Wednesday, May 15, 2024

ಪ್ರಾಯೋಗಿಕ ಆವೃತ್ತಿ

ಪ್ರತಿ ಮನೆ ಮನೆಗಳಲ್ಲೂ ನಾಲ್ವಡಿ ಸ್ಮರಣೆ ಅತ್ಯಗತ್ಯ – ಕೆ.ಟಿ.ಶಂಕರೇಗೌಡ

ಮಂಡ್ಯ ಜಿಲ್ಲೆಯ ಪ್ರತಿ ಮನೆ ಮನೆಗಳಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣೆ ಅತ್ಯಗತ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷ ಕೆ.ಟಿ.ಶಂಕರೇಗೌಡ ಹೇಳಿದರು.

ಮಂಡ್ಯ ನಗರದ ಕೆಂಪೇಗೌಡ ಪಾರ್ಕ್ನಲ್ಲಿರುವ ಶ್ರೀವೀರಾಂಜನೇಯ ದೇವಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಜನ್ಮದಿನ ಪ್ರಯುಕ್ತ ರಕ್ತದಾನ ಕಾರ್ಯಕ್ರಮ ಆಯೋಜನೆಯ ಪೂರ್ವಭಾವಿ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಲ್ವಡಿ ಅವರ ದೂರದೃಷ್ಠಿಯ ಫಲದಿಂದ ಮಂಡ್ಯದ ಜನತೆ ಅನ್ನತಿನ್ನುತ್ತಿದ್ದಾರೆ, ಕೈ ತುಂಬ ಹಣ ಏಣಿಸುತ್ತಿದ್ದಾರೆ, ಮನೆ ಮನೆಗೆ ಬೆಳಕು, ಶಿಕ್ಷಣ ನೀಡಿ ಮನೆದೇವರಾಗಿದ್ದಾರೆ, ಇಂತಹ ಮಹಾಪುರಷರನ್ನು ಮರೆಯೋದುಂಟೆ ಎಂದು ಸ್ಮರಿಸಿದರು.

ಸಾವಿರಾರು ವರ್ಷ ಕಳೆದರೂ, ಕೆ.ಆರ್.ಎಸ್. ನೀರಲ್ಲೇ ಭತ್ತ, ಕಬ್ಬು, ರಾಗಿ ಬೆಳೆಯುತ್ತೇವೆ, ಆರ್ಥಿಕ ಜೀವನಾಡಿ ಮೈಶುಗರ್‌ನಿಂದ ಹಣ ನೋಡುತ್ತೇವೆ, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುತ್ತೇವೆ, ದಾರಿದೀಪವಾಗಿರುವ ಮೈಸೂರು ದೊರೆಯನ್ನು ಮರೆಯಲು ಸಾಧ್ಯವೇ ಎಂದು ನುಡಿದರು.

ವೇದಿಕೆ ರಾಜ್ಯ ಉಪಾಧ್ಯಕ್ಷ ಮಾ.ಸೋ.ಚಿದಂಬರ್ ಮಾತನಾಡಿ, ಇದೇ ತಿಂಗಳು ಜೂ. 10ರಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಜನ್ಮದಿನವಾಗಿದೆ, ವೇದಿಕೆಯ ಕಾರ್ಯಕರ್ತರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸ್ವಯಂ ಪೇರಿತ ಬೃಹತ್ ರಕ್ತದಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಗಣ್ಯವ್ಯಕ್ತಿಗಳು ಬರಲಿದ್ದು, ಕರಾವೇ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಮಂಡ್ಯ ಜಿಲ್ಲೆಯಿಂದ ಕನಿಷ್ಟ 100 ಮಂದಿ ಆರೋಗ್ಯವಂತ ಕರಾವೇ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು. ಸಂಘಟಿತರಾಗಿ ನಾಡು, ನುಡಿ, ನೆಲ ಜಲ ರಕ್ಷಣೆಯಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತ ಬಂದಿರುವ ನಮ್ಮ ನಾಯಕರಿಗೆ ಸಮರ್ಪಣೆ ಸಲ್ಲಿಸೋಣ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕರಾವೇ ತಾಲೂಕು ಅಧ್ಯಕ್ಷ ಡಿ.ಅಶೋಕ್, ನಾರಾಯಣ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!