Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೋದಿ ಕರ್ನಾಟಕಕ್ಕೆ ಅಷ್ಟೆಲ್ಲ ಅನ್ಯಾಯ ಮಾಡಿದರೂ; ಕರ್ನಾಟಕ ಮೋದಿಗೆ ಅನ್ಯಾಯ ಮಾಡಲಿಲ್ಲ…!

ಮಾಚಯ್ಯ ಎಂ ಹಿಪ್ಪರಗಿ

ಮೋದಿಗೆ ಕರ್ನಾಟಕದ ಮೇಲೆ ಅದ್ಯಾಕೆ ಅಷ್ಟು ಅಸಡ್ಡೆಯೋ ಗೊತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದಕ್ಕೆ ಮೋದಿಗೆ ಆ ಪರಿ ಸಿಟ್ಟಿದೆ ಎಂದು ಕೆಲವರು ವಾದಿಸಬಹುದು. ಈ ವಾದ ಸುಳ್ಳಲ್ಲವಾದರೂ ಸಂಪೂರ್ಣ ಸತ್ಯವಲ್ಲ. ಯಾಕೆಂದರೆ, ಕಾಂಗ್ರೆಸ್ ಗೆಲ್ಲುವುದಕ್ಕೆ ಮೊದಲು, ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದಾಗಲೂ ಕೂಡಾ ಮೋದಿಯವರು ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಲೇ ಬಂದಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ನೆರೆ ಹಾವಳಿಯಿಂದ ಕರ್ನಾಟಕ ತತ್ತರಿಸಿತ್ತು. ಆಗ ಪ್ರಧಾನಿ ಮೋದಿ ಇತ್ತ ತಿರುಗಿಯೂ ನೋಡಲಿಲ್ಲ, ಪರಿಹಾರವನ್ನೂ ಬಿಡುಗಡೆ ಮಾಡಲಿಲ್ಲ. ಯಡಿಯೂರಪ್ಪನವರು ಭೇಟಿಗೆ ದಿನಾಂಕ ಕೇಳಿದರೂ ಸ್ಪಂದಿಸಲಿಲ್ಲ. ಬೇಸತ್ತ ಅವರು, ಅದೊಮ್ಮೆ ತುಮಕೂರಿನ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆಯೇ `ದಯವಿಟ್ಟು ನಮಗೆ ಪರಿಹಾರ ಬಿಡುಗಡೆ ಮಾಡಿ’ ಎಂದು ಸಾರ್ವಜನಿಕವಾಗಿ ಗೋಗರೆಯಬೇಕಾಯ್ತು. ಇನ್ನು ಬೊಮ್ಮಾಯಿ ಸಿಎಂ ಆಗಿದ್ದಾಗಲೂ, ಅನುದಾನದ ಹಂಚಿಕೆಯ ವಿಚಾರದಲ್ಲಿ ಮೋದಿ ಸರ್ಕಾರ ಅನ್ಯಾಯವೆಸಗಿತು. ಬೊಮ್ಮಾಯಿ ಸದನದಲ್ಲೇ ಈ ಕುರಿತು ಹೇಳಿಕೆ ನೀಡಿದ್ದು ಇವತ್ತಿಗೂ ಕಲಾಪದ ದಾಖಲೆಯಲ್ಲಿ ದಾಖಲಾಗಿದೆ. ನಮ್ಮ ನಂದಿನಿಯನ್ನು ಅಮೂಲ್ ಜೊತೆಗೆ ವಿಲೀನಗೊಳಿಸಲು ಯತ್ನಿಸಿದ್ದು, ಕರ್ನಾಟಕದ ಬ್ಯಾಂಕ್ ಗಳನ್ನು ವಿಲೀನದ ಹೆಸರಲ್ಲಿ ನಿರ್ನಾಮ ಮಾಡಿದ್ದು, ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆಗೆ ಅನುದಾನ ಕಡಿತ ಮಾಡಿದ್ದು ಇವೆಲ್ಲವೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಕರ್ನಾಟಕದ ಮೇಲೆ ಮೋದಿ ಸರ್ಕಾರದ ಎಸಗಿದ ಅನ್ಯಾಯಗಳು.

ಹಾಗಾಗಿ ಬಿಜೆಪಿಯನ್ನು ಸೋಲಿಸಿದ ಕಾರಣಕ್ಕೆ ಮಾತ್ರವೇ ಮೋದಿಗೆ ಕರ್ನಾಟಕದ ಮೇಲೆ ಅಸಡ್ಡೆ ಎಂಬುದನ್ನು ನಾನಂತೂ ಒಪ್ಪಲಾರೆ. ಆ ಅಸಡ್ಡೆಯ ತೀವ್ರತೆ ಸೋಲಿನ ಕಾರಣಕ್ಕೆ ಹೆಚ್ಚಾಗಿರಬಹುದು ಅಷ್ಟೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನ್ನಭಾಗ್ಯಕ್ಕೆ ಅಕ್ಕಿ ನಿರಾಕರಿಸಿದ್ದು, ತೆರಿಗೆ ಹಂಚಿಕೆಯಲ್ಲಿ ಅಸಮಾನತೆ ಮಾಡಿದ್ದು, ಕಾವೇರಿ ವಿಚಾರದಲ್ಲಿ ಬೇಕಂತಲೇ ಕೈಕಟ್ಟಿ ಕೂತದ್ದು, ಸುಪ್ರೀಂ ಕೋರ್‍ಟ್ ಚಾಟಿ ಬೀಸುವವರೆಗೆ ಕನ್ನಡದ ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡದೆ ಸತಾಯಿಸಿದ್ದು, ಒಂದಾ ಎರಡಾ ನಿರಂತರವಾಗಿ ಕರ್ನಾಟಕವನ್ನು ಮೋದಿ ಕಡೆಗಣಿಸುತ್ತಲೇ ಬಂದರು. ಈ ಅಸಡ್ಡೆ ಯಾವ ಮಟ್ಟಕ್ಕೆ ತಲುಪಿತೆಂದರೆ ತಮ್ಮದೇ ಪಕ್ಷದ ಕರ್ನಾಟಕ ಘಟಕಕ್ಕೆ ಒಬ್ಬ ರಾಜ್ಯಾಧ್ಯಕ್ಷ, ವಿರೋಧ ಪಕ್ಷ ನಾಯಕನ ಆಯ್ಕೆಗೂ ಅವರು ಸತಾಯಿಸಿದರು.

ಕರ್ನಾಟಕದೆಡೆಗೆ ಮೋದಿಯವರು ಇಷ್ಟೆಲ್ಲ ಕಠಿಣವಾಗಿ ವರ್ತಿಸುತ್ತಾ ಬಂದರೂ, ಕರ್ನಾಟಕ ಮಾತ್ರ ಈ ಚುನಾವಣೆಯಲ್ಲಿ ಅವರಿಗೆ ಮೋಸ ಮಾಡಿಲ್ಲ. ಇದನ್ನು ಹೆಮ್ಮೆಯಿಂದ ಹೇಳಬೇಕೊ, ಅಥವಾ ವಿಪರ್ಯಾಸದಿಂದ ಮುಂದಿಡಬೇಕೊ ಗೊತ್ತಿಲ್ಲ. ಆದರೆ ಚುನಾವಣೆಗು ಮೊದಲೇ ಇದ್ದ ನಿರೀಕ್ಷೆಗಳಂತೆ ಕರ್ನಾಟಕದಲ್ಲಿ ಬಿಜೆಪಿಗೆ ಈಗ ಬಂದಿರುವುದಕ್ಕಿಂತ ಹತ್ತು ಸ್ಥಾನಗಳು ಕಡಿಮೆಯಾಗಿದ್ದರೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವ ವಿಶ್ವಾಸವನ್ನೇ ಕಳೆದುಕೊಳ್ಳಬೇಕಿತ್ತು. ಮೋದಿ ಮೂರನೇ ಸಲ ಪ್ರಧಾನಿಯಾಗುವ ಸಾಧ್ಯತೆಯೂ ನುಚ್ಚು ನೂರಾಗುತ್ತಿತ್ತು. ತಮ್ಮ ಅನುದಾನವನ್ನೆಲ್ಲ ಧಾರೆಯೆರೆದ ಉತ್ತರ ಪ್ರದೇಶ ಕೊಟ್ಟಂತಹ ಏಟನ್ನೆ ಕರ್ನಾಟಕ ಕೊಟ್ಟಿದ್ದರೆ, ಮೋದಿಯವರ ಪರಿಸ್ಥಿತಿ ಏನಾಗುತ್ತಿತ್ತು.

ವಾಸ್ತವದಲ್ಲಿ ಮೋದಿಯವರು ತೋರಿದ ಅಸಡ್ಡೆಗೆ ಯುಪಿಯ ಫಲಿತಾಂಶವನ್ನು ಕರ್ನಾಟಕ ತೋರಬೇಕಿತ್ತು. ಕಾಂಗ್ರೆಸ್ ಕೊಟ್ಟ ಗ್ಯಾರಂಟಿ ಯೋಜನೆಗಳ ಸಂಪೂರ್ಣ ಲಾಭ ಪಡೆದು, ಬಿಜೆಪಿಗೆ ಜೈ ಎಂದಿದೆ ಕರ್ನಾಟಕ. ಇದು ಸರಿಯೋ ತಪ್ಪೋ ಬೇರೆಯ ಮಾತು; ಮತ ಹಾಕುವಾಗ ನಮ್ಮ ಕನ್ನಡಿಗರು ಜಾತಿಯ ಮೋಹಕ್ಕೆ ತುತ್ತಾಗಿದ್ದರಾ ಅನ್ನೋದು ಬೇರೆಯ ಚರ್ಚೆ.. ಆದರೆ ಕರ್ನಾಟಕದ ಈ ಆದ್ಯತೆಯ ನೇರ ಫಲಾನುಭವಿ ಮೋದಿಯವರು ಎನ್ನುವುದು ಮಾತ್ರ ಸತ್ಯ!

ಕಡೇಪಕ್ಷ ಈಗಲಾದರೂ ಅವರು ಕರ್ನಾಟಕದೆಡೆಗೆ ಅನ್ಯಾಯ, ವಂಚನೆ, ಅಸಡ್ಡೆಗಳ ಭಾವನೆ ತೊರೆದು ನ್ಯಾಯವಾಗಿ ವರ್ತಿಸುತ್ತಾರಾ ಕಾದು ನೋಡಬೇಕು. ಬಹುಶಃ ಅಂತದ್ಯಾವ ದುಬಾರಿ ನಿರೀಕ್ಷೆಗಳನ್ನಿಟ್ಟುಕೊಂಡು ನಮ್ಮ ಕನ್ನಡಿಗರು ಮೋದಿಯವರಿಗೆ ಮತ ಹಾಕಿರಲಿಕ್ಕಿಲ್ಲ. ಬಸವಣ್ಣ, ಕುವೆಂಪು ಅವರಂತಹ ಮಹಾನ್ ವ್ಯಕ್ತಿಗಳನ್ನು ಫೋಟೊದೊಳಗಿ ಐಕಾನ್ ಗಳಾಗಿ ಸೀಮಿತವಾಗಿಸಿರುವ ನಮ್ಮ ಕನ್ನಡಿಗರು ಅವರಿಬ್ಬರ ಆಶಯಗಳ ವಿರುದ್ಧ ಸೇಡಿನಿಂದ ಕೊಟ್ಟ ತೀರ್ಪಿನಂತಿದೆ ಇದು. ನಮಗಿಂತಲೂ ಕಡಿಮೆ ಸ್ಥಾನಗಳ ಕಾಣಿಕೆ ಕೊಟ್ಟ ಆಂದ್ರಕ್ಕೆ ವಿಶೇಷ ಸ್ಥಾನಮಾನ ಕೊಡುವ ಚೌಕಾಶಿ ಮೋದಿಯವರ ಅಂಗಳದಲ್ಲಿ ನಡೆಯುತ್ತಿದೆ; ಮುಂದಿನ ಬೇಸಿಗೆಯ ಹೊತ್ತಿಗೆ ಯಥಾ ಪ್ರಕಾರ, ಮೋದಿ ಸರ್ಕಾರದ ಕಾವೇರಿ ಪ್ರಾಧಿಕಾರದ ಆದೇಶದಂತೆ ಬಿಜೆಪಿಗೆ ಒಂದು ಸ್ಥಾನವನ್ನೂ ಗೆಲ್ಲಿಸದ ತಮಿಳುನಾಡಿಗೆ ಕಾವೇರಿ ನೀರು ಹರಿದುಹೋಗಲಿದೆ; ಬಿಜೆಪಿ ಸಖ್ಯದ ಎಂಇಎಸ್ ಪುಂಡರು ಗಲಾಟೆ ಎಬ್ಬಿಸಲಿದ್ದಾರೆ; ಮಹಾದಾಯಿಗೆ ತಕರಾರು ಮುಂದುವರೆಯಲಿದೆ….. ಹದಿನೇಳು ಬಿಜೆಪಿ ಸಂಸದರ ನಾಡಿನಲ್ಲಿ ಸಬ್ ಚೆಂಗಾಸಿ!!

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!