Thursday, September 19, 2024

ಪ್ರಾಯೋಗಿಕ ಆವೃತ್ತಿ

ಇಡಿ ತನಿಖೆ ಹಿಂದೆ ರಾಜಕೀಯ ದ್ವೇಷವಿದೆಯೇ ಎಂದು ತಿಳಿಯುವ ವ್ಯವಸ್ಥೆ ಬೇಕು: ಸುಪ್ರೀಂ ಕೋರ್ಟ್‌

ಪ್ರತಿಪಕ್ಷ ಆಡಳಿತದ ರಾಜ್ಯಗಳ ಅಧಿಕಾರಿಗಳ ವಿರುದ್ಧ ಜಾರಿ ನಿರ್ದೇಶನಾಲಯದ ತನಿಖೆಗಳು ರಾಜಕೀಯ ದ್ವೇಷದ ಕಾರಣದಿಂದ ನಡೆಯುತ್ತಿವೆಯೇ ಎಂದು ತಿಳಿಯಲು ಒಂದು ವ್ಯವಸ್ಥೆ ಇರಬೇಕೆಂದು ಸುಪ್ರೀಂ ಕೋರ್ಟ್‌ ಹೇಳಿದೆ.

ತಮಿಳುನಾಡಿನ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಇರುವ ಭ್ರಷ್ಟಾಚಾರ ಪ್ರಕರಣಗಳ ಕುರಿತ ವಿವರಗಳು ಮತ್ತು ಎಫ್‌ಐಆರ್‌ ಕುರಿತು ಮಾಹಿತಿ ಒದಗಿಸುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ ವಿ ವಿಶ್ವನಾಥನ್‌ ಅವರ ವಿಭಾಗೀಯ ಪೀಠ ಈ ರೀತಿ ಹೇಳಿದೆ.

ತಮಿಳುನಾಡಿನ ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರ ವಿರುದ್ಧ ದಾಖಲಾಗಿರುವ ಲಂಚ ಪ್ರಕರಣವನ್ನು ತಮಿಳುನಾಡು ವಿಜಿಲೆನ್ಸ್‌ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದಿಂದ ಸಿಬಿಐಗೆ ವರ್ಗಾಯಿಸಬೇಕೆಂದೂ ಈಡಿ ಕೋರಿದೆ.‌ ದಿಂಡಿಗುಲ್‌ ಎಂಬಲ್ಲಿ ವೈದ್ಯರೊಬ್ಬರಿಂದ 20 ಲಕ್ಷ ರೂ. ಲಂಚ ಪಡೆಯುವಾಗ ಅಧಿಕಾರಿ ಅಂಕಿತ್‌ ತಿವಾರಿ ಎಂಬವರನ್ನು ಕಳೆದ ಡಿಸೆಂಬರಿನಲ್ಲಿ ಬಂಧಿಸಲಾಗಿತ್ತು.

ಕೆಲ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳನ್ನು ಗುರಿಯಾಗಿಸಲು ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯವನ್ನು ಬಳಸುತ್ತಿದೆ ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಮತ್ತು ತಮಿಳುನಾಡು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅಮಿತ್‌ ಆನಂದ್‌ ತಿವಾರಿ ನ್ಯಾಯಾಲದ ಮುಂದೆ ವಾದಿಸಿದ್ದರು. ರಾಜಕೀಯ ಸೇಡಿನ ಮನೋಭಾವವು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ ಎಂದು ಅವರು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಇಡಿ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಬಂಧನಗಳನ್ನು ವೈಷಮ್ಯದಿಂದ ನಡೆಸಲಾಗಿದೆ ಎಂದು ತಮಿಳುನಾಡು ಸರ್ಕಾರ ಅಂದುಕೊಂಡಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದರು.

ಒಂದು ಸಲ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಾದರೆ ಸರ್ಕಾರ ಇಡಿಗೆ ಎಲ್ಲಾ ದಾಖಲೆಗಳನ್ನು ಒದಗಿಸಬೇಕು. ಆದರೆ, ತಮಿಳುನಾಡು ಸರ್ಕಾರ ಯಾವುದೇ ದಾಖಲೆ ಒದಗಿಸಿಲ್ಲ ಎಂದು ತುಷಾರ್ ಮೆಹ್ತಾ ಆರೋಪಿಸಿದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ, “ನ್ಯಾಯಯುತ ತನಿಖೆಯ ಉದ್ದೇಶವನ್ನು ಕಾನೂನು ಜಾರಿ ಏಜನ್ಸಿಗಳು ಹೊಂದಿವೆ. ರಾಜಕೀಯ ದ್ವೇಷದ ಕ್ರಮವೆಂಬ ಸಂಶಯವನ್ನು ನಿವಾರಿಸಲು ಏನಾದರೂ ವ್ಯವಸ್ಥೆಯಿರಬೇಕು. ತಪ್ಪು ಮಾಡಿದವರು ತಪ್ಪಿಸಿಕೊಳ್ಳುವುದು ನಮಗೆ ಬೇಕಿಲ್ಲ” ಎಂದು ಹೇಳಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!