Wednesday, September 18, 2024

ಪ್ರಾಯೋಗಿಕ ಆವೃತ್ತಿ

ಕನ್ಹಯ್ಯಲಾಲ್ ಹತ್ಯೆ ಮತ್ತು ಸಾಮಾಜಿಕ ಹೋರಾಟಗಾರರ ಬಂಧನ ಖಂಡಿಸಿ ಪ್ರತಿಭಟನೆ

ಕನ್ಹಯ್ಯಲಾಲ್ ಹತ್ಯೆ ಖಂಡಿಸಿ,ಮಾನವಹಕ್ಕು ಹೋರಾಟಗಾರರಾದ ಶ್ರೀ ಕುಮಾರ್, ತೀಸ್ತಾ ಸೆಟಲ್ವಾಡ್, ಮಹಮದ್ ಜುಬೇರ್ ಬಂಧನ ಖಂಡಿಸಿ, ಅಗ್ನಿಪಥ್ ಯೋಜನೆ ಹಾಗೂ ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಸಿಪಿಐಎಂ ಮುಖಂಡರು ಮಳವಳ್ಳಿ ಪಟ್ಟಣದ ಅನಂತರಾಮ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ದೇವಿ ಮಾತನಾಡಿ,ರಾಜಸ್ಥಾನದ ಉದಯ್‌ಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಹತ್ಯೆ ಮಾಡಿರುವುದು ಖಂಡನೀಯ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕೃತ್ಯಗಳನ್ನು ತಡೆಗಟ್ಟಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಸಾಮಾಜಿಕ ಹೋರಾಟಗಾರರ ಧ್ವನಿಯನ್ನು ಅಡಗಿಸುವ ಪ್ರಯತ್ನದಿಂದ ಮಾನವ ಹಕ್ಕುಗಳ ಹೋರಾಟಗಾರರಾದ ಶ್ರೀ ಕುಮಾರ್, ತೀಸ್ತಾ ಸೆಟಲ್ವಾಡ್,ಮಹಮದ್‌ಜುಬೇರ್ ಅವರನ್ನು ಬಂಧಿಸಲಾಗಿದೆ, ಬಿಜೆಪಿ ನೇತೃತ್ವದ ನರೇಂದ್ರಮೋದಿ ಸರ್ಕಾರ ಅನ್ಯಾಯದ ವಿರುದ್ದ ಹೋರಾಟ ಮಾಡುವವರನ್ನು ಮತ್ತು ಸತ್ಯ ಬರೆಯುವವರನ್ನು ಜೈಲಿಗೆ ಹಾಕಲು ಹೊರಟಿದೆ, ಕೂಡಲೇ ಮಾನವ ಹಕ್ಕುಗಳ ಹೋರಾಟವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರಮೋದಿ, ಅಮಿತ್‌ ಷಾ ಸರ್ವಾಧಿಕಾರಿ ಧೋರಣೆಯನ್ನು ಬಿಡಬೇಕು.ರಕ್ಷಣಾ ವ್ಯವಸ್ಥೆಯನ್ನು ದುರ್ಬಲ ಗೊಳಿಸುವಂತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ಯುವಕರಿಗೆ ಮಾರಕವಾಗಲಿದೆ.4ವರ್ಷ ಸೇವೆ ಸಲ್ಲಿಸಿದ ಮೇಲೆ ಯುವಕರು ನಿರುದ್ಯೋಗಿಗಳಾಗಿ ಬದುಕುವಂತಾಗುತ್ತದೆ.ಕೂಡಲೇ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್, ಬಸವಣ್ಣ, ಕುವೆಂಪು ಸೇರಿದಂತೆ ಮಹಾನ್ ನಾಯಕರ ಪಾಠಗಳನ್ನು ತೆಗೆದುಹಾಕಿ ಮಹಿಳೆಯರನ್ನು ಎರಡನೇ ದರ್ಜೆಯಲ್ಲಿ ನೋಡುವಂತ ವಿಷಯವನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಮನುವಾದವನ್ನು ಮತ್ತೆ ಮರುಕಲಿಸಲು ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಮುಖಂಡರಾದ ರಾಮಕೃಷ್ಣ, ಭರತ್‌ರಾಜ್, ಲಿಂಗರಾಜು ಮೂರ್ತಿ, ತಿಮ್ಮೇಗೌಡ, ಶಿವಕುಮಾರ್, ಸುಶೀಲ, ಸುನೀತ, ಮಂಜುಳ, ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!