Thursday, September 19, 2024

ಪ್ರಾಯೋಗಿಕ ಆವೃತ್ತಿ

ದಕ್ಷಿಣ ಪದವೀಧರ ಕ್ಷೇತ್ರ ಕಳೆದುಕೊಂಡ ಜೆಡಿಎಸ್

ಹಾಲಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡರು ಪ್ರತಿನಿಧಿಸುತ್ತಿದ್ದ ದಕ್ಷಿಣ ಪದವೀಧರ ಕ್ಷೇತ್ರವನ್ನು ಜೆಡಿಎಸ್ ಕಳೆದುಕೊಂಡಿದೆ. ಜೆಡಿಎಸ್ ಪಕ್ಷದ ಎಚ್.ಕೆ. ರಾಮು ಮೂರನೇ ಸ್ಥಾನ ಪಡೆದು ಸೋಲು ಕಂಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಶ್ರೀಕಂಠೇಗೌಡರು ಬಿಜೆಪಿಯ ಮೈ.ವಿ. ರವಿಶಂಕರ್ ಎದುರು ಎರಡು ನೂರು ಮತಗಳ ಅಂತರದಿಂದ ಗೆದ್ದು ಕ್ಷೇತ್ರವನ್ನು ಉಳಿಸಿಕೊಂಡಿದ್ದರು. ಆದರೆ ಈ ಬಾರಿ ಅವರು ಸ್ಪರ್ಧೆಗೆ ಆಸಕ್ತಿ ತೋರದೆ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ರಾಮು ಅವರಿಗೆ ಜೆಡಿಎಸ್ ಟಿಕೆಟ್ ಕೊಡಿಸಿದ್ದರು.

ರಾಮು ಅವರು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯನಾಗಿರದಿದ್ದರೂ ಅವರಿಗೆ ಟಿಕೆಟ್ ಕೊಡಿಸಿದ ಬಗ್ಗೆ ಜಿಲ್ಲೆಯ ದಳಪತಿಗಳಲ್ಲಿ ಅಸಮಾಧಾನವಿತ್ತು.ಅದರಲ್ಲೂ ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡರು ಕಳೆದ 35 ವರ್ಷಗಳಿಂದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದ ಕೀಲಾರ ಜಯರಾಮು ಅವರಿಗೆ ಟಿಕೆಟ್ ಕೊಡದೇ ಹಣಕ್ಕಾಗಿ ಮಾರಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ನೇರ ಆರೋಪ ಮಾಡಿದ್ದರು.

ಅಲ್ಲದೆ ರಾಮು ಅವರಿಂದ ಕೆ.ಟಿ. ಶ್ರೀಕಂಠೇಗೌಡರು ತಾವೂ ಹಣ ಪಡೆದು, ಜೆಡಿಎಸ್ ವರಿಷ್ಠರಿಗೂ ಹಣ ನೀಡಿ ಟಿಕೆಟ್ ಪಡೆದಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು.

ಅಲ್ಲದೆ ಜಿ.ಮಾದೇಗೌಡರ ಹೋರಾಟ,ಶೈಕ್ಷಣಿಕ ಸಾಧನೆಯ ಋಣ ತೀರಿಸಲು ಅವರ ಪುತ್ರ ಮಧು ಮಾದೇಗೌಡ ಪರ ಪ್ರಚಾರ ನಡೆಸುವುದಾಗಿ ತಿಳಿಸಿ ಮತಯಾಚಿಸಿದ್ದರು. ಮರಿತಿಬ್ಬೇಗೌಡರ ಈ ನಡೆ ಹೆಚ್.ಕೆ.ರಾಮು ಅವರ ಸೋಲಿಗೆ ಕಾರಣವಾಯಿತು.

ಶಾಸಕರ ನಿರಾಶಕ್ತಿ

ಮಂಡ್ಯ ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆ ಯಾಗಿದ್ದು, ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದರೂ ಸಹ ಯಾರೂ ಕೂಡ ರಾಮು ಅವರ ಪರವಾಗಿ ಉತ್ಸಾಹದ ಪ್ರಚಾರದಲ್ಲಿ ತೊಡಗಿಸಿ ಕೊಂಡದ್ದು ಕಂಡು ಬರಲಿಲ್ಲ. ಎಲ್ಲಾ ಶಾಸಕರು ನಿರುತ್ಸಾಹದಿಂದಲೇ ಮತಯಾಚನೆ ಮಾಡಿದ್ದರು.ಎಚ್.ಡಿ. ಕುಮಾರಸ್ವಾಮಿ ಒಂದು ದಿನ ಮೂರ್ನಾಲ್ಕು ತಾಲೂಕುಗಳಿಗೆ ಬಂದು ಪ್ರಚಾರ ಮಾಡಿ ಹೋಗಿದ್ದು ಬಿಟ್ಟರೆ, ಇನ್ನುಳಿದ ಜೆಡಿಎಸ್ ನಾಯಕರು ತಮ್ಮ ಕ್ಷೇತ್ರಗಳಿಗಷ್ಟೇ ಸೀಮಿತರಾಗಿ ಬೇರೆ ಭಾಗಗಳಿಗೆ ಬರಲೇ ಇಲ್ಲ.

ಕೊನೆ ಕೊನೆಗೆ ಪ್ರಚಾರದಲ್ಲಿ ಎಚ್. ಕೆ. ರಾಮು ಅವರು ಒಬ್ಬಂಟಿಯಾಗಿ ಹೋದರು. ಟಿಕೆಟ್ ಕೊಡಿಸಿದ ಕಾರಣಕ್ಕೆ ಕೆ.ಟಿ. ಶ್ರೀಕಂಠೇಗೌಡರು ಸ್ವಲ್ಪ ಹೆಚ್ಚು ಪ್ರಚಾರ ಮಾಡಿದರೂ, ಪದವೀಧರ ಮತದಾರರನ್ನು ಮುಟ್ಟುವಲ್ಲಿ ಜೆಡಿಎಸ್ ಸಂಪೂರ್ಣವಾಗಿ ವಿಫಲವಾದರು.ನಿರೀಕ್ಷಿತ ಮಟ್ಟದಲ್ಲಿ ಮತದಾರರನ್ನ ಜೆಡಿಎಸ್ ತಲುಪಲು ವಿಫಲವಾದುದು ಮತ್ತೊಂದು ಕಾರಣವಾಗಿದೆ.

ಮಂಡ್ಯ ,ಮೈಸೂರು, ಚಾಮರಾಜನಗರ,ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪರವಾದ ಒಲವು ವ್ಯಕ್ತವಾಗಿತ್ತು.ಮಧು ಜಿ.ಮಾದೇಗೌಡ ಹಲವು ಚುನಾವಣೆಗಳಲ್ಲಿ ಸೋತಿದ್ದು,ಅವರ ತಂದೆ ಜಿ.ಮಾದೇಗೌಡರ ಜನಪರ ಹೋರಾಟ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧನೆಗಳು ಮತದಾರರ ಕಣ್ಮುಂದೆ ಬಂದು ಮತದಾರರು ಕಾಂಗ್ರೆಸ್ ಕೈ ಹಿಡಿದದ್ದು ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ರಾಮು ಅವರನ್ನು ಮೂರನೇ ಸ್ಥಾನಕ್ಕೆ ತಲುಪಲು ಕಾರಣ.

ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸಾಕಷ್ಟು ಪೈಪೋಟಿ ಇದೆ.ಈ ಬಾರಿ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಸವಾಲಾಗಿ ಸ್ವೀಕರಿಸಿ ಅದ್ದೂರಿ ಪ್ರಚಾರದಲ್ಲಿ ತೊಡಗಿಕೊಂಡಿತು. ರಾಜ್ಯ ಹಾಗೂ ಜಿಲ್ಲೆಯ ನಾಯಕರು ವ್ಯವಸ್ಥಿತವಾಗಿ ಪ್ರಚಾರ ನಡೆಸಿ ಕಾಂಗ್ರೆಸ್ ಪರವಾದ ವಾತಾವರಣವನ್ನು ನಿರ್ಮಿಸಿದ್ದರು. ಆದರೆ ಜೆಡಿಎಸ್ ನಾಯಕರು ಸತತ ಸೋಲುಗಳಿಂದ ಉತ್ಸಾಹ ಕಳೆದುಕೊಂಡಿದ್ದು,ವ್ಯವಸ್ಥಿತವಾಗಿ ಚುನಾವಣೆ ಎದುರಿಸಲು ವಿಫಲವಾಗಿದ್ದು,ರಾಮು ಅವರ ಸೋಲಿಗೆ ಕಾರಣ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!