Thursday, September 19, 2024

ಪ್ರಾಯೋಗಿಕ ಆವೃತ್ತಿ

ಪತ್ರಕರ್ತರು ವಸ್ತುನಿಷ್ಠವಾಗಿ ವರದಿ ಮಾಡಬೇಕು

ಪತ್ರಕರ್ತರು ಯಾರನ್ನು ಓಲೈಸದೆ ವಸ್ತುನಿಷ್ಠವಾಗಿ ವರದಿ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.

ಮದ್ದೂರು ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜು ಸಭಾಂಗಣದಲ್ಲಿ ಮದ್ದೂರು ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ 2022-25ನೇ ಸಾಲಿನ ನೂತನ ಆಡಳಿತ ಮಂಡಳಿ ಪದಗ್ರಹಣ ಹಾಗೂ ಪತ್ರಕರ್ತರ ದಿನಾಚರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪತ್ರಕರ್ತರು ಜನಪ್ರತಿನಿಧಿಗಳಿಗೆ ಎಷ್ಟೇ ಹತ್ತಿರವಾಗಿದ್ದರೂ ಆತ ಒಳ್ಳೆಯದನ್ನು ಮಾಡಿದಾಗ ಒಳ್ಳೆಯದು ಎಂದು ವರದಿ ಮಾಡಬೇಕು. ಆತನಿಂದ ತಪ್ಪಾದಾಗ ಅದನ್ನು ಕೂಡ ವರದಿ ಮಾಡಬೇಕು ಎಂದರು.

ಪತ್ರಕರ್ತರ ಬಗ್ಗೆ ಜನಪ್ರತಿನಿಧಿಗಳಿಗೆ ಸದಾ ಭಯ ಇದ್ದೇ ಇರುತ್ತದೆ. ನಾನು ಕೂಡ ಏನೇ ತಪ್ಪು ಮಾಡಿದರು ಅದನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು.ಅದರಿಂದ ನನಗೆ ನನ್ನ ತಪ್ಪು ತಿದ್ದಿಕೊಳ್ಳಲು ಸಹಾಯವಾಗುತ್ತದೆ.

ಮದ್ದೂರು ತಾಲೂಕು ಪತ್ರಕರ್ತರ ಸಂಘ ಮುಂದಿನ ದಿನಗಳಲ್ಲಿ ಇನ್ನು ಉತ್ತಮವಾಗಿ ಬೆಳೆಯಲಿ. ಅದಕ್ಕೆ ನಾನು ನೆರವು ನೀಡಲು ಸಿದ್ದ. ಪತ್ರಕರ್ತರ ಮಕ್ಕಳಿಗೆ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸರ್ವ ರೀತಿಯಲ್ಲೂ ಸಹಕಾರ ನೀಡುತ್ತೇನೆ.

ನನಗೆ ಸನ್ಮಾನ ಮಾಡಿದ ನಂತರ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು ಅವರು ನಮ್ಮ ತಂದೆ ಜಿ.ಮಾದೇಗೌಡರ ಹೆಸರನ್ನು ಉಳಿಸುವ ಕೆಲಸ ಮಾಡುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಪ್ರಸ್ತುತ ಪತ್ರಕರ್ತರು ಅತ್ಯಂತ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದಾರೆ ಆಧುನಿಕ ತಂತ್ರಜ್ಞಾನ ಹೆಚ್ಚಾದಂತೆ ಇನ್ನು ಹತ್ತು ವರ್ಷಗಳಲ್ಲಿ ಪತ್ರಿಕೆಗಳು ಕಣ್ಮರೆಯಾಗುವ ಸೂಚನೆಗಳು ಇದ್ದು, ಪತ್ರಕರ್ತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಬದಲಾವಣೆ ಮಾಡಿಕೊಂಡು ತಮ್ಮ ಜೀವನ ನಡೆಸಬೇಕಿದೆ ಎಂದರು.

ಶಾಸಕಾಂಗ, ನ್ಯಾಯಾಂಗ,ಕಾರ್ಯಾಂಗ ತಪ್ಪು ಮಾಡಿದಾಗ ಅದನ್ನು ತಿದ್ದಿ ತೀಡುವ ಶಕ್ತಿ ಇರುವುದು ಪತ್ರಿಕಾ ರಂಗಕ್ಕೆ ಮಾತ್ರ. ಪತ್ರಕರ್ತರು ಮಾಡಿದ ವರದಿಗಳಿಂದ ಹಲವು ರಾಜಕಾರಣಿಗಳು ರಾಜೀನಾಮೆ ನೀಡಿದ್ದಾರೆ.

ನಮ್ಮ ಜಿಲ್ಲೆಯಲ್ಲಿ ಪಿಯುಸಿ ಪರೀಕ್ಷೆಯಲ್ಲಿ 8,600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಪಿಯುಸಿಯಲ್ಲಿ ಮಂಡ್ಯ ಜಿಲ್ಲೆಗೆ 29ನೇ ಸ್ಥಾನ ಬಂದಿರುವ ಬಗ್ಗೆ ಕಾರಣ ಏನು ಎಂಬುದನ್ನು ಪತ್ರಕರ್ತರು ಎತ್ತಿ ಹಿಡಿದು ಸಮಾಜಕ್ಕೆ ತಿಳಿಸಬೇಕಿದೆ ಎಂದರು.

ಸಮಾರಂಭ ಉದ್ಘಾಟಿಸಿದ ರಾಜ್ಯ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು, ಮತ್ತೀಕೆರೆ ಜಯರಾಮ್, ಬಿಜೆಪಿ ಮುಖಂಡ ಎಸ್ಪಿ ಸ್ವಾಮಿ ಮಾತನಾಡಿದರು.

ಪತ್ರಕರ್ತರ ಸಂಘದ ನಿರ್ದೇಶಕ ಶಿವನಂಜಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ನೂತನ ಅಧ್ಯಕ್ಷರಾಗಿ ಪುಟ್ಟಸ್ವಾಮಿ,ಉಪಾಧ್ಯಕ್ಷರಾಗಿ ಎಂ.ಆರ್.ಚಕ್ರಪಾಣಿ, ಪ್ರಧಾನ ಕಾರ್ಯದರ್ಶಿಯಾಗಿ ನಂದೀಶ್,ಖಜಾಂಚಿಯಾಗಿ ವಿ.ಎನ್.ಪ್ರಭುಶಂಕರ್, ಕಾರ್ಯದರ್ಶಿಯಾಗಿ ಅಂಬರಹಳ್ಳಿ ಸ್ವಾಮಿ ಅಧಿಕಾರ ವಹಿಸಿಕೊಂಡರು.

ಮದ್ದೂರು ಪುರಸಭೆ ಅಧ್ಯಕ್ಷ ಸುರೇಶ್ ಕುಮಾರ್,ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ. ಸಿ.ಮಂಜುನಾಥ್, ಕೆಪಿಸಿಸಿ ಸದಸ್ಯ ಎಸ್. ಗುರು ಚರಣ್,ಸೋಮಶೇಖರ್ ಕೆರಗೋಡು,ರವಿ ಸಾವಂದಿಪುರ,ಅಣ್ಣೂರು ಸತೀಶ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!