Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಸಂಕಷ್ಟ| ಕೇಂದ್ರಕ್ಕೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ; ಪತ್ರದಲ್ಲೇನಿದೆ…? ಇಲ್ಲಿದೆ ಮಾಹಿತಿ….

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ನೀರು ಹರಿಸುವಂತೆ ನೀಡಿರುವ ಆದೇಶವನ್ನು ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ರೈತರು ಮತ್ತು ಜನತೆಯ ಹಿತರಕ್ಷಣೆ ದೃಷ್ಟಿಯಿಂದ ಮರುಪರಿಶೀಲಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. 

ಪತ್ರದ ಸಾರಾಂಶ

ಕಾವೇರಿ ನೀರಿನ ಮೇಲೆ ಅವಲಂಬಿತರಾಗಿರುವ ರೈತರು, ಜಾನುವಾರು ಹಾಗೂ ಜನರ ಹಿತಾಸಕ್ತಿಯನ್ನು ಸಂಕಷ್ಟಕ್ಕೆ ದೂಡಿ ಕಾವೇರಿ ನೀರು ನಿಯಂತ್ರಣ ಸಮಿತಿಯ ತೀರ್ಪನ್ನು ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಕಾವೇರಿ ನೀರು ನಿಯಂತ್ರಣ ಸಮಿತಿ ನಿರ್ಧರಿಸಿರುವಂತೆ 15 ದಿನಗಳ ಕಾಲ ಕೆ.ಆರ್.ಎಸ್.ಹಾಗೂ ಕಬಿನಿಯಿಂದ 5,000 ಕ್ಯೂಸೆಕ್ ನೀರನ್ನು ಬಿಳಿಗುಂಡ್ಲುವಿನಿಂದ ಹರಿಸುವುದು ಸಾಧ್ಯವಿಲ್ಲ, ಕರ್ನಾಟಕದ ಮನವಿಯನ್ನು ಪರಿಗಣಿಸಿ ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ಧಾರವನ್ನು ಮರುಪರಿಶೀಲಿಸಬೇಕು.

“>

ಬರಪೀಡಿತವಾಗಿರುವ ರಾಜ್ಯದ ಜನತೆ ಹಾಗೂ ಜಾನುವಾರುಗಳ ಹಿತಾಸಕ್ತಿಯನ್ನು ಕಾಪಾಡಬೇಕೆಂದು ಮನವಿ ಮಾಡುತ್ತೇನೆ. ಕರ್ನಾಟಕ ರಾಜ್ಯ ಸಮಿತಿಯ ಹಿಂದಿನ ನಿರ್ದೇಶನವನ್ನು ಪಾಲಿಸಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಬಹುತೇಕ ತಾಲ್ಲೂಕುಗಳು ಮುಂಗಾರು ವೈಫಲ್ಯದಿಂದ ತೀವ್ರ ಬರಕ್ಕೆ ತುತ್ತಾಗಿವೆ. ಜೂನ್ ಮಾಹೆಯಿಂದ ಸೆಪ್ಟೆಂಬರ್ ಮಧ್ಯದವರೆಗೂ 92 ದಿನಗಳ ಕಾಲ 100 ಟಿಎಂಸಿ ನೀರನ್ನು ತಮಿಳುನಾಡು ಬಳಸಿಕೊಂಡಿದ್ದು, ಇದು ಹಿಂದೆ 1987-88, 2002-03, 2012-13, 2016-17 ಹಾಗೂ 2017-18 ರ ಬರಪರಿಸ್ಥಿತಿಯಲ್ಲಿ ಬಳಕೆಯಾದ ನೀರಿಗಿಂತಲೂ ಹೆಚ್ಚಾಗಿದೆ.

ಕರ್ನಾಟಕದ ಜಲಾಶಯಗಳಲ್ಲಿ ಸಂಕಷ್ಟದ ಸ್ಥಿತಿಯಿದ್ದರೂ ತಮಿಳುನಾಡು ಭತ್ತವನ್ನು ವ್ಯಾಪಕವಾಗಿ ಬೆಳೆಯುತ್ತಿದೆ. ಸೆಪ್ಟೆಂಬರ್ 12 ಹಾಗೂ 24 ವರೆಗೆ ಐಎಂಡಿ ಹವಾಮಾನ ಮುನ್ಸೂಚನೆಯಂತೆ ಮಳೆಯಾಗುವ ಲಕ್ಷಣಗಳಿಲ್ಲ. ಮೆಟ್ಟೂರು ಜಲಾಶಯದಲ್ಲಿ ಡಿ: 12.09.2023 ರಂದು 24.233 ಟಿಎಂಸಿ ಸಂಗ್ರಹವಿದ್ದು ( live storage) ಪ್ರಸ್ತುತ ಬಿಡುಗಡೆಯಾಗಿರುವ ನೀರನ್ನು ಪರಿಗಣಿಸಿದರೆ, ತಮಿಳುನಾಡಿನ ಅವಶ್ಯಕತೆ ಯನ್ನು ಪೂರೈಸಲು ಸಾಕಾಗುವಷ್ಟು ನೀರು ಲಭ್ಯವಿದೆ. ಕರ್ನಾಟಕದ ಬೆಳೆಗಳ ರಕ್ಷಣೆಗೆ 70 ಟಿಎಂಸಿ, ಕುಡಿಯುವ ನೀರಿಗೆ 33 ಟಿಎಂಸಿ ಹಾಗೂ ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಅಗತ್ಯವಿದೆ. ನಮ್ಮ ಸಂಗ್ರಹ 53 ಟಿಎಂಸಿ ಮಾತ್ರವಿದ್ದು, ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಈ ಸಂಗ್ರಹ ಸಾಕಾಗುವುದಿಲ್ಲ. ಹೀಗಾಗಿ ತಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ನೀರು ಹರಿಸುವಂತೆ ನೀಡಿರುವ ಆದೇಶವನ್ನು ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ರೈತರು ಮತ್ತು ಜನತೆಯ ಹಿತರಕ್ಷಣೆ ದೃಷ್ಟಿಯಿಂದ ಮರುಪರಿಶೀಲಿಸುವಂತೆ ನಿರ್ದೇಶನ ನೀಡಬೇಕೆಂದು ಕೋರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!