Sunday, May 19, 2024

ಪ್ರಾಯೋಗಿಕ ಆವೃತ್ತಿ

ಸ್ಲಂ ನಿವಾಸಿಗಳ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ: ಗಣಿಗ ರವಿಕುಮಾರ್

ಮಂಡ್ಯ ನಗರದಲ್ಲಿರುವ ಎಲ್ಲಾ ಸ್ಲಂಗಳಿಗೂ ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಗಣಿಗ ರವಿಕುಮಾರ್ ಭರವಸೆ ನೀಡಿದರು.

ಮಂಡ್ಯ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಜನಶಕ್ತಿ ಅಂಗ ಸಂಘಟನೆ ಮಂಡ್ಯ ಜಿಲ್ಲಾ ಶ್ರಮಿಕ ನಿವಾಸಿಗಳ ಒಕ್ಕೂಟದಿಂದ ಅಭಿನಂದನೆ ಸ್ವೀಕರಿಸಿ ನಂತರ ಸಭೆ ನಡೆಸಿದರು. ಮಂಡ್ಯ ನಗರದಲ್ಲಿರುವ 24 ಸ್ಲಂಗಳಲ್ಲಿ ನಾನು ಇನ್ನು ಹಲವು ಸ್ಲಂಗಳಿಗೆ ಮುಂದಿನ ದಿನಗಳಲ್ಲಿ ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳನ್ನು ತಿಳಿದುಕೊಂಡು, ಅವುಗಳನ್ನು ಬಗೆಹರಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ.ಜನರಿಗೆ ಕೊಡಬೇಕಾದ ಮೂಲಭೂತ ಸೌಲಭ್ಯಗಳನ್ನು ಕೊಡಿಸಲು ಪ್ರಥಮ ಆದ್ಯತೆ ನೀಡುತ್ತೇನೆ. ಇದುವರೆಗೆ ಸ್ಲಂಗಳಲ್ಲಿ ಏನಾಗಿದೆಯೋ ಗೊತ್ತಿಲ್ಲ, ಆದರೆ ಐದು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಗಳು ಆಗುವಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದರು.

ಕರ್ನಾಟಕ ಜನಶಕ್ತಿಯ ಮುಖಂಡರಾದ ಎನ್. ನಾಗೇಶ್, ಸಿದ್ದರಾಜು, ಪ್ರಕಾಶ್, ಮಹಿಳಾ ಮುನ್ನಡೆಯ ಪೂರ್ಣಿಮಾ, ಸೌಮ್ಯ ಮತ್ತಿತರರು ನಗರದಲ್ಲಿರುವ ವಿವಿಧ ಸ್ಲಂ ಗಳಲ್ಲಿರುವ ಸಮಸ್ಯೆಗಳು, ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಸಕ ರವಿಕುಮಾರ್ ರವರಿಗೆ ಮಾಹಿತಿ ನೀಡಿದರು.ಅಲ್ಲದೆ ನೂತನ ಶಾಸಕರಾದ ಗಣಿಗ ರವಿಕುಮಾರ್ ಅವರ ಮೇಲೆ ಸ್ಲಂ ಜನರು ಬಹಳ ನಿರೀಕ್ಷೆಯಿಟ್ಟಿದ್ದು,ಸ್ಲಂಗಳು ಹಾಗೂ ಅಲ್ಲಿರುವ ಜನರ ಅಭಿವೃದ್ಧಿ ಬಗ್ಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಮಂಡ್ಯದ ಕಾಳಿಕಾಂಬ ದೇವಾಲಯದ ಹಿಂಭಾಗದಲ್ಲಿರುವ ಕಾಳಿಕಾಂಬ ಸ್ಲಂ ನಿವಾಸಿಗಳು ಅತಂತ್ರರಾಗಿದ್ದಾರೆ.ಅವರಿಗೆ ರಾಜೀವ್ ಆವಾಸ್ ಯೋಜನೆಯಡಿ ಮನೆ ನಿರ್ಮಾಣವಾಗಬೇಕಿತ್ತು. ಆದರೆ ಕಾಳಿಕಾಂಬ ಟ್ರಸ್ಟ್ ನವರು ಒಪ್ಪಂದದ ಕರಾರನ್ನು ಮುರಿದು ಹೈಕೋರ್ಟ್ ನಲ್ಲಿ ಕೇಸು ದಾಖಲಿಸಿದ್ದಾರೆ ಎಂಬ ಮಾಹಿತಿಯನ್ನು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಶಾಸಕ ರವಿಕುಮಾರ್ ಈ ಬಗ್ಗೆ ಕಾಳಿಕಾಂಬ ಟ್ರಸ್ಟ್ ಅಧ್ಯಕ್ಷರು ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ ಎಂದರು.

ಮಂಡ್ಯ ನಗರದ ಆರ್ ಟಿ ಓ ಕಚೇರಿ ಮುಂಭಾಗದಲ್ಲಿರುವ ಕಾಳಪ್ಪ ಬಡಾವಣೆಯಲ್ಲಿ ಈ ವಾರ ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳನ್ನು ತಿಳಿದು ಪರಿಹರಿಸುತ್ತೇನೆ. ಪ್ರತಿ ವಾರ ಒಂದೊಂದು ಸ್ಲಂ ಗಳಿಗೆ ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳು ಮತ್ತು ಆಗಬೇಕಾದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸುತ್ತೇನೆ. ಕೆರೆ ಅಂಗಳದ ಗಾಡಿ ಕಾರ್ಖಾನೆ, ಶ್ರಮಿಕ ನಗರ, ಸ್ಲಾಟರ್ ಹೌಸ್, ಇಂದಿರಾ ಬಡಾವಣೆ, ನ್ಯೂ ತಮಿಳು ಕಾಲೋನಿ ಸೇರಿದಂತೆ ವಿವಿಧ ಸ್ಲಂಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಮತ್ತು ಜನರ ಅಹವಾಲನ್ನು ಆಲಿಸುತ್ತೇನೆ ಎಂದು ಶಾಸಕ ರವಿಕುಮಾರ್ ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ಎಂ.ಎಸ್.ಚಿದಂಬರ್, ಪಳನಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!