Sunday, May 19, 2024

ಪ್ರಾಯೋಗಿಕ ಆವೃತ್ತಿ

ಫ್ಯಾಕ್ಟ್ ಚೆಕ್| ಮೋದಿ ಉಚಿತ ಮೊಬೈಲ್ ರೀಚಾರ್ಜ್‌ ಯೋಜನೆ ಅಸಲಿಯೇ ?

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಜನರು ಮತ ಚಲಾಯಿಸುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಜನರ ಮೊಬೈಲ್‌ಗಳಿಗೆ ಉಚಿತ ರೀಜಾರ್ಜ್‌ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂಬ ಪೋಸ್ಟ್‌ವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಾಟ್ಸಾಪ್‌ನಲ್ಲಿ ವೈರಲ್‌ ಆಗುತ್ತಿರುವ ಪೋಸ್ಟ್‌ನಲ್ಲಿ, “ಬಿಜೆಪಿ ಉಚಿತ ರೀಚಾರ್ಜ್ ಯೋಜನೆ – ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಭಾರತೀಯ ಬಳಕೆದಾರರಿಗೆ 3 ತಿಂಗಳ ಉಚಿತ ರೀಚಾರ್ಜ್ಅನ್ನು ನೀಡುತ್ತಿದ್ದಾರೆ. ಇದರಿಂದಾಗಿ 2024ರ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಜನರು ಬಿಜೆಪಿಗೆ ಮತ ಚಲಾಯಿಸಬಹುದು. ಮತ ಚಲಾಯಿಸಿ ಮತ್ತು ಬಿಜೆಪಿ ಸರ್ಕಾರವನ್ನು ರಚಿಸಬಹುದು. ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು 3 ತಿಂಗಳ ಉಚಿತ ರೀಚಾರ್ಜ್ ಪಡೆಯಿರಿ. ರೀಚಾರ್ಜ್‌ ಪಡೆಯಲು ಕೊನೆಯ ದಿನಾಂಕ 2014ರ ಅಕ್ಟೋಬರ್ 15” ಎಂದು ಬರೆಯಲಿದೆ.

ಇದನ್ನು ನಿಜವೆಂದು ನಂಬಿರುವ ಹಲವಾರು ಮಂದಿ, ಪೋಸ್ಟ್‌ಅನ್ನು ಶೇರ್‌ ಮಾಡುತ್ತಿದ್ದಾರೆ. ಲಿಂಕ್‌ ಮೇಲೆ ಕ್ಲಿಕ್ ಮಾಡುತ್ತಿದ್ದಾರೆ. ತಮ್ಮ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಅದರೆ, ಅವರಾರಿಗೂ ರೀಚಾರ್ಜ್‌ ದೊರೆಯುತ್ತಿಲ್ಲ.

ಪೋಸ್ಟ್‌ನ ಸತ್ಯವೇನು?
ಪ್ರಧಾನಿ ಮೋದಿ ಅವರು ಉಚಿತ ರೀಚಾರ್ಜ್‌ನ ಯಾವುದೇ ಘೋಷಣೆ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ. ಉಚಿತ ರೀಚಾರ್ಜ್‌ಗೆ ಸಂಬಂಧಿಸಿದಂತೆ ಕೆಂದ್ರ ಸರ್ಕಾರದ ಯಾವುದೇ ಪ್ರಕಟಣೆ ನೀಡಿಲ್ಲ. ಸುತ್ತೋಲೆಗಳೂ ಬಂದಿಲ್ಲ.

ಯಾವುದೇ ಸಾರ್ವಜನಿಕ ಡೊಮೇನ್‌ಗಳಲ್ಲಿ ಈ ಯೋಜನೆಯ ಬಗ್ಗೆ ಮಾಹಿತಿಯಿಲ್ಲ. ಯಾವುದೇ ಸುದ್ದಿಸಂಸ್ಥೆ ಕೂಡ ಸುದ್ದಿ ಮಾಡಿಲ್ಲ.

ಪ್ರಧಾನಿಯವರು ಎಲ್ಲರಿಗೂ ಉಚಿತ ರೀಚಾರ್ಜ್ ಘೋಷಿಸಿದ್ದರೆ, ಹಲವಾರು ಸುದ್ದಿಸಂಸ್ಥೆಗಳು ಅದನ್ನು ವರದಿ ಮಾಡುತ್ತಿದ್ದವು. ಕೆಲವ ಮಾಧ್ಯಮಗಳನ್ನೂ ಅದನ್ನೇ ಇಟ್ಟುಕೊಂಡು ವಿಶೇಷ ಸುದ್ದಿಗಳನ್ನು ಮಾಡಿ, ಮೋದಿ ಅವರನ್ನು ವಾರಗಟ್ಟಲೆ ಹೊಗಳುತ್ತಿದ್ದವು ಎಂಬುದನ್ನು ನಾವು ಗಮನಿಸಬೇಕು.

ಅಲ್ಲದೆ, ವೈರಲ್ ಪೋಸ್ಟ್‌ನಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಬ್ಲಾಗ್‌ವೊಂದು ತೆರೆದುಕೊಳ್ಳುತ್ತದೆ. ಆ ಬ್ಲಾಗ್‌, ಜನರ ಫೋನ್‌ ಸಂಖ್ಯೆ ಸೇರಿದಂತೆ ಕಲವು ಮಾಹಿತಿಗಳನ್ನು ಅಂಗ್ರಹಿಸುವ ವಂಚನೆ ವೆಬ್‌ಸೈಟ್ ಆಗಿದೆ.

ಪೋಸ್ಟ್‌ನಲ್ಲಿದ್ದ ವೆಬ್‌ಸೈಟ್ ಲಿಂಕ್ ‘http://hgfc.buzz/pywe9ne/79168321815506180121dff7df’ ಮೇಲೆ ಕ್ಲಿಕ್ ಮಾಡಿದಾಗ, ಅದು ನಮ್ಮ ಮೊಬೈಲ್ ನಂಬರ್ ಸೇರಿದಂತೆ ವೈಯಕ್ತಿಕ ಡೇಟಾವನ್ನು ಕೇಳುವ ನಕಲಿ ವೆಬ್‌ಸೈಟ್‌ಗೆ ನಮ್ಮನ್ನು ಕರೆದೊಯ್ಯುತ್ತದೆ.

ಈ ಹಿಂದೆಯೂ ಇಂತದ್ದೇ ಹಲವಾರು ನಕಲಿ ಪೋಸ್ಟ್‌ಗಳು ವೈರಲ್ ಆಗಿದೆ
ಉಚಿತ ರೀಚಾರ್ಜ್‌ ಸಂಬಂಧಿಸಿದಂತೆ ಈ ಹಿಂದೆಯೂ ಕೂಡ ಹಲವು ನಕಲಿ ಪೋಸ್ಟ್‌ಗಳು ವೈರಲ್‌ ಆಗಿದ್ದರು.  ಕಳೆದ ವರ್ಷ ನವೆಂಬರ್‌ನಲ್ಲಿ ಮೋದಿ ಅವರು 239 ರೂ.ಗಳ 28 ದಿನದ ರೀಜಾರ್ಚ್‌ ನೀಡುತ್ತಿದ್ದಾರೆ ಎಂದು ಪೋಸ್ಟ್‌ ವೈರಲ್‌ ಆಗಿತ್ತು. ಅದರಲ್ಲಿಯೂ, ನಮ್ಮ ಮಾಹಿತಿಯನ್ನು ಸಂಗ್ರಹಿಸುವ ನಕಲಿ ಲಿಂಕ್‌ಅನ್ನು ಹರಿಬಿಡಲಾಗಿತ್ತು.

ಅಲ್ಲದೆ, ರಾಮಮಂದಿರ ಉದ್ಘಾಟನೆ ಸಮಯದಲ್ಲಿಯೂ ಉದ್ಘಾಟನೆ ಗಿಫ್ಟ್‌ ಆಗಿ ಮೋದಿ ಅವರು ಜನರಿಗೆ ಉಚಿತ ರೀಚಾರ್ಜ್‌ ನೀಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅದೆಲ್ಲವೂ ಸುಳ್ಳು ಎಂದು ಹಲವಾರು ಫ್ಯಾಕ್ಟ್‌ಚೆಕ್ ಸುದ್ದಿತಾಣಗಳು ಸತ್ಯಶೋಧನೆ ನಡೆಸಿ, ಬಹಿರಂಗಪಡಿಸಿದ್ದವು.

ಹೀಗಾಗಿ, ಈಗ ವೈರಲ್‌ ಆಗುತ್ತಿರುವ ಪೋಸ್ಟ್‌ ಕೂಡ ನಕಲಿಯಾಗಿದ್ದು. ಯಾರು ಕೂಡ ಆ ಪೋಸ್ಟ್‌ನ ಲಿಂಕ್‌ ಮೇಲೆ ಕ್ಲಿಕ್ ಮಾಡಿ, ತಮ್ಮ ವೈಯಕ್ತಿಕ ಡೇಟಾವನ್ನು ಆ ನಕಲಿ ವೆಬ್‌ಸೈಟ್‌ನಲ್ಲಿ ನಮೂದಿಸಬೇಡಿ ಎಂದು ‘ನುಡಿಕರ್ನಾಟಕ.ಕಾಂ‘ ಮನವಿ ಮಾಡುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!