Thursday, September 19, 2024

ಪ್ರಾಯೋಗಿಕ ಆವೃತ್ತಿ

ಕುತೂಹಲ ಕೆರಳಿಸಿದ ಕಾಂಗ್ರೆಸ್ ನಾಯಕರ ಸಭೆ : ಕದಲೂರು ಉದಯ್ – ಗುರುಚರಣ್ ಮುಖಾಮುಖಿ

ವಿಧಾನಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ವಿಧಾನಸಭಾ ಕ್ಷೇತ್ರವೆಂದರೆ ಅದು ಮದ್ದೂರು.

ಇಲ್ಲಿ ಪ್ರಸ್ತುತ ನಾಲ್ಕು ಜನ ಪ್ರಮುಖ ಹುರಿಯಾಳುಗಲಿದ್ದು, ಜೆಡಿಎಸ್ ನ ಡಿ.ಸಿ.ತಮ್ಮಣ್ಣ ಅವರು ಹ್ಯಾಟ್ರಿಕ್ ಸಾಧನೆಯತ್ತ ತಮ್ಮ ಚಿತ್ತ ಇಟ್ಟಿದ್ದಾರೆ, ಅದಕ್ಕಾಗಿ ಪಕ್ಷದ ಹಾಗೂ ಬೀಗರಾದ ಹೆಚ್.ಡಿ.ದೇವೇಗೌಡರ ಕುಟುಂಬದ ನೆರವನ್ನು ನಂಬಿ ಕಣಕ್ಕಿಳಿಯಲಿದ್ದಾರೆ.

ಬಿಜೆಪಿಯ  ಎಸ್. ಪಿ. ಸ್ವಾಮಿ ಮದ್ದೂರಿನಲ್ಲಿ ಉತ್ತಮ ಪೀಠಿಕೆ ಹಾಕಿದ್ದು ಹೀಗಾಗಲೆ ಬಿಜೆಪಿ ನಾಯಕರಾದ ಬಿ. ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕ್ಷೇತ್ರಕ್ಕೆ ಕರೆತಂದು ಮೊದಲ ಸುತ್ತಿನ ಪ್ರಚಾರ ಮಾಡಿಸಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷ ಕಳೆದ ಹದಿನೈದು ವರ್ಷಗಳಿಂದ ಕ್ಷೇತ್ರದಲ್ಲಿ ಅಧಿಕಾರ ವಂಚಿತವಾಗಿದ್ದು, ಇಲ್ಲಿ ಮತ್ತೆ ‘ಕೈ’ ಬಲಪಡಿಸಬೇಕೆಂದು ಪಣ ತೊಟ್ಟು ಚುನಾವಣೆಗೆ ತಯಾರಿ ನಡೆಸಿದೆ. ಕಳೆದ ವಿಧಾನ ಪರಿಷತ್ತಿನ  ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಹಾಗೂ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿರುವುದು ಕಾಂಗ್ರೆಸ್ಸಿನ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ.

ಇದನ್ನೂ ಓದಿ : ನೀನಿನ್ನೂ ಗಂಡೇ ಆಗಿಲ್ಲ: ಡಿಕೆಶಿ ಹೇಳಿಕೆ ಹಿಂದಿನ ಮರ್ಮವೇನು…?

ಈ ನಡುವೆ ಸಾಮಾಜಿಕ ಚಟುವಟಿಕೆ ಮೂಲಕ ರಾಜಕೀಯ ಪ್ರವೇಶ ಮಾಡಿರುವ ಕದಲೂರು ಉದಯ್ ಅವರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿರುವ ಕುರಿತು ಚರ್ಚೆಗಳು ಕ್ಷೇತ್ರದಲ್ಲೆಡೆ ಬಿಸಿ ಬಿಸಿ ಸುದ್ಧಿಯಾಗಿ ಎಲ್ಲೆಡೆ ಹರಿದಾಡುತ್ತಿದೆ. ಕಳೆದ ರಥಸಪ್ತಮಿಯ ದಿನ ಸುದ್ದಿಗೋಷ್ಠಿ ನಡೆಸಿ ರಾಷ್ಟ್ರೀಯ ಪಕ್ಷದಿಂದ ಟಿಕೆಟ್ ತರುವುದಾಗಿ ಸ್ವತಃ ಕದಲೂರು ಉದಯ ವಿಶ್ವಾಸ ವ್ಯಕ್ತಪಡಿಸಿದ್ದರು.

ಉದಯ್ ಅವರ ಈ ಹೇಳಿಕೆ ಕಾಂಗ್ರೆಸ್ ನಿಂದ ಉದಯ್ ಗೆ ಟಿಕೆಟ್ ಎಂಬ ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ.
ಈ ಕುರಿತು ಗುರುಚರಣ್ ನಾನೇ ಅಭ್ಯರ್ಥಿ ಎಂದು ಸ್ಪಷ್ಠನೆ ನೀಡಿದ್ದರು. ಆದರೆ ಅದಕ್ಕೂ ಮೊದಲು ಇದೆ ಗುರುಚರಣ್ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಮದ್ದೂರು ಕ್ಷೇತ್ರಕ್ಕೆ ಆಹ್ವಾನಿಸಿದ್ದು ಸುದ್ದಿಯಾಗಿದೆ.

ಈ ಎಲ್ಲದರ ನಡುವೆ ‘ಪ್ರಜಾಧ್ವನಿಯಾತ್ರೆ’ ಕಾರ್ಯಕ್ರಮಕ್ಕೆ ಗುರುಚರಣ್ ನೀರಿಕ್ಷೆಗೂ ಮೀರಿ ಜನರನ್ನು ಸೇರಿಸಿ ಹೈಕಮಾಂಡ್ ನ ಒಲವು ಗಳಿಸಲು ಪ್ರಯತ್ನ ನಡೆಸಿದರೆ, ಮತ್ತೊಂದೆಡೆ ಕದಲೂರು ಉದಯ್ ಅದೇ ದಿನ ಮದ್ದೂರಿನಲ್ಲಿ‌ ತಮ್ಮ ಕಾರ್ಯಕರ್ತರ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದರು. ಆದರೆ ಈ ಎರಡು ಸಭೆಯಲ್ಲಿಯೂ ಅಭ್ಯರ್ಥಿ ಯಾರು ಎನ್ನುವುದು ಅಂತಿಮವಾಗಿರಲಿಲ್ಲ.

ಮದ್ದೂರಿನಲ್ಲಿ ‘ಪ್ರಜಾಧ್ವನಿಯಾತ್ರೆ’ಯಲ್ಲಿ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ‘ನೀನು ಇನ್ನೂ ಗಂಡೇ ಆಗಿಲ್ಲ, ಆಗಲೇ ಪಕ್ಕದಲ್ಲಿ ನಿಂತುಕೊಳ್ಳಲು ಬಂದಿದ್ಯಾ’ ಎಂದು ಹೇಳಿರುವುದು ನಾನಾ ಅರ್ಥಗಳನ್ನು ಹುಟ್ಟಿಹಾಕಿತ್ತು.

ಈ ನಡುವೆ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗುರುಚರಣ್ ಹಾಗೂ ಕದಲೂರು ಉದಯ್ ಅವರನ್ನು ಮುಖಾಮುಖಿಯಾಗಿಸಿ ನಡೆಸಿದ ಸಭೆಯ ಪೋಟೊಗಳು ಮದ್ದೂರು ವಿಧಾನಸಭೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಈ ಸಭೆಯೂ ಡಿ.ಕೆ.ಶಿವಕುಮಾರ್ ಪ್ರಜಾಧ್ವನಿಯಾತ್ರೆಯಲ್ಲಿ ಗುರುಚರಣ್ ಬಗ್ಗೆ ಮಾತನಾಡಿದ್ದಕ್ಕೆ ಪುಷ್ಟಿ ನೀಡುವಂತಿದೆ.

ಒಂದು ಕಡೆ ಕದಲೂರು ಉದಯ್ ಬೆಂಬಲಿಗರು ಉದಯ್ ಗೆ ಕಾಂಗ್ರೆಸ್ ಟಿಕೆಟ್ ಖಚಿತ ಎಂಬ ವಿಶ್ವಾಸದಲ್ಲಿದ್ದರೆ, ಮತ್ತೊಂದೆಡೆ ಗುರುಚರಣ್ ಕಡೆಯವರು ಗುರುಚರಣ್ ಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ.

ಇನ್ನು ಹೆಚ್ಚಿನ ಆಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದರೆ ನಮಗೆ ಅನುಕೂಲಕಾರಿಯಾಗಲಿದೆ ಎಂಬ ಲೆಕ್ಕಾಚಾರ ದಲ್ಲಿದ್ದ ಜೆಡಿಎಸ್ ಬೆಂಬಲಿಗರು ಈ ಬೆಳವಣಿಗೆಯಿಂದ ಅಕ್ಷರಶಃ ಕಂಗಾಲಾಗಿದ್ದಾರೆ. ಒಂದು ವೇಳೆ ಉದಯ್ ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕರೆ ತೀವ್ರ ಹಣಾಹಣಿ ನಡೆಯುವುದು ಖಚಿತ ಎಂಬಂತಾಗಿದೆ. ಉದಯ್ ಹಾಗೂ ಗುರುಚರಣ್ ಮುಖಾಮುಖಿಯಾಗಿರುವುದು ಕಾಂಗ್ರೆಸ್ ನಾಯಕರಿಗಿಂತ ಹೆಚ್ಚು ಜೆಡಿಎಸ್ ನಾಯಕರ ತಲೆಕೆಡಿಸಿದೆ. ಹಾಗಾಗಿ ಇದನ್ನು ಜೆಡಿಎಸ್ ನಾಯಕರು ಗಂಭೀರವಾಗಿಯೇ ತೆಗೆದುಕೊಂಡಿದ್ದಾರೆ. ಆದರೂ ಜೆಡಿಎಸ್ ಪಕ್ಷವು ಕಾಂಗ್ರೆಸ್ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಒಟ್ಟಾರೆ ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಭೆ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಕೂತುಹಲ ಹುಟ್ಟು ಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮದ್ದೂರು ಕ್ಷೇತ್ರದಾದ್ಯಂತ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಅಂತಿಮವಾಗಿ ಮದ್ದೂರಿನ ‘ಕೈ’ ಟಿಕೆಟ್ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!