್ತಿಯೆಂದರೆ ಅದು ಹೂಡಿ ವೆಂಕಟೇಶ್ ಮಾತ್ರ.

ಕರ್ನಾಟಕದಲ್ಲಿ ದಲಿತರಿಗೆ ಆಗಿರುವ ಸಾಮಾಜಿಕ ಅನ್ಯಾಯ, ಅಸಮಾನತೆ ಬಗ್ಗೆ ಇವರು ಕೊಡುವ ಕಾರಣಗಳು ಬಲವಾದ ನಂಬಿಕೆಗೆ ಅರ್ಹವಾದವು. ಹಾಗೆ ಮೂಲ ಅಸ್ಪೃಶ್ಯ ಸಮುದಾಯದವರಿಗೆ ಆಗಿರುವ ಮೀಸಲಾತಿ ಅನ್ಯಾಯವನ್ನು ವೈಜ್ಞಾನಿಕ ಅಧ್ಯಯನ ಮೂಲಕ ವಿವರಿಸಿ. ಎಲ್ಲರಿಗೂ ಮನದಟ್ಟಾಗುವಂತೆ ಮಾಡುತ್ತಿದ್ದರು.

ಮಾತಂಗ ಆದಿ ಜಾಂಬವ ಸಮುದಾಯದಲ್ಲಿ ಪ್ರಖರ ಪಾಂಡಿತ್ಯ ವ್ಯಕ್ತಿತ್ವ ಪಡೆದ ಪ್ರಮುಖರಲ್ಲಿ ಇವರು ವಿ‍ಶೇಷವಾದ ವ್ಯಕ್ತಿ. ಮಾತಂಗ ಪರಂಪರೆ, ಶರಣ ಪರಂಪರೆ, ಬುದ್ದ, ಬಸವ, ಅಂಬೇಡ್ಕರ್, ಬಾಬೂಜಿ ಪ್ರೊ. ಕೃಷ್ಣಪ್ಪ, ಕಾನ್ಸಿರಾಮ್ ಜೀ ಅವರ ಕುರಿತು ಇವರು ಮಾತನಾಡುವುದನ್ನು ಅಧ್ಯಯನ ಶಿಬಿರಗಳಲ್ಲಿ ಕೇಳುವುದೇ ಒಂದು ಸೌಭಾಗ್ಯವಾಗಿತ್ತು. ಬಾಬಾ ಸಾಹೇಬರ ಬಗ್ಗೆ ಹೇಳುವಾಗ ಅದೆಷ್ಟೋ ಸಾರಿ ನಮ್ಮ ಕಣ್ಣಲ್ಲಿ ನೀರು ಬಂದಿದ್ದು ಇವೆ, ಅನೇಕ ಮಹನೀಯರ ಕುರಿತು ಪಟಪಟನೆ ಮಾತನಾಡುವ ಇವರ ಆ ಭಾಷಣದ ಶೈಲಿಯು ಅತ್ಯಂತ ಶಕ್ತಿದಾಯಕ, ಸ್ಪೂರ್ತಿದಾಯಕ ಪ್ರೇರಣೆ ನೀಡುತಿತ್ತು.

ನ್ಯಾ.ಸದಾಶಿವ ಆಯೋಗದ ವರದಿ ಜಾರಿಯ ಅಗತ್ಯತೆಗೆ ಇವರು ಸಮರ್ಪಕವಾದ ಕಾರಣ ಕೊಡುತ್ತಿದ್ದರು. ಅನೇಕ ‌ವಿಚಾರಗಳನ್ನು ಇವರ ಹತ್ತಿರ ನೇರ ನೇರವಾಗಿ ಪ್ರಶ್ನೆ ಮಾಡಿ, ಯಾವುದು ಸರಿ, ಯಾವುದು ತಪ್ಪು ಎಂದು ಕೇಳಿ ಒಳ ಮೀಸಲಾತಿ ಹೋರಾಟವನ್ನು ಮುನ್ನೆಡಿಸಿದ ಉದಾಹರಣೆಗಳಿವೆ. ಸದಾಶಿವ ಆಯೋಗ, ಕರ್ನಾಟಕ ಆಂಧ್ರ ಪ್ರದೇಶದ ಚಳವಳಿಯ ಕುರಿತು ಸರಿಯಾದ ಮಾಹಿತಿ ವಿಮರ್ಶೆ ಮಾಡಬಲ್ಲ ವ್ಯಕ್ತಿ ಎಂದರೆ ಅದು ಹೂಡಿ ವೆಂಕಟೇಶ್ ಮಾತ್ರವೇ.

ಎಲ್ಲರಂತೆ ಭಾಷಣದಲ್ಲಿ ಬಾಬಾಸಾಹೇಬರು, ಬುದ್ದರನ್ನು ಬಳಸಿಕೊಂಡ ಜಾಯಾಮಾನ ಇವರದಲ್ಲ. ಬುದ್ದ ಅಥವಾ ಬಾಬಾಸಾಹೇಬರನ್ನು ಇಟ್ಟುಕೊಂಡು ವ್ಯಾಪಾರ ಮಾಡಿದ ಜನರ ಮಧ್ಯೆ ಅವರ ವಿಚಾರಧಾರೆ ಬೇರೆ ರೀಯಿಯದೇ ಆಗಿತ್ತು. ತಮ್ಮ ಜೀವನದುದ್ದಕ್ಕೂ ಯಾವುದೇ ಫಲಾಪೇಕ್ಷೆ ಇಲ್ಲದೇ ತಮಗೆ ಇರುವ ಆಲೋಚನೆ, ಜ್ಞಾನ ಎಲ್ಲಾ ಕಡೆ ಪಸರಿಸಲಿ ಎಂದು ಹಾತೊರೆಯುತ್ತಿದ್ದ ಹೃದಯವಂತಿಕೆ ಹೂಡಿ ಅವರದಾಗಿತ್ತು.

ಮಾತಂಗರ ರಾಜಕಾರಣ ಬಗ್ಗೆ ಇವರು ಹೇಳುವಾಗ ನಾವು ಅದೆಷ್ಟೋ ವಿಮರ್ಶೆಗಳನ್ನು ಒಳಪಡಿಸಿದ್ದು ಇದೆ ಇನ್ನೂ ಕೆಲವೆ ದಿನಗಳಲ್ಲಿ ಇವರ ಈ ಎಲ್ಲಾ ಜ್ಞಾನ, ಆಲೋಚನೆಗಳು ಪುಸ್ತಕ ರೂಪದಲ್ಲಿ ಬರೆಯುವುದು ಹೊರತರುವುದು ನಮ್ಮ ಆದ್ಯತೆಯಾಗಿದೆ. ಯಾವೊಬ್ಬ ವ್ಯಕ್ತಿಗೆ ತನ್ನ ಸಮುದಾಯದ ನಾಯಕರು ಮಾಡಿದ ಅನ್ಯಾಯ, ವಂಚನೆ ಕುರಿತು ನೇರವಾಗಿ ಹೇಳಲು ಭಯ, ಆತಂಕ ಇರುತ್ತದೆ. ಆದರೆ ಹೂಡಿ ವೆಂಕಟೇಶ್ ಸರ್ ಅವರು ತಮ್ಮ ಜೀವದ ಹಂಗು ತೊರೆದು, ಯಾವುದೇ ಹಣದಾಸೆ, ಆಮಿಷಕ್ಕೆ ಒಳಗಾಗದೆ ನೇರ ನಿಷ್ಠುರವಾಗಿ ಮಾತನಾಡುವ ಧೈರ್ಯವನ್ನು ಹೊಂದಿದ್ದರು.

‘ನನಗೆ ಹೊಗಳಿ, ಹೊನ್ನಶೂಲಕ್ಕೆರಿಸಿ ರೂಢಿ ಇಲ್ಲ, ನನಗೂ ಒಲೈಕೆ ಮಾಡಿಕೊಂಡು ಬದುಕುವ ಅನಿವಾರ್ಯ ಪರಿಸ್ಥಿತಿ ಇಲ್ಲ, ನನಗೆ ಒಂದೇ ಒಂದು ಆಸೆ, ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ದುಡಿದವರ ಬಗ್ಗೆ  ಹೇಳೋದು ‘ ನನ್ನ ಕರ್ತವ್ಯ ಎಂದು ಹೇಳಿಕೊಳ್ಳುತ್ತಿದ್ದದ್ದು ಹೂಡಿ ವೆಂಕಟೇಶ್ ಅವರ ಹೆಗ್ಗಳಿಕೆ.

ಅವರ ಅಗಲಿಕೆ ಕರ್ನಾಟಕ, ಆಂಧ್ರ, ತೆಲಂಗಾಣ ಮತ್ತು ತಮಿಳನಾಡು ರಾಜ್ಯದ ಸೇರಿದಂತೆ ಹಲವೆಡೆ ಲಕ್ಷಾಂತರ ಬಾಬಾಸಾಹೇಬರ ಅನುಯಾಯಿಗಳಿಗೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!