Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಹೇಮಾವತಿ ನದಿ ದಂಡೆಯಲ್ಲಿ ಬಾಹುಬಲಿ ಪುನರ್ ಪ್ರತಿಷ್ಠಾಪನೆಗೆ ಸಿದ್ಧತೆ

ವಿಶೇಷ ವರದಿ: ಡಾ.ಕೆ.ಆರ್ ನೀಲಕಂಠ

ಕೃಷ್ಣರಾಜಸಾಗರದ ವಿಶಾಲವಾದ ಹಿನ್ನೀರಿನ ಪಕ್ಕದಲ್ಲಿ ಹೇಮಾವತಿ ನದಿಯ ದಂಡೆಯ ಮೇಲೆ ನೆಲೆ ನಿಂತಿರುವ ವೈರಾಗ್ಯಮೂರ್ತಿ 17 ಅಡಿ ಎತ್ತರದ ಭಗವಾನ್ ಬಾಹುಬಲಿ ಮೂರ್ತಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ಕೆ ಕೆ.ಆರ್.ಪೇಟೆ ತಾಲೂಕಿನ ಬಸದಿ ಹೊಸಕೋಟೆಯಲ್ಲಿ ಸಕಲ ಸಿದ್ಧತೆಗಳನ್ನು ಭಗವಾನ್ ಬಾಹುಬಲಿ ದಿಗಂಬರ ಜೈನ ಟ್ರಸ್ಟ್ ಹಮ್ಮಿಕೊಂಡಿದೆ.

ನವೆಂಬರ್ 23ರಿಂದ 25ರ ವರೆಗೆ ಶ್ರವಣಬೆಳಗೊಳದ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಅಮರ ಕೀರ್ತಿ ಯುಗಳ ಮುನಿಗಳ ದಿವ್ಯಸಾನಿಧ್ಯದಲ್ಲಿ ಪುನರ್ ಪ್ರತಿಷ್ಠಾಪನಾ ಕಾರ್ಯವನ್ನು ನಡೆಸಲು ಭರದಿಂದ ಸಿದ್ಧತೆಗಳು ನಡೆಯುತ್ತಿವೆ.

ಬಸದಿ ಹೊಸಕೋಟೆ ಗ್ರಾಮದಲ್ಲಿ 17 ಅಡಿ ಎತ್ತರದ ಭಗವಾನ್ ಬಾಹುಬಲಿಯ ಏಕಶಿಲಾಮೂರ್ತಿ ಹಾಗೂ ವಿವಿಧ ತೀರ್ಥಂಕರರ ಮೂರ್ತಿಗಳು ಹಾಗೂ ಮಂಟಪಗಳನ್ನು ಹೊಯ್ಸಳ ದೊರೆ ಬಿಟ್ಟಿದೇವ(ವಿಷ್ಣುವರ್ಧನ)ನ
ಆಪ್ತ ದಂಡನಾಯಕನಾಗಿದ್ದ ಪುಣಿಸಿಮಯ್ಯನು ಕ್ರಿ.ಶ.1147ರಲ್ಲಿ ನಿರ್ಮಿಸಿದ್ದನು ಎಂದು ಶಿಲಾ ಶಾಸನದಿಂದ ತಿಳಿದು ಬಂದಿದೆ. ಶ್ರೀಕ್ಷೇತ್ರವನ್ನು ತಲತಲಾಂತರದಿಂದ ಜೈನ ಶ್ರಾವಕ, ಶ್ರಾವಕಿಯರು ಹಾಗೂ ಟ್ರಸ್ಟ್ ಸದಸ್ಯರು ಸಂರಕ್ಷಿಸಿಕೊಂಡು ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ತೆರೆಯ ಮರೆಯಲ್ಲಿದ್ದ ಬಾಹುಬಲಿಯ ಶಿಲಾಮೂರ್ತಿಯನ್ನು ಕೃಷ್ಣರಾಜಸಾಗರದ ಹಿನ್ನೀರಿಗೆ ಹೊಂದಿಕೊಂಡಂತೆ 15 ಅಡಿ ಎತ್ತರದ ವಿಶಾಲವಾದ ಜಗುಲಿಯ ಮೇಲೆ ಪೂರ್ವಾಭಿಮುಖವಾಗಿ ಪ್ರತಿಷ್ಠಾಪನೆ ಮಾಡಲಾಗುವುದು, ಭಿನ್ನಗೊಂಡು ಹಾನಿಗೊಳಗಾಗಿದ್ದ ತೀರ್ಥಂಕರರ ಶಿಲಾಮೂರ್ತಿಗಳನ್ನು ನೂತನವಾಗಿ ಪುನರ್ ನಿರ್ಮಿಸಿ
ವಿಶೇಷವಾದ ಪೂಜೆ ಪುರಸ್ಕಾರಗಳನ್ನು ನಡೆಸಿ ಅಭಿಷೇಕ ಮಾಡಿ ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಆದ್ದರಿಂದ ಭಕ್ತಾಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು
ಯಶಸ್ವಿಗೊಳಿಸಿಕೊಡಬೇಕು ಎಂದು ಬಸದಿ ಹೊಸಕೋಟೆಯ ಭಗವಾನ್ ಬಹುಬಲಿ ದಿಗಂಬರ ಜೈನ ಟ್ರಸ್ಟ್ ಸಂಚಾಲಕ ಡಾ.ಲಲಿತಾಂಗಕುಮಾರ್ ಮನವಿ ಮಾಡಿದ್ದಾರೆ.

ಜೈನಕಾಶಿಯೆಂದೇ ಜಗದ್ವಿಖ್ಯಾತವಾಗಿರುವ ಶ್ರವಣಬೆಳಗೊಳ ಕ್ಷೇತ್ರಕ್ಕೆ ಕೇವಲ 45 ಕಿ.ಮೀ ದೂರದಲ್ಲಿರುವ ಕೆ.ಆರ್.ಪೇಟೆ ತಾಲೂಕಿನ ಬಸದಿಹೊಸಕೋಟೆ ಜೈನಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ  ಡಾ.ಡಿ.ವೀರೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ ಬಸದಿ ಹೊಸಕೋಟೆ ಜೈನ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ಗುರುವಾರ, ಶುಕ್ರವಾರ ಹಾಗೂ ಶನಿವಾರ ಮೂರು ದಿನಗಳ ಕಾಲ ಭಗವಾನ್ ಬಾಹುಬಲಿ ಸ್ವಾಮಿಯ ಪುನರ್ ಪ್ರತಿಷ್ಠಾಪನೆ ಹಾಗೂ ಸಿದ್ಧಚಕ್ರದ ಆರಾಧನಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಸಚಿವರಾದ
ಡಾ.ನಾರಾಯಣಗೌಡ, ಸಾರಾಮಹೇಶ್, ಸಿ.ಎಸ್.ಪುಟ್ಟರಾಜು, ಶಾಸಕ ಹೆಚ್.ಟಿ.ಮಂಜು,
ಮಾಜಿಶಾಸಕರಾದ ಬಿ.ಪ್ರಕಾಶ್, ಕೆ.ಬಿ.ಚಂದ್ರಶೇಖರ್, ಎಂ.ಪುಟ್ಟಸ್ವಾಮಿಗೌಡ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಸಮಾಜಸೇವಕರಾದ ಮಲ್ಲಿಕಾರ್ಜುನ, ಕಾಂಗ್ರೆಸ್ ಮುಖಂಡ ವಿಜಯ ರಾಮೇಗೌಡ, ಚಂದ್ರವನ ಆಶ್ರಮದ ಡಾ.ಶ್ರೀತ್ರಿನೇತ್ರಮಹಂತ ಶಿವಯೋಗಿಸ್ವಾಮೀಜಿ, ಧರ್ಮಸ್ಥಳದ ಧರ್ಮೋಥ್ಥಾನ ಟ್ರಸ್ಟ್ ಅಧ್ಯಕ್ಷ ಡಿ.ಸುರೇಂದ್ರಕುಮಾರ್, ಅಲ್ಪಸಂಖ್ಯಾತರ ಇಲಾಖೆಯ ಕಾರ್ಯದರ್ಶಿಗಳಾದ ಮನೋಜ್‌ಜೈನ್, ಆದಿಚುಂಚನಗಿರಿಯ ಹೇಮಗಿರಿ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಸೇರಿದಂತೆ ಮತ್ತಿತರರು ಭಾಗವಹಿಸುವರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!