Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ ಸಿಡಿ| ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಫೆ. 23 ಮತ್ತು 24 ರಂದು ನಡೆಯಲಿರುವ ಐತಿಹಾಸಿಕ ಪ್ರಸಿದ ಸಿಡಿಹಬ್ಬ ಅಂಗವಾಗಿ ಎಲ್ಲಾ ಸಮುದಾಯ ಮುಖಂಡರ ಪೂರ್ವಭಾವಿ ಸಭೆಯೂ ಉಪವಿಭಾಗಾಧಿಕಾರಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು.

ಉಪವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ, ಐತಿಹಾಸಿಕ ಪ್ರಸಿದ್ದಿ ಪಡೆದಿರುವ ದಂಡಿನ ಮಾರಮ್ಮ ಹಾಗೂ ಪಟ್ಟಲದಮ್ಮ ಸಿಡಿ ಹಬ್ಬವನ್ನು ಶಾಂತಿಯಿಂದ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ಪ್ರತಿಯೊಂದು ಸಮುದಾಯದ ಜನರು ಸಹಕಾರ ಬೇಕಾಗಿರುವುದರಿಂದ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಹಬ್ಬದ ಪೂರ್ವಸಿದ್ದತೆಗಳ ಬಗ್ಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಚಿಕ್ಕರಾಜು, ಪುರಸಭೆ ಸದಸ್ಯ ಕಿರಣ್‌ಶಂಕರ್ ಮಾತನಾಡಿ ಗಂಗಾಮತ ಬೀದಿಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯೂ ಅಪೂರ್ಣಗೊಂಡು ವಾಹನ ಸಾವರರು ಬಿದ್ದು ಗಾಯಗೊಳ್ಳುತ್ತಿರುವುದು ನಿರಂತರವಾಗಿ ನಡೆಯುತ್ತಿದೆ, ಈ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಕಾಮಗಾರಿ ಪೂರ್ಣಗೊಳಿಸಲು ಹಣ ಬಿಡುಗಡೆಗೊಳಿಸುವುದಾಗಿ ಹೇಳಿದ್ದಾರೆ, ಆದರೇ ಇಂದಿಗೂ ಕಾಮಗಾರಿಯನ್ನು ಮುಂದುವರಿಸಿಲ್ಲ, ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

nudikarnataka.com

ಹಬ್ಬದ ಸಂಬಂಧವಾಗಿ ಅಭಿವೃದ್ದಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲು 2 ತಿಂಗಳು ಮುಂಚಿತವಾಗಿ ಸಭೆ ಕರೆದು ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು, ಭಕ್ತಿ ಪ್ರಧಾನವಾಗಿ ಹಬ್ಬವನ್ನು ಆಚರಿಸುತ್ತಿರುವುದರಿಂದ ಮನೆಯನ್ನು ಸ್ವಚ್ಚಗೊಳಿಸುವುದಕ್ಕಾಗಿ ದಿನಕ್ಕೆ 2 ಭಾರಿ ನೀರು , ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು, ಪಟ್ಟಣದವನ್ನು ಸ್ವಚ್ಚಗೊಳಿಸಬೇಕು, ನಿರಂತರ ನೀರು ನೀರಿನ ಪೈಪ್‌ಗಳು ತುಕ್ಕು ಹಿಡಿದಿದ್ದು, ಅದರಿಂದ ಬರುವ ನೀರನ್ನು ಸೋಸಿ ಕುಡಿಯ ಅನಿವಾರ್ಯತೆ ಎದುರಾಗಿದೆ, ಕೂಡಲೇ ಶುದ್ದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು, ಪಡಿತರ ಅಕ್ಕಿಯನ್ನು ಕೊಡಿಸುವುದರ ಜೊತೆಗೆ ಹಬ್ಬದೊಳಗೆ ಎಲ್ಲಾ ರಸ್ತೆಗಳನ್ನು ಸರಿಪಡಿಸಬೇಕೆಂದು ತಿಳಿಸಿದರು.

ತುಕ್ಕು ಹಿಡಿಯುತ್ತಿರುವ ನೀರಿನ ಪೈಪ್ ಹಾಗೂ ಮೀಟರ್‌ಗಳನ್ನು ತೆರವುಗೊಳಿಸಿ ಸಮರ್ಪಕ ನೀರು ಪೂರೈಕೆ ಮಾಡಬೇಕು, ಹಬ್ಬದಲ್ಲಿ ಸಾವಿರಾರು ವಾಹನಗಳು ಸಂಚಾರಿಸುವುದರಿಂದ ತೆರೆದಿರುವ ಮ್ಯಾನ್‌ವೋಲ್‌ಗಳನ್ನು ಸರಿಪಡಿಸಬೇಕೆಂದು ತಿಳಿಸಿದರು.

ಸಿದ್ದಾರ್ಥನಗರ ಮುಖಂಡ ಬಾಲರಾಜ್ ಮಾತನಾಡಿ, ಪಟ್ಟಲದಮ್ಮ ದೇವಸ್ಥಾನದಲ್ಲಿ ಅಡ್ಡಲಾಗಿ ಕಟ್ಟಲಾಗಿರುವ ಕಾಂಪೌಂಡ್‌ನ್ನು ತೆರವುಗೊಳಿಸಬೇಕೆಂದು ಮನವಿ ಕೊಟ್ಟಿದ್ದರೂ ಕೂಡ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಹಬ್ಬ ಮುಗಿದ ನಂತರವಾದರೂ ಮನವಿಯನ್ನು ಪರಿಶೀಲನೆ ನಡೆಸಬೇಕೆಂದರು.

ಬಸವಲಿಂಗಪ್ಪ ನಗರದ ಮಂಜು ಮಾತನಾಡಿ, ಪಟ್ಟಣವನ್ನು ಸ್ವಚ್ಚಗೊಳಿಸಿ ಸುಂದರಗೊಳಿಸುವ ನಮಗೆ ಘಟ್ಟ ಮೆರವಣಿಗೆಯನ್ನು ತಡವಾಗಿ ಮಾಡಿಸುತ್ತಾರೆ, ಸೂರ್ಯೋಧಯ ಮುಂಚಿತವಾಗಿ ಘಟ್ಟ ಮೆರವಣಿಗೆ ನಡೆಯಬೇಕೆಂಬ ಪ್ರತೀತಿ ಇದ್ದರೂ ಬೆಳಿಗ್ಗೆ 8 ಗಂಟೆಯಾದರೂ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ ಎಂದರು.

ಯಜಮಾನ ವೀರೇಗೌಡ ಮಾತನಾಡಿ, ಸಿಡಿ ಹಬ್ಬಕ್ಕೂ ವಿವಾದಕ್ಕೂ ಸಂಬಂಧ ಕಲ್ಪಿಸುವುದು ಬೇಡ, ವಿವಾದ ಇತ್ಯರ್ಥಕ್ಕೆ ಮಾತಕತೆಯ ಮೂಲಕ ಬಗೆಹರಿಸೋಣ, ಅಧಿಕಾರಿಗಳು ಶಾಸಕರು ವಿವಾದ ಬಗೆಹರಿಸಲು ಗಮನ ನೀಡಬೇಕು, ಪೂರ್ವದಿಂದಲ್ಲೂ ಯಾರು ಯಾವ ಹಕ್ಕುಗಳನ್ನು ಪಡೆದು ಹಬ್ಬ ಮಾಡುತ್ತಾ ಬರುತ್ತಿದ್ದಾರೋ ಅಂತಹ ಜವಾಬ್ದಾರಿಯನ್ನು ನಿರ್ವಹಿಸುವುದರ ಮೂಲಕ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಸರ್ಕಲ್ ಇನ್ಸ್ಪೆಕ್ಟರ್ ರವಿಕುಮಾರ್ ಮಾತನಾಡಿ, ಜಾತ್ಯತೀತವಾಗಿ ನಡೆಯುವ ಸಿಡಿಹಬ್ಬಕ್ಕೆ ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಹದೆಗೆಡದಂತೆ ಕೈಜೋಡಿಸಬೇಕು, ಘಟ್ಟ ಮೆರವಣಿಗೆ ಸಮಯ ಅನುಸಾರವಾಗಿ ನಡೆಯಬೇಕು, ಪ್ಲೇಕ್ಸ್ ಗಳನ್ನು ಹಾಕಲು ಪುರಸಭೆಯಿಂದ ಅನುಮತಿ ಪಡೆಯಬೇಕು, ಮೈಕ್‌ಸೆಟ್‌ಗಳನ್ನು ಬೆಳಿಗ್ಗೆ 6 ರಿಂದ ಸಂಜೆ 10 ಗಂಟೆಯೊಳಗೆ ಮಾತ್ರ ಹಾಕಬೇಕು, ಸಿಡಿಹಬ್ಬ ಯಶಸ್ವಿಗೆ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಸಹಕಾರವಿದ್ದು, ಪೊಲೀಸರಿಗೆ ಸಾರ್ವಜನಿಕರ ಸಹಕಾರ ಆಗತ್ಯವಾಗಿದೆ ಎಂದರು.

ಉಪವಿಭಾಗಾಧಿಕಾರಿ ಶಿವಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಪಟ್ಟಣದ ರಸ್ತೆಗಳನ್ನು ಅಭಿವೃದ್ದಿಗೊಳಿಸಲು ಶಾಸಕರು ಸುಮಾರು 1 ಕೋಟಿ ರೂ ಹಣವನ್ನು ಸರ್ಕಾರದಿಂದ ಬಿಡುಗಡೆಗೊಳಿಸಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ, ಹಬ್ಬಕ್ಕೆ ಸ್ವಚ್ಚತೆ, ವಿದ್ಯುತ್ ಸೇರಿದಂತೆ ಆಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಆಗತ್ಯ ಕ್ರಮ ಕೈಗೊಳ್ಳಲಾಗಿದೆ, ಎಲ್ಲಾ ಇಲಾಖೆಯ ಅಧಿಕಾರಿಗಳಿಗೂ ಒಂದೊಂದು ಜಬಾವ್ದಾರಿಯನ್ನು ನೀಡಲಾಗಿದ್ದು, ಹಬ್ಬದ ಯಶಸ್ವಿಗೆ ತಾಲ್ಲೂಕು ಮತ್ತು ಜಿಲ್ಲಾಡಳಿತ ಶ್ರಮಿಸಲಿದೆ ಎಂದರು.

ಸಭೆಯಲ್ಲಿ ತಹಶೀಲ್ದಾರ್ ಲೋಕೇಶ್, ಡಿವೈಎಸ್‌ಪಿ ಕೃಷ್ಣಪ್ಪ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಮತ, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾಟೀಲ್, ಸರ್ಕಲ್ ಇನ್ಸ್ಪೇಕ್ಟರ್ ಶ್ರೀಧರ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!