Wednesday, September 18, 2024

ಪ್ರಾಯೋಗಿಕ ಆವೃತ್ತಿ

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ : ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್

ತೀವ್ರ ಕುತೂಹಲ ಕೆರಳಿಸಿದ್ದ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ 12,205 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ದಕ್ಷಿಣ ಪದವೀಧರ ಕ್ಷೇತ್ರದ ರಚನೆ ಆದಾಗಿನಿಂದಲೂ ಒಂದು ಬಾರಿಯೂ ಗೆಲ್ಲದ ಕಾಂಗ್ರೆಸ್ ಪಕ್ಷ ಈ ಬಾರಿ ಮಧು ಮಾದೇಗೌಡನ್ನು ಗೆಲ್ಲಿಸಿಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿದೆ. 2023 ರ ಚುನಾವಣೆಯ ದಿಕ್ಸೂಚಿ ಎಂದು ಭಾವಿಸಲಾಗಿದ್ದ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮಧು ಜಿ.ಮಾದೇಗೌಡ ಬಿಜೆಪಿ ಅಭ್ಯರ್ಥಿ ರವಿಶಂಕರ್ ಅವರನ್ನು ಸೋಲಿಸುವ ಮೂಲಕ ಗೆಲುವಿನ ಮುನ್ನುಡಿ ಬರೆದಿದ್ದಾರೆ.

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬುಧವಾರ ಬೆಳಿಗ್ಗೆಯಿಂದ ಶುರುವಾದ ಮತ ಎಣಿಕೆ ಕಾರ್ಯ ಇಂದು ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಂಡಿದ್ದು,ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಭರ್ಜರಿ ಜಯ ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷದ ಗೌರವ ಕಾಪಾಡಿದ್ದಾರೆ.

ಮಧು ಜಿ ಮಾದೇಗೌಡ 46,083 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ 33, 878 ಮಗಳನ್ನು ಪಡೆದು ಸೋಲು ಕಂಡಿದ್ದಾರೆ. ಮಧು ಮಾದೇಗೌಡ 12,205 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.

ಜೆಡಿಎಸ್ ಅಭ್ಯರ್ಥಿ ರಾಮು 19,630 ಮತಗಳನ್ನು ಪಡೆದಿದ್ದು ಮೂರನೇ ಸ್ಥಾನ ಪಡೆದಿದ್ದಾರೆ. ರೈತ ಸಂಘ ಹಾಗೂ ದಲಿತ ಸಂಘಟನೆಗಳ ಅಭ್ಯರ್ಥಿ ಪ್ರಸನ್ನ ಎನ್. ಗೌಡ 7587 ಮತ ಪಡೆದು ನಾಲ್ಕನೇ ಸ್ಥಾನ ಪಡೆದಿದ್ದಾರೆ. ಮಾಜಿ ಸಚಿವ ಈಶ್ವರಪ್ಪನವರ ಪಿಎ ಆಗಿದ್ದ ಎಸ್.ಎನ್.ವಿನಯ್ 3864 ಮತಗಳನ್ನು ಪಡೆದು ಐದನೇ ಸ್ಥಾನ ಸ್ಥಾನ ಪಡೆದಿದ್ದಾರೆ. ಅಭ್ಯರ್ಥಿ ಕೇಶವ ಮೂರ್ತಿ 2836 ಮತ ಗಳಿಸಿದ್ದರೆ,ಎಸ್ಡಿಪಿಐ ನಾ ಉಲ್ಲಾಖಾನ್ 788, ಪಕ್ಷೇತರ ಅಭ್ಯರ್ಥಿ ಪ್ರಸನ್ನಕುಮಾರ್ 710 ಮತಗಳನ್ನು ಪಡೆದಿದ್ದಾರೆ. ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ 516 ಮತ ಪಡೆದು ಹೀನಾಯ ಸೋಲು ಕಂಡಿದ್ದಾರೆ.

ಕಾಂಗ್ರೆಸ್ಸಿಗರ ಒಗ್ಗಟ್ಟಿನ ಮಂತ್ರ

ಜಿಲ್ಲೆಯ ಪ್ರಭಾವಿ ನಾಯಕರಾದ ಚಲುವರಾಯಸ್ವಾಮಿ ಮತ್ತು ನರೇಂದ್ರ ಸ್ವಾಮಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಮಧು ಮಾದೇಗೌಡ ಅಭ್ಯರ್ಥಿಯಾದರೆ ಯಾವ ರೀತಿ ಪ್ರಯೋಜನ ಇದೆ ಎಂದು ವಿವರಿಸಿದ್ದರು. ಅದರಂತೆ ಮಧು ಮಾದೇಗೌಡ ಅವರನ್ನು ವರ್ಷದ ಹಿಂದೆಯೇ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು ಅವರ ಗೆಲುವಿಗೆ ಸಹಕಾರಿಯಾಗಿದೆ. ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿ ಮಧು ಮಾದೇಗೌಡರ ಪರ ಕೆಲಸ ಮಾಡಿದ್ದು,ಮಧು ಮಾದೇಗೌಡರ ಗೆಲುವಿಗೆ ಕಾರಣವಾಗಿದೆ.

ಚುನಾವಣಾಧಿಕಾರಿಗಳಿಂದ ಪ್ರಮಾಣಪತ್ರ ಪಡೆದ ಮಧು ಜಿ.ಮಾದೇಗೌಡರ ಜೊತೆ ಪಿ.ಎಂ.ನರೇಂದ್ರ ಸ್ವಾಮಿ ,ಅಣ್ಣೂರು ರಾಜೀವ್ ಇದ್ದಾರೆ.

ಆದರೆ ಬಿಜೆಪಿ ಪಕ್ಷದಲ್ಲಿ ಹಲವು ಆಕಾಂಕ್ಷಿಗಳು ಟಿಕೆಟ್ ಪಡೆಯಲು ಭಾರಿ ಪೈಪೋಟಿ ನಡೆಸಿದ್ದರು. ಆದರೂ ಬಿಜೆಪಿ ಹೈಕಮಾಂಡ್ ಸಂಘಪರಿವಾರದ ಕಾರ್ಯಕರ್ತ ರವಿಶಂಕರ್ ಅವರಿಗೆ ಎರಡನೇ ಬಾರಿಗೂ ಟಿಕೆಟ್ ನೀಡಿತ್ತು. ಇದರಿಂದ ಟಿಕೆಟ್ ಸಿಗದ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದರು. ಇವರ ಅಸಮಾಧಾನ ಶಮನಗೊಳಿಸಿ ತನ್ನ ಜೊತೆಗೆ ಕರೆದುಕೊಂಡು ಹೋಗುವಲ್ಲಿ ರವಿಶಂಕರ್ ವಿಫಲರಾದರು.

ರವಿಶಂಕರ್ ಗೆಲುವಿಗೆ ಬಿಜೆಪಿಯ ಹಲವು ಸಚಿವರು ,ರಾಜ್ಯ ಮುಖಂಡರು ಬಂದರೂ ಎರಡನೇ ಬಾರಿಯ ಸೋಲನ್ನು ತಡೆಯಲು ಅವರಿಂದ ಸಾಧ್ಯವಾಗಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದು, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯದಿರುವುದು, ಪದವೀಧರರ ಮತದಾರರ ಬಿಜೆಪಿ ಅನ್ಯಾಯ ಮಾಡಿದೆ ಎಂದು ನಾಲ್ಕು ಜಿಲ್ಲೆಗಳಲ್ಲಿ ಕಾಂಗ್ರೆಸ್ ಪದವೀಧರ ಮತದಾರರಿಗೆ ಮುಟ್ಟಿಸಿದ ಕಾರಣ ಮಧು ಮಾದೇಗೌಡರಿಗೆ ವರದಾನವಾಗಿದೆ.

ಇನ್ನು ಜೆಡಿಎಸ್ ಪಕ್ಷ ತನ್ನ ಹೊರೆಯಲ್ಲಿದ್ದ ದಕ್ಷಿಣ ಪದವೀಧರ ಕ್ಷೇತ್ರವನ್ನು ಕಳೆದುಕೊಂಡು ಮೂರನೇ ಸ್ಥಾನಕ್ಕೆ ತಲುಪಿರುವುದು ಜೆಡಿಎಸ್ ನೆಲೆಯನ್ನು ಅಲುಗಾಡಿಸಿದೆ. ಜೆಡಿಎಸ್ ಭದ್ರಕೋಟೆಯಲ್ಲಿ ದಿನೇ ದಿನೇ ಅದರ ಪ್ರಾಬಲ್ಯ ಕುಸಿಯುತ್ತಿರುವುದು ಕಾರ್ಯಕರ್ತರನ್ನು ತಳಮಳ ಗೊಳ್ಳುವಂತೆ ಮಾಡಿದೆ.

ರೈತ ಸಂಘ ಹಾಗೂ ದಲಿತ ಸಂಘಟನೆ ಸೇರಿದಂತೆ 40 ಸಂಘಟನೆಗಳ ಬೆಂಬಲ ಪಡೆದು ಅಭ್ಯರ್ಥಿಯಾಗಿದ್ದ ಪ್ರಸನ್ನ ಎನ್.ಗೌಡ 7587 ಮತಗಳನ್ನು ಗಳಿಸಿ ಅಚ್ಚರಿ ಮೂಡಿಸಿದ್ದಾರೆ.19 ಅಭ್ಯರ್ಥಿಗಳ ಪೈಕಿ ಬಹುತೇಕರು ಠೇವಣಿ ಕಳೆದುಕೊಂಡಿದ್ದಾರೆ.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹುರುಪನ್ನು ತಂದಿದೆ. ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ದಿನೇಶ್ ಗೂಳಿಗೌಡರ ಗೆಲುವಿನ ನಂತರ,ಈಗ ಮಧು ಜಿ. ಮಾದೇಗೌಡರು ಕೂಡ ಗೆಲುವು ಸಾಧಿಸಿರುವುದು 2023 ರ ವಿಧಾನಸಭಾ ಚುನಾವಣೆಗೆ ಗೆಲುವಿನ ಮುನ್ನುಡಿ ಬರೆದಿದೆ ಎಂದರೆ ತಪ್ಪಾಗಲಾರದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!