Friday, September 20, 2024

ಪ್ರಾಯೋಗಿಕ ಆವೃತ್ತಿ

ಸ್ವಾತಂತ್ರ್ಯದ ದಿನ ಮತ್ತು ಭಸ್ಮಾಸುರನ ಕಥೆ

✍️ ಗಿರೀಶ್ ತಾಳಿಕಟ್ಟೆ

ನಿಮಗೆ ಭಸ್ಮಾಸುರನ ಕಥೆ ಗೊತ್ತಲ್ಲವಾ? ಯಾರ ತಲೆ ಮೇಲೆ ಕೈಯಿಟ್ಟರೂ ಅವರು ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಗಬೇಕು ಅನ್ನೋ ವರ ಪಡೆಯುವ ಆ ಪುಣ್ಯಾತ್ಮ ಅದನ್ನು ಮೊದಲು ಪರೀಕ್ಷಿಸಲು ಮುಂದಾದದ್ದೇ, ವರ ಕೊಟ್ಟ ಶಿವನ ಮೇಲೆ! ಪುರಾಣ ಕೂಡಾ ಒಂದು ಕಥೆ. ಯಾವುದೇ ಕಥೆ ಹಾಗೂ ಅದರೊಳಗಿನ ಪಾತ್ರಗಳು ಸುಖಾಸುಮ್ಮನೆ ಅವತರಿಸುವುದಿಲ್ಲ. ಆ ಕಥೆ ಹುಟ್ಟಿದ ನೆಲದ ಗುಣಧರ್ಮ, ಅರ್ಥಾತ್ ಆ ಜನರ ಮನಸ್ಥಿತಿ ಹಾಗೂ ಆಲೋಚನೆಗಳನ್ನು ತಮ್ಮೊಳಗೆ ಸಮೀಕರಿಸಿಕೊಂಡೇ ಅವು ಜನ್ಮವೆತ್ತಿರುತ್ತವೆ. ಪ್ರತಿಯೊಬ್ಬ ಕಥೆಗಾರನೂ ಕಥೆ ರಚಿಸುವುದೇ ಹೀಗೆ. ತನ್ನ ಸುತ್ತಲಿನ ಪ್ರಪಂಚದಿಂದ ಕಳಚಿಕೊಂಡು, ಒಬ್ಬ ಕಥೆಗಾರ ಕಥೆಗಾರನಾಗಲಾರ. ಯಾಕೆ ಈ ಮಾತು ಹೇಳ್ತಾ ಇದೀನಿ ಅಂದ್ರೆ, ಪುರಾಣದಲ್ಲಿ ಬರುವ ಆ ಭಸ್ಮಾಸುರ ಕೂಡಾ ನಮ್ಮದೇ ಉದ್ಧಟತನಗಳ ಕಥಾರೂಪ. ಹಾಗೆ ನೋಡಿದರೆ, ನಾವು ಕೇಳಿದ ಬೇರೆಲ್ಲ ಪೌರಾಣಿಕ ಪಾತ್ರಗಳಿಗಿಂತ ಈ ಭಸ್ಮಾಸುರನೇ ನಾವು ಭಾರತೀಯರ ಅಸಲೀ ಪ್ರತಿನಿಧಿಯಂತೆ ಗೋಚರಿಸುತ್ತಾನೆ, ಅದೂ ಈ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ!

ಯಾಕೆ ಅಂತೀರಾ?

ತೀರಾ ಡಿಎನ್‌ಎ ಮಟ್ಟಕ್ಕೆ ಹೋಗಿ ನಾನು ಈ ಮಾತು ಹೇಳುತ್ತಿಲ್ಲ. ಆಧುನಿಕ ಭಾರತದ ಚರಿತ್ರೆ ಅಂತ ನಾವೇನು ಗುರುತಿಸುತ್ತೇವಲ್ಲ, ಅಲ್ಲಿಂದೀಚೆಗೆ, ಮುಖ್ಯವಾಗಿ ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟ, ಸ್ವಾತಂತ್ರ್ಯೋತ್ತರದ ಪರ್ವಗಳನ್ನು ಸಂಕಲಿಸಿಕೊಂಡಾಗ ಭಾರತೀಯರಾದ ನಮ್ಮೊಳಗೆ ಭಸ್ಮಾಸುರನೊಬ್ಬ ಬುಸುಗುಟ್ಟಿದಂತೆ ಭಾಸವಾಗುತ್ತಿದೆ. ನೀವೇ ನೋಡಿ, ನಮಗೆ ನಲವತ್ತೇಳರಲ್ಲಿ ಸ್ವಾತಂತ್ರ್ಯ ಲಭಿಸಿತು. ಲಭಿಸಿದ ತಕ್ಷಣ ನಾವು ಮಾಡಿದ ಮೊದಲ ಕೆಲಸವೇನು? ಹೋರಾಟದ ನೂರಾರು ತೊರೆಗಳಿಗೆ ನಾಯಕತ್ವವನ್ನು ಕೊಟ್ಟು, ನಮಗೆ ಸ್ವಾತಂತ್ರ್ಯ ಲಭಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಗಾಂಧಿ ಎಂಬ ವೃದ್ಧನನ್ನು ನಡುಬೀದಿಯಲ್ಲಿ ಕೊಂದು ಹಾಕಿದ್ದು! ಕೊಂದವರು ನಾವಲ್ಲ ಎಂದು ಹೇಳಿಕೊಳ್ಳುವುದಾದರೂ ಹೇಗೆ? ನಾಥೂರಾಮ್ ಗೋಡ್ಸೆ ಮಾಡಿದ ಆ ಹತ್ಯೆಯ ಬಗ್ಗೆ ನಮಗೆ ಕಿಂಚಿತ್ತಾದರೂ ಪಶ್ಚಾತ್ತಾಪವಿದೆಯೇ? ಇದ್ದಿದ್ದೇ ಆದಲ್ಲಿ, ಗೋಡ್ಸೆಗಳ ಸಂತತಿಯ ಕೈಗೆ ಅಧಿಕಾರದ ಚುಕ್ಕಾಣಿ ಕೊಟ್ಟು ಕೂರುತ್ತಿದ್ದೆವಾ? ನೆನಪಿರಲಿ, ಇವತ್ತಿಗೂ, ಅಕ್ಷರಶಃ ಇವತ್ತಿಗೂ ಗಾಂಧಿ ಪ್ರತಿಕೃತಿಗೆ ಗುಂಡಿಟ್ಟು ಸಂಭ್ರಮಿಸುವ ಘಟನೆಗಳು ನಡೆಯುತ್ತಲೇ ಇವೆ. ನಾವು ಮೌನವಹಿಸಿದ್ದೇವೆ. ಹಾಗಿದ್ದ ಮೇಲೆ ಗಾಂಧಿಯನ್ನು ಕೊಂದ ಹಂತಕನನ್ನು ಹೊರಗೆಲ್ಲೊ ಹುಡುಕಾಡುವುದೇಕೆ? ನಮ್ಮೊಳಗೆ ಅವನಿಲ್ಲ ಎಂದುಕೊಳ್ಳುವುದಾದರೂ ಹೇಗೆ?

ನೆಹರೂ! ಹೌದು, ಹಲವರಿಗೆ ಅವರ ಬಗ್ಗೆ ತಕರಾರುಗಳಿರಬಹುದು. ಕೆಲವರ ತಕರಾರುಗಳು ಸಕಾರಣವಾಗಿಯೂ ಇರಬಹುದು. ಇನ್ನು ಕೆಲವರು ಅವರು ಕಾಂಗ್ರೆಸ್ ಪಕ್ಷದ ವ್ಯಕ್ತಿ ಎಂಬ ಕಾರಣಕ್ಕೆ ವಿರೋಧಿಸಬೇಕೆನ್ನುವ ಜಡ್ಡು ಮನಸ್ಥಿತಿಯಿಂದಲೂ ತಕರಾರು ಎತ್ತಬಹುದು. ಅವೆಲ್ಲವುಗಳಾಚೆ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ, ತ್ಯಾಗ ಮತ್ತು ಸ್ವಾತಂತ್ರೋತ್ತರದ ತತ್‌ಕ್ಷಣದ ಭಾರತವನ್ನು ಅವರು ಸವಾಲಿನ ರೀತಿ ಕಟ್ಟಿನಿಲ್ಲಿಸಿದ ಶ್ರಮವನ್ನು ನಾವು ಅಲ್ಲಗಳೆಯಲಾದೀತೆ? ಆದರೆ ಅಂಥಾ ನೆಹರೂ ಅವರನ್ನು ನಾವಿಂದು ‘ವಿಲನ್ ರೂಪದಲ್ಲಿ ಚಿತ್ರಿಸುತ್ತಿದ್ದೇವೆ. ಚರಿತ್ರೆಯಿಂದಲೇ ಅವರ ಹೆಸರನ್ನು ಅಳಿಸುವ ಕ್ಷುಲ್ಲಕ ಹಾಗೂ ಅಸಂಭವ ಉದ್ಧಟತನಕ್ಕೆ ಮುಂದಾಗುತ್ತಿದ್ದೇವೆ. ಕಳೆದ ವರ್ಷ, ಇದೇ ನಮ್ಮ ಕರ್ನಾಟಕದ ಸರ್ಕಾರ ಸ್ವಾತಂತ್ರ್ಯ ದಿನಕ್ಕೆ ಹೊರತಂದಿದ್ದ ಜಾಹೀರಾತಿನಲ್ಲಿ ನೆಹರೂಗೆ ಜಾಗವೇ ಇಲ್ಲದಂತೆ ಮಾಡಲಾಗಿತ್ತು. ಹೌದು, ನಮಗೆ ಯಾವುದೇ ವ್ಯಕ್ತಿಯನ್ನು ವಿಮರ್ಶಿಸುವ, ಟೀಕಿಸುವ ಹಕ್ಕು-ಅಧಿಕಾರಗಳಿವೆ. ಅದನ್ನು ತಪ್ಪು ಎನ್ನಲಾಗದು. ಗಾಂಧಿ, ನೆಹರೂ, ಮೌಲಾನಾ ಸಾಹೇಬರು, ಅಂಬೇಡ್ಕರ್, ಬುದ್ಧ, ಬಸವ, ನಾನು, ನೀವು… ಯಾರು ಸಹಾ ವಿಮರ್ಶೆಗಳಿಗೆ ಅತೀತವಾದವರಲ್ಲ. ಆದರೆ ಒಬ್ಬ ವ್ಯಕ್ತಿಯನ್ನು ದ್ವೇಷಿಸುವ ಮಟ್ಟಕ್ಕೆ ಹಾಗೂ ಚರಿತ್ರೆಯಲ್ಲಿ ಆತನ ಅಸ್ತಿತ್ವ, ಕೊಡುಗೆಗಳನ್ನೇ ನಗಣ್ಯಗೊಳಿಸುವ ಮಟ್ಟಕ್ಕೆ ನಾವು ತಲುಪುತ್ತೇವೆಂದರೆ, ಅದು ನಮ್ಮ ಬೌದ್ಧಿಕ ಅಧಃಪತನವಲ್ಲದೆ ಮತ್ತೇನೂ ಅಲ್ಲ.

ಜಾಹೀರಾತು

ಇನ್ನೂ ಅಂಬೇಡ್ಕರ್! ಪ್ರತಿಮೆಗಳಲ್ಲಿ, ಜೈಕಾರಗಳಲ್ಲಿ, ಫೋಟೊ ಫ್ರೇಮ್‌ಗಳಲ್ಲಿ ಈ ನೀಲಿ ಧೀಶಕ್ತಿಯನ್ನು ನಮ್ಮ ಆತ್ಮಸ್ಥೈರ್ಯವಾಗಿ ಉಳಿಸಿಕೊಳ್ಳಲು ನಾವು ಸಾಕಷ್ಟು ಪ್ರಯತ್ನ ಪಡುತ್ತಿದ್ದೇವೆ. ಆದರೆ ವಾಸ್ತವವೇನು ಗೊತ್ತಾ? ಅವರ ಆತ್ಮ ಇವ್ಯಾವುಗಳಲ್ಲಿಯೂ ಇಲ್ಲ; ನಮಗೋಸ್ಕರ, ಕೇವಲ ನಮಗೋಸ್ಕರ, ಅವರೇ ಶ್ರಮವಹಿಸಿ ಹಗಲಿರುಳು ಅಧ್ಯಯನ ನಡೆಸಿ, ಆರೋಗ್ಯವನ್ನು ಹದಗೆಡಿಸಿಕೊಂಡು ರಚಿಸಿಕೊಟ್ಟ ‘ಸಂವಿಧಾನ’ದಲ್ಲಿ ಅದು ಇದೆ. ನಿಜ ಹೇಳಬೇಕೆಂದರೆ, ನಮ್ಮ ಭಾರತದ ಆಧುನಿಕ ಚರಿತ್ರೆಯಲ್ಲಿ ಆಗಿಹೋದ ಅಷ್ಟೂ ರಾಷ್ಟ್ರನಾಯಕರ ಪೈಕಿ, ದಿವಂಗತರಾದ ನಂತರವೂ ನಮಗೋಸ್ಕರ ಪ್ರಾಕ್ಟಿಕಲ್ ಆಗಿ ಉಸಿರಾಡುತ್ತಿರುವ ಆತ್ಮ ಯಾವುದಾದರು ಇದ್ದರೆ ಅದು ಅಂಬೇಡ್ಕರ್ ಮಾತ್ರ! ಸಂವಿಧಾನದ ರೂಪದಲ್ಲಿ!

ಆದರೆ ಆ ಸಂವಿಧಾನಕ್ಕೆ ನಾವಿಂದು ಯಾವ ಗತಿ ತಂದಿಟ್ಟಿದ್ದೇವೆ? ಸಂವಿಧಾನದ ಅಂತಃಶಕ್ತಿಗಳನ್ನು ಒಂದೊಂದಾಗಿ ನಿತ್ರಾಣಗೊಳಿಸಿ, ಅದನ್ನು ದುರ್ಬಲಗೊಳಿಸುವ ಹುನ್ನಾರಿಗಳ ಕೈಯಲ್ಲಿ ಅದನ್ನಿಟ್ಟಿದ್ದೇವೆ. ಹಾಗಾಗಿ ’ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಿಸಲು’ ಎಂಬ ಹೇಳಿಕೆಗಳು ಸಂಸತ್ ಪ್ರತಿನಿಧಿಯ ಬಾಯಿಂದ ಸಲೀಸಾಗಿ ಹೊರಬರುತ್ತವೆ; ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಆರ್ಥಿಕ ನೆಲೆಗಟ್ಟಿನಲ್ಲಿ ಮೀಸಲಾತಿ ನೀಡುವ ಕ್ರಮಗಳೂ ಶಾಸನಗಳಾಗುತ್ತಿವೆ!

ಪಟ್ಟಿ ಬೆಳೆಯುತ್ತಲೇ ಸಾಗುತ್ತೆ. ಆದರೆ ಇಷ್ಟು ಸಾಕೆನಿಸುತ್ತೆ; ನಮ್ಮ ಉದ್ಧಾರಕ್ಕೆ, ನಮ್ಮ ಒಳಿತಿಗಾಗಿ ಶ್ರಮಿಸಿದ ನಮ್ಮವರನ್ನೇ ನಾವು ಭಸ್ಮಾಸುರರಾಗಿ ಹೇಗೆ ಬೂದಿಗೈಯ್ಯುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಸಲು. ಅಂದಹಾಗೆ, ಆ ಪುರಾಣದ ಕತೆಯಲ್ಲಿ, ವರದ ಪರೀಕ್ಷೆಗೆ ಮುಂದಾದ ಭಸ್ಮಾಸುರನನ್ನು ಕಂಡು ಶಿವ ಹೌಹಾರಿ ಓಡಿ ಹೋಗುತ್ತಾನೆ. ಅವನನ್ನು ಅಟ್ಟಿಸಿಕೊಂಡು ಹೋಗುವ ಭಸ್ಮಾಸುರನಿಗೆ, ಭಗವಂತನನ್ನೇ ತಾನು ಅಟ್ಟಿಸಿಕೊಂಡು ಹೋಗುತ್ತಿರುವ ಪರಾಕ್ರಮದ ಬಗ್ಗೆ ಬೀಗುವಿಕೆ ಇರುತ್ತೆ. ಅದು ಸಹಜವೂ ಹೌದು. ಆದರೆ ಕಥೆಯ ಕಟ್ಟಕಡೆಯ ಕ್ಲೈಮ್ಯಾಕ್ಸ್‌ನಲ್ಲಿ ಸುಟ್ಟು ಬೂದಿಯಾಗುವುದು ಶಿವನಲ್ಲ, ಸ್ವತಃ ಭಸ್ಮಾಸುರ! ಈಗ ನಾವೂ ಗಾಂಧಿ-ನೆಹರೂ-ಅಂಬೇಡ್ಕರ್ ಮೊದಲಾದ ನಮ್ಮ ಸ್ವಾತಂತ್ರ್ಯದ ದ್ಯೋತಕಗಳ ಮೇಲೆ ಹಲ್ಲೆ ಮಾಡುತ್ತಾ, ಅಪಪ್ರಚಾರಗೈಯುತ್ತಾ, ಅದೆ ನಮ್ಮ ಹೆಚ್ಚುಗಾರಿಕೆ ಎಂದು ಎದೆಯುಬ್ಬಿಸಿರಬಹುದು; ಆದರೆ ನೆನಪಿರಲಿ, ನಮ್ಮ ಈ ಉದ್ಧಟತನದಿಂದ ಕೊನೆಗೆ ಸುಟ್ಟು ಬೂದಿಯಾಗಲಿರುವುದು, ಅವರಲ್ಲ… ಎದೆಯುಬ್ಬಿಸುತ್ತಿರುವ ನಾವೇ!! ಅಷ್ಟರೊಳಗೆ ಎಚ್ಚೆತ್ತುಕೊಳ್ಳುವ ಕೊನೇ ಅವಕಾಶವೇನಾದರೂ ಸಿಕ್ಕರೆ, ಮುಲಾಜಿಲ್ಲದೆ ಎಚ್ಚೆತ್ತುಕೊಂಡುಬಿಡೋಣ. ಆ ಮೂಲಕವಾದರೂ ನಮ್ಮೊಳಗಿನ ಭಸ್ಮಾಸುರನ ಅವಾಂತರದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳೋಣ.

ಅಂದಹಾಗೆ, ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!