Friday, September 20, 2024

ಪ್ರಾಯೋಗಿಕ ಆವೃತ್ತಿ

ಅವೈಜ್ಞಾನಿಕ ಶಿಕ್ಷಣ ನೀತಿಯಿಂದ ಪರಿತಪಿಸುವಂತಾಗಿದೆ: ಮರಿತಿಬ್ಬೇಗೌಡ

ಸರ್ಕಾರದ ಅವೈಜ್ಞಾನಿಕ ಶಿಕ್ಷಣ ನೀತಿಯಿಂದಾಗಿ ಶಿಕ್ಷಕರು ಮತ್ತು ಮಕ್ಕಳು ಪರಿ ತಪಿಸುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ ನಗರದ ಎಸ್.ಬಿ. ಸಮುದಾಯ ಭವನದಲ್ಲಿ ನಡೆದ ಶೈಕ್ಷಣಿಕ ಕಾರ‍್ಯಾಗಾರ, ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಹಾಗೂ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು  ಮಾತನಾಡಿದರು.

ಸಾಮಾನ್ಯವಾಗಿ ಆರೇಳು ತಿಂಗಳಲ್ಲಿ ಒಂದು ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಪೂರಕ ಪರೀಕ್ಷೆಯ ನೆಪದಲ್ಲಿ ಪರೀಕ್ಷೆಗಳನ್ನು ನಡೆಸುತ್ತಲೇ ಇದ್ದಾರೆ. ಎಷ್ಟು ಬಾರಿ ಪರೀಕ್ಷೆಗಳನ್ನು ನಡೆಸಬೇಕು. ಸಿಬ್ಬಂದಿಗಳು ಎಷ್ಟು ಬೇಕು ಮೂರು ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮತ್ತೊಂದು ಪರೀಕ್ಷೆ ಎದುರಿಸಿ ಮುಂದಿನ ಉನ್ನತ ಶಿಕ್ಷಣಕ್ಕೆ ಹೋಗುವುದಾದರೂ ಹೇಗೆ, ಅದಕ್ಕೆ ಎಷ್ಟು ಸಮಯ ಬೇಕು, ಮೌಲ್ಯಮಾಪನ ಮಾಡುವುದಾದರೆ ಇನ್ನು ತರಗತಿಗಳನ್ನು ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.

ಈ ಬಗ್ಗೆ ಸಂಬಂಧಿಸಿದ ಸಚಿವರನ್ನು ಸದನದಲ್ಲಿ ಪ್ರಶ್ನಿಸಿದರೆ, ಈ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಉತ್ತರ ನೀಡುತ್ತಾರೆ. ಆದರೆ ಡಿಡಿಪಿಐ ಹಾಗೂ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿ ಕೆಲಸ ಮಾಡಿಸುತ್ತಾರೆ. ಇದು ಒಳ್ಳೆಯ ನಡೆಯಲ್ಲ ಎಂದು ಹೇಳಿದರು.

ಪರೀಕ್ಷೆ ನಡೆಸಲು ಪಂಚಾಯತ್‌ರಾಜ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. 400 ರಿಂದ 500 ಮಂದಿ ವಿದ್ಯಾರ್ಥಿಗಳಿರುವಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಬಸ್ಸುಗಳ ಕೊರತೆ ಇದೆ. ಸುಮಾರು 2500 ಮಾರ್ಗಗಳಲ್ಲಿ ಸಮಸ್ಯೆಗಳು ಉಲ್ಬಣವಾಗಿದೆ. ಇನ್ನೂ ಒಂದು ಸಾವಿರ ಬಸ್‌ಗಳ ಖರೀದಿಯಾಗಬೇಕು. ಸಾರಿಗೆ ವ್ಯವಸ್ಥೆ ಸರಿಯಾಗದಿದ್ದರೆ ಒಬ್ಬ ವಿದ್ಯಾರ್ಥಿ ಸುಮಾರು 5 ರಿಂದ 8 ಕಿ.ಮೀ. ಪರೀಕ್ಷಾ ಕೇಂದ್ರಕ್ಕೆ ಬರುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಪರೀಕ್ಷಾ ಅಕ್ರಮಗಳ ತಡೆಗೆ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳುತ್ತಾರಾದರೂ, ರಾಜ್ಯದ ಒಂದೆರಡು ಜಿಲ್ಲೆಗಳಲ್ಲಿ ಮಾತ್ರ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ಬೇರೆ ಜಿಲ್ಲೆಗಳಲ್ಲಿ ಎಲ್ಲವೂ ಸರಿಯಾಗಿಯೇ ನಡೆದಿದೆ. ಹೀಗಿರುವಾಗ ಇದರ ಅಗತ್ಯ ಏನು ಎಂದ ಅವರು, ಪೊಲೀಸ್ ವ್ಯವಸ್ಥೆ ಇದೆ. ಆಯಾ ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇದಾಜ್ಞೆ ಜಾರಿಗೊಳಿಸಲಾಗುತ್ತದೆ. ಡ್ರೋಣ್ ಬಳಕೆ ಮಾಡಲಾಗುವುದು ಎಂದು ಹೇಳುತ್ತಾರೆ. ಡ್ರೋಣ್ ಬಳಕೆ ಆವರಣದಲ್ಲಿ ಮಾತ್ರ, ಪರೀಕ್ಷಾ ಕೊಠಡಿಗಳಲ್ಲಿ ಹೇಗೆ ನಿರ್ವಹಣೆ ಮಾಡುವುದು ಈ ಎಲ್ಲದರ ಬಗ್ಗೆ ಗಮನ ಹರಿಸುವುದು ಅಗತ್ಯ ಎಂದರು.

ಶಿಕ್ಷಣದಲ್ಲಿ ಸಂಘಟನೆ ಮತ್ತು ಹೋರಾಟ ಎರಡೂ ನಮ್ಮ ಉತ್ತರವಾಗಬೇಕು. ಕರ್ನಾಟಕದ ಶಿಕ್ಷಣ ಜಗತ್ತಿಗೆ ಮಾದರಿಯಾಗಬೇಕು. ಇದಕ್ಕೆ ಶಕ್ತಿ ತುಂಬುವ ಕೆಲಸಬೇಕು. ತಮ್ಮ ಎಲ್ಲ ಅಧಿಕಾರವನ್ನೂ ಅದಕ್ಕಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ಮಾತ್ರ ಮಕ್ಕಳ ಭವಿಷ್ಯ ಮತ್ತು ಬದುಕನ್ನು ಸಮಗ್ರವಾಗಿ ಕಟ್ಟಿಕೊಡಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಮೈಸೂರಿನ ಆರ್.ಐ.ಎಂ.ಎಸ್.ಇ ಸಂಚಾಲಕ ಸ್ವಾಮಿ ಮಹಾಮೇದಾನಂಜೀ ಪ್ರಧಾನ ಭಾಷಣ ಮಾಡಿದರು. ಎಸ್‌ಬಿ ಎಜುಕೇಷನ್ ಟ್ರಸ್ಟ್ ಕಾರ‍್ಯದರ್ಶಿ ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಭೈರೇಶ್, ರಾಜ್ಯ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ, ಚನ್ನಕೃಷ್ಣಯ್ಯ, ಹನುಮಂತಯ್ಯ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!