Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೃಷ್ಣರಾಜಸಾಗರ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯಲು ಬಿಡಬಾರದು

ಕೃಷ್ಣರಾಜಸಾಗರ ಜಲಾಶಯದ ಸುತ್ತಮುತ್ತ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಂದಿಗೂ ಗಣಿಗಾರಿಕೆ ಮಾಡಲು ಬಿಡಬಾರದು. ಜನರೆಲ್ಲರೂ ಸೇರಿ ಗಣಿಗಾರಿಕೆ ನಡೆದಂತೆ ತಡೆಯಬೇಕು, ಇಲ್ಲದಿದ್ದರೆ ಅಪಾಯ ಖಚಿತ ಎಂದು ಭೂ ವಿಜ್ಞಾನದ ಪ್ರಾಧ್ಯಾಪಕ ಪ್ರೊ.ಹೆಚ್.ಬಿ. ಬಸವರಾಜಪ್ಪ ಸಲಹೆ ನೀಡಿದರು.

ಮಂಡ್ಯ ನಗರದ ರೈತ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಕೆಆರ್‌ಎಸ್‌ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಿ, ರೈತರ ಬದುಕು ಬರಡಾಗದಿರಲು ಕೆಆರ್‌ಎಸ್‌ ಉಳಿಸಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬೇಬಿ ಬೆಟ್ಟದಿಂದ ಕೃಷ್ಣರಾಜ ಸಾಗರದ ಕಾವೇರಿ ಪ್ರತಿಮೆಯ ಬಳಿವರೆಗೆ ಏಕಶಿಲಾಪದರವಿದೆ. ಒಂದು ವೇಳೆ ಆಳವಾಗಿ ಸ್ಪೋಟ ಮಾಡಿದರೆ ಖಂಡಿತವಾಗಿ ಕೆಆರ್‌ಎಸ್‌ ಅಣೆಕಟ್ಟಿಗೆ ಅಪಾಯವಾಗಲಿದೆ. ರೈತರು, ಜನಪರ ಸಂಘಟನೆಗಳೆಲ್ಲ ಸೇರಿ ಹಗಲು-ರಾತ್ರಿ ಹೋರಾಟ ಮಾಡಿ ಗಣಿಗಾರಿಕೆಯನ್ನು ನಿಲ್ಲಿಸಿದ್ದೇವೆ. ನಾವೆಲ್ಲರೂ ಸೇರಿ ಮುಂದೆಯೂ ಗಣಿಗಾರಿಕೆ ನಡೆದಂತೆ ಹೋರಾಟ ನಡೆಸಬೇಕಿದೆ ಎಂದರು.

ಈಗಾಗಲೇ ಸುಪ್ರೀಂಕೋರ್ಟ್, ಐಐಎಸ್‌ಸಿ ಪುಣೆ ಸಂಸ್ಥೆ ಗಣಿಗಾರಿಕೆಯಿಂದ ಅಪಾಯವಿದೆ ಎಂದು ವರದಿ ನೀಡಿವೆ. ಹೀಗಿದ್ದರೂ ಅದು ಯಾವುದೋ ರಾಜ್ಯದಿಂದ ಪರೀಕ್ಷಾ ಸ್ಫೋಟ ಮಾಡುತ್ತೇವೆ ಎಂದು ಬಂದಿರುವ ವಿಜ್ಞಾನಿಗಳು ಯಾರ ಪರವಾಗಿ ವರದಿ ನೀಡುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ.

ಗಣಿಗಾರಿಕೆಯಿಂದ ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ಆಗುತ್ತದೆ. ಇದಕ್ಕೆಲ್ಲ ಕಡಿವಾಣ ಬಿದ್ದು ಇಂದು ಹಳ್ಳಿಗಳು ಆರೋಗ್ಯವಾಗಿವೆ. ಕೆ ಆರ್ ಎಸ್ ವ್ಯಾಪ್ತಿಯ 20 ಕಿಲೋ ಮೀಟರ್ ಪ್ರದೇಶದಲ್ಲಿ ಯಾವ ಗಣಿಗಾರಿಕೆ ಚಟುವಟಿಕೆಯೂ ನಡೆಯಬಾರದು. ಸರ್ಕಾರ ನನಗೆ ಅವಕಾಶ ನೀಡಿದರೆ ನಾನೇ ಗಣಿಗಾರಿಕೆಗೆ ಅವಕಾಶ ಇರುವ ಬೇರೆ ಸ್ಥಳಗಳನ್ನು ಗುರುತಿಸಿ ಕೊಡುತ್ತೇನೆ. ಈಗಾಗಲೇ ಸಂಸದೆ ಸುಮಲತಾ ಅಂಬರೀಶ್ ರವರು ನನ್ನಿಂದ ಕೆಲವೊಂದು ವರದಿ ಕೇಳಿದ್ದರು. ಅದನ್ನು ಕೊಟ್ಟಿರುತ್ತೇನೆ. ಸರ್ಕಾರ ಕೇಳಿದರೆ ವರದಿ ನೀಡುತ್ತೇನೆ ಎಂದರು‌.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟಿಗೆ ಗಣಿಗಾರಿಕೆ ನಡೆದರೆ ವೈಜ್ಞಾನಿಕವಾಗಿ ತೊಂದರೆ ಆಗಲಿದೆ ಎಂದು ತಜ್ಞರು, ಭೂವಿಜ್ಞಾನಿಗಳು ಹೇಳಿದ್ದಾರೆ. ಆದ್ದರಿಂದ ಸರ್ಕಾರ ಗಣಿಗಾರಿಕೆಗೆ ಎಂದಿಗೂ ಅವಕಾಶ ಕೊಡಬಾರದು ಎಂದರು.

ರೈತ ಮುಖಂಡ ಮಧುಚಂದನ್ ಮಾತನಾಡಿ, ನಾವು ಗಣಿಗಾರಿಕೆಯ ಬಗ್ಗೆ ವೈಜ್ಞಾನಿಕವಾಗಿ ತಿಳಿದುಕೊಳ್ಳದಿದ್ದರೆ ಏನು ಅರ್ಥವಾಗುವುದಿಲ್ಲ.ಮಂಡ್ಯ ಸಂಪದ್ಭರಿತ ಜಿಲ್ಲೆ ಎಂದು ಹೇಳುತ್ತಾರೆ. ಆದರೆ ಮಂಡ್ಯದ ಮಕ್ಕಳು ವ್ಯವಸಾಯ ಬಿಟ್ಟು ಬೆಂಗಳೂರಿನಲ್ಲಿ ಅಟೋ,ಕಾರು ಚಾಲಕರಾಗಿ, ಬಾರ್ ಗಳಲ್ಲಿ ಸಪ್ಲೈಯರ್ ಆಗಿ, ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಯಾರಿಗೂ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಗಂಭೀರತೆ ಇಲ್ಲ. ರಾಜಕಾರಣಿಗಳಲ್ಲಿ ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂದರು.

ಬೇಬಿ ಬೆಟ್ಟದಲ್ಲಿ ಶಾಸಕರೇ ಗಣಿಗಾರಿಕೆ ಮಾಡುತ್ತಾರೆ. ಅಕ್ರಮ ಗಣಿಗಾರಿಕೆ ಮಾಡುವ ರಾಜಕಾರಣಿಗಳಿಗೆ ಜನರು ಮತ ಹಾಕುತ್ತಾರೆ. ಇನ್ನಾದರೂ ಜನರು ಮೋಸ ಹೋಗದೆ ಎಚ್ಚೆತ್ತುಕೊಳ್ಳಬೇಕು ಎಂದರು.‌

ದಸಂಸ ನಾಯಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ರಾಜ್ಯದಲ್ಲಿರುವುದು ಭಂಡ ಮತ್ತು ಮಾನಗೆಟ್ಟ ಸರ್ಕಾರ. ಜಿಲ್ಲಾಡಳಿತಕ್ಕೆ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಪರೀಕ್ಷಾರ್ಥ ಸ್ಫೋಟ ಮಾಡಿ ಎಂದು ಯಾರು ಇವರನ್ನು ಕೇಳಿದ್ದರು. ಗಣಿಗಾರಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟಿಗೆ ಅಪಾಯ ಆಗುತ್ತೆ ಎಂದರೂ ಭಂಡ ಸರ್ಕಾರ ಚುನಾವಣೆ ಮಾಡಲು ದುಡ್ಡು ಸಂಗ್ರಹಕ್ಕೆ ಸ್ಫೋಟ ನಡೆಸಲು ಹೊರಟಿದೆ. ಎಲ್ಲವೂ ಸರಿಯಾಗಿದೆ ಎಂದು ವರದಿ ಕೊಟ್ಟು ಕೆಲ ದಿನಗಳ ನಂತರ ಅಣೆಕಟ್ಟು ಒಡೆದು ಹೋಗಿರುವ ಹಲವು ಉದಾಹರಣೆಗಳು ನಮ್ಮ ಮುಂದಿದೆ ಎಂದು ತಿಳಿಸಿದರು.

ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇಲ್ಲ. ಇಡೀ ರಾಜ್ಯದಲ್ಲಿ ಕೋಟಿಗಟ್ಟಲೆ ದುಡ್ಡು ಮಾಡಿಕೊಂಡಿರುವವರಿಗೆ ಜನರು ಮತ ನೀಡುತ್ತಿದ್ದಾರೆ. ಕುಡಿಯುವ ನೀರು ಮತ್ತು ವ್ಯವಸಾಯದ ಕಾರಣಕ್ಕಾಗಿ ಕನ್ನಂಬಾಡಿ ಉಳಿಸಬೇಕಿದೆ. ಇದೊಂದು ದೊಡ್ಡ ಹೋರಾಟವಾಗಿ ರೂಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ, ಪುಟ್ಟಣ್ಣಯ್ಯನವರು ಕಳೆದ 15 ವರ್ಷಗಳ ಹಿಂದಿನಿಂದಲೂ ಕೆಆರ್‌ಎಸ್‌ ಅಣೆಕಟ್ಟಿಗೆ ಅಪಾಯವಿದೆ ಎಂದು ಹೇಳಿದರೂ ರಾಜಕೀಯ ಕಾರಣ ಎಂದು ತಳ್ಳಿಹಾಕುತ್ತಿದ್ದರು. ಆದರೆ ಈಗ ಕನ್ನಂಬಾಡಿ ಅಣೆಕಟ್ಟೆಗೆ ಅಪಾಯವಿದೆ ಎಂದು ಸಾಬೀತಾಗಿದೆ. ಬಸವರಾಜಪ್ಪನವರು ಗಣಿಗಾರಿಕೆಯಿಂದ ಅಣೆಕಟ್ಟಿಗೆ ಅಪಾಯವಾಗುವ ಬಗ್ಗೆ ವರದಿಯನ್ನು ಕೊಟ್ಟರೆ ನಾವು ಮುಖ್ಯಮಂತ್ರಿಗಳ ಬಳಿ ಹೋಗಿ ವರದಿ ನೀಡಿ ಮಾತನಾಡಿ ಬರುತ್ತೇವೆ.

ನಾನು 1977ರಲ್ಲಿ ಪದವಿ ಓದುತ್ತಿದ್ದ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಚಳುವಳಿ ಮಾಡುವಂತೆ ಕರೆಕೊಟ್ಟರು. ಆ ಭಾಗವಾಗಿ ನಾನು ಚಳುವಳಿ ಸೇರಿದೆ. ಆದರೆ ಇಂದಿನ ವಿದ್ಯಾರ್ಥಿಗಳು, ವಕೀಲರು, ಉಪನ್ಯಾಸಕರು, ಜನಸಾಮಾನ್ಯರು ಅಕ್ರಮಗಳ ಬಗ್ಗೆ ಮಾತನಾಡುತ್ತಿಲ್ಲ. ಸುಮಾರು ಎರಡೂವರೆ ಕೋಟಿ ಜನರು ಕಾವೇರಿ ನೀರನ್ನು ಕುಡಿಯುತ್ತಿದ್ದಾರೆ. ಆದರೆ ಅಣೆಕಟ್ಟಿಗೆ ತೊಂದರೆ ಆಗುತ್ತಿರುವ ಸಂದರ್ಭದಲ್ಲಿಯೂ ಇವರೆಲ್ಲ ಮಾತನಾಡದಿರುವುದು ಸರಿಯಲ್ಲ. ಜನರು ದಂಗೆ ಎದ್ದರೆ ಯಾವುದೇ ಕಾರ್ಯ ಸಫಲವಾಗುತ್ತದೆ. ಬೆಂಗಳೂರು,ಮೈಸೂರಿನ ಜನ ಯೋಚನೆ ಮಾಡಿ ನಮ್ಮೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಕರ್ನಾಟಕ ಜನಶಕ್ತಿಯ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ, ಮಂಡ್ಯ ಜಿಲ್ಲೆಗೆ ದಶಕಗಳ ಹೋರಾಟದ ಇತಿಹಾಸವಿದೆ. ಹಿಂದೆ ನಮ್ಮ ಪೂರ್ವಜರು ಅಭಿವೃದ್ಧಿಯ ಮಾನದಂಡವಾಗಿ ಎಷ್ಟು ಕೆರೆಕಟ್ಟೆಗಳು ನಿರ್ಮಾಣವಾಗಿದೆ, ಎಷ್ಟು ಬೆಳೆ ಬೆಳೆದರು ಎಂಬ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ಅಳೆಯುತ್ತಿದ್ದರು.

ಆದರೆ ಇಂದು ಆಳುವ ಸರ್ಕಾರಗಳು ಎಲ್ಲವನ್ನು ಮಾರಾಟ ಮಾಡಿರುವುದೇ ಅಭಿವೃದ್ಧಿ ಎಂದು ಕೊಚ್ಚಿಕೊಳ್ಳುತ್ತಿವೆ. ಮೈಸೂರು-ಬೆಂಗಳೂರು ರಸ್ತೆ ಹೆದ್ದಾರಿ ಅಗಲೀಕರಣಕ್ಕೆ ಕೆರೆಕಟ್ಟೆಗಳನ್ನು ಒತ್ತುವರಿ ಮಾಡಿದ್ದರಿಂದ ಕೆರೆಕಟ್ಟೆಗಳು ಒಡೆದು ನೀರು ಹರಿಯುತ್ತಿದೆ. ಮಂಡ್ಯಕೆರೆ ಮುಚ್ಚಿ ಹಾಕಿದ್ದರಿಂದ ಆಗಿರುವ ಅನಾಹುತ ನಮ್ಮ ಕಣ್ಣ ಮುಂದಿದೆ. ಮನುಷ್ಯನಿಗಿಂತ ಪ್ರಕೃತಿ ದೊಡ್ಡದು ಎಂಬುದನ್ನು ನಾವೆಲ್ಲರೂ ತಿಳಿಯಬೇಕಿದೆ.

ಗಣಿಗಾರಿಕೆ ನಿಲ್ಲಿಸಲು ನಮ್ಮೊಂದಿಗೆ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಹೋರಾಟಕ್ಕೆ ಬರಬೇಕು, ಜನಪರ ಹೋರಾಟ ಮಾಡಬೇಕು ಎಂದರು. ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಆರ್. ರವೀಂದ್ರ,ಪ್ರೊ.ಹುಲ್ಕೆರೆ ಮಹಾದೇವ್, ರೈತ ಸಂಘದ ಕಾರ್ಯದರ್ಶಿ ಚಿಕ್ಕಾಡೆ ಹರೀಶ್, ಪ್ರೊ. ಜಿ.ಟಿ. ವೀರಪ್ಪ ಮತ್ತಿತರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!