Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಲೋಕಸಭೆಗೆ ನಿಖಿಲ್ ಕುಮಾರಸ್ವಾಮಿಯೇ ಅಭ್ಯರ್ಥಿಯಾಗಲಿ: ದಳಪತಿಗಳ ಒತ್ತಾಯ

ಮುಂಬರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಈ ಬಾರಿ ಮತ್ತೆ ನಿಖಿಲ್‌ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡುವಂತೆ ಜೆಡಿಎಸ್ ವರಿಷ್ಠರಿಗೆ ಒತ್ತಡ ಹಾಕಲಿದ್ದೇವೆ, ಒಂದು ವೇಳೆ ನಿಖಿಲ್ ಸ್ಪರ್ಧಿಸದಿದ್ದರೆ ಹೆಚ್.ಡಿ.ದೇವೇಗೌಡರು ಅಥವಾ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಲಿ ಎಂದು ಮಂಡ್ಯ ಜಿಲ್ಲೆಯ ಜೆಡಿಎಸ್ ಮುಖಂಡರು ಆಗ್ರಹಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು, ಕಳೆದ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ ಈ ಬಾರಿ ಅವರು ಸ್ಪರ್ಧಿಸಿದರೆ ಗೆಲ್ಲುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ನಮ್ಮ ವರಿಷ್ಠರ ಮೇಲಿನ ಅಂದಾಭಿಮಾನದಿಂದ ಕೇಳುತ್ತಿದ್ದು, ನಿಖಿಲ್‌ಗೆ ಟಿಕೆಟ್ ನೀಡಲೇಬೇಕೆಂದು ಒತ್ತಾಯಿಸಿದರು.

ನಾವ್ಯಾರು ಸಹ ನಿರ್ಧಾರ ಮಾಡಿಲ್ಲ

ನನ್ನ ಅಥವಾ ಸ್ಥಳೀಯ ಮುಖಂಡರು ಸ್ಪರ್ಧಿಸಬೇಕೋ ಇಲ್ಲವೋ ಎಂಬ ಬಗ್ಗೆ ನಾವ್ಯಾರು ಸಹ ನಿರ್ಧಾರ ಮಾಡಿಲ್ಲ. ಜೊತೆಗೆ ಬಿಜೆಪಿ ಬೆಂಬಲಿತ ಹಾಲಿ ಸಂಸದೆ ಸುಮಲತಾ ಅವರ ಪರ ಚುನಾವಣೆಯಲ್ಲಿ ದುಡಿದವರು ಇಂದು ಯಾರು ಸಹ ಅವರ ಜೊತೆಯಲ್ಲಿಲ್ಲ. ಮಂಡ್ಯ ಕ್ಷೇತ್ರದಲ್ಲಿ ಅಂತಿಮವಾಗಿ ಜೆಡಿಎಸ್ ಅಭ್ಯರ್ಥಿ ಇರಲಿದ್ದಾರೋ ಅಥವಾ ಬಿಜೆಪಿ ಅಭ್ಯರ್ಥಿ ಇರಲಿದ್ದಾರೋ ಎಂಬುದನ್ನು ಎರಡು ಪಕ್ಷದ ರಾಷ್ಟ್ರೀಯ ಮುಖಂಡರು ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.

ಬರ ಪರಿಸ್ಥಿತಿ ಬಗ್ಗೆ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ನೀಡಲಿ

ಜೆಡಿಎಸ್ ಜಿಲ್ಲಾ ಘಟಕ ಈಗಾಗಲೇ ನಮ್ಮ ವರಿಷ್ಠರ ಸೂಚನೆಯಂತೆ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿ, ಜಿಲ್ಲಾಧಿಕಾರಿಗಳಿಗೆ ವರದಿ ಕೊಟ್ಟಿದ್ದೇವೆ. ಯಾರನ್ನೋ ಮೆಚ್ಚಿಸಲು ನಾವು ಅಧ್ಯಯನ ನಡೆಸಿಲ್ಲ. ಜಿಲ್ಲೆಯ ರೈತರಿಗೆ ಅನುಕೂಲವಾಗಲಿ ಎಂದು ಬರ ಅಧ್ಯಯನ ನಡೆಸಿದ್ದು, ಜಿಲ್ಲಾಧಿಕಾರಿಗಳು ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿ. ಈ ಕೂಡಲೇ ಸಮರ್ಪಕ ಪರಿಹಾರ ಬಿಡುಗಡೆಯಾಗಬೇಕು. ಬರದಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಬರ ಪರಿಹಾರ ಸಿಗದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

ಮಂಡ್ಯದಲ್ಲಿ 59 ಸಾವಿರ ಹೆಕ್ಟೇರ್ ಬೆಳೆ ನಾಶ

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಜೆಡಿಎಸ್ ಪಕ್ಷವು ಜಿಲ್ಲಾದ್ಯಂತ ಬರ ಅಧ್ಯಯನ ನಡೆಸಿದ್ದು, ಅಂದಾಜಿನ ಪ್ರಕಾರ 59 ಸಾವಿರ ಹೆಕ್ಟೇರ್ ಬೆಳೆಯು ಮಳೆಯ ಕೊರತೆಯಿಂದ ನಾಶವಾಗಿದೆ. ವಸ್ತುನಿಷ್ಠೆಯಿಂದ ಬರ ಅಧ್ಯಯನ ನಡೆಸಿ ವರದಿ ತಯಾರಿಸಿದ್ದೇವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜೆಡಿಎಸ್ ಮುಖಂಡರು ಬರ ಅಧ್ಯಯನ ನಡೆಸಿ, ಆಯಾ ಜಿಲ್ಲಾಡಳಿತಕ್ಕೆ ಬರದ ಬಗ್ಗೆ ವರದಿ ನೀಡಿ, ಜೊತೆಗೆ ನಮ್ಮ ವರಿಷ್ಠರಿಗೂ ಬರ ಸಮಸ್ಯೆ ಬಗ್ಗೆ ವರದಿ ಕೊಡಲಿದ್ದೇವೆ ಎಂದರು.

ಈ ಬಾರಿ ಸಮರ್ಪಕ ಮಳೆಯಾಗದ ಪರಿಣಾಮ ಜಿಲ್ಲೆಯ ಏಳು ತಾಲ್ಲೂಕುಗಳು ಸಹ ಕಾವೇರಿ ಹಾಗೂ ಹೇಮಾವತಿ ನದಿ ನೀರನ್ನು ನೆಚ್ಚಿಕೊಂಡು ಬೆಳೆ ಬೆಳೆದ ರೈತರ ಸ್ಥಿತಿ ಹದಗೆಟ್ಟಿದೆ. ಬೆಳೆದ ಬೆಳೆ ಕೈಗೆಟುಕದೇ ಕಂಗಾಲಾಗಿರುವ ರೈತನಿಗೆ ಸಣ್ಣ ಬೆಳೆಗಳಾದ ಟೊಮೊಟೊ, ಹುರುಳಿ, ಕ್ಯಾರೆಟ್ ಸೇರಿದಂತೆ ಇತರೆ ಬೆಳೆಗಳು ಕೈಕೊಟ್ಟಿವೆ. ಸಣ್ಣ ಬೆಳೆಗಳ ಪರಿಸ್ಥಿತಿ ಹೀಗಾದರೆ ಕಬ್ಬು, ಭತ್ತ, ಜೋಳ ಬೆಳೆದ ರೈತರು ಸಂಪೂರ್ಣ ನಷ್ಟಕ್ಕೆ ಸಿಲುಕಿದ್ದಾರೆ. ಇದರೆ ಜೊತೆಗೆ ಮಳೆಯ ಪ್ರಮಾಣ ಇಲ್ಲದ್ದರಿಂದ ಭತ್ತಕ್ಕೆ ಎಲೆ ಚುಕ್ಕಿ ರೋಗ ಸೇರಿದಂತೆ ಇತರೆ ರೋಗಗಳು ಬಾಧಿಸಿ ರೈತರ ಸಂಪೂರ್ಣ ಬೆಳೆಯು ನಾಶವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಶಾಸಕ ಕೆ.ಸುರೇಶ್‌ಗೌಡ ಮಾತನಾಡಿ, ಬಿಜೆಪಿಯವರು ಹೇಳಿದರೆ ಕುಮಾರಸ್ವಾಮಿ ಚಡ್ಡಿನೂ ಹಾಕುತ್ತಾರೆ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಚಲುವರಾಯಸ್ವಾಮಿ ಮೊದಲೆ ಚಡ್ಡಿ ಹಾಕಲ್ಲ. ಚಡ್ಡಿ ಹಾಕು ಅಂತ ಡಿ.ಕೆ.ಶಿವಕುಮಾರ್ ಹೇಳಬೇಕಾ ಅಥವಾ ಸಿದ್ದರಾಮಯ್ಯ ಹೇಳಬೇಕಾ ಎಂದು ಪ್ರಶ್ನಿಸಿದ ಅವರು, ನಾವು ಚಡ್ಡಿ ಹಾಕೋತಿವೋ ಇಲ್ಲ, ಹಾಗೆ ಇರುತ್ತೇವೆ ಅದು ಚಲುವರಾಯಸ್ವಾಮಿಗೆ ಅವಶ್ಯಕತೆ ಇಲ್ಲದ ವಿಚಾರ ಎಂದು ಟೀಕಿಸಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಎಸ್ಸಿಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಸಾತನೂರು ಜಯರಾಂ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!