Friday, September 20, 2024

ಪ್ರಾಯೋಗಿಕ ಆವೃತ್ತಿ

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಿ: ಡಾ. ಕುಮಾರ

ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳಿಗೆ ಒದಗಿಸಿ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಾನ್ಯುಯಲ್ ಸ್ಕಾವೆಂಜರ್ ಗಳ ವೃತ್ತಿ ನಿಷೇಧ ಮತ್ತು ಅವರ ಪುನರ್ ವಸತಿ ಕಾಯ್ದೆ 2013 ರ ಹಾಗೂ ನಿಯಮ 2023 ರನ್ನು ಅನುಷ್ಠಾನಗೊಳಿಸುವ ಸಂಬಂಧ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಕುಟುಂಬದ ಮಕ್ಕಳು ವಂಶ ಪಾರಂಪರ್ಯವಾಗಿ ಅದೇ ವೃತ್ತಿಯನ್ನು ಮಾಡದೇ ,ಅದನ್ನು ಹೊರತುಪಡಿಸಿ ಅವರ ಆಸಕ್ತಿ ಹಾಗೂ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಕೌಶಲ್ಯಾಧಾರಿತ ತರಬೇತಿ ನೀಡಿ ಉದ್ಯೋಗಗಳನ್ನು ಕಲ್ಪಿಸಬೇಕು. ತರಬೇತಿ ನೀಡುವ ಮೊದಲು ಅವರ ಆಸಕ್ತಿಯ ಬಗ್ಗೆ ಸರ್ವೇ ನಡೆಸಿ ನಂತರ ತರಬೇತಿ ಆಯೋಜಿಸಿ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 567 ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ಗಳನ್ನು ಗುರುತಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 280 ಜನರನ್ನು ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗುರುತಿಸಲಾಗಿದ್ದು, ಗುರುತಿನ ಚೀಟಿಯನ್ನು ನೀಡಲಾಗಿರುತ್ತದೆ. ಮಾನ್ಯುಯಲ್ ಸ್ಕಾವೆಂಜರ್ ಹಾಗೂ ಅವರ ಕುಟುಂಬಗಳಲ್ಲಿರುವ ಮಕ್ಕಳಿಗೆ ನಿಯಮನುಸಾರ ಪುನರ್ ವಸತಿ, ಶಿಕ್ಷಣ, ವಿದ್ಯಾರ್ಥಿ ವೇತನ ಇನ್ನಿತರೆ ಸೌಲಭ್ಯ ಕಲ್ಪಿಸಿ ಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿ, ಸರ್ಕಾರದಿಂದ ಬರುವ ಸೌಲಭ್ಯವನ್ನು ದೊರಕಿಸಬೇಕು. ನಿವೇಶನ ಹೊಂದಿರುವ ಹಾಗೂ ನಿವೇಶನ ರಹಿತ ಕುಟುಂಬಗಳ ಬಗ್ಗೆ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಯವರು ಸಲ್ಲಿಸಬೇಕು. ನಿವೇಶನ ರಹಿತ ಕುಟುಂಬಗಳಿಗೆ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ನಿವೇಶನವನ್ನು ನೀಡಲಾಗುವುದು ಎಂದರು.

ನಗರ ಸ್ಥಳೀಯ ಸಂಸ್ಥೆಗಳ ಆಯವ್ಯಯದಲ್ಲಿ ಈಗಾಗಲೇ ಪೌರ ಕಾರ್ಮಿಕರ ಆರೋಗ್ಯ ತಪಾಸಣೆಗಾಗಿ ಅನುದಾನವನ್ನು ಮೀಸಲಿಡಲಾಗಿದೆ. ಸಮಿತಿಯ ಸದಸ್ಯರು ಪೌರ ಕಾರ್ಮಿಕರು ಆರೋಗ್ಯ ತಪಾಸಣೆಗೆ ಒಳಪಟ್ಟಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಪ್ರಕಾರಣದ ಬಗ್ಗೆ ದೂರು ಬಂದ ತಕ್ಷಣ ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದ ಪರಿಶೀಲನಾಧಿಕಾರಿ(ಇನ್ಸ್ ಪೆಕ್ಟರ್ಗಳು) ತುರ್ತಾಗಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

ತಾಲೂಕು ಮಟ್ಟದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳ ಬಗ್ಗೆ ತಹಶೀಲ್ದಾರರು ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು ಎಂದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಹಾಗೂ ಮೃತಪಟ್ಟ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳ ಮಕ್ಕಳಿಗೆ ನವೆಂಬರ್ 1 ರಂದು ಪ್ರತಿಭಾ ಪುರಸ್ಕಾರ ನೀಡಬೇಕು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಮತ್ತು ಪೌರ ಕಾರ್ಮಿಕರ ಮಕ್ಕಳಿಗೆ ಶೇ. 5 ರಷ್ಟು ಪ್ರವೇಶ ಕಲ್ಪಿಸಲಾಗಿದೆ ಎಂದರು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2017-18ನೇ ಸಾಲಿನಲ್ಲಿ ವಿಶೇಷ ನೇರ ನೇಮಕಾತಿ ಅಡಿ 85 ಜನ ಪೌರ ಕಾರ್ಮಿಕರನ್ನು ಕಾಯಂಗೊಳಿಸಲಾಗಿರುತ್ತದೆ. 2022-23 ನೇ ಸಾಲಿನಲ್ಲಿ 103 ಜನ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. ಅವರಿಗೆ ಸುರಕ್ಷಾ ಪರಿಕರಗಳನ್ನು ವಿತರಿಸಲಾಗಿದೆ.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್. ಯತೀಶ್, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್, ಉಪವಿಭಾಗಾಧಿಕಾರಿ ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್, ಪೌರಾಯುಕ್ತ ಆರ್. ಮಂಜುನಾಥ್, ರಾಜ್ಯ ಸಫಾಯಿ ಕರ್ಮಚಾರಿ ಮೇಲುಸ್ತುವಾರಿ ಸದಸ್ಯ ಡಿ. ಆರ್. ರಾಜು ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!