Saturday, May 18, 2024

ಪ್ರಾಯೋಗಿಕ ಆವೃತ್ತಿ

ಕಾವ್ಯಾನು ಸಂಧಾನ’ದಲ್ಲಿ ಪು.ತಿ.ನ ಅವರ ‘ರಂಗವಲ್ಲಿ’ ಕವಿತೆ ವ್ಯಾಖ್ಯಾನ

ಮಂಡ್ಯದ ಕರ್ನಾಟಕ ಸಂಘ ಮಹಿಳಾ ಘಟಕದ ವತಿಯಿಂದ ಕೆ.ಟಿ. ಶಿವಲಿಂಗಯ್ಯ ಸಭಾಂಗಣದಲ್ಲಿ ಜರುಗಿದ ‘ಕಾವ್ಯಾನು ಸಂಧಾನ’ಎಂಬ ಕಾರ್ಯಕ್ರಮದಲ್ಲಿ ಕವಿತೆಯ ಓದು, ಗಾಯನ,ವ್ಯಾಖ್ಯಾನ , ಸಂವಾದ ಕಾರ್ಯಕ್ರಮ ನಡೆಯಿತು.

ಮೈಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪಿ. ಬೆಟ್ಟೇಗೌಡ ಅವರು ಪು.ತಿ. ನ ಅವರ ‘ರಂಗವಲ್ಲಿ ‘ಕವಿತೆ ಕುರಿತು ಮಾತನಾಡಿದರು.

ವಾಚನ ಮತ್ತು ವ್ಯಾಖ್ಯಾನ ಅಥವಾ ಸಂವಾದ ಯಾವ ಬಗೆಯ ಸಾಹಿತ್ಯಕ್ಕೆ ಅಗತ್ಯವಿದೆ? ಇದು ಹುಟ್ಟಿಕೊಂಡ ಸಂದರ್ಭವಾದರೂ ಯಾವುದು? ಯಾವ ಕಾವ್ಯವನ್ನು, ಯಾವ ಕೃತಿಯನ್ನು, ಸಾಮಾನ್ಯರು ಪ್ರವೇಶ ಮಾಡಲು ಆಗುವುದಿಲ್ಲವೋ ಯಾವುದು ಸಂಕೇತ, ಪ್ರತೀಕ, ಪ್ರತಿಮೆಗಳಿಂದ ಅಧಿಕವಾಗಿ ನಿಬಿಡ ವಾಗಿರುತ್ತದೊ ಅಂತಹದ್ದಕ್ಕೆ ವ್ಯಾಖ್ಯಾನದ ಅಗತ್ಯವಿರುತ್ತದೆ.ಕಾರಣ ವೆಂದರೆ,ಭಾಷೆ ನಮ್ಮನ್ನ ಪ್ರವೇಶದ ದ್ವಾರದಲ್ಲಿ ಅಡ್ಡಿಪಡಿಸಿದಾಗ ಅಥವಾ ಕವಿತೆಯ ಪರಿಕರಗಳಾದ ಸಂಕೇತ ,ಪ್ರತಿಮೆಗಳು ಕವಿತೆಯ ರಸಸ್ವಾದಕ್ಕೆ ಅಡ್ಡಿಪಡಿಸುವಾಗ ಅದನ್ನು ನಿವಾರಿಸಿ ಸಾಮಾನ್ಯರು ಕೂಡ, ಕಾವ್ಯದ ರಸವನ್ನು, ಸೌಂದರ್ಯವನ್ನು ಅನುಭವಿಸುವುದಕ್ಕೆ ಒಂದು ಅವಕಾಶವೇ ವಾಚನ,ವ್ಯಾಖ್ಯಾನ, ಗಾಯನದ ಅಗತ್ಯವಿದೆ ಎಂದು ತಿಳಿಸಿದರು.

ಪು. ತಿ. ನ ಅವರ ಸಮಕಾಲಿನರೇ ಆಗಿದ್ದ ಬೇಂದ್ರೆ, ಕುವೆಂಪು ಅವರಲ್ಲಿ ಕಾಣದ ವಿಶೇಷ ಗುಣ ಪು.ತಿ. ನ ಅವರ ಕಾವ್ಯದಲ್ಲಿ ಕಾಣುತ್ತದೆ. ಚಿಂತನೆ ಪ್ರಧಾನವಾದ ಸಾಹಿತ್ಯ ರಚನೆ ಮಾಡಿದವರು ಪು. ತಿ. ನ. ಒಬ್ಬರಲ್ಲಿ ಭಾವನೆ,ಇನ್ನೊಬ್ಬರಲ್ಲಿ ವೈಜ್ಞಾನಿಕತೆ, ಪು.ತಿ.ನ ಅವರಲ್ಲಿ ಚಿಂತನೆ ಬಿಂಬಿತವಾಗಿದೆ ಎಂದರು.

ಎಚ್.ಎಸ್. ರಾಘವೇಂದ್ರ ರಾವ್ ಅವರ ಹಾಡೇ ಹಾದಿಯ ತೋರಿತು ಕೃತಿಯಲ್ಲಿ ಬೇಂದ್ರೆ ಬೆಳಗಿನ ಕವಿ, ಪು.ತಿ.ನ ಕತ್ತಲಕವಿ, ಕುವೆಂಪು ಬೆಳಕು, ಕತ್ತಲ ಮುಸುಕಿನ ಕವಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ರಂಗವಲ್ಲಿ ಪದ್ಯವನ್ನು ನಾವು ಸಂಗ್ರಹಿಸಬೇಕಾಗಿರುವುದು ದೇವರು, ಭಕ್ತಿ ಮತ್ತು ವಾಸ್ತವವನ್ನು ಈ ಕವಿತೆ ಹೇಗೆ ನಿರೂಪಿಸುತ್ತದೆ ?ಹೇಗೆ ಗ್ರಹಿಸುತ್ತದೆ? ಕಾವ್ಯದಲ್ಲಿ ಹೇಗೆ ಪ್ರಸ್ತುತಪಡಿಸಿದ್ದಾರೆ ಎಂಬುದನ್ನು ಅರಿಯಬೇಕಿದೆ.

“ದೇವಗೊಂಬೆ ,ಪೂಜೆ ಆಟ ,ಭಕ್ತಿ ಸೋಜಿಗ”ಎಂದು ಹೇಳುವ ಕವಿತೆಯ ಸಾಲುಗಳು ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿವೆ ಎಂದು ಬಣ್ಣಿಸಿದರು.

ಪ್ರೊ. ಶ್ರೀಲತಾ ಅವರು ಕನಕದಾಸರ ‘ತಲ್ಲಣಿಸದಿರು ಕಂಡ್ಯ ತಾಳು ಮನವೇ ‘ಎಂಬ ಕೀರ್ತನೆಯನ್ನು ಕುರಿತು ಮಾತನಾಡಿದರು. ಯಾವುದೇ ಪಂಥಕ್ಕೆ, ಸಿದ್ದಾಂತಕ್ಕೆ ಅಂಟಿಕೊಳ್ಳದೆ ಸಾಮಾಜಿಕ ಕಳಕಳಿಯನ್ನುಳ್ಳ ಸಾಹಿತ್ಯವನ್ನು ರಚಿಸಿದವರು ಕನಕದಾಸರು.

ಆತ್ಮ ಯಾವ ಕುಲ? ಜೀವ ಯಾವ ಕುಲ? ತತ್ವಂದ್ರಿಯ ಯಾವ ಕುಲ? ಎನ್ನುತ್ತಾರೆ. ‘ತಲ್ಲಣಿಸದಿರು ಕಂಡ್ಯ ತಾಳು ಮನವೇ ‘ಕವಿತೆ ನಮ್ಮ ದುಃಖ, ದುಮ್ಮಾನ ,ಸಂಶಯ ,ಅನುಮಾನಗಳನ್ನು ತೊರೆದು, ಎಲ್ಲರನು ಸಲಹುವನು ಇದಕ್ಕೆ ಸಂಶಯ ಬೇಡ ಎಂದು ಕನಕದಾಸರು ಹೇಳಿದ್ದಾರೆ ಎಂದು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಸೌಭಾಗ್ಯ ವಹಿಸಿದ್ದರು. ಸುಸ್ವರ ಸಂಗೀತ ಶಾಲೆಯ ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಯನ್ನು ಹಾಡಿದರು. ಕಾರ್ಯಕ್ರಮದ ಸಂಚಾಲಕರಾದ ಡಾ. ದೇವಿಕಾ ಎನ್.ಎಸ್, ಡಾ. ಅನಿತಾ ಎಂ.ಎಸ್, ನಾಗರೇವಕ್ಕ ಉಪಸ್ಥಿತರಿದ್ದರು. ಹಾಗೆಯೇ ಸಂವಾದದಲ್ಲಿ ಪ್ರೊ.ಎಸ್. ಬಿ.ಶಂಕರಗೌಡ, ಶ್ರೀದೇವಿ, ಲಂಕೇಶ್, ಧರಣೇಂದ್ರಯ್ಯ ಜಿಲ್ಲೆಯ ವಿವಿಧ ಕ್ಷೇತ್ರದ ವಿದ್ವಾಂಸರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!