Thursday, May 16, 2024

ಪ್ರಾಯೋಗಿಕ ಆವೃತ್ತಿ

ರಸ್ತೆ ಬದಿ ಮಲಗಿದ್ದವರ ಪಕ್ಕದಲ್ಲಿ ಹಣ ಇಟ್ಟು ತೆರಳಿದ ಅಫ್ಘಾನ್ ಕ್ರಿಕೆಟಿಗ ! : ವಿಡಿಯೋ ವೈರಲ್

ನಿನ್ನೆ ಬೆಂಗಳೂರಿನಲ್ಲಿ ಭಾರತ ಹಾಗೂ ನೆದರ್‌ಲ್ಯಾಂಡ್ಸ್‌ ನಡೆದ 45ನೇ ಪಂದ್ಯದೊಂದಿಗೆ ಐಸಿಸಿ ಏಕದಿನ ವಿಶ್ವಕಪ್‌ನ ಲೀಗ್ ಹಂತದ ಎಲ್ಲ ಪಂದ್ಯಗಳು ಮುಗಿದಿದೆ. ಇನ್ನೇನಿದ್ದರೂ ಎರಡು ಸೆಮಿಫೈನಲ್ ಪಂದ್ಯ ಹಾಗೂ ಫೈನಲ್ ಪಂದ್ಯ ಮಾತ್ರ ಬಾಕಿ ಇದೆ.

ಈ ಬಾರಿ ಒಟ್ಟು 10 ತಂಡಗಳ ಪೈಕಿ 4 ತಂಡ ಸೆಮಿಫೈನಲ್ ತಲುಪಿದರೆ, ವಿಫಲವಾಗಿರುವ ಉಳಿದ ಆರು ತಂಡಗಳು ತಮ್ಮ ತವರೂರಿಗೆ ತಲುಪಲು ಪ್ರಯಾಣಿಸುತ್ತಿದ್ದಾರೆ. ಸೋತ ಆರು ತಂಡಗಳ ಪೈಕಿ ಹೆಚ್ಚು ಸುದ್ದಿಯಾದದ್ದು ನೆದರ್‌ಲ್ಯಾಂಡ್ಸ್‌ ಹಾಗೂ ಉತ್ಸಾಹಿ ಅಫ್ಘಾನಿಸ್ತಾನ ತಂಡ.

ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ, ಬಲಶಾಲಿ ತಂಡಗಳನ್ನೇ ಬಗ್ಗುಬಡಿದಿದ್ದ ಅಫ್ಘಾನಿಸ್ತಾನ, ಟೂರ್ನಿಯಿಂದ ಹೊರಗೆ ಬಿದ್ದಿದೆ. ಆದರೆ ಆಡಿದ ಅಷ್ಟೂ ಪಂದ್ಯಗಳಲ್ಲಿ ಎದುರಾಳಿಗಳನ್ನ ಕಾಡಿ ಕ್ರಿಕೆಟ್ ಅಭಿಮಾನಿ ಬಳಗದ ಗಮನ ಸೆಳೆದಿತ್ತು ಅಫ್ಘಾನಿಸ್ತಾನದ ಕ್ರಿಕೆಟ್ ತಂಡ.

“>

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 42ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಣಸಾಡಿದ್ದವು. ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಪಂದ್ಯ ಸುಲಭದ ತುತ್ತು ಎನ್ನಲಾಗಿತ್ತು, ಆದರೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಭಾರೀ ಪೈಪೋಟಿ ನೀಡಿ, ಕೊನೆಗೆ ಸೋಲೊಪ್ಪಿಕೊಂಡಿತು. ಅಫ್ಘಾನಿಸ್ತಾನವು ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲು ವಿಫಲವಾಯಿತಾದರೂ, ತಮ್ಮ ಉತ್ತಮ ಪ್ರದರ್ಶನದಿಂದ ಕ್ರೀಡಾಭಿಮಾನಿಗಳ ಮನಸ್ಸು ಗೆದ್ದಿರುವುದಂತೂ ಸತ್ಯ.

ಒಂದೆಡೆ ಅಫ್ಘಾನಿಸ್ತಾನ ತಂಡ ಮೈದಾನದಲ್ಲಿನ ಆಟದ ಮೂಲಕ ಜನರ ಹೃದಯಗಳನ್ನು ಗೆದ್ದಿದ್ದರೆ, ಮತ್ತೊಂದೆಡೆ ಅಫ್ಘಾನಿಸ್ತಾನದ ಬ್ಯಾಟರ್ ರಹ್ಮಾನುಲ್ಲಾ ಗುರ್ಬಾಝ್ ಮೈದಾನದ ಹೊರಗೆ ಕೂಡ ಒಂದು ಉತ್ತಮ ಕಾರ್ಯಕ್ಕಾಗಿ ಸುದ್ದಿಯಾಗಿದ್ದಾರೆ.

ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಮುಗಿದ ಮಧ್ಯರಾತ್ರಿ 3ರ ಸುಮಾರಿಗೆ ಬಳಿಕ ರಸ್ತೆ ಬದಿ ಮಲಗಿದ್ದವರಿಗೆ ಸದ್ದಿಲ್ಲದೆ ಹಣ ಇಟ್ಟು ತೆರಳಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ.

ದೀಪಾವಳಿಯನ್ನು ಆಚರಿಸಲು ಗುರ್ಬಾಝ್ ₹500ರ ಭಾರತೀಯ ನೋಟನ್ನು ಮಲಗಿದ್ದ ಜನರ ಬಳಿ ಸದ್ದಿಲ್ಲದೇ ಇಟ್ಟು, ನಂತರ ಕಾರೊಂದರಲ್ಲಿ ಹೊರಟು ಹೋಗುತ್ತಿರುವುದು ಕಂಡುಬಂದಿದೆ.

ಈ ದೃಶ್ಯವನ್ನು ದೂರದಲ್ಲೇ ನಿಂತು ಗಮನಿಸುತ್ತಿದ್ದ ಆರ್ ಜೆ ಲವ್ ಶಾ ಎಂಬ ವೃತ್ತಿಪರ ನಿರೂಪಕರೊಬ್ಬರು ಸೆರೆ ಹಿಡಿದಿದ್ದು, ಅದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಕ್ರಿಕೆಟ್ ಅಪ್‌ಡೇಟ್ ನೀಡುವ @mufaddal_vohra ಎಂಬ ಎಕ್ಸ್ ಖಾತೆಯ ಬಳಕೆದಾರ ಶೇರ್ ಮಾಡಿಕೊಂಡಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.

ವಿಡಿಯೋ ಮಾಡಿದ್ದ ಆರ್ ಜೆ ಲವ್ ಶಾ, ‘ಈಗ ಗಂಟೆ ಮಧ್ಯರಾತ್ರಿ 3 AM. ನಾನು ಅಹ್ಮದಾಬಾದ್‌ನ ರಸ್ತೆಯಲ್ಲಿ ನೋಡುತ್ತಿರುವುದು ಅಫ್ಘಾನಿಸ್ತಾನದ ಬ್ಯಾಟರ್ ರೆಹ್ಮಾನುಲ್ಲಾ ಗುರ್ಬಾಝ್ ಅವರನ್ನು. ನನ್ನ ಮನೆಯ ಸಮೀಪ ಕಂಡ ದೃಶ್ಯ ಇದು. ನಾನು ಒಂದು ವೇಳೆ ಅವರನ್ನು ಭೇಟಿಯಾಗಿದ್ದಿದ್ದರೆ ಅವರು ಏನು ಉತ್ತರ ನೀಡುತ್ತಿದ್ದರೋ ಗೊತ್ತಿಲ್ಲ. ಈ ವಿಡಿಯೋ ಹಂಚಿಕೊಳ್ಳುವ ಮುನ್ನ ನಾನು ಕೂಡ ಹಲವಾರು ಬಾರಿ ಯೋಚಿಸಿದೆ. ಶೇರ್ ಮಾಡಲೋ? ಬೇಡವೋ ಎಂದು. ಆದರೆ, ಒಬ್ಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕ್ರಿಕೆಟರ್ ಒಬ್ಬ ಈ ರೀತಿ ಮಾಡುತ್ತಾನೆಂದಾದರೆ, ಅದು ಇನ್ನೊಬ್ಬರಿಗೆ ಸ್ಫೂರ್ತಿಯಾಗಲೂ ಬಹುದು ಎಂದುಕೊಳ್ಳುತ್ತೇನೆ. ಮರುದಿನ ಬೆಳಗ್ಗೆ ಎದ್ದಾಗ ರಸ್ತೆ ಬದಿ ಮಲಗಿದ್ದವರ ಪ್ರತಿಕ್ರಿಯೆ ಹೇಗಿರಬಹುದು ಎಂದು ತಿಳಿದುಕೊಳ್ಳುತ್ತಾರೋ? ನಿಮಗೆ ಲಕ್ಷಾಂತರ ಜನರ ಪ್ರಾರ್ಥನೆ ಸಿಗಬಹುದು ಗುರ್ಬಾಝ್ ಅವರೇ. ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಹೇಳಿಕೊಂಡು ವಿಡಿಯೋ ಹಂಚಿಕೊಂಡಿದ್ದಾರೆ.

ರಸ್ತೆ ಬದಿ ಮಲಗಿದ್ದವರ ಬಗ್ಗೆ ರಹ್ಮಾನುಲ್ಲಾ ಗುರ್ಬಾಝ್ ಅವರ ಈ ಕಾಳಜಿಗೆ ನೆಟ್ಟಿಗರು ಫಿದಾ ಆಗಿದ್ದು, ತಮ್ಮ ತಮ್ಮ ವಾಲ್‌ಗಳಲ್ಲಿ ಹಂಚಿಕೊಂಡು, ‘ಪ್ರೀತಿ ಹರಿಸಿದ್ದಕ್ಕೆ ಧನ್ಯವಾದಗಳು’ ಎಂದು ಬರೆದುಕೊಳ್ಳುತ್ತಿದ್ದಾರೆ. ಈಗಾಗಲೇ ಈ ವಿಡಿಯೋವನ್ನು @mufaddal_vohra ಅವರ ಖಾತೆಯಿಂದಲೇ 4.7M ವೀಕ್ಷಣೆ ಪಡೆದಿದೆ.

ಅಫ್ಘಾನಿಸ್ತಾನದ ಆರಂಭಿಕ ಬ್ಯಾಟರ್ ರಹ್ಮಾನುಲ್ಲಾ ಗುರ್ಬಾಝ್ ಅವರು ಈ ಬಾರಿಯ ವಿಶ್ವಕಪ್‌ನಲ್ಲಿ ಒಂಭತ್ತು ಪಂದ್ಯಗಳಲ್ಲಿ ಒಟ್ಟು ಎರಡು ಅರ್ಧ ಶತಕದೊಂದಿಗೆ 280 ರನ್ ಗಳಿಸಿದ್ದರು. ಅದರಲ್ಲಿ 80 ರನ್ ಅವರ ಗರಿಷ್ಠ ಸ್ಕೋರ್ ಆಗಿತ್ತು. ಒಟ್ಟು 31 ಬೌಂಡರಿ ಹಾಗೂ 9 ಸಿಕ್ಸ್ ಅವರ ಬ್ಯಾಟ್‌ನಿಂದ ಬಂದಿತ್ತು. ತಂಡದ ಸಾಧನೆಯಲ್ಲಿ ಬ್ಯಾಟರ್‌ಗಳ ಪೈಕಿ 5ನೇ ಸ್ಥಾನದಲ್ಲಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!