Sunday, May 19, 2024

ಪ್ರಾಯೋಗಿಕ ಆವೃತ್ತಿ

ಇಂದಿರಾ ಕ್ಯಾಂಟಿನ್ | ಇನ್ನು ಮುಂದೆ ಸಿಗಲಿದೆ ಸೊಪ್ಸಾರು, ಮುದ್ದೆ, ಪಾಯಸ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದುಡಿಯುವ ವರ್ಗ, ಬಡವರು, ನಿರ್ಗತಿಕರು, ವಿದ್ಯಾರ್ಥಿಗಳಿಗೆ ಹಸಿವನ್ನು ‘ಇಂದಿರಾ ಕ್ಯಾಂಟೀನ್’ ನೀಗಿಸುತ್ತಿದೆ. ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎಂಬ ಧ್ಯೇಯದೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರಂಭಿಸಿದ ಮಹಾತ್ವಾಕಾಂಕ್ಷೆಯ ಈ ಯೋಜನೆ ಹಲವಾರು ಜನರಿಗೆ ಅಕ್ಷಯ ಪಾತ್ರೆಯಾಗಿದೆ. ಈಗ ಮತ್ತೊಂದು ಮೈಲಿನತ್ತ ಸಾಗುತ್ತಿದೆ.

ಕಡಿಮೆ ದರದಲ್ಲಿ ಬಡಜನರ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ನಲ್ಲಿ ಈಗ ಮತ್ತಷ್ಟು ನಾನಾ ಬಗೆಯ ಆಹಾರಗಳು ದೊರೆಯಲಿವೆ. ಕ್ಯಾಂಟೀನ್‌ನ ‘ಆಹಾರ ಪಟ್ಟಿ’ (ಮೆನು) ಬದಲಾಗಿದೆ. ಗುಣಮಟ್ಟದ ಶುಚಿ-ರುಚಿ ಊಟ ನೀಡಲು ಸರ್ಕಾರ ನಿರ್ಧಾರ ಮಾಡಿದೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಾಹಾರಕ್ಕೆ ಈ ಹಿಂದೆ ನೀಡಲಾಗುತ್ತಿದ್ದ ಉಪ್ಪಿಟ್ಟು, ಕೇಸರಿ ಬಾತ್, ಪುಳಿಯೊಗರೆ, ಖಾರಾಬಾತ್, ಪೊಂಗಲ್ ರವಾ ಕಿಚಡಿ, ಚಿತ್ರಾನ್ನ, ಇಡ್ಲಿ ಜೊತೆಗೆ ಈಗ ಬ್ರೆಡ್ ಜಾಮ್ ಹಾಗೂ ಮಂಗಳೂರು ಬನ್ಸ್ ಕೂಡ ನೀಡಲಾಗುತ್ತದೆ. ರಾಜ್ಯದ ನಾನಾ ಪ್ರದೇಶದ ಆಹಾರ ಶೈಲಿಯಲ್ಲೂ ಉಪಾಹಾರ ದೊರೆಯಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಇನ್ನು ಮಧ್ಯಾಹ್ನದ ಊಟದಲ್ಲಿ ದಕ್ಷಿಣ ಕರ್ನಾಟಕ ಶೈಲಿ ಅದರಲ್ಲೂ ಮಂಡ್ಯ-ಹಾಸನ ಜಿಲ್ಲೆಯಲ್ಲಿ ಪ್ರಸಿದ್ಧವಾದ ಮುದ್ದೆ, ಸೊಪ್ಪು ಸಾರು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ ಊಟಕ್ಕೆ ಸಿಹಿ ಪಾಯಸ ಅಥವಾ ಸಿಹಿ ತಿಂಡಿಯನ್ನೂ ವಿತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಇದೆಲ್ಲದರ ಜೊತೆಗೆ, ಬೆಂಗಳೂರಿನಲ್ಲಿ ಉಪಾಹಾರದ ದರವನ್ನೂ ಹೆಚ್ಚಿಸಲಾಗಿದ್ದು, ಬೆಳಗ್ಗಿನ ತಿಂಡಿಗೆ ಕೇವಲ ₹5 ಇದ್ದು, ಅದನ್ನು ₹10ಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಈ ಹಿಂದಿನಂತೆ ₹10 ಬೆಲೆಯಿದೆ. ಊಟದಲ್ಲಿ ಅನ್ನ, ತರಕಾರಿ ಸಾಂಬಾರ್ ಮತ್ತು ಮೊಸರನ್ನ ಮಾತ್ರ ನೀಡಲಾಗುತ್ತಿತ್ತು. ಈಗ ಅದರ ಜೊತೆಗೆ ಹೊಸದಾಗಿ ಸಿಹಿ ಪಾಯಸ ಮತ್ತು ದಿನ ಬಿಟ್ಟು ದಿನ ಮುದ್ದೆ, ಸೊಪ್ಪುಸಾರು ಊಟ ಹಾಗೂ ಮುದ್ದೆ ಇಲ್ಲದ ದಿನ ಚಪಾತಿ, ಸಾಗು ನೀಡಲು ಮೆನು ಸಿದ್ಧಪಡಿಸಲಾಗಿದೆ.

ರಾತ್ರಿ ಊಟಕ್ಕೆ ಟೊಮೆಟೋ ಬಾತ್, ಮೊಸರನ್ನ, ವಾಂಗಿಬಾತ್, ಬಿಸಿಬೆಳೆ ಬಾತ್, ಮೆಂತ್ಯೆ ಪಲಾವ್, ಪುಳಿಯೊಗರೆ, ಪಲಾವ್ ನೀಡಲಾಗುತ್ತಿದೆ. ಅದನ್ನೇ ಮುಂದುವರೆಸಲು ತೀರ್ಮಾನ ಕೈಗೊಳ್ಳಲಾಗಿದೆ. ರಾತ್ರಿ ಮೆನುವಿನಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!