Saturday, May 18, 2024

ಪ್ರಾಯೋಗಿಕ ಆವೃತ್ತಿ

ಫೆ.16ಕ್ಕೆ ಜನ ಚಳವಳಿಗಳ ಸಂಯುಕ್ತ ಚಲೋ ಬೃಹತ್ ಪ್ರತಿಭಟನಾ ಸಮಾವೇಶ

ಕರ್ನಾಟಕ ರಾಜ್ಯ ರೈತ ಸಂಘ, ಸಂಯುಕ್ತ ಹೋರಾಟ – ಕರ್ನಾಟಕದ ಕರೆ ಮೇರೆಗೆ ರೈತರ ಹಕ್ಕೊತ್ತಾಯಕ್ಕಾಗಿ ಫೆ.16ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ‘ಜನ ಚಳವಳಿಗಳ ಸಂಯುಕ್ತ ಚಲೋ ಬೃಹತ್‌ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಜೆ.ಪಿ.ಸರಕಾರ ರಾಜ್ಯದ ಜನರ ಪರಿಸ್ಥಿತಿಯನ್ನು ಅಧೋಗತಿಗೆ ಕೊಂಡೊಯ್ದಿದೆ. ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರ ವಶದಲ್ಲಿದ್ದ ಲಕ್ಷಾಂತರ ಎಕರೆ ಭೂಮಿಯನ್ನು ಕಪ್ಪು ಹಣದವರ ಪಾಲು ಮಾಡಿ ರೈತರ ಬದುಕನ್ನು ಕಿತ್ತುಕೊಂಡಿದೆ ಎಂದು ಆರೋಪಿದರು.

ಎ.ಪಿ.ಎಂ.ಸಿ.ಕಾಯ್ದೆಗೆ ತಿದ್ದುಪಡಿ ತಂದು ಕೃಷಿ ಉತ್ಪನ್ನಗಳ ಮಾರುಕಟ್ಟೆಗಳನ್ನು ಮುಚ್ಚುವ ಪರಿಸ್ಥಿತಿಗೆ ದೂಡಿದೆ. ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣೆ ಕಾಯ್ದೆ ಜಾರಿ ಮಾಡಿ ಹೈನುಗಾರಿಕೆಗೆ ದೊಡ್ಡ ಹೊಡೆತ ಕೊಟ್ಟಿದೆ, ಒಂದು ವರ್ಷಗಳ ಕಾಲ ನಡೆದ ಸುದೀರ್ಘ ಹೋರಾಟಕ್ಕೆ ಮಣಿದು ಕೇಂದ್ರ ಸರಕಾರ ರೈತ ವಿರೋಧಿ ಮೂರು ಕೃಷಿ ವಿರೋಧಿ ಮಸೂದೆಗಳನ್ನು ವಾಪಸ್ಸು ಪಡೆದಿದೆ, ಆದರೆ ರಾಜ್ಯ ಸರಕಾರ ಅಂತದ ಕಾಯಿದೆಗಳನ್ನು ಇನ್ನೂ ಮುಂದುವರೆಸುತ್ತಿದೆ ಎಂದು ದೂರಿದರು.

ಹತ್ತಿ, ಕೊಬ್ಬರಿ, ತೆಂಗು, ಅಡಿಕೆ, ತೊಗರಿ, ಬೆಳೆಗಳ ಬೆಲೆ ಕುಸಿದು ರೈತರು ಕಂಗಾಲಾಗಿದ್ದಾರೆ, ಕಬ್ಬಿಗೆ ಬೆಲೆ ನಿಗಧಿ ಮಾಡುವಂತೆ ಹಾಗೂ ಎಸ್.ಎ.ಪಿ. ಘೋಷಿಸುವಂತೆ ಒತ್ತಾಯಿಸಿ ಕಳೆದ 8 ತಿಂಗಳಿನಿಂದಲೂ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದು, ಮಂಡ್ಯದಲ್ಲಿ ಕಳೆದ 3 ತಿಂಗಳಿನಿಂದಲೂ ನಿರಂತರವಾಗಿ ಆಹೋರಾತ್ರಿ ಧರಣಿ ನಡೆಯುತ್ತಿದೆ. ಕಬ್ಬು ಬೆಳೆಗಾರರಿಗೆ ಸರಕಾರ ನ್ಯಾಯ ಒದಗಿಸುವುದಾಗಿ ಮಾತುಕೊಟ್ಟು ಮಾತಿಗೆ ತಪ್ಪಿದೆ. ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ಪರಿಹಾರದ ಹಣವನ್ನು ರೈತರಿಗೆ ಜಮಾ ಮಾಡಿಲ್ಲ, ಫಸಲು-ಪಹಣಿ ಬೆಲೆ ಏರಿಸಿ ರೈತರ ಜೇಬಿಗೆ ಕನ್ನ ಹಾಕಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತಾಪಿಗಳನ್ನು ಸಂಪೂರ್ಣ ನಿರ್ಲಕ್ಷ್ಯಮಾಡಿ ಆಡಳಿತ ನಡೆಸುತ್ತಿವೆ ಎಂದು ರೈತ ವಿರೋಧಿ ನಡೆಯನ್ನು ಸಮಾವೇಶದಲ್ಲಿ ಖಂಡಿಸಲಾಗುವುದು ಎಂದರು.

ರೈತ ಸಮುದಾಯವಲ್ಲದೆ ದಲಿತರ ಹಕ್ಕುಗಳನ್ನು ಒಂದೊಂದಾಗಿ ದಮನ ಮಾಡಲಾಗುತ್ತಿದೆ. ಕಾರ್ಮಿಕರ ಬದುಕನ್ನು ಕಿತ್ತುಕೊಂಡಿದೆ, ಉದ್ಯೋಗ ನೀಡದೆ ಯುವ ಜನತೆಗೆ ಮೋಸ ಮಾಡಿದೆ, ಮಹಿಳೆಯರ ಬದುಕಿಗೆ ಸ್ಪಂದಿಸುತ್ತಿಲ್ಲ, ವಿದ್ಯಾರ್ಥಿಗಳಿಗೆ ಭರವಸೆ ಇಲ್ಲದಂತಾಗಿದೆ, ಸಮಸ್ಯೆಗಳನ್ನು ಹೇಳುತ್ತಾ ಹೋದರೆ ಇನ್ನೂ ಸಾಲು- ಸಾಲಾಗುತ್ತವೆ, ರಾಜ್ಯದ ರೈತರು,ದುಡಿಯುವ ಜನರ ಬವಣಿಗಳನ್ನು ನಿವಾರಿಸಲು ಆಗ್ರಹಿಸಿ ಫೆಬ್ರವರಿ 16 ರಂದು ಬೆಂಗಳೂರು ಚಲೋ ಮತ್ತು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ರೈತರು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ರೈತ ಮುಖಂಡರಾದ ಎ.ಎಲ್.ಕೆಂಪೂಗೌಡ, ಲಿಂಗಪ್ಪಾಜಿ, ಪ್ರಸನ್ನ ಎನ್. ಗೌಡ, ಎಸ್.ಕೆ. ರವಿಕುಮಾರ್, ಬೊಮ್ಮೇಗೌಡ, ಶ್ರೀನಿವಾಸ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!