Friday, September 20, 2024

ಪ್ರಾಯೋಗಿಕ ಆವೃತ್ತಿ

ಮೇಲುಕೋಟೆ ವಿಧಾನಸಭಾ ಕ್ಷೇತ್ರ ಸಮೀಕ್ಷೆ : ಸಿ.ಎಸ್ ಪುಟ್ಟರಾಜು V/S ದರ್ಶನ್ ಪುಟ್ಟಣ್ಣಯ್ಯ ಹಣಾಹಣಿ

✍️ ಮುತ್ತುರಾಜು, ನಾನು ಗೌರಿ.ಕಾಂ

ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟ ಆಳವಾಗಿ ಬೇರೂರಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಮೇಲುಕೋಟೆಗೆ ವಿಶಿಷ್ಟ ಸ್ಥಾನವಿದೆ. ಈ ಮೊದಲು ಪಾಂಡವಪುರ ವಿಧಾನಸಭಾ ಕ್ಷೇತ್ರವೆಂದು ಕರೆಸಿಕೊಳ್ಳುತ್ತಿದ್ದ ಈ ಕ್ಷೇತ್ರವು 2008ರ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಮೇಲುಕೋಟೆ ಸಾಮಾನ್ಯ ವಿಧಾನಸಭಾ ಕ್ಷೇತ್ರವಾಗಿದೆ. ಹಿಂದೆ ಇದ್ದ ಶೀಳನೆರೆ ಹೋಬಳಿಯು ಸದ್ಯ ಕೆ.ಆರ್ ಪೇಟೆ ಕ್ಷೇತ್ರದ ಪಾಲಾದರೆ, ಕೆರಗೋಡು ವಿಧಾನಸಭಾ ಕ್ಷೇತ್ರದಲ್ಲಿದ್ದ ( ರದ್ದುಗೊಂಡಿರುವ ಕ್ಷೇತ್ರ ) ದುದ್ದ ಹೋಬಳಿಯು ಮೇಲುಕೋಟೆಗೆ ಸೇರಿಕೊಂಡಿದೆ.

1952ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ವೈ ನೀಲೇಗೌಡರು ಸ್ಪರ್ಧಿಸಿ ಕಿಸಾನ್ ಮಜ್ದೂರ್ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಚಾಮಯ್ಯನವರನ್ನು ಮಣಿಸುತ್ತಾರೆ. 1957ರಲ್ಲಿ ಕಾಂಗ್ರೆಸ್ ಪಕ್ಷವು ಶ್ರೀರಂಗಪಟ್ಟಣ ತಾಲ್ಲೂಕಿನ ದಮಯಂತಿ ಬೋರೇಗೌಡರಿಗೆ ಟಿಕೆಟ್ ನೀಡುತ್ತದೆ. ಆದರೆ ಅವರು ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ (ಪಿಎಸ್‌ಪಿ) ಸ್ಪರ್ಧಿಸಿದ್ದ ಬಿ.ಚಾಮಯ್ಯನವರು ಎದುರು ಸೋಲುತ್ತಾರೆ.

1962ರಲ್ಲಿ ಕಾಂಗ್ರೆಸ್ ಮತ್ತೆ ಬಿ.ವೈ ನೀಲೇಗೌಡರಿಗೆ ಟಿಕೆಟ್ ನೀಡುತ್ತದೆ. ಅವರು ಪಿಎಸ್‌ಪಿಯಿಂದ ಸ್ಪರ್ಧಿಸಿದ್ದ ಎನ್.ಎ ಚನ್ನೇಗೌಡರನ್ನು ಮಣಿಸಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ. 1967ರಲ್ಲಿ ಕಾಂಗ್ರೆಸ್ ಡಿ.ಹಲಗೇಗೌಡರಿಗೆ ಟಿಕೆಟ್ ನೀಡುತ್ತದೆ. ಮೂರು ಬಾರಿ ಸೋಲು ಕಂಡಿದ್ದ ಎನ್.ಎ ಚನ್ನೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕೊನೆಗೂ ಗೆಲುವು ಕಾಣುತ್ತಾರೆ.

ಬಿ.ವೈ ನೀಲೇಗೌಡ

1972ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಡಿ.ಹಲಗೇಗೌಡರು ಸಂಸ್ಥಾ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಕೆ.ಎಂ ಕೆಂಗೇಗೌಡರ ಎದುರು ಗೆಲುವು ಕಾಣುತ್ತಾರೆ. ಆದರೆ 1978ರ ಚುನಾವಣೆಯಲ್ಲಿ ಜನತಾ ಪಕ್ಷದ ಕೆ.ಆರ್ ರಾಜಗೋಪಾಲ್‌ರವರ ಎದುರು ಸೋಲಬೇಕಾಗುತ್ತದೆ.

ನೀಲೇಗೌಡ

1983ರಲ್ಲಿ ಜನತಾ ಪಕ್ಷವು ಕೆ.ಕೆಂಪೇಗೌಡರಿಗೆ ಟಿಕೆಟ್ ನೀಡುತ್ತದೆ. ಅವರು ಕೆ.ಎಂ ಕೆಂಗೇಗೌಡರನ್ನು ಮಣಿಸಿ ಶಾಸಕರಾಗುತ್ತಾರೆ. 1985ರಲ್ಲಿ ಜನತಾ ಪಕ್ಷ ಹಾಲಿ ಶಾಸಕ ಕೆ.ಕೆಂಪೇಗೌಡರಿಗೆ ಟಿಕೆಟ್ ನಿರಾಕರಿಸುತ್ತದೆ. ಸಿ.ಅಣ್ಣೇಗೌಡರು ಪಕ್ಷದ ಅಭ್ಯರ್ಥಿಯಾಗುತ್ತಾರೆ. ಕಾಂಗ್ರೆಸ್‌ನಿಂದ ಮತ್ತೆ ಕೆಂಗೇಗೌಡರು ಸ್ಪರ್ಧಿಸುತ್ತಾರೆ; ಕೆ.ಕೆಂಪೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯ ಸಾಧಿಸುತ್ತಾರೆ.

ಚುನಾವಣಾ ಕಣಕ್ಕೆ ಕೆ.ಎಸ್. ಪುಟ್ಟಣ್ಣಯ್ಯ

1989ರಲ್ಲಿ ಹಾಲಿ ಶಾಸಕ ಕೆ.ಕೆಂಪೇಗೌಡರು ಜನತಾದಳದ ಅಭ್ಯರ್ಥಿಯಾಗುತ್ತಾರೆ. ಸತತ ಸೋಲು ಕಂಡಿದ್ದ ಕೆಂಗೇಗೌಡರನ್ನು ಕೈಬಿಟ್ಟು ಹಲಗೇಗೌಡರಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತದೆ. ಅದೇ ವೇಳೆಗೆ ಜನಪ್ರಿಯ ರೈತ ಹೋರಾಟಗಾರರಾಗಿದ್ದ ಕೆ.ಎಸ್ ಪುಟ್ಟಣ್ಣಯ್ಯನವರು ರೈತಸಂಘದಿಂದ ಚುನಾವಣೆಗೆ ಧುಮುಕಿದರು. ಅಣ್ಣೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ನಾಲ್ಕು ಜನರ ನಡುವಿನ ಸ್ಪರ್ಧೆಯಲ್ಲಿ ಡಿ.ಹಲಗೇಗೌಡರು 3,399 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ.

ಕೆ.ಎಸ್.ಪುಟ್ಟಣ್ಣಯ್ಯ

1994ರ ಚುನಾವಣೆಯಲ್ಲಿ ಜನತಾ ದಳವು ಸಿ.ಎಸ್ ಪುಟ್ಟರಾಜುರವರಿಗೆ ಟಿಕೆಟ್ ನೀಡುತ್ತದೆ. ಆದರೆ ಅವರು ಬಿ ಫಾರಂನಲ್ಲಿ ಹೆಸರು ತಿದ್ದಿ ತಮ್ಮ ಚಿಕ್ಕಪ್ಪ ಕೆ.ಕೆಂಪೇಗೌಡರಿಗೆ ಅದನ್ನು ನೀಡುತ್ತಾರೆ. ಇದರಿಂದ ಅವರ ನಾಮಪತ್ರ ಅಸಿಂಧುವಾಗುತ್ತದೆ. ಆಗ ಕೆ.ಕೆಂಪೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲುಳಿಯುತ್ತಾರೆ. ಆಗ ತಮ್ಮ ಎರಡನೇ ಪ್ರಯತ್ನದಲ್ಲಿ ರೈತಸಂಘದ ಕೆ.ಎಸ್ ಪುಟ್ಟಣ್ಣಯ್ಯನವರು ಪಕ್ಷೇತರ ಅಭ್ಯರ್ಥಿ ಕೆ.ಕೆಂಪೇಗೌಡರ ಎದುರು 12,584 ಮತಗಳ ಗೆಲುವು ಸಾಧಿಸುತ್ತಾರೆ. ಆ ಮೂಲಕ ತಮ್ಮ ಹೋರಾಟದ ದನಿಯನ್ನು ವಿಧಾನಸೌಧದಲ್ಲಿ ಮೊಳಗಿಸುತ್ತಾರೆ.

ಅಪ್ಪ-ಮಗನ ಸೆಣೆಸಾಟ

1999ರಲ್ಲಿ ಕಾಂಗ್ರೆಸ್ ಪಕ್ಷವು ಮಾಜಿ ಶಾಸಕ ಕೆ.ಕೆಂಪೇಗೌಡರಿಗೆ ಟಿಕೆಟ್ ನೀಡುತ್ತದೆ. ಅವರ ಅಣ್ಣನ ಮಗ ಸಿ.ಎಸ್ ಪುಟ್ಟರಾಜು ಜನತಾದಳದಿಂದ ಕಣಕ್ಕಿಳಿಯುತ್ತಾರೆ. ಹಾಲಿ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಮರು ಆಯ್ಕೆ ಬಯಸಿ ರೈತಸಂಘದಿಂದ ಕಣಕ್ಕಿಳಿಯುತ್ತಾರೆ. ಮೂರು ಜನರ ಕಾಳಗದಲ್ಲಿ ಕೆ.ಕೆಂಪೇಗೌಡರು 7,858 ಮತಗಳ ಅಂತರದಿಂದ ಜಯ ಕಾಣುತ್ತಾರೆ. ನಂತರದ 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮತ್ತೆ ಹಾಲಿ ಶಾಸಕರಿಗೆ ಮಣೆ ಹಾಕದೆ ಎಲ್.ಡಿ ರವಿಯವರಿಗೆ ಟಿಕೆಟ್ ನೀಡುತ್ತದೆ. ಅಲ್ಲಿಂದಲೇ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಂತ್ಯ ಆರಂಭವಾಗುತ್ತದೆ. ಜೆಡಿಎಸ್‌ನಿಂದ ಸಿ.ಎಸ್ ಪುಟ್ಟರಾಜುರವರು ಕಣಕ್ಕಿಳಿದು ಸರ್ವೋದಯ ಕರ್ನಾಟಕ ಪಕ್ಷದಿಂದ ಕಣಕ್ಕಿಳಿದಿದ್ದ ಕೆ.ಎಸ್ ಪುಟ್ಟಣ್ಣಯ್ಯನವರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರೆನಿಸಿಕೊಳ್ಳುತ್ತಾರೆ.

2008ರ ಚುನಾವಣೆಗೆ ಮೇಲುಕೋಟೆ ವಿಧಾನಸಭಾ ಕ್ಷೇತ್ರ ಎಂದು ಹೆಸರು ಪಡೆದುಕೊಂಡಿರುತ್ತದೆ. ಸಿ.ಎಸ್ ಪುಟ್ಟರಾಜು ಜೆಡಿಎಸ್ ಪಕ್ಷದಿಂದ ಮರುಆಯ್ಕೆ ಬಯಸಿ ಕಣಕ್ಕಿಳಿಯುತ್ತಾರೆ. ಸರ್ವೋದಯ ಕರ್ನಾಟಕದಿಂದ ಕೆ.ಎಸ್ ಪುಟ್ಟಣ್ಣಯ್ಯನವರು ಸ್ಪರ್ಧಿಸುತ್ತಾರೆ. ಕೆ.ಕೆಂಪೇಗೌಡರು ಬಿಜೆಪಿ ಸೇರಿ ಕಣಕ್ಕಿಳಿಯುತ್ತಾರೆ. ಕಾಂಗ್ರೆಸ್ ಮತ್ತೆ ಟಿಕೆಟ್ ಬದಲಾವಣೆ ಮಾಡಿ ಸಿ.ಅಣ್ಣೇಗೌಡರಿಗೆ ನೀಡುತ್ತದೆ. ಇದರಿಂದ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ, ಒಳೇಟು ಆರಂಭವಾಗುತ್ತದೆ. ಹೊಸದಾಗಿ ಸೇರ್ಪಡೆಯಾಗಿದ್ದ ದುದ್ದ ಹೋಬಳಿಯ ಅಭೂತಪೂರ್ವ ಬೆಂಬಲದೊಂದಿಗೆ ಆ ಚುನಾವಣೆಯಲ್ಲಿ ಮತ್ತೆ ಸಿ.ಎಸ್ ಪುಟ್ಟರಾಜುರವರು 11,945 ಮತಗಳ ಅಂತರದಿಂದ ಗೆದ್ದು ಸತತ ಎರಡನೇ ಬಾರಿಗೆ ಶಾಸಕರಾಗುತ್ತಾರೆ. ಸಿ.ಎಸ್ ಪುಟ್ಟರಾಜುರವರು 66,626 ಮತಗಳನ್ನು ಪಡೆದರೆ ಕೆ.ಎಸ್ ಪುಟ್ಟಣ್ಣಯ್ಯ 54,681 ಮತಗಳನ್ನು ಪಡೆಯುತ್ತಾರೆ. ಬಿಜೆಪಿಯ ಕೆ.ಕೆಂಪೇಗೌಡರು 4,265 ಮತಗಳಿಗೆ ಸೀಮಿತಗೊಂಡರೆ ಕಾಂಗ್ರೆಸ್‌ನ ಅಣ್ಣೇಗೌಡರು ಕೇವಲ 4,600 ಮತಗಳಿಗೆ ಕುಸಿಯುತ್ತಾರೆ.

2013ರ ಚುನಾವಣೆ ವೇಳೆಗೆ ಸಿ.ಎಸ್ ಪುಟ್ಟರಾಜು ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿರುತ್ತಾರೆ. ಆದರೆ, ಅದಕ್ಕೆ ಸರ್ವೋದಯ ಕರ್ನಾಟಕದ ಕೆ.ಎಸ್ ಪುಟ್ಟಣ್ಣಯ್ಯನವರು ಬ್ರೇಕ್ ಹಾಕಿ 80,041 ಮತಗಳನ್ನು ಪಡೆದು ಗೆಲುವನ್ನು ತನ್ನದಾಗಿಸಿಕೊಳ್ಳುತ್ತಾರೆ. ಸಿ.ಎಸ್ ಪುಟ್ಟರಾಜುರವರು 70,193 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿ ಸೋಲೊಪ್ಪಿಕೊಳ್ಳುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಎಲ್.ಡಿ ರವಿ ಕೇವಲ 2,314 ಮತಗಳನ್ನು ಪಡೆದರೆ, ಬಿಜೆಪಿಯ ಜಿ.ಎಂ ರವೀಂದ್ರ 827 ಮತಗಳನ್ನು ಪಡೆದು ಮುಖಭಂಗ ಅನುಭವಿಸುತ್ತಾರೆ. ಪುಟ್ಟಣ್ಣಯ್ಯನವರು ಎರಡನೇ ಬಾರಿ ವಿಧಾನಸಭೆ ಪ್ರವೇಶಿಸಿ ರಾಜ್ಯದ ಗಮನ ಸೆಳೆಯುತ್ತಾರೆ. ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಮತ್ತು ಜೆಡಿಎಸ್ ಹೊರತುಪಡಿಸಿ ಉಳಿದ ಪಕ್ಷಗಳಿಗೆ ನೆಲೆಯಿಲ್ಲ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗುತ್ತದೆ.

ಕೆ.ಎಸ್ ಪುಟ್ಟಣ್ಣಯ್ಯ

ವಿಧಾನಸಭಾ ಚುನಾವಣೆಯಲ್ಲಿ ಸೋತ ಪುಟ್ಟರಾಜು  2013ರಲ್ಲಿ ನಡೆದ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಎದುರು ಮತ್ತೆ ಸೋಲು ಕಾಣುತ್ತಾರೆ. ಆದರೆ 2014ರಲ್ಲಿನ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ 5 ಸಾವಿರ ಮತಗಳ ಅಂತರದಿಂದ ರಮ್ಯಾರನ್ನು ಸೋಲಿಸಿ ಸಂಸದರಾಗುತ್ತಾರೆ.

2018ರ ಫೆಬ್ರವರಿಯಲ್ಲಿ ಶಾಸಕರಾಗಿದ್ದ ಕೆ.ಎಸ್ ಪುಟ್ಟಣ್ಣಯ್ಯ  ಹೃದಯಾಘಾತದಿಂದ ಮರಣ ಹೊಂದುತ್ತಾರೆ. ಆ ವರ್ಷದ ಮೇ ತಿಂಗಳಿನಲ್ಲಿ ನಡೆಯುವ ಚುನಾವಣೆಯಲ್ಲಿ, ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯನವರು ಅಮೆರಿಕದಿಂದ ಬಂದು ಸ್ವರಾಜ್ ಇಂಡಿಯಾ ಪಕ್ಷದಿಂದ ಸ್ಪರ್ಧಿಸುತ್ತಾರೆ. ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಯನ್ನು ಹಾಕದೆ ಅವರನ್ನು ಬೆಂಬಲಿಸುತ್ತದೆ. ಜೆಡಿಎಸ್‌ನಿಂದ ಸಿ.ಎಸ್ ಪುಟ್ಟರಾಜುರವರು ಕಣಕ್ಕಿಳಿಯುತ್ತಾರೆ. ಪುಟ್ಟಣ್ಣಯ್ಯನವರ ಸಾವಿನ ಅನುಕಂಪದ ಅಲೆಯ ನಡುವೆಯೂ, ಜೆಡಿಎಸ್ ಪರವಾಗಿನ ಒಕ್ಕಲಿಗರ ಅಲೆಯಲ್ಲಿ ಸಿ.ಎಸ್ ಪುಟ್ಟರಾಜುರವರು 22,224 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ.

ಎಚ್.ಡಿ ಕುಮಾರಸ್ವಾಮಿಯವರು ಸಿಎಂ ಆಗಬೇಕೆಂಬ ಒಕ್ಕಲಿಗರ ಹಂಬಲ ಮತ್ತು ಸಾಲ ಮನ್ನಾ ಮಾಡುತ್ತಾರೆಂಬ ಬಯಕೆಗಳು ಜೆಡಿಎಸ್ ಅಭ್ಯರ್ಥಿಯನ್ನು ಗೆಲುವಿನ ದಡ ಮುಟ್ಟಿಸುತ್ತವೆ. ಪುಟ್ಟರಾಜು 96,003 ಮತಗಳನ್ನು ಪಡೆದರೆ, ದರ್ಶನ್ ಪುಟ್ಟಣ್ಣಯ್ಯ 73,779 ಮತಗಳನ್ನು ಪಡೆಯುತ್ತಾರೆ. ಬಿಜೆಪಿಯಿಂದ ಸುಂಡಹಳ್ಳಿ ಸೋಮಶೇಖರ್ ನಾಮಕಾವಸ್ಥೆ ಸ್ಪರ್ಧೆ ಮಾಡಿ 1,595 ಮತಗಳಿಗೆ ಸೀಮಿತಗೊಳ್ಳುತ್ತಾರೆ.

ಅಂದಾಜು ಜಾತಿವಾರು ಮತಗಳು

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮತಗಳು ಅಂದಾಜು 2,10,000. ಒಕ್ಕಲಿಗ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದುವರೆಗೂ ಗೆದ್ದವರು, ಬಿದ್ದವರು ಎಲ್ಲರೂ ಅದೇ ಸಮುದಾಯಕ್ಕೆ ಸೇರಿದ್ದಾರೆ. 90,000ದಷ್ಟು ಒಕ್ಕಲಿಗ ಮತಗಳಿದ್ದರೆ, 30,000 ಪರಿಶಿಷ್ಟ ಜಾತಿ ಮತಗಳಿವೆ. ಲಿಂಗಾಯಿತರು 21,000ದಷ್ಟಿದ್ದರೆ, ಕುರುಬ ಸಮುದಾಯದ್ದು 13,000ದಷ್ಟು ಮತಗಳಿವೆ. ಮುಸ್ಲಿಮರದ್ದು 8,000 ಮತಗಳಿವೆ. ಗಾಣಿಗರ 7000, ಬೆಸ್ತರ 6000 ಮತಗಳಿದ್ದರೆ, ಇತರ ಸಮುದಾಯಗಳ 35,000ದಷ್ಟು ಅಂದಾಜು ಮತಗಳಿವೆ.

ಸದ್ಯದ ಪರಿಸ್ಥಿತಿ

ಮೂರನೇ ಬಾರಿಗೆ ಶಾಸಕರಾದ ಸಿ.ಎಸ್ ಪುಟ್ಟರಾಜು  ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು. ಆ ಮೂಲಕ ಕ್ಷೇತ್ರದಿಂದ ಸಚಿವರಾದ ಮೊದಲಿಗರೆನಿಸಿಕೊಂಡಿದ್ದರು. ರಸ್ತೆ, ನೀರಾವರಿ ಕೆಲಸಗಳನ್ನು ಮಾಡಿದ್ದಾರೆ, ಕ್ಷೇತ್ರದ ಜನರ ಕೈಗೆ ಸಿಗುತ್ತಾರೆ, ಕ್ಷೇತ್ರವ್ಯಾಪ್ತಿಯ ಎಲ್ಲಾ ಊರುಗಳಿಗೂ ಖುದ್ದು ಭೇಟಿ ಕೊಡುತ್ತಾರೆ, ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ ಎಂಬುದು ಅವರ ಹೆಗ್ಗಳಿಕೆಯಾಗಿದೆ.

ಮತ್ತೆ ಕಣಕ್ಕಿಳಿದ ದರ್ಶನ್ ಪುಟ್ಟಣ್ಣಯ್ಯ

ಕಳೆದ ಚುನಾವಣೆಯ ಸೋಲಿನ ನಂತರ ಮತ್ತೆ ಅಮೆರಿಕಕ್ಕೆ ಮರಳಿದ್ದ ದರ್ಶನ್ ಪುಟ್ಟಣ್ಣಯ್ಯ ಆಗಾಗ್ಗೆ ಕ್ಷೇತ್ರಕ್ಕೆ ಭೇಟಿ ನೀಡಿ ರೈತರ ಹೋರಾಟಗಳನ್ನು ಸಂಘಟಿಸುತ್ತಿದ್ದರು. ಸದ್ಯ ಅಲ್ಲಿನ ತಮ್ಮ ಕಂಪನಿಯನ್ನು ಮಾರಿ ಸ್ವಗ್ರಾಮಕ್ಕೆ ಮರಳಿದ್ದಾರೆ. ಕಳೆದೆರಡು ತಿಂಗಳುಗಳಿಂದ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತಿರುವ ಅವರಿಗೆ ಸರ್ವೋದಯ ಕರ್ನಾಟಕ ಪಕ್ಷ ಟಿಕೆಟ್ ಘೋಷಿಸಿದೆ.

ಫೆಬ್ರವರಿ 15ರಿಂದ ಇಡೀ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಲು ಉದ್ದೇಶಿಸಿರುವ ದರ್ಶನ್ ಪುಟ್ಟಣ್ಣಯ್ಯ ಈ ಸಂದರ್ಭದಲ್ಲಿ ರಾತ್ರಿ ವೇಳೆ ಗ್ರಾಮ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ. ಆ ಊರಿನ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಹೋರಾಟ ರೂಪಿಸುವುದಾಗಿ ಭರವಸೆ ನೀಡುತ್ತಿದ್ದಾರೆ.  ಇದು ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಫಲಿತಾಂಶವಷ್ಠೇ ನಿರ್ಧರಿಸಬೇಕಿದೆ.

ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿತರ ದಂಡು

2004ರ ನಂತರದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಕ್ಷೇತ್ರದಲ್ಲಿ ದಯನೀಯ ಸೋಲು ಕಂಡಿದೆ. ಕಳೆದ ಬಾರಿ ಅಭ್ಯರ್ಥಿ ಹಾಕದೇ ದರ್ಶನ್ ಪುಟ್ಟಣ್ಣಯ್ಯನವರಿಗೆ ಬೆಂಬಲ ಘೋಷಿಸಿತ್ತು; ಆದರೂ ಅವರು ಗೆಲ್ಲಲಾಗಲಿಲ್ಲ. ಇಷ್ಟಿದ್ದರೂ ಈ ಬಾರಿ ಪಕ್ಷದ ಟಿಕೆಟ್‌ಗಾಗಿ ದಂಡೇ ನೆರೆದಿದೆ. ಕೆ.ಪಿ.ಸಿ.ಸಿ ಕಾರ್ಯದರ್ಶಿಯಾಗಿರುವ, ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷರು ಆದ ಡಾ. ಎಚ್.ಎನ್ ರವೀಂದ್ರರವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಡಾ.ಹೆಚ್.ಎನ್.ರವೀಂದ್ರ

ಡಿ.ಕೆ ಶಿವಕುಮಾರ್‌  ಆಪ್ತರಾದ ಕಾರಣ ತನಗೆ ಟಿಕೆಟ್ ಖಾತ್ರಿ ಎಂದು ನಂಬಿದ್ದಾರೆ. ಅದೇ ರೀತಿ ಮಾಜಿ ಶಾಸಕ ಡಿ.ಹಲಗೇಗೌಡರ ಪುತ್ರ, ಮಾಜಿ ಜಿಪಂ ಸದಸ್ಯ ಎಚ್.ತ್ಯಾಗರಾಜ್ ಕೂಡ ಅರ್ಜಿ ಸಲ್ಲಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಈ ಇಬ್ಬರೂ ಜನರೊಟ್ಟಿಗೆ ಇದ್ದದು ಅವರಿಗೆ ಪ್ಲಸ್ ಪಾಯಿಂಟ್ ಎನಿಸಿದೆ. ಜೊತೆಗೆ ಕಾಗೇಪುರ ಆನಂದಕುಮಾರ್ ಸಹ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.

ಇನ್ನು ಕಳೆದ ಚುನಾವಣೆ ಸಮಯದಲ್ಲಿ, ತಮ್ಮ ಸಮಾಜ ಸೇವೆಯನ್ನು ಬಿಂಬಿಸಿಕೊಂಡು ಕಾಂಗ್ರೆಸ್ ಟಿಕೆಟ್ ಪಡೆಯಲು ಯತ್ನಿಸಿ ಕಡೆಗೆ ಸುಮ್ಮನಾಗಿದ್ದ ಬಿ.ರೇವಣ್ಣ ಈ ಬಾರಿ ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಕೆಲಸ ಮಾಡಿ ಹೆಸರುಗಳಿಸಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಮತ್ತೆ ಮಂಕಾದರು.

ನೆಲೆಯಿಲ್ಲದ ಬಿಜೆಪಿ

ಇನ್ನು ಬಿಜೆಪಿಗೆ ಈ ಕ್ಷೇತ್ರದಲ್ಲಿ ನೆಲೆ ಇಲ್ಲ. ಆದರೂ ಒಂದಷ್ಟು ಸಂಖ್ಯೆಯ ಓಟುಗಳನ್ನು ಪಡೆದು ತಾವೂ ನೆಲೆ ಕಂಡು, ಪಕ್ಷಕ್ಕೂ ನೆಲೆ ಕಾಣಿಸಲು ಕೆಲವರು ಯತ್ನಿಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಡಾ.ಇಂದ್ರೇಶ್‌ರವರದಾಗಿದೆ. ಸಮಾಜ ಸೇವೆ ಹೆಸರಿನಲ್ಲಿ ಇತರ ಪಕ್ಷಗಳ ಮುಖಂಡರನ್ನು ಬಿಜೆಪಿಗೆ ಸೆಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಬಹುತೇಕ ಅವರೇ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಡಾ.ಇಂದ್ರೇಶ್

2023ರ ಸಾಧ್ಯತೆಗಳು

ಸದ್ಯದ ಮಟ್ಟಿಗೆ ಜೆಡಿಎಸ್ ಪಕ್ಷದ ಸಿ.ಎಸ್ ಪುಟ್ಟರಾಜುರವರು ಪ್ರಬಲರಾಗಿರುವಂತೆ ಕಂಡು ಬರುತ್ತಿದ್ದಾರೆ.   ಈ ನಡುವೆಯೂ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಆದರೆ ಕಳೆದ ಬಾರಿ ಇದ್ದ ಜೆಡಿಎಸ್ ಪರವಾಗಿನ ಒಕ್ಕಲಿಗರ ಅಲೆ ಈ ಬಾರಿ ಕಂಡುಬರುತ್ತಿಲ್ಲ. ಹಾಗಾಗಿ ಅವರಿಗೆ ನೇರ ಪೈಪೋಟಿ ಕೊಡಲು ಸಜ್ಜಾಗಿರುವ  ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ  ಕಳೆದ ಚುನಾವಣೆ ಸೋತ ಬಳಿಕ ವಾಪಸ್ ಅಮೆರಿಕಕ್ಕೆ ಹೋಗದಿದ್ದರೆ ಅಥವಾ ಒಂದು ವರ್ಷ ಮೊದಲೇ ಕ್ಷೇತ್ರದಲ್ಲಿ ಬೇರೂರಿದ್ದರೆ ಗೆಲುವು ಅವರಾದ್ದಾಗುತ್ತಿತ್ತು ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಆದರೂ ಅವರೀಗ ತಮ್ಮ ಅಮೆರಿಕದ ಕಂಪನಿ ಮಾರಿ ಕ್ಷೇತ್ರದಲ್ಲಿ ನೆಲೆಸಿರುವ ನಡೆ ಜನರಿಗೆ ಭರವಸೆ ಮೂಡಿಸಲು ಸಫಲವಾಗಿ ರೈತಸಂಘಕ್ಕೆ ಬಲ ಬಂದಿದೆ ಎನ್ನಲಾಗುತ್ತಿದೆ.

ಕ್ಷೇತ್ರದಲ್ಲಿ ರೈತಸಂಘದ ಸುಮಾರು   40,000  ಖಾಯಂ ಮತಗಳಿವೆ. ಅವು ಎಂದಿಗೂ ಬದಲಾಗುವುದಿಲ್ಲ ಎನ್ನಲಾಗುತ್ತದೆ. ಒಮ್ಮೆ ಸೋತಿರುವ ಅನುಕಂಪ ದರ್ಶನ್ ಅವರ ಪರವಾಗಿದೆ. ಅಲ್ಲದೆ ಸಿ.ಎಸ್ ಪುಟ್ಟರಾಜು ವಿರುದ್ಧ ಹಗೆತನ ಸಾಧಿಸುತ್ತಿರುವ ಸುಮಲತಾ ಅಂಬರೀಶ್‌ ಚುನಾವಣೆ ವೇಳೆಗೆ ತನಗೆ ಬೆಂಬಲ ಘೋಷಿಸುತ್ತಾರೆ ಎಂದು ದರ್ಶನ್ ಪುಟ್ಟಣ್ಣಯ್ಯ ನಂಬಿದ್ದಾರೆ.

ಈ ಎಲ್ಲಾ ದೃಷ್ಟಿಕೋನಗಳಿಂದ  ಕ್ಷೇತ್ರದ ರಾಜಕಾರಣವನ್ನು ಆವಲೋಕಿಸಿದರೆ  ಮೇಲುಕೋಟೆ ಕ್ಷೇತ್ರದಲ್ಲಿ ಜೆಡಿಎಸ್‌ನ ಸಿ.ಎಸ್. ಪುಟ್ಟರಾಜು ಮತ್ತು ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ  ನಡುವೆ ನೇರ ಹಣಾಹಣಿ ನಡೆಯುವಂತೆ ಗೋಚರವಾಗುತ್ತಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು  ಸ್ಫರ್ಧಿಸಿದರೆ,  ಒಂದಷ್ಟು ಮತ ಪಡೆದರೂ ಅವರು ಗೆಲುವಿನ ಸನಿಹಕ್ಕೂ ಬರುವ ಸ್ಥಿತಿಯಲ್ಲಿಲ್ಲ. ಹಾಗಾಗಿ  ಚುನಾವಣೆಯಲ್ಲಿ ಎದುರಾಗುವ ಆಡೆ-ತಡೆ ದಾಟಿ ಹಾಲಿ ಶಾಸಕ ಸಿ.ಎಸ್ ಪುಟ್ಟರಾಜು ಮತ್ತೆ ವಿಜಯಪತಾಕೆ ಹಾರಿಸುತ್ತಾರಾ ಅಥವಾ ಫಿನಿಕ್ಸ್ ಹಕ್ಕಿಯಂತೆ ದರ್ಶನ ಪುಟ್ಟಣ್ಣಯ್ಯ ಪುಟಿದೇಳುತ್ತಾರಾ ಎಂಬ ಪ್ರಶ್ನೆಗಳು ಮತದಾರರ ವಲಯದಿಂದ ವ್ಯಕ್ತವಾಗುತ್ತಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!