Wednesday, July 24, 2024

ಪ್ರಾಯೋಗಿಕ ಆವೃತ್ತಿ

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕುರುಡು ಕಾಂಚಾಣದ ಕುಣಿತ

ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕುರುಡು ಕಾಂಚಾಣ ಈ ಬಾರಿ ಹಿಂದೆಂದಿಗಿಂತಲೂ ಜೋರಾಗಿಯೇ ಕುಣಿದಿದೆ. ಕುರುಡು ಕಾಂಚಾಣದ ಕುಣಿತಕ್ಕೆ ದಕ್ಷಿಣ ಪದವೀಧರ ಕ್ಷೇತ್ರದ ಮತದಾರರು ಫುಲ್ ಖುಷಿಯಾಗಿದ್ದರೆ, ಅಭ್ಯರ್ಥಿಗಳು ನಾವು ಖರ್ಚು ಮಾಡಿದ ಹಣದ ಲೆಕ್ಕ ಕಂಡು ಕಂಗಾಲಾಗಿದ್ದಾರೆ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಶತಾಯಗತಾಯ ಗೆಲ್ಲಲೇಬೇಕೆಂದು ಅಗತ್ಯ ಮೀರಿ ಖರ್ಚು ಮಾಡಿದ್ದರೆ, ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗಳಷ್ಟು ಅಲ್ಲವಾದರೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ತಕ್ಕ ಮಟ್ಟಿಗೆ ಕೈ ಬಿಚ್ಚಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ದಾಖಲೆಯ ಶೇ. 69.88 ರಷ್ಟು ಮತದಾನವಾಗಿರುವುದನ್ನು ನೋಡಿದರೆ ಇದರ ಹಿಂದಿರುವ ಕಾರಣ ಕಾಂಚಾಣ ಎಂಬ ಸತ್ಯ ಎಂಥವರಿಗೂ ಕೂಡ ಅರ್ಥವಾಗುತ್ತದೆ. ಪದವೀಧರ ಮತದಾರರು ದೊಡ್ಡ ಸಂಖ್ಯೆಯಲ್ಲಿ ಮತದಾನ ಮಾಡಿರುವುದನ್ನು ನೋಡಿದರೆ ಕ್ಷೇತ್ರದಲ್ಲಿ ಕಾಂಚಾಣದ ಕರಾಮತ್ತು ಹೇಗಿತ್ತು ಎಂಬುದು ತಿಳಿಯುತ್ತದೆ.

ಪದವೀಧರ ಮತದಾರರು ಯಾರು? ಯಾವ ನಗರದಲ್ಲಿ , ಹಳ್ಳಿಯಲ್ಲಿ ಎಷ್ಟು ಮತಗಳಿವೆ ಎಂಬುದನ್ನು ಮೊದಲೇ ತಿಳಿದಿದ್ದ ಅಭ್ಯರ್ಥಿಗಳು, ಪಕ್ಷಗಳ ನಾಯಕರು ಒಂದು ವ್ಯವಸ್ಥಿತವಾದ ನೀಲಿನಕ್ಷೆ ಸಿದ್ಧಪಡಿಸಿಕೊಂಡು ಬಹುತೇಕ ಪದವೀಧರ ಮತದಾರರಿಗೆ ಕೊಡಬೇಕಾದ ಹಣ ಕೊಟ್ಟು ಬಂದಿದ್ದಾರೆ. ಅಭ್ಯರ್ಥಿಗಳ ಬೆಂಬಲಿಗರು ಹಾಗೂ ಪಕ್ಷಗಳ ಕಾರ್ಯಕರ್ತರು ಪಟ್ಟಿ ಮಾಡಿಕೊಂಡು, ಆ ಪಟ್ಟಿಯ ಪ್ರಕಾರವೇ ಮತದಾರರಿಗೆ ಹಣ ತಲುಪಿಸಿದ್ದಾರೆ. ಹಣ ಹಂಚಿಕೆ ಮಾಡುವ ಸಂದರ್ಭದಲ್ಲಿ ಹಲವು ಅಭ್ಯರ್ಥಿಗಳು ಹಣದ ಜೊತೆಗೆ ದೇವರ ಪೋಟೋ ಕೊಟ್ಟು ಆಣೆ ಮಾಡಿಸಿಕೊಂಡಿದ್ದಾರೆ.

ಗೂಗಲ್ ಪೇ, ಫೋನ್ ಪೇ, ಖಾತೆಗೆ ವರ್ಗಾವಣೆ ಮತ್ತು ಮತದಾರರ ಮನೆ ಬಾಗಿಲಿಗೆ ಹೋಗಿ ನಗದು ತಲುಪಿಸಲಾಗಿದೆ. ರಾಷ್ಟ್ರೀಯ ಪಕ್ಷಗಳ ಜೊತೆ ಒಂದಿಬ್ಬರು ಹಣವಿರುವ ಪಕ್ಷೇತರರು ಸೇರಿಕೊಂಡು ಹಣ ಹಂಚಿದ ಪರಿಣಾಮ ಈ ಬಾರಿ ಚುನಾವಣಾ ಕಣ ಹಿಂದೆಂದಿಗಿಂತಲೂ ರಂಗೇರಲು ಕಾರಣವಾಗಿದೆ.

ಕಳೆದ ಬಾರಿ ನಡೆದ ಚುನಾವಣೆಯ ಬೇರೆ,ಈ ಬಾರಿ ನಡೆದ ಚುನಾವಣೆಯೇ ಬೇರೆ. ಈ ಬಾರಿ ಹಿಂದಿನ ಎಲ್ಲಾ ಚುನಾವಣೆಗಳಲ್ಲೂ ಆಗದಷ್ಟು ದಾಖಲೆಯ ಮತದಾನ ಆಗಿರುವುದರ ಹಿಂದಿನ ಗುಟ್ಟು ಕಾಂಚಣ ಎಂದು ಹೆಸರೇಳದ ಪಕ್ಷದ ನಾಯಕರೊಬ್ಬರ ನುಡಿ.

ಈ ಬಾರಿಯ ಚುನಾವಣೆ ಇಂದಿನ ಚುನಾವಣೆಗಳನ್ನು ಮೀರಿಸಿದೆ. ಮತದಾನ ನಡೆದ ಸರ್ಕಾರಿ ಮಹಾವಿದ್ಯಾಲಯಲ್ಲಿ ಮತದಾನ ಮಾಡಲು ಬಂದ ಪದವೀಧರರ ಉದ್ದನೆಯ ಸಾಲು ನೋಡಿದ ಕೂಡಲೇ ಯಾವ ಪ್ರಮಾಣದಲ್ಲಿ ಮತದಾರರನ್ನು ಅಭ್ಯರ್ಥಿಗಳು ವೈಯಕ್ತಿಕವಾಗಿ ತಲುಪಿದ್ದಾರೆ ಎಂಬುದು ತಿಳಿದುಹೋಯಿತು.

ಈ ಬಾರಿಯ ವಿಧಾನಪರಿಷತ್ ಚುನಾವಣೆ ವಿಧಾನಸಭಾ ಚುನಾವಣೆಯನ್ನೂ ಮೀರಿಸುವಂತೆ ನಡೆಯಿತು. ವಿಧಾನಸಭೆಯಲ್ಲಿ ಒಂದು ಮತಕ್ಕೆ ಇಷ್ಟು ಎಂದು ನಿಗದಿ ಪಡಿಸಿದಂತೆ ಇಲ್ಲೂ ಕೂಡ ನಿಗದಿ ಮಾಡಲಾಗಿತ್ತು. ಶೇ.100ಕ್ಕೆ 60ರಿಂದ 70ರಷ್ಟು ಮತದಾರರು ಅಭ್ಯರ್ಥಿಗಳು ಕಳಿಸಿದ ಹಣ ಪಡೆದಿದ್ದಾರೆ.

ಪ್ರಾಶಸ್ತ್ಯದ ಮತದಾನ ಇದ್ದುದರಿಂದ ನಾಲ್ಕರಿಂದ ಐದು ಮಂದಿ ಗೆಲುವಿಗಾಗಿ ಕೋಟ್ಯಂತರ ಹಣವನ್ನು ಖರ್ಚು ಮಾಡಿದ್ದಾರೆ. ಅದರಲ್ಲೂ ರಾಷ್ಟ್ರೀಯ ಪಕ್ಷಗಳ ಮತ್ತು ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಿದರು ಎಂಬುದು ಪ್ರಮುಖ ರಾಜಕೀಯ ನಾಯಕರೊಬ್ಬರ ಮಾತು.

ವಿಧಾನ ಪರಿಷತ್ ಬುದ್ಧಿಜೀವಿಗಳ, ಚಿಂತಕರ ಚಾವಡಿ ಎಂದು ಹೇಳಲಾಗುತ್ತದೆ.ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ವಿಧಾನ ಪರಿಷತ್ ನಲ್ಲಿ ಗಂಭೀರವಾದ ಚರ್ಚೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಬುದ್ಧಿಜೀವಿಗಳು, ವಿಚಾರವಂತರು ಬರಬೇಕು ಎಂಬ ವಾದ ಬಹಳ ಹಳೆಯದಾಗಿದೆ.ಈಗೇನಿದ್ದರೂ ವಿಧಾನಪರಿಷತ್ ಸದಸ್ಯನಾಗಲು ಕೋಟಿ ಕೋಟಿ ಹಣ ಖರ್ಚು ಮಾಡಬೇಕಾಗಿದೆ.

ಕೋಲಾರದ ಪ್ರಾದೇಶಿಕ ಪಕ್ಷದ ಶಾಸಕರೊಬ್ಬರು ಪ್ರಾದೇಶಿಕ ಪಕ್ಷದಿಂದ ವಿಧಾನಪರಿಷತ್ ಸದಸ್ಯನಾದ ವ್ಯಕ್ತಿಯೊಬ್ಬ ಆ ಪಕ್ಷದ ಎಲ್ಲಾ ಶಾಸಕರಿಗೆ ತಲಾ 50 ಲಕ್ಷ ನೀಡಿದ್ದರು ಎಂಬುದು ನೂರಕ್ಕೆ ನೂರರಷ್ಟು ಸತ್ಯ ಎಂಬುದು ಪ್ರಾದೇಶಿಕ ಪಕ್ಷದ ಮುಖಂಡರೊಬ್ಬರ ಅಭಿಪ್ರಾಯವಾಗಿದೆ.

ನನಗೂ ಇಬ್ಬರು ಅಭ್ಯರ್ಥಿಗಳ ಕಡೆಯವರು ಹಣ ನೀಡಲು ಬಂದಿದ್ದರು. ನಾನು ನಿರುದ್ಯೋಗಿ ಪದವೀಧರನೇ ಇರಬಹುದು. ನಮಗೆ ಉದ್ಯೋಗ ಬೇಕೇ ಹೊರತು ನೀವು ಕೊಡುವ ಈ ಚಿಲ್ಲರೆ ಕಾಸು ನಮಗೆ ಬೇಡ ಎಂದು ಹೇಳಿ ಕಳುಹಿಸಿದೆ. ಮತದಾನ ನನ್ನ ಹಕ್ಕು ಆಮಿಷಕ್ಕೆ ಒಳಗಾಗಿ ಮತ ಹಾಕುವುದಿಲ್ಲ ಎಂದು ನೇರವಾಗಿ ಹೇಳಿ ಕಳುಹಿಸಿದೆ.

ನನಗೆ ಸೂಕ್ತವೆಂದು ಕಾಣಿಸಿದ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಮತ ಹಾಕಲು ಬಂದ ಪದವೀಧರ ಮತದಾರನೊಬ್ಬನ ನೇರ,ದಿಟ್ಟ ಮಾತು.ಇಂತಹ ಯುವಜನರು ಸಾಕಷ್ಟು ಸಂಖ್ಯೆಯಲ್ಲಿ ನಮ್ಮೊಂದಿಗಿದ್ದಾರೆ ಎಂಬುದು ಹೆಮ್ಮೆಯ ವಿಷಯ.

ಒಟ್ಟಾರೆ ಈ ಬಾರಿಯ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಯಾರೂ ಊಹಿಸದಷ್ಟು ಹಣವನ್ನು ಅಭ್ಯರ್ಥಿಗಳು ಬಂಡವಾಳವಾಗಿ ಹೂಡಿದ್ದಾರೆ. ಯಾರ ಬಂಡವಾಳ ಗೆಲುವಿನ ರೂಪದಲ್ಲಿ ಹೊರಬರುತ್ತದೋ,ಯಾರದು ಬರುವುದಿಲ್ಲವೋ ಎಂಬುದು ನಾಳಿನ ಫಲಿತಾಂಶದಿಂದ ತಿಳಿಯಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!