Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜಭವನ ಚಲೋ | ಬಾಕಿ ಪ್ರಕರಣಗಳ ಬಗ್ಗೆ ಪರಿಶೀಲನೆ; ರಾಜ್ಯಪಾಲರ ಭರವಸೆ

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಜನಾರ್ದನ ರೆಡ್ಡಿ ಅವರ ವಿರುದ್ಧ ತನಿಖೆಗೆ, ಕ್ರಮಕ್ಕೆ ಅನುಮತಿ ನೀಡದ ರಾಜ್ಯಪಾಲರ ತಾರತಮ್ಯ ನೀತಿಯನ್ನು ಖಂಡಿಸಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜಭವನ ಚಲೋ ನಡೆಸಲಾಯಿತು.

ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ನಿಯೋಗಕ್ಕೆ ಬಾಕಿ ಉಳಿದ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ.

ರಾಜ್ಯಪಾಲರ ಭೇಟಿಯ ನಂತರ ಡಿಸಿಎಂ ಡಿ ಕೆ ಶಿವಕುಮಾರ್ ಅವರು ರಾಜಭವನ ಬಳಿ ಮಾಧ್ಯಮದವರ ಜತೆ ಮಾತನಾಡಿ, “ನಾವು ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯನವರ ವಿರುದ್ಧ ನೀಡಿರುವ ಅಭಿಯೋಜನಾ ಮಂಜೂರಾತಿಯ ಬಗ್ಗೆ ಮಾತನಾಡಲು ಬಂದಿಲ್ಲ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಜನಾರ್ದನ ರೆಡ್ಡಿ ಅವರ ವಿರುದ್ಧ ತನಿಖೆಗೆ, ಕ್ರಮಕ್ಕೆ ಅನುಮತಿ ನೀಡಿ ಎಂದು ಕೇಳಲು ಬಂದಿದ್ದೆವು” ಎಂದು ತಿಳಿಸಿದರು.

“ರಾಜ್ಯಪಾಲರ ಕಚೇರಿ ರಾಜಕೀಯ ಕಚೇರಿ ಆಗಬಾರದು ಎಂಬುದು ನಮ್ಮ ಆಗ್ರಹ. ಸಂವಿಧಾನದ ಮೂಲಕ ರಚಿಸಲಾದ ರಾಜ್ಯಪಾಲರ ಹುದ್ದೆ ಬಹಳ ಪವಿತ್ರವಾದದ್ದು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ನಮ್ಮ ಸರ್ಕಾರವು ಜನರ ಅಭಿಲಾಷೆಯಂತೆ 136 ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಬಹುಮತದೊಂದಿಗೆ ಬಂದಿರುವ ಸರ್ಕಾರವಾಗಿದೆ. ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದು ರಾಜ್ಯಪಾಲರ ಕಚೇರಿಯಿಂದ ಆಗಬಾರದು ಎಂದು ನಾವು ಮನವಿ ಸಲ್ಲಿಸಿದ್ದೇವೆ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.

“ಬೇರೆಯವರ ದೂರಿನ ಆಧಾರದ ಮೇಲೆ ನಾನು ತನಿಖೆಗೆ ಅನುಮತಿ ನೀಡಿದ್ದೇನೆ. ನಾನಾಗಿಯೇ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ರಾಜ್ಯಪಾಲರು ಸಮರ್ಥನೆ ನೀಡಿದ್ದಾರೆ” ಎಂದು ತಿಳಿದುಬಂದಿದೆ.

ನಿಯೋಗದಲ್ಲಿ ಸಚಿವರಾದ ಜಿ.ಪರಮೇಶ್ವರ್, ರಾಮಲಿಂಗಾ ರೆಡ್ಡಿ, ಡಿ.ಸುಧಾಕರ್, ಹೆಚ್.ಕೆ. ಪಾಟೀಲ್, ಬೋಸರಾಜು, ಶರಣಪ್ರಕಾಶ್ ಪಾಟೀಲ್, ಜಮೀರ್ ಅಹ್ಮದ್, ಈಶ್ವರ್ ಖಂಡ್ರೆ, ವೆಂಕಟೇಶ್, ಎಸ್.ಎಸ್ ಮಲ್ಲಿಕಾರ್ಜುನ್ ದಿನೇಶ್ ಗುಂಡೂರಾವ್, ಶಾಸಕರಾದ ಶಿವಲಿಂಗೇಗೌಡ, ಪ್ರದೀಪ್ ಈಶ್ವರ್, ನಯನ ಮೋಟಮ್ಮ, ಕಂಪ್ಲಿ ಗಣೇಶ್, ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಯು. ಬಿ ವೆಂಕಟೇಶ್, ಸುಧಾಮ್ ದಾಸ್, ಐವಾನ್ ಡಿಸೋಜ, ಸಂಸದರಾದ ಶ್ರೇಯಸ್ ಪಟೇಲ್, ಹಿರಿಯ ಮುಖಂಡರಾದ ವೀರಪ್ಪ ಮೊಯ್ಲಿ, ಎಂ.ಆರ್ ಸೀತಾರಾಮ್, ವಿ.ಎಸ್ ಉಗ್ರಪ್ಪ, ಆರ್.ವಿ ದೇಶಪಾಂಡೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!