Friday, September 20, 2024

ಪ್ರಾಯೋಗಿಕ ಆವೃತ್ತಿ

”ಜಪಾನ್‌ ದೇಶದಲ್ಲಿ ಭಾರತೀಯ ಸಂಸ್ಕೃತಿ ಪಸರಿಸಲಿರುವ ಮಂಡ್ಯದ ಹೈಕ್ಳು”

ಎಲ್ಲಿಯ ಜಪಾನ್….ಎಲ್ಲಿಯ ಮಂಡ್ಯ…. ಅರೆ ಏನಪ್ಪಾ ಇದು ಜಪಾನ್…ಮಂಡ್ಯ…ಅಂತೀರಾ….ಹೌದು, ದೂರದ ಜಪಾನ್ ದೇಶದಲ್ಲಿ ಮಂಡ್ಯದ ಹೈಕ್ಳು ಕರ್ನಾಟಕ ರಾಜ್ಯದ ಮತ್ತು ಭಾರತ ದೇಶದ ಆಚಾರ-ವಿಚಾರ, ಕಲೆ- ಸಾಹಿತ್ಯ,ಸಂಸ್ಕೃತಿ-ಸಂಪ್ರದಾಯಗಳ ಕಂಪನ್ನು ಪಸರಿಸಲಿದ್ದಾರೆ.

ಜಪಾನ್‌ನಲ್ಲಿ ಏ.23ರಿಂದ ನಡೆಯಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಮಂಡ್ಯ ತಾಲೂಕು ಸಿದ್ದಯ್ಯನಕೊಪ್ಪಲು ಗ್ರಾಮದ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್‌ನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಇಡೀ ರಾಜ್ಯದಲ್ಲಿ ವಿದೇಶಕ್ಕೆ ಆಯ್ಕೆ ಆದ ಶಾಲೆ ನಮ್ಮದು ಎನ್ನುವ ಹೆಗ್ಗಳಿಕೆ ರಿಪಬ್ಲಿಕ್ ಶಾಲೆಯದ್ದಾಗಿದೆ ಎಂದು ಶಾಲೆಯ ಅಧ್ಯಕ್ಷ ಮಂಜು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

nudikarnataka.com

ಮಂಡ್ಯ ಜಿಲ್ಲೆಯಿಂದ ನಾಲ್ಕು ಶಾಲೆಗಳು ಮಾತ್ರ ಜಪಾನ್‌ನಲ್ಲಿ ನಡೆಯಲಿರುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದವು.ಅವರಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳಾದ 7 ನೇ ತರಗತಿಯ ಶಾನ್ ಸ್ವೀವನ್ ಡಾಲ್ಮೇಡ ಹಾಗೂ 8ನೇ ತರಗತಿಯ ಧನ್ಯ ಜೆ.ಗೌಡ ಆಯ್ಕೆಯಾಗಿದ್ದಾರೆ. ಇವರು ಮಂಡ್ಯ ಜಿಲ್ಲೆಯ ಜನಪದ, ದೇಗುಲ ಸಂಸ್ಕೃತಿ, ಮದುವೆ ಪದ್ಧತಿ,ರಾಜ ಮನೆತನಗಳು, ಕೋಟೆ ಕೊತ್ತಲಗಳು, ಸ್ವಾತಂತ್ರ್ಯ ಹೋರಾಟಗಾರರು, ಆಧುನಿಕ ಶಿಕ್ಷಣ ಪದ್ಧತಿ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರದ ವಿವಿಧ ವಿಚಾರಗಳ ಬಗ್ಗೆ ಜಪಾನ್‌ನಲ್ಲಿ ಪರಿಚಯಿಸಿಕೊಡಲಿದ್ದಾರೆ ಎಂದು ತಿಳಿಸಿದರು.

ಒಳ್ಳೆಯ ಅನುಭವ
ಅಂತಾರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯು ಒಳ್ಳೆಯ ಅನುಭವ ನೀಡಿತು. ನಾನು ಮಂಡ್ಯ ಜಿಲ್ಲೆಯ ದೇಗುಲ ಸಂಸ್ಕೃತಿ, ಕೋಟೆಗಳು, ಭಾರತೀಯ ವಿವಾಹ ಪದ್ಧತಿ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿಷಯ ಮಂಡಿಸಿದ್ದೆ.ಇದು ನನಗೆ ಬಹಳ ಇಷ್ಟವಾಯಿತು ಎಂದು ಧನ್ಯ ಜೆ.ಗೌಡ ತಿಳಿಸಿದರು.

ಹೆಮ್ಮೆಯ ಸಂಗತಿ
ಜಪಾನ್ ಪ್ರವಾಸಕ್ಕೆ ಆಯ್ಕೆಯಾಗಿರುವುದು ತುಂಬಾ ಹೆಮ್ಮೆಯ ಸಂಗತಿ.ನಾನು ಜಪಾನ್ ದೇಶದಲ್ಲಿ ಭಾರತೀಯ ಸಂಸ್ಕೃತಿ, ಜನಪದ, ಪ್ರಜಾಪ್ರಭುತ್ವ ವ್ಯವಸ್ಥೆ, ಅಭಿವೃದ್ಧಿಯಂತಹ ವಿಷಯಗಳ ಬಗ್ಗೆ ನನ್ನ ಪ್ರಯತ್ನ ಮೀರಿ ವಿಷಯ ಮಂಡನೆ ಮಾಡುತ್ತೇನೆ ಎಂದು ಶಾನ್ ಸ್ಟೀವನ್ ಡಾಲ್ಮೇಡ ತಿಳಿಸಿದರು.

ಜಪಾನ್ ದೇಶದಲ್ಲಿ ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸಲಿರುವ ವಿದ್ಯಾರ್ಥಿಗಳೆಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಇವರಿಬ್ಬರು ಭಾರತದ ಭಾವೈಕ್ಯತೆಯನ್ನು ವಿದೇಶದಲ್ಲಿ ವಿನಿಮಯ ಮಾಡಲಿದ್ದಾರೆ. ಹಾಗೆಯೇ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಮತ್ತು ಉಪಯೋಗದ ಬಗ್ಗೆ ಅಧ್ಯಯನ ಮಾಡಲಿದ್ದಾರೆ. ಜಪಾನ್ ಸರಕಾರದ ಸಹಯೋಗದಲ್ಲಿರುವ ಹಿಥಾಮಿ ಇಂಟರ್‌ನ್ಯಾಷನಲ್ ಕಲ್ಚರಲ್ ಹೆಸರಿನ ಖಾಸಗಿ ಸಂಸ್ಥೆಯೊಂದು ಈ ಅಂತಾರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ ಆಯೋಜಿಸಿತ್ತು.ಈ ಕಾರ್ಯಕ್ರಮಕ್ಕೆ ಸುಮಾರು 43 ದೇಶಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆರು ಹಂತದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಶಾಲೆಯ ಮಕ್ಕಳು ಉತ್ತಮ ಪ್ರದರ್ಶನ ನೀಡಿ, ಜಪಾನ್ ಪ್ರವಾಸಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ ಎಂದರು.

nudikarnataka.com

ಜಪಾನ್‌ಗೆ ತೆರಳುತ್ತಿರುವ ಇಬ್ಬರೂ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯಿಂದಲೇ ಪಾಸ್‌ಪೋರ್ಟ್ ಮಾಡಿಸಿಕೊಡಲಾಗಿದೆ. ಉಳಿದಂತೆ ವಿಮಾನ ಪ್ರಯಾಣ ವೆಚ್ಚ, ವೀಸಾ ಹಾಗೂ ಇತರ ಸೌಲಭ್ಯಗಳು ಸೇರಿದಂತೆ ಪ್ರತಿ ವಿದ್ಯಾರ್ಥಿಗೆ ವೆಚ್ಚವಾಗುವ 1.50 ಲಕ್ಷ ರೂ.ಗಳನ್ನು ಹಿಥಾಮಿ ಇಂಟರ್‌ನ್ಯಾಷನಲ್ ಕಲ್ಚರಲ್ ಸಂಸ್ಥೆಯೇ ಭರಿಸುತ್ತಿದೆ. ಒಟ್ಟು 15 ದಿನಗಳ ಪ್ರವಾಸ ಇದಾಗಿದೆ ಎಂದು ವಿವರಿಸಿದರು.

ಚಟುವಟಿಕೆ ಆಧಾರಿತ ಶಿಕ್ಷಣ
ನಮ್ಮ ಶಾಲೆ 2021-22 ನೇ ಸಾಲಿನಲ್ಲಿ ಆರಂಭವಾಗಿದ್ದು, ಚಟುವಟಿಕೆ ಆಧಾರಿತ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಎಲ್ಕೆಜಿಯಿಂದ ಹತ್ತನೇ ತರಗತಿವರೆಗೆ ವ್ಯಾಸಾಂಗ ಮಾಡುತ್ತಿದ್ದಾರೆ. ಮಕ್ಕಳಿಗೆ ದೇಶೀಯ ಸಂಸ್ಕೃತಿ ಕಲಿಸಲಾಗುತ್ತಿದೆ. ಕರಾಟೆ, ಯೋಗ, ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ಮಕ್ಕಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ನಲಿ-ಕಲಿ ಕಾರ್ಯಕ್ರಮದಂತೆ ಚಟುವಟಿಕೆ ಆಧಾರಿತ ಬೋಧನೆ ಮಾಡಲಾಗುತ್ತಿದೆ ಎಂದರು.

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕೆಸರುಗದ್ದೆ ಓಟ ,ನೃತ್ಯ, ವೇಷಭೂಷಣ ಸ್ಪರ್ಧೆ,ಗಾಳಿಪಟ ಹಾರಾಟ ಸೇರಿದಂತೆ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಆದ್ಯತೆ ನೀಡಿದ್ದೇವೆ. ಮಕ್ಕಳು ಅವರ ತಂದೆ-ತಾಯಿ, ಗ್ರಾಮ ಪಂಚಾಯಿತಿ, ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆ ಹಾಗೂ ಬ್ಯಾಂಕಿಂಗ್ ವಿಷಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದೇವೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ ಎಂದರು.

ಗೋಷ್ಠಿಯಲ್ಲಿ ಜಪಾನ್ ಪ್ರವಾಸಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಾದ ಶಾನ್ ಸ್ಟೀವನ್ ಡಾಲ್ಮೇಡ, ಧನ್ಯ ಜೆ.ಗೌಡ, ಮಕ್ಕಳ ಪೋಷಕರಾದ ಜವನೇಗೌಡ, ಸ್ಟೀವನ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!