Saturday, May 18, 2024

ಪ್ರಾಯೋಗಿಕ ಆವೃತ್ತಿ

ಸ್ತ್ರೀ ಸಮಾನತೆಗೆ ಮಹತ್ವ ನೀಡಿದ ಕಾಂಗ್ರೆಸ್ ಸರ್ಕಾರ: ಶಾಸಕ ದಿನೇಶ್ ಗೂಳಿಗೌಡ

“ಒಂದು ಸಮಾಜದ ಬೆಳವಣಿಗೆಯನ್ನು ನಾವು ಆ ಸಮಾಜದ ಹೆಣ್ಣು ಮಕ್ಕಳ ಏಳ್ಗೆಯ ಮೇಲೆ ನಿರ್ಧರಿಸುತ್ತೇವೆ” ಎಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಅವರು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಹೆಜ್ಜೆ ಇಟ್ಟಿದೆ. ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಟೊಂಕ ಕಟ್ಟಿ ನಿಂತಿದೆ ಎಂದು ಶಾಸಕ ದಿನೇಶ್ ಗೂಳಿಗೌಡ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರವು ಅನೇಕ ಮಹಿಳಾ ಪರ ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ, ಮಹಿಳಾ ಸಬಲೀಕರಣದ ದೃಷ್ಟಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆ ಮೂಲಕ ಅಂಬೇಡ್ಕರ್ ಅವರ ಹಾಗೂ ಸಂವಿಧಾನದ ಆಶಯಗಳನ್ನು ಈಡೇರಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 8 ರಂದು ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳಾ ದಿನಾಚರಣೆಯ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ಸಿಗಬೇಕು ಎಂಬುದು ವಿಶ್ವಸಂಸ್ಥೆಯ ಆಶಯವೂ ಆಗಿದೆ. ಆ ಆಶಯವನ್ನು ಕರ್ನಾಟಕ ಸರ್ಕಾರ ತನ್ನ ಮಹಿಳಾ ಪರ ಯೋಜನೆಗಳ ಮೂಲಕ ಅಕ್ಷರಶಃ ಈಡೇರಿಸಿದೆ. ಇದೊಂದು ದಿನ ಮಾತ್ರವಲ್ಲದೆ ಪ್ರತಿದಿನವೂ, ಅನುಕ್ಷಣವೂ ಮಹಿಳಾ ದಿನವೇ ಆಗಿರಲಿ ಎಂಬುದು ನಮ್ಮ ಆಶಯವಾಗಿದೆ ಎಂದಿದ್ದಾರೆ.

ಮಹಿಳೆಯರಿಗೆ ಶಕ್ತಿ ನೀಡಿದ ಶಕ್ತಿ ಯೋಜನೆ

“ನನ್ನ ದೃಷ್ಟಿಯಲ್ಲಿ ಹೆಣ್ಣು ಕೇವಲ ಮಾನುಷಿಯಲ್ಲ. ಅಬಲೆಯೂ ಅಲ್ಲ. ಅವಳೊಂದು ಮಹಾ “ಶಕ್ತಿ” ಎಂದು ರಾಷ್ಟ್ರ ಕವಿ ಕುವೆಂಪು ಅವರು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ “ಶಕ್ತಿ” ಯೋಜನೆಯ ಮೂಲಕ ಮಹಿಳೆಯರಿಗೆ ಶಕ್ತಿ ತುಂಬಿದೆ. ಈವರೆಗೆ 166.55 ಕೋಟಿ ಮಹಿಳೆಯರು ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತವಾಗಿ ಟಿಕೆಟ್ ಪಡೆದು ಪ್ರಯಾಣ ಮಾಡಿದ್ದಾರೆ. ಅದಕ್ಕಾಗಿ ರಾಜ್ಯ ಸರ್ಕಾರ 3983 ಕೋಟಿ ರೂ.ಗಳನ್ನು ವ್ಯಯಿಸಿದೆ. ಇದರಿಂದ ರಾಜ್ಯಾದ್ಯಂತ ಎಲ್ಲ ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿಗರ ಸಂಖ್ಯೆ 3 ಪಟ್ಟು ಹೆಚ್ಚಿದೆ. ಪ್ರವಾಸಿ ಕೇಂದ್ರಗಳ ಸುತ್ತಲಿನ ಅಂಗಡಿ ಮುಂಗಟ್ಟುಗಳು ಸೇರಿ ವಿವಿಧ ಉಪ ಉದ್ಯೋಗಗಳಿಗೆ ಅನುಕೂಲವಾಗಿದೆ ಎಂದಿದ್ದಾರೆ.

“ಸ್ತ್ರೀ ಮತ್ತು ಪುರುಷರಲ್ಲಿ ಸ್ತ್ರೀಯರೇ ಶ್ರೇಷ್ಠ. ತ್ಯಾಗ, ಕರುಣೆ, ನಂಬಿಕೆ, ಜ್ಞಾನ, ಮತ್ತು ಕಷ್ಟ ಸಹಿಷ್ಣುತೆಯ ಸಾಕಾರ ರೂಪ ಮಹಿಳೆ” ಎಂದು ಮಹಾತ್ಮ ಗಾಂಧೀಜಿ ಹೇಳುತ್ತಾರೆ. “ಮನೆ ಮನೆಯಲಿ ದೀಪ ಮೂಡಿಸಿ, ಹೊತ್ತು ಹೊತ್ತು ಅನ್ನ ಉಣಿಸಿ, ತಂದೆ ಮಗುವ ತಬ್ಬಿದಾಕೆ, ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ ಎಂದು ಕವಿ ಜಿ.ಎಸ್. ಶಿವರುದ್ರಪ್ಪ ಅವರು ಮಹಿಳೆಯ ಮಹತ್ವವನ್ನು ಸಾರಿದ್ದಾರೆ. ಇದೆಲ್ಲವೂ ಸತ್ಯವೇ ಅಲ್ಲವೇ?

ಮಹಿಳೆಯರೇ ಯಜಮಾನಿಯರು

ಸ್ತ್ರೀ ತನ್ನ ಕಷ್ಟ ಸಹಿಷ್ಣುತೆಯ ಗುಣದಿಂದ ಇಡೀ ಸಂಸಾರದ ಜವಾಬ್ದಾರಿಯನ್ನು ಹೊತ್ತು ಪತಿಗೆ ಬೆನ್ನೆಲುಬಾಗಿ, ಮಕ್ಕಳ ಲಾಲನೆ – ಪಾಲನೆ, ಶಿಕ್ಷಣದ ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ. ತ್ಯಾಗ, ಕರುಣೆಯ ಗುಣಗಳಿಂದ “ಅಮ್ಮ”ನಾಗಿ, ಪತ್ನಿಯಾಗಿ, ಅಕ್ಕನಾಗಿ ಕುಟುಂಬವನ್ನು ಪೊರೆಯುತ್ತಾಳೆ. ಅಂಥ ಸ್ತ್ರೀಯನ್ನು ಆರ್ಥಿಕವಾಗಿ ಸಬಲಳನ್ನಾಗಿ ಮಾಡಿದರೆ, ಇಡೀ ಸಮಾಜವೇ ಸುಧಾರಿಸುತ್ತದೆ. ಇದರಿಂದ ಸರ್ಕಾರ ಆಕೆಯನ್ನೇ ಕುಟುಂಬದ “ಯಜಮಾನಿ” ಎಂದು ಪರಿಗಣಿಸಿ ಆಕೆಗೆ ಹಣ ನೀಡುವ ಕೆಲಸವನ್ನು ಮಾಡುತ್ತಿದೆ. ಗೃಹ ಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಪ್ರತಿ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ಮಾಸಿಕ 2 ಸಾವಿರ ರೂ.ಗಳನ್ನು ಜಮಾ ಮಾಡಲಾಗುತ್ತಿದೆ. ಇದುವರೆಗೆ 1.17 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮಾಸಿಕ 2 ಸಾವಿರ ರೂ. ಜಮಾ ಮಾಡಲಾಗುತ್ತಿದೆ. ಇದುವರೆಗೆ 11,726 ಕೋಟಿ ರೂ.ಗಳನ್ನೇ ನೇರವಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ.‌ 2024-25 ನೇ ಸಾಲಿಗೆ 28,608 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಪರಿಣಾಮ ಕುಟುಂಬಗಳ ನಿರ್ವಹಣೆಗೆ ಹಣವು ಮಹಿಳೆಯರಿಗೆ ಸಹಕಾರಿಯಾಗಿದೆ. ಕೆಲವರು ಈ ಹಣವನ್ನೇ ಬಂಡವಾಳವನ್ನಾಗಿ ಬಳಸಿ ಉಪ ಉದ್ಯೋಗವನ್ನು ಕಂಡುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!