Monday, May 20, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಗೆಲುವಿನ ಮಾಸ್ಟರ್ ಮೈಂಡ್ ; ಮಾಜಿ ಐಎಎಸ್ ಆಫೀಸರ್ ಯಾರು ಗೊತ್ತೇ ?

ಕರ್ನಾಟಕ ಚುನಾವಣೆಯಲ್ಲಿ 224 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗಳಿಸಲು ಸಾಧ್ಯವಾಗುವಂತೆ ಮಾಡಿರುವುದು ‘4 ಎಸ್‌’ ಕಮಾಲ್ ಎಂದು ಮಾಧ್ಯಮಗಳು ಚರ್ಚಿಸುತ್ತಿವೆ. ಈ ಚರ್ಚೆಗೆ ಗ್ರಾಸವಾದ ನಾಲ್ಕು ‘ಎಸ್‌’ಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ತಂತ್ರಜ್ಞ ಸುನೀಲ್ ಕಣಗೋಲು ಪ್ರಮುಖ ಮೂರು ಹೆಸರುಗಳು. ಇವರ ನಡುವೆ ಕೇಳಿ ಬರುತ್ತಿರುವ ನಾಲ್ಕನೇ ‘ಎಸ್’ ಚುನಾವಣಾ ರಾಜಕೀಯಕ್ಕೆ ಹೊಸ ಹೆಸರಾಗಿರಬಹುದು. ಆದರೆ, ಕರ್ನಾಟಕದ ಪ್ರಗತಿಪರ- ಸಾಮಾಜಿಕ ಕಾರ್ಯಕರ್ತರ ವಲಯದಲ್ಲಿ ಪರಿಚಿತ ಹೆಸರು. ಅವರೇ ಸಸಿಕಾಂತ್ ಸೆಂಥಿಲ್.

ಬೆಂಗಳೂರಿನಲ್ಲಿ ಕಾಂಗ್ರೆಸ್ ವಾರ್ ರೂಂ ನೇತೃತ್ವ ವಹಿಸಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾರ್ಯಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ 44 ವರ್ಷದ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್. ಭಾರತ್ ಜೋಡೋ ಪ್ರಚಾರಾಭಿಯಾನ ಕರ್ನಾಟಕಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಸಾಮಾಜಿಕ ಕಾರ್ಯಕರ್ತರ ನಡುವೆ ಕೊಂಡಿಯಾಗಿ ಕೆಲಸ ಮಾಡಿದವರು. ಭಾರತ್ ಜೋಡೋ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರ ಚುಟುಕು ಸಭೆಗಳು, ಮಾತುಕತೆ ಮತ್ತು ಜನ ಸಂಪರ್ಕದ ಕಾರ್ಯಕ್ರಮಗಳನ್ನು ಸಂಯೋಜನ ಮಾಡಿದ್ದು, ಸೆಂಥಿಲ್ ಮತ್ತು ಅವರ ತಂಡ ಶ್ರಮ ವಹಿಸಿದೆ.

ಜನಸಂಪರ್ಕದ ಮೇಲೆ ವಿಶ್ವಾಸ

“ತಳಮಟ್ಟದಲ್ಲಿ ಬಿಜೆಪಿ- ಆರ್‌ಎಸ್‌ಎಸ್ ಬಹಳ ಆಳವಾಗಿ ಬೇರೂರಿದೆ ಎನ್ನುವುದು ದೊಡ್ಡ ಸುಳ್ಳು. ಪನ್ನಾ ಪ್ರಮುಖರು ಪ್ರತೀ ಗ್ರಾಮದಲ್ಲಿ ತಮ್ಮ ಕಾರ್ಯಕರ್ತರು ಇದ್ದಾರೆ ಎಂದು ಹೆಮ್ಮೆ ಪಡುತ್ತಾರೆ. ಆದರೆ, ಪ್ರತೀ ಗ್ರಾಮದಲ್ಲಿ ಕನಿಷ್ಠ 10 ಮಂದಿಯಾದರೂ ಕಾಂಗ್ರೆಸ್ ಪರವಾದ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಹೊಂದಿದವರು ಇದ್ದಾರೆ. ಈ ಬಗ್ಗೆ ಸವಾಲೊಡ್ಡಿದರೆ ಸಾಬೀತು ಮಾಡಲು ನಾನು ಸಿದ್ಧ. ನನ್ನ ಅಭಿಪ್ರಾಯದಲ್ಲಿ ಅವರೇ ನಮ್ಮ ಕಾಂಗ್ರೆಸ್ ಕಾರ್ಯಕರ್ತರು. ಅವರು ಪಕ್ಷದ ಸಿದ್ಧಾಂತವನ್ನು ನಂಬುತ್ತಾರೆ ಮತ್ತು ಅದರೊಂದಿಗೆ ಬಲವಾಗಿ ಗುರುತಿಸಿಕೊಳ್ಳುತ್ತಾರೆ. ಅವರೊಂದಿಗೆ ನಾವು ಸಂಪರ್ಕ ಬೆಳೆಸಿದರೆ ಹೇಗಿರುತ್ತದೆ? ಇಲ್ಲಿ ಆ ಸಂಪರ್ಕ ಕಡಿದು ಹೋಗಿದೆ. ನಾವು ತಳಮಟ್ಟದಲ್ಲಿ ಬಲವಾಗಿದ್ದೇವೆ ಎನ್ನುವುದಲ್ಲ. ಈ ಯೋಜನೆ ಇಟ್ಟುಕೊಂಡೇ ನಾವು ತಳಮಟ್ಟದಲ್ಲಿ ಸಂಪರ್ಕ ಬೆಳೆಸಲು ಮಾದರಿ ಸೃಷ್ಟಿಸಲಿದ್ದೇವೆ” ಎಂದು ಸೆಂಥಿಲ್ ಮಾಧ್ಯಮವೊಂದರ ಜೊತೆಗೆ ಮಾತನಾಡುತ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ವಿರುದ್ಧ ರಾಜ್ಯದಲ್ಲಿ ಭ್ರಷ್ಟಾಚಾರ ವಿರೋಧಿ ಪ್ರಚಾರಾಭಿಯಾನವನ್ನು ಕಾಂಗ್ರೆಸ್ ಯಶಸ್ವಿಯಾಗಿ ನಡೆಸಿದೆ. ಮುಖ್ಯವಾಗಿ ‘40% ಕಮಿಷನ್ ಸರ್ಕಾರ’ ಎನ್ನುವ ಬಿರುದನ್ನು ಬಿಜೆಪಿ ಸರ್ಕಾರಕ್ಕೆ ಕೊಟ್ಟಿದ್ದರು. ಹೊಸತನವಿದ್ದ ಪ್ರಚಾರಾಭಿಯಾನ ಎಂದರೆ ‘ಪೇಸಿಎಂ’ ಅಭಿಯಾನ. ಕ್ಯುಆರ್ ಕೋಡ್ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರ ಫೋಟೋಗ್ರಾಫ್ ಇರುವ ‘ಪೇಸಿಎಂ’ ಪೋಸ್ಟರ್‌ಗಳನ್ನು ರಾಜ್ಯಾದ್ಯಂತ ಪ್ರಸಾರ ಮಾಡಲಾಗಿತ್ತು. ರಾಜ್ಯ ಸರ್ಕಾರ ಈ ‘ಪೇಸಿಎಂ’ ಪ್ರಚಾರ ವಿರುದ್ಧ ಅಧಿಕೃತ ಕ್ರಮ ಕೈಗೊಳ್ಳುವ ಒತ್ತಡಕ್ಕೆ ಬಿದ್ದಿತ್ತು. ಭಾರತ್ ಜೋಡೋದಲ್ಲಿ ‘ಪೇಸಿಎಂ’ ಪೋಸ್ಟರ್ ಹಾಕಿಕೊಂಡಿದ್ದ ಯುವಕನನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ನಗರಗಳಲ್ಲಿ ಅಂಟಿಸಿದ್ದ ಪೋಸ್ಟರ್‌ಗಳನ್ನು ಪೊಲೀಸರೇ ಕಿತ್ತೆಸೆದರು. ಬೊಮ್ಮಾಯಿ ಹೈದರಾಬಾದ್‌ಗೆ ಹೋದಾಗ, ತೆಲಂಗಾಣದಲ್ಲೂ ಈ ಪೋಸ್ಟರ್‌ಗಳು ಪ್ರದರ್ಶನಗೊಂಡವು. ‘40% ಕಮಿಷನ್‌ ಸಿಎಂಗೆ ಸ್ವಾಗತ’ ಎನ್ನುವ ಬ್ಯಾನರ್‌ಗಳು ಹೈದರಾಬಾದ್‌ನಲ್ಲಿ ಎಲ್ಲೆಡೆ ಪ್ರದರ್ಶನಗೊಂಡಿದ್ದವು. ಈ ಬಾರಿಯ ಕಾಂಗ್ರೆಸ್‌ ಚುನಾವಣಾ ಪ್ರಚಾರದಲ್ಲಿ ಕಂಡ ಇಂಥಹ ವಿಶೇಷಗಳಿಗೆ ‘ತೆರೆಯ ಹಿಂದಿನ ಚುನಾವಣಾ ತಂತ್ರಜ್ಞರು’ ಕಾರಣ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ಕೋಮು ಸೂಕ್ಷ್ಮ ಜಿಲ್ಲೆಯ ಜಿಲ್ಲಾಧಿಕಾರಿ

ತಮಿಳುನಾಡು ಮೂಲದವರಾದ 2009 ಬ್ಯಾಚ್‌ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಸೆಂಥಿಲ್ ಅವರು ಕೋಮು ಸೂಕ್ಷ್ಮ ಜಿಲ್ಲೆಯಾಗಿರುವ ದಕ್ಷಿಣ ಕನ್ನಡದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ 2019 ಸೆಪ್ಟೆಂಬರ್‌ನಲ್ಲಿ ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. “ನಮ್ಮ ವೈವಿಧ್ಯಮಯ ಪ್ರಜಾಸತ್ತೆಯ ಮೂಲಭೂತ ರಚನೆಯ ಜೊತೆಗೆ ಅಭೂತಪೂರ್ವ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿರುವ ಸಂದರ್ಭದಲ್ಲಿ ಸರ್ಕಾರದಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸುವುದು ಅನೈತಿಕ. ಮುಂಬರುವ ದಿನಗಳಲ್ಲಿ ನಮ್ಮ ರಾಷ್ಟ್ರದ ಮೂಲ ಸ್ವರೂಪ ಅತಿ ಕಠಿಣ ಸವಾಲುಗಳನ್ನು ಎದುರಿಸಲಿದೆ ಎಂದು ನನಗೆ ಬಲವಾಗಿ ಅನಿಸುತ್ತಿದೆ ಮತ್ತು ಎಲ್ಲರಿಗೂ ಜೀವನ ಸುಂದರವಾಗಿಸಲು ಐಎಎಸ್‌ನಿಂದ ಹೊರಗೆ ಕೆಲಸ ಮಾಡುವುದೇ ಸೂಕ್ತ ಎಂದು ನನಗೆ ಅನಿಸಿದೆ” ಎಂದು ಅವರು ರಾಜೀನಾಮೆ ಸಂದರ್ಭದಲ್ಲಿ ಹೇಳಿದ್ದರು.ಬಲಪಂಥೀಯರ ವಿರುದ್ಧ ಕಠಿಣ ನಿಲುವು ತಳೆದಿರುವ ಹೊರತಾಗಿಯೂ 2017 ಜೂನ್‌ನಿಂದ 2019 ಸೆಪ್ಟೆಂಬರ್ ನಡುವೆ ಸೆಂಥಿಲ್ ಅವರು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದಾಗ ಕೈಗೊಂಡ ಜನಪರ ಕೆಲಸಗಳು, ಮರಳು ಮಾಫಿಯಾ ಮತ್ತು ಇತರ ರಾಜಕೀಯ ನೇತಾರರ ನಡುವಿನ ಅಪವಿತ್ರ ಮೈತ್ರಿ ವಿರುದ್ಧ ಕಠಿಣ ಕ್ರಮಗಳ ಬಗ್ಗೆ ಬಿಜೆಪಿ ಕಾರ್ಯಕರ್ತರ ಒಂದು ವರ್ಗವೂ ಪ್ರಶಂಸಿಸಿದೆ. ಪ್ರವಾಹದ ಸಂದರ್ಭವನ್ನು ನಿಭಾಯಿಸಿರುವ ರೀತಿ ಜನರ ಮೆಚ್ಚುಗೆ ಗಳಿಸಿತ್ತು. ಮಳೆಗಾಲದಲ್ಲಿ ಶಾಲೆಗಳಿಗೆ ಹೆಚ್ಚು ರಜೆಗಳನ್ನು ಘೋಷಿಸಿ ಮಕ್ಕಳ ಅಭಿಮಾನವನ್ನೂ ಗಳಿಸಿಕೊಂಡಿದ್ದರು.

nudikarnataka.com

ಸಮಾಜ ಸೇವೆಯ ಬದ್ಧತೆ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)/ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಕಾಯ್ದೆಗಳನ್ನು ಕಟುವಾಗಿ ಟೀಕಿಸಿರುವ ಸೆಂಥಿಲ್ ಅವರು, ಈ ಕಾಯ್ದೆಗಳ ವಿರುದ್ಧ ಪ್ರತಿಭಟನಾನಿರತ ಜನರು ಮತ್ತು ಸಾಮಾಜಿಕ ಕಾರ್ಯಕರ್ತರೊಂದಿಗೆ ಸಂವಹನಕ್ಕಾಗಿ ರಾಷ್ಟ್ರದಾದ್ಯಂತ ಪ್ರಯಾಣಿಸಿದ್ದಾರೆ. ನಂತರ ಸೈದ್ಧಾಂತಿಕವಾಗಿ ಸಮಾಜವಾದಿಯಾಗಿರುವ ಸೆಂಥಿಲ್ ಕಾಂಗ್ರೆಸ್ ಜೊತೆಗೂಡಲು ನಿರ್ಧರಿಸಿದರು. 2020 ನವೆಂಬರ್‌ನಲ್ಲಿ ತಮಿಳುನಾಡು ಪಕ್ಷದ ಹಿರಿಯ ನಾಯಕ ಕೆ ಎಸ್ ಅಳಗಿರಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಆಗಿನ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ, “ಸೆಂಥಿಲ್ ಹಿಂದಿನಿಂದಲೂ ಸಮಾಜಸೇವೆಗಾಗಿ ಜನರೊಂದಿಗೆ ಕೆಲಸ ಮಾಡಿದವರು. ಪಕ್ಷಕ್ಕೆ ಸೇರಿದ ಮೇಲೂ ಅದನ್ನೇ ಮುಂದುವರಿಸಲಿದ್ದಾರೆ” ಎಂದು ಬರೆದಿದ್ದರು. ತಾವು ಬಹುವಾಗಿ ಪ್ರೀತಿಸುವ ದೇಶದಲ್ಲಿ ಬಹುತ್ವದ ದಾಳಿಯನ್ನು ತಡೆಯಲು ವಿಧಾನವನ್ನು ಹುಡುಕುತ್ತಿರುವುದಾಗಿ ಆಗ ಸೆಂಥಿಲ್ ಹೇಳಿದ್ದರು.

ಸೆಂಥಿಲ್ ಅವರು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಅನೇಕ ಮಂದಿಯನ್ನು ಭೇಟಿಯಾಗಿದ್ದರು. ಅನೇಕ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು. ಸಿಎಎ/ಎನ್‌ಆರ್‌ಸಿ ಚಳವಳಿ ಜೊತೆಗೂ ಸೇರಿಕೊಂಡರು. ಈ ಜನಸಂಪರ್ಕದಲ್ಲಿ ಅವರು ‘ದೇಶದ ಜನರು ಪರಸ್ಪರರ ಜೊತೆಗೂಡಿ ಬಾಳಲು ಬಯಸಿದ್ದಾರೆ’ ಎನ್ನುವುದನ್ನು ಅರಿತುಕೊಂಡಿದ್ದರು.

ಕಾಂಗ್ರೆಸ್ ಪಕ್ಷದ ಸಂಪರ್ಕ

ಆರಂಭದಲ್ಲಿ ಸೆಂಥಿಲ್ ಕಾಂಗ್ರೆಸ್ ತರಬೇತಿ ಹಂತದಲ್ಲಿ ಕೆಲಸ ಮಾಡಿದ್ದರು. 2021ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಚೆನ್ನೈನಲ್ಲಿ ಪಕ್ಷದ ವಾರ್‌ರೂಂನಲ್ಲಿ ಕೆಲಸ ಮಾಡಿದ್ದರು. ಸೆಂಥಿಲ್ ಅವರು ರಾಜಕೀಯದ ಬಗ್ಗೆ ಆಳವಾದ ಒಳನೋಟ ಹೊಂದಿರುವುದರಿಂದ ಅವರನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ವಾರ್‌ರೂಂ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು.

2013-14ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ಅವರ ಅನುಭವದಿಂದಾಗಿ ಪಕ್ಷಕ್ಕೆ ಕೆಲವು ಪ್ರಮುಖ ಸ್ಥಳೀಯ ನಾಯಕರನ್ನು ಕರೆತರಲು ಸಾಧ್ಯವಾಗಿತ್ತು. ಬಿಜೆಪಿಯಿಂದ ಕೆಲವು ದಲಿತ (ಎಡ) ನಾಯಕರನ್ನು ಕಾಂಗ್ರೆಸ್‌ ತೆಕ್ಕೆಗೆ ತರುವಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಜನಪರ ಅಧಿಕಾರಿ ಎಂದು ಹೆಸರು ಮಾಡಿದ್ದ ಅವರು, ತೆರೆಮರೆಯಲ್ಲಿದ್ದುಕೊಂಡು ಚುನಾವಣಾ ಕಣದಲ್ಲಿ ಕೆಲಸ ಮಾಡಿ, ಯಶಸ್ವಿಯಾಗಿದ್ದು, ರಾಜ್ಯದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!