Thursday, September 19, 2024

ಪ್ರಾಯೋಗಿಕ ಆವೃತ್ತಿ

meesho ಹೆಸರಿನಲ್ಲಿ ಅನ್ಲೈನ್ ವಂಚನೆ : ₹ 7.23 ಲಕ್ಷ ಕಳೆದುಕೊಂಡ ಪಾಂಡವಪುರದ ವ್ಯಕ್ತಿ – ನಿಮಗೂ ಸ್ವೀಡ್ ಪೋಸ್ಟ್ ಬರಬಹುದು ಎಚ್ಚರ !

ಮಿಶೋ (meesho) ಆಪ್ ಮೂಲಕ ಆನ್‌ಲೈನ್‌ ವಸ್ತುಗಳನ್ನು ಖರೀದಿಸಿದವರನ್ನು ಯಾಮಾರಿಸಿ ಲಕ್ಷಾಂತರ ರೂ.ಗಳನ್ನು ವಂಚಿಸುತ್ತಿರುವ ಘಟನೆಗಳು ಮಂಡ್ಯ ಜಿಲ್ಲೆಯಲ್ಲಿ ವರದಿಯಾಗುತ್ತಿದ್ದು, ಇಂತಹ ಸೈಬರ್ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಮಂಡ್ಯ ಜಿಲ್ಲಾ ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ.

7.23 ಲಕ್ಷ ಕಳೆದುಕೊಂಡ ಪಾಂಡವಪುರದ ಸಂಜೀವೇಗೌಡ 

ಮಿಶೋ ಆಪ್ ಮೂಲಕ ಕೆಲವು ವಸ್ತುಗಳನ್ನು ಖರೀದಿ ಮಾಡಿದ್ದ ಪಾಂಡವಪುರ ತಾಲೂಕಿನ ಬಳಘಟ್ಟ ಸಮೀಪದ ಕನಗೋನಹಳ್ಳಿ ಗ್ರಾಮದ ಸಂಜೀವೇಗೌಡ(36) ಎಂಬುವವರಿಗೆ ಕಳೆದ ನವೆಂಬರ್ 17 ರಂದು ಇದ್ದಕ್ಕಿದ್ದಂತೆ ಮಿಶೋ ಹೆಸರಿನಲ್ಲಿ ಸ್ವೀಡ್ ಪೋಸ್ಟ್ ಒಂದು ಬಂತು. ಅದರಲ್ಲಿ ಒಂದು ಕೂಪನ್ ಕಳುಹಿಸಲಾಗಿತ್ತು.

meesho ಹೆಸರಿನಲ್ಲಿ ಮಂಡ್ಯದ ಉದಯಗಿರಿಯ ನಿವಾಸಿ ಮಂಜುನಾಥ್ ಎಂಬುವವರಿಗೂ ಬಂದಿರುವ ಸ್ಪೀಡ್ ಪೋಸ್ಟ್

ಅದನ್ನು ಸ್ಕ್ರಾಚ್ ಮಾಡಿದಾಗ ‘ಮಹೇಂದ್ರ XUV 700‘ ಗೆದ್ದಿರುವುದಾಗಿ ಕಂಡು ಬಂತು. ನಂತರ ದೂರವಾಣಿ ಕರೆ ಮಾಡಿ ಸೈಬರ್ ಖದೀಮರು ಲಕ್ಕಿ ಡ್ರಾ ದಲ್ಲಿ ನಿಮಗೆ ಕಾರು ಬಹುಮಾನವಾಗಿ ಬಂದಿದೆ. ನಿಮಗೆ ಕಾರು ಬೇಕಾ ?  ಅಥವಾ ಹಣ ಬೇಕಾ ಎಂದು ಪ್ರಶ್ನಿಸಿದರು.  ಹಣಬೇಕೆಂದು ಸಂಜೀವಗೌಡ ತಿಳಿಸಿದಾಗ 29 ಲಕ್ಷದ 60 ಸಾವಿರ ನಕಲಿ ಚೆಕ್‌ನ್ನು ವಾಟ್ಸಪ್ ಮೂಲಕ ಕಳುಹಿಸಿದರು. ನಂತರ ಹಣ ಖಾತೆಗೆ ವರ್ಗಾವಣೆ ಮಾಡಬೇಕಾದರೆ ಕೆಲ ಚಾರ್ಜಸ್‌ ನೀಡಬೇಕೆಂದು ವಂಚಕರು ಪುಸಲಾಯಿಸಿದರು. ಅದನ್ನು ನಂಬಿದ ಸಂಜೀವ್ ಗೌಡ ತನ್ನ ಮನೆಯಲ್ಲಿದ್ದ ಚಿನ್ನಾಭರಣವನ್ನು ಗಿರವಿ ಇಟ್ಟು ಸೈಬರ್ ಖದೀಮರ ಖಾತೆಗೆ ಹಂತ ಹಂತವಾಗಿ 7.23 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿದರು. ಆದರೆ ಇಷ್ಟೆಲ್ಲ ಹಣ ಪಡೆದರೂ ಸಹ ಮತ್ತೇ ಮತ್ತೇ ಬೇರೆ ಬೇರೆ ನೆಪಗಳನ್ನು ಹೇಳಿ ಹಣ ಹಾಕುವಂತೆ ಕೇಳುತ್ತಿದ್ದರು. ಆಗ ಅನುಮಾನಗೊಂಡ ಸಂಚಿತ್ ಗೌಡ ತಡವಾಗಿ ಅಂದರೆ ಜ.12,2023ರಂದು ಮಂಡ್ಯದ ಸೈಬರ್ ಕ್ರೈಂ ಪೊಲೀಸರಿಗೆ ಈ ಬಗ್ಗೆ ದೂರು ನೀಡಿ, ಸೈಬರ್ ವಂಚಕರ ಮೇಲೆ ಕಾನೂನು ಕ್ರಮ ಕೈಗೊಂಡು, ತಾವು ಕಳೆದುಕೊಂಡಿರುವ ಹಣವನ್ನು ವಾಪಸ್ ಕೊಡಿಸಿಕೊಡವಂತೆ ಮನವಿ ಮಾಡಿದ್ದಾರೆ.

ಕೇವಲ ಪೋನ್ ಮೂಲಕವೇ ಇಷ್ಟೊಂದು ಹಣವನ್ನು ಪೀಕಿಸಿಕೊಂಡ ಖದೀಮರು ನಂತರ ಯಾವುದೇ ಸಂಪರ್ಕಕ್ಕೆ ಸಿಕ್ಕಿಲ್ಲ. ಸೈಬರ್ ಖರೀಮರ ಮಾಯಾಜಾಲಕ್ಕೆ ಸಿಲುಕಿ, ಅಲ್ಲಿ ಇಲ್ಲಿ ಸಾಲ ಸೂಲ ಹಣ ತಂದು ಹಾಕಿದ ಹಣವೆಲ್ಲ ಈಗ ಖದೀಮರ ಪಾಲಾಗಿದ್ದು, ಕುಟುಂಬದವರು ಪರಿತಪಿಸುವಂತೆ ಆಗಿದೆ. ಸಜೀಂವ್ ಗೌಡ ಅವರನ್ನು ಕೊಲ್ಕತ್ತಾದಿಂದ ಕರೆ ಮಾಡಿ ವಂಚಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಯಾವ್ಯಾವ ಹೆಸರಿನಲ್ಲಿ ವಂಚನೆ

ಸೈಬರ್ ವಂಚಕರು ಹೇಗೆ ಬೇಕಾದರೂ ನಿಮ್ಮನ್ನು ವಂಚಿಸಲು ಕರೆ ಮಾಡಬಹುದು. ಆಗ ನೀವು ಎಚ್ಚರಿಕೆಯಿಂದಿರಬೇಕಷ್ಟೆ.

ನಾನು ಬ್ಯಾಂಕಿನ ಮ್ಯಾನೇಜರ್ ನಿಮ್ಮ ATM ಅಪ್ಡೇಡ್ ಮಾಡಬೇಕಿದೆ OTP ಹೇಳಿ ಎಂದು ಕೇಳಬಹುದು. ನಿಮಗೆ ಬಹುಮಾನ ಬಂದಿದೆ ನಿಮ್ಮ ವೈಯಕ್ತಿಕ ವಿವರ ಹಾಗೂ ಬ್ಯಾಂಕಿನ ವಿವರಗಳನ್ನು ತಿಳಿಸಿ ಎಂದು ಕೇಳಬಹುದು. ಸ್ಪೀಡ್ ಪೋಸ್ಟ್ ಕಳಿಸಿ ಬಹುಮಾನ ಬಂದಿದೆ ಎಂದು ಸುಳ್ಳು ಹೇಳಿ, ನಿಮ್ಮಿಂದ ಅವರ ಬ್ಯಾಂಕಿನ ಖಾತೆಗಳಿಗೆ ಅಥವಾ ಪೋನ್ ಪೇ ಮೂಲಕ ಹಣ ಹಾಕಿಸಿಕೊಳ್ಳಬಹುದು. ಆಗ ನೀವು ಯಾವುದೇ ಮಾಹಿತಿಯನ್ನು ನೀಡಬಾರದು. ಏಕೆಂದರೆ ಯಾವುದೇ ಬ್ಯಾಂಕಿನ ಅಧಿಕಾರಿ ಹಾಗೂ ಸಿಬ್ಬಂದಿಗಳು ಕರೆ ಮಾಡಿ ಗ್ರಾಹಕರೊಂದಿಗೆ ವ್ಯವಹಾರ ಮಾಡುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಕೂಡ ತಮಗೆ ಬೇಕಾದ ಎಲ್ಲಾ ವಸ್ತುಗಳನ್ನು ಆನ್ಲೈನ್ ಶಾಪಿಂಗ್ ಮೂಲಕವೇ ಖರೀದಿ ಮಾಡುವುದು ಹೆಚ್ಚಾಗಿದೆ. ಇಂತಹ ಶಾಪಿಂಗ್ ಮಾಡಿದ ವ್ಯಕ್ತಿಗಳ ವೈಯಕ್ತಿಕ ವಿವರ ಪಡೆಯುವ ಸೈಬರ್ ಖದೀಮರು ದೂರವಾಣಿ ಕರೆ ಮಾಡಿ ಅಥವಾ ಸ್ಪೀಡ್ ಪೋಸ್ಟ್ ಗಳ ಮೂಲಕ ನಿಮ್ಮನ್ನು ವಂಚಿಸಲು ಕಾದು ಕುಳಿತಿರುತ್ತಾರೆ. ಆದ್ದರಿಂದ ಈ ಬಗ್ಗೆ ನೀವು ಎಚ್ಚರಿಕೆಯಿಂದ ಇರಲೇಬೇಕು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!