Friday, September 20, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯಲ್ಲಿ ಜುಲೈ 20 ರಿಂದ ಗೃಹ ಲಕ್ಷ್ಮಿ ಯೋಜನೆ ನೊಂದಣಿ : ಡಾ: ಕುಮಾರ

ಬಿ.ಪಿ.ಎಲ್,ಎ.ಪಿ.ಎಲ್, ಅಂತ್ಯೋದಯ ಕಾರ್ಡ್ ನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2,000/-ರೂ.ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಗೆ ಜಿಲ್ಲೆಯಲ್ಲಿ ಜುಲೈ 20 ರಿಂದ ನೊಂದಣಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.

ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,
ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು ಹಾಗೂ ಪ್ರಜಾಪ್ರತಿನಿಧಿಗಳು ಸೇರಿದಂತೆ ಒಟ್ಟು 479 ಕೇಂದ್ರಗಳಲ್ಲಿ ಏಕಕಾಲದಲ್ಲಿ ನೊಂದಣಿ ಪ್ರಾರಂಭವಾಗಲಿದೆ ಎಂದರು.

ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಯಾಗುತ್ತಾರೆ. ಆದರೆ ಫಲಾನುಭವಿ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್.ಟಿ. ಪಾವತಿದಾರರು ಆದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ ಎಂದರು.

ಜಾಹೀರಾತು

ಜಿಲ್ಲೆಯಲ್ಲಿ 4.79 ಲಕ್ಷ ಮಹಿಳೆಯರು ಈ ಯೋಜನೆಗೆ ಅರ್ಹರಿದ್ದು, ಹೆಸರು ನೋಂದಾಯಿಸಲು ಪಡಿತರ ಚೀಟಿಯ ಸಂಖ್ಯೆ, ಯಜಮಾನಿ ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಆಧಾರ್‌ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪಾಸ್‌ ಬುಕ್ ಅಥವಾ ಫಲಾನುಭವಿಯು ಇಚ್ಛಿಸುವ ಪರ್ಯಾಯ ಬ್ಯಾಂಕ್ ಖಾತೆಯ ದಾಖಲೆಗಳನ್ನು ನೀಡಬೇಕು. ಪ್ರತಿದಿನ ಅರ್ಹ 60 ಫಲಾನುಭವಿಗಳಿಗೆ ಸಮಯ ಹಾಗೂ ನೋಂದಣಿ ಕೇಂದ್ರದ ವಿವರಗಳು ಮೊಬೈಲ್ ಸಂದೇಶದ ಮೂಲಕ ಸ್ವೀಕೃತವಾಗಲಿವೆ. ಸಂದೇಶ ಸ್ವೀಕೃತಗೊಂಡ ಫಲಾನುಭವಿಗಳು ಮಾತ್ರ ಸಂದೇಶದಲ್ಲಿ ವಿವರಿಸಿದ ಸೇವಾ ಕೇಂದ್ರಕ್ಕೆ ನಿಗದಿಪಡಿಸಿದ ಸಮಯಕ್ಕೆ ಹಾಜರಾಗಿ ಅರ್ಜಿ ಸಲ್ಲಿಸಬಹುದು ಎಂದರು.

ನೊಂದಣಿಗೆ ಮಹಿಳೆಯರು ಯಾವುದೇ ಶುಲ್ಕ ನೀಡುವಂತಿಲ್ಲ. ನೊಂದಣಿಯು ಗ್ರಾಮ ಒನ್ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಹಾಗೂ ನಗರ ಭಾಗದಲ್ಲಿ ಕರ್ನಾಟಕ ಒನ್ ಸೆಂಟರ್ ಹಾಗೂ ಹೆಚ್ಚುವರಿಯಾಗಿ ನಗರಸಭೆ ವ್ಯಾಪ್ತಿಯಲ್ಲಿ ತೆರೆಯುವ 5, ಪುರಸಭೆ ವ್ಯಾಪ್ತಿಯಲ್ಲಿ-3 ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆಯುವ 2 ಕೇಂದ್ರಗಳಲ್ಲಿ ನಡೆಯಲಿದೆ. ಪರ್ಯಾಯವಾಗಿ ಪ್ರಜಾ ಪ್ರತಿನಿಧಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇವರಿಗೆ ಯಾವುದೇ ರೀತಿಯ ಗೌರವಧನ ನೀಡಲಾಗುವುದಿಲ್ಲ. ಒಂದು ಸಾವಿರ ಜನಸಂಖ್ಯೆಗೆ ಇಬ್ಬರೂ ಪ್ರಜಾಪ್ರತಿನಿಧಿಯನ್ನು ನೇಮಕ ಮಾಡಲು ಅವಕಾಶವಿದೆ. ಇಬ್ಬರಲ್ಲಿ ಒಬ್ಬರು ಕಡ್ಡಾಯವಾಗಿ ಮಹಿಳೆಯಾಗಿರಬೇಕು. ಪ್ರಜಾಪ್ರತಿನಿಧಿಗಳು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹಾಗೂ ಮೊಬೈಲ್ ಹೊಂದಿರಬೇಕು ಎಂದು ಹೇಳಿದರು.

ಈ ಯೋಜನೆಯಡಿ ಯಾವುದೇ ಅಂತಿಮ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿರುವುದಿಲ್ಲ. ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಗ್ರಾಮ ಒನ್/ಬಾಪೂಜಿ ಸೇವಾ ಕೇಂದ್ರ/ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಲು ಸಾದ್ಯವಾಗದೇ ಇದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5.00 ರಿಂದ 7.00 ಗಂಟೆಯೊಳಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ನೋಂದಾಯಿಸುವ ಪ್ರಕ್ರಿಯೆಯನ್ನು ಉಸ್ತುವಾರಿ ಮಾಡಲು ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಪ್ರತಿ ನೋಂದಣಿ ಕೇಂದ್ರಕ್ಕೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಪ್ರಜಾಪ್ರತಿನಿಧಿ ಮೂಲಕ ಅಥವಾ ಗ್ರಾಮ ಒನ್ / ಬಾಪೂಜಿ ಕೇಂದ್ರ / ಕರ್ನಾಟಕ ಒನ್ ಕೇಂದ್ರ/ ಬೆಂಗಳೂರು ಒನ್ ಕೇಂದ್ರಗಳಲ್ಲಿ ನೊಂದಾಯಿಸಿಕೊಂಡಲ್ಲಿ ಅರ್ಜಿದಾರರು ನೀಡಿದ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್. ಮೂಲಕ ಮಂಜೂರಾತಿ ಬಗ್ಗೆ ಸಂದೇಶ ರವಾನಿಸಲಾಗವುದು. ಈ ಯೋಜನೆಯಡಿ ವಯಸ್ಸಾದ ಮಹಿಳೆಯರು, ಗ್ರಾಮೀಣ ಮಹಿಳೆಯರು, ಅನಕ್ಷರಸ್ಥ ಮಹಿಳೆಯರು ಬರುತ್ತಾರೆ. ಹಾಗಾಗಿ ನೊಂದಣಿ ಕೇಂದ್ರದವರಿಗೆ ಅವರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ತಿಳಿಸಲಾಗಿದೆ. ಗ್ರಾಮ ಒನ್ ಸೆಂಟರ್‌ಗೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಮಹಿಳೆಯರಿಗೆ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಎಂ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಎಂ. ಕೃಷ್ಣಕುಮಾರ್ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!