Tuesday, May 21, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಪ್ಲಾಸ್ಟಿಕ್ ಮುಕ್ತ ಪಟ್ಟಣಕ್ಕೆ ಕೈ ಜೋಡಿಸಿ- ಲೋಕೇಶ್

ಕೆ.ಆರ್.ಪೇಟೆ ಪಟ್ಟಣವನ್ನು ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಮುಕ್ತ ಸ್ವಚ್ಛ ಪಟ್ಟಣವನ್ನಾಗಿಸುವ ನಿಟ್ಟಿನಲ್ಲಿ ರಸ್ತೆ ಬದಿ ವ್ಯಾಪಾರಿಗಳು ಹಾಗೂ ವರ್ತಕರ ಸಭೆಯು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್ ಆರ್ ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕೃಷ್ಣರಾಜಪೇಟೆ ಪಟ್ಟಣದ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನಾ ಭವನದಲ್ಲಿ ನಡೆದ ಬೀದಿ ಬದಿ ವ್ಯಾಪಾರಿಗಳು, ವರ್ತಕರು ಹಾಗೂ ಪುರಸಭಾ ಸದಸ್ಯರ ಸಭೆಯಲ್ಲಿ ಹಿರಿಯ ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್ ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯದ ಕಸದಿಂದಾಗಿ ಪಟ್ಟಣದ ಸ್ವಚ್ಛತೆ ಹಾಗೂ ಶ್ರೀಸಾಮಾನ್ಯರ ಆರೋಗ್ಯಕ್ಕೆ ತೊಂದರೆ ಆಗುತ್ತಿರುವುದರಿಂದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಮೂಲಕ ಪರಿಸರಸ್ನೇಹಿ ಬಟ್ಟೆ ಬ್ಯಾಗುಗಳು ಹಾಗೂ ಪೇಪರ್ ಕವರ್ ಗಳನ್ನೇ ಮಾತ್ರ ಬಳಸುವ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಪಟ್ಟಣದ ಸ್ವಚ್ಛತೆಗೆ ಪುರಸಭೆಯ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಕ್ಷೇತ್ರದ ಶಾಸಕರಾಗಿದ್ದ ರಾಜ್ಯದ ಮಾಜಿ ಸಚಿವ ಡಾ. ನಾರಾಯಣಗೌಡ ರಸ್ತೆ ಬದಿಯ ವ್ಯಾಪಾರಿಗಳಿಗೆ ಶಾಶ್ವತವಾದ ಮಾರುಕಟ್ಟೆಯನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರದಿಂದ 60 ಲಕ್ಷ ರೂ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿದ್ದರು. ಆದರೆ ಕಾರಣಾಂತರದಿಂದಾಗಿ ಪಟ್ಟಣದ ಪುರಸಭೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಮಾರುಕಟ್ಟೆಯು ನಿರ್ಮಾಣವಾಗಲಿಲ್ಲ. ಆದ್ದರಿಂದ ರಸ್ತೆ ಬದಿಯ ವ್ಯಾಪಾರಿಗಳಿಗೆ ಒಂದು ಶಾಶ್ವತವಾದ ಮಾರುಕಟ್ಟೆಯನ್ನು ನಿರ್ಮಾಣ ಮಾಡುವ ದಿಕ್ಕಿನಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು, ಕುಂದು ಕೊರತೆ ನಿವಾರಣಾ ಸಭೆ ಕರೆದು  ಬದಿ ವ್ಯಾಪಾರಿಗಳ ಸಮಸ್ಯೆಗೆ ಶಾಶ್ವತವಾದ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.

ಪುರಸಭಾ ಸದಸ್ಯ ಪ್ರೇಮ್ ಕುಮಾರ್ ಮಾತನಾಡಿ, ರಸ್ತೆ ಬದಿ ವ್ಯಾಪಾರಿಗಳ ಸಮಸ್ಯೆಯೂ ಇಂದು ನೆನ್ನೆಯ ಸಮಸ್ಯೆಯಲ್ಲ ಪಟ್ಟಣವು ಅಭಿವೃದ್ಧಿಯಾಗುತ್ತಿದ್ದಂತೆ ವಾಹನಗಳು ಮತ್ತು ಸಾರ್ವಜನಿಕರ ಸಂಚಾರ ಸೇರಿದಂತೆ ರಸ್ತೆ ಬದಿ ವ್ಯಾಪಾರಿಗಳಿಗೂ ಸಮಸ್ಯೆಗಳು ಉಂಟಾಗುತ್ತಿವೆ. ಈ ದಿಕ್ಕಿನಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ಅವರು ಪಟ್ಟಣದ ಸಾರ್ವಜನಿಕರು ಹಾಗೂ ರಸ್ತೆ ಬದಿ ವ್ಯಾಪಾರಿಗಳ ಸಮಸ್ಯೆಗಳ ಶಾಶ್ವತವಾದ ನಿವಾರಣೆಗೆ ಮುಂದಾಗಿರುವುದು ಸ್ವಾಗತರ್ಹವಾಗಿದೆ ಎಂದು ಹೇಳಿದರು.

ಪುರಸಭೆ ಸದಸ್ಯರಾದ ಕೆ.ಎಸ್. ಪ್ರಮೋದ್, ಶೋಭಾ ದಿನೇಶ್, ಶುಭ ಗಿರೀಶ್, ಬೀದಿಬದಿ ವ್ಯಾಪಾರಿಗಳಾದ ಹಣ್ಣಿನ ಅಂಗಡಿ ರಾಮಣ್ಣ, ಹೂವಿನ ವ್ಯಾಪಾರಿ ಚಿನ್ನವೆಂಕಟೇಶಣ್ಣ, ರತ್ನಮ್ಮ, ದ್ರಾಕ್ಷಾಯಿಣಿ, ಬಾವಾಜಿ ಚಂದ್ರು, ಸೈಯದ್ ರೋಷನ್, ಸಫೀರ್ ಅಹ್ಮದ್, ಕ್ಯಾಂಟೀನ್ ವಾಸಣ್ಣ, ಬಸವರಾಜು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!