Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಬಿಜೆಪಿ ಅಭ್ಯರ್ಥಿ ಎಸ್.ಪಿ. ಸ್ವಾಮಿ ನಾಮಪತ್ರ ಸಲ್ಲಿಕೆ

ವರದಿ : ಪ್ರಭು ವಿ.ಎಸ್. 

ಮದ್ದೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಮದ್ದೂರು ತಾಲ್ಲೂಕು ಕಚೇರಿಗೆ ತೆರಳಿ ಸೋಮವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ಮುನ್ನ ಸಂಸದೆ ಸುಮಲತಾ ಅಂಬರೀಶ್ ಮೆರವಣಿಗೆಯಲ್ಲಿ ಪಾಲ್ಗೊಂಡು ಎಸ್.ಪಿ.ಸ್ವಾಮಿ ಪರ ಪ್ರಚಾರ ನಡೆಸಿ ಚುನಾವಣೆಯಲ್ಲಿ ಹೆಚ್ಚಿನ ಬಹುಮತ ನೀಡಿ ಗೆಲ್ಲಿಸಿವಂತೆ ಮನವಿ ಮಾಡಿದರು. ಇದಕ್ಕೂ ಮೊದಲು ಅಭ್ಯರ್ಥಿ ಎಸ್.ಪಿ.ಸ್ವಾಮಿ ಪತ್ನಿ ಜಿ.ಪಂ ಮಾಜಿ ಅಧ್ಯಕ್ಷೆ ನಾಗರತ್ನ ತಮ್ಮ ಕುಟುಂಬದವರೊಂದಿಗೆ ಮನೆ ದೇವರು ಮಾಲಗಾರನಹಳ್ಳಿಯ ಶ್ರೀ ಸೋಮೇಶ್ವರ ದೇವಾಲಯದಲ್ಲಿ ನಾಮಪತ್ರವನ್ನು ದೇವರ ಪಾದ ಬಳಿಯಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿದರು.

ಜಾನಪದ ಕಲಾ ತಂಡಗಳ ಆಕರ್ಷಕ ಮೆರವಣಿಗೆಯೊಂದಿಗೆ ಪ್ರಮುಖ ಬೀದಿಗಳ ಮೂಲಕ ತಾಲ್ಲೂಕು ಕಛೇರಿವರೆಗೆ ಬೃಹತ್ ಮೆರವಣಿಗೆ ನಡೆಸಿ, ಸುಮಾರು 1 ಗಂಟೆ ವೇಳೆಗೆ ಚುನಾವಣಾಧಿಕಾರಿ ಆರ್.ನಾಗರಾಜ್ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದೆ ಸುಮಲತಾ ಅವರು ನನ್ನ ಪರ ಪ್ರಚಾರಕ್ಕೆ ಬಂದಿರುವುದು ಆನೆ ಬಲ ಬಂದಂತಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಹರ್ಷ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲೇ ಪ್ರತಿಯೊಬ್ಬರು ತಿರುಗಿ ನೋಡುವ ಆಶ್ಚರ್ಯಕರ ಫಲಿತಾಂಶ ಬರಲಿದ್ದು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಜಯಶೀಲರಾಗಲಿದ್ದಾರೆಂದು ಸಂಸದೆ ಸುಮಲತಾ ಅಂಬರೀಷ್ ತಿಳಿಸಿದರು.

ಮದ್ದೂರು ಪಟ್ಟಣದ ಶ್ರೀ ಉಗ್ರನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಪಿ. ಸ್ವಾಮಿ ಅವರ ನಾಮಪತ್ರ ಸಲ್ಲಿಕೆಯ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಪ್ರತಿ ಕ್ಷೇತ್ರದಲ್ಲೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಈ ಭಾರಿ ಎಲ್ಲರೂ ಶಾಕ್ ಆಗುವ ಫಲಿತಾಂಶ ಹೊರ ಬೀಳಲಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಗೆ ಬದಲಾವಣೆಯ ಅಗತ್ಯ ಕಂಡುಬಂದಿದ್ದು ಜಿಲ್ಲೆ ಅಭಿವೃದ್ಧಿ ಕಾಣಬೇಕಾದರೆ ಪ್ರಧಾನಿ ನರೇಂದ್ರಮೋದಿ ಅವರ ನಾಯಕತ್ವದಲ್ಲಿ ಮುನ್ನಡೆಯಬೇಕಾಗಿದ್ದು ದೇಶ ಪ್ರಗತಿಯತ್ತ ಸಾಗುತ್ತಿದ್ದು ಅದನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿರುವುದಾಗಿ ಹೇಳಿದರು.

ಮೇಲುಕೋಟೆ ಕ್ಷೇತ್ರದ ರೈತ ಸಂಘದ ಅಭ್ಯರ್ಥಿ ದರ್ಶನ್‌ಪುಟ್ಟಣ್ಣಯ್ಯ ಬೆಂಬಲ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು ಈ ಸಂಬಂಧ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದ್ದು ಕಳೆದ ಲೋಕಸಭೆ ಚುನಾವಣೆಯಲ್ಲಿ ದರ್ಶನ್‌ಪುಟ್ಟಣ್ಣಯ್ಯ ನನ್ನ ಪರ ನಿಂತಿದ್ದು ತಮಗೆ ಅರಿವಿದ್ದು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿ ವರಿಷ್ಠರ ಸೂಚನೆಯಂತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಸಂಸದರು ಎದುರಾಳಿಯಾಗಲಿದ್ದಾರೆಂಬ ಊಹಾ-ಪೋಹಗಳಿಗೆ ಪ್ರತಿಕ್ರಿಯಿಸಿದ ಅವರು ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸಮರ್ಥ ಅಭ್ಯರ್ಥಿ ಇದ್ದು ನಾನೇ ಬರುತ್ತೇನೆ, ನಮ್ಮ ಕುಟುಂಬ ಬರುತ್ತೆ ಅಂದರೆ ಆಗಲ್ಲಾ ಅದನ್ನು ಜನರಿಗೆ ತಿಳಿ ಹೇಳುವ ಮೂಲಕ ಕುಟುಂಬ ರಾಜಕಾರಣದ ವಿರುದ್ಧ ಹೋರಾಡಬೇಕೆಂದರು.

ಮಂಡ್ಯದಲ್ಲಿ ಓಟು ಪಡೆದ ಬಳಿಕ ಬೇರೆ ಕ್ಷೇತ್ರಗಳು ಅಭಿವೃದ್ಧಿಯಾಗಲಿದ್ದು ಯಾರೇ ಬಂದು ಸ್ಪರ್ಧಿಸಿದರೂ ಪೇಸ್ ಮಾಡುವ ಶಕ್ತಿ ನಮಗಿದ್ದು ಕಾರ್ಯಕರ್ತರು ಎದೆಗುಂದದೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದರು.

ಶ್ರೀರಂಗಪಟ್ಟಣದ ಶಾಸಕ ರವೀಂದ್ರಶ್ರೀಕಂಠಯ್ಯ ತಮ್ಮನ್ನು ಅಪ್ರಬುದ್ಧ ರಾಜಕಾರಣಿ ಎಂಬ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿದ ಸಂಸದರು ಅಪ್ರಬುದ್ಧ ರಾಜಕಾರಣಿ ಯಾರು ಎಂಬುದನ್ನು ಜನರೇ ತೋರಿಸಲಿದ್ದು ಸ್ವಾರ್ಥ, ದುರಂಕಾರ ರಾಜಕಾರಣಿಗಳಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆಂದು ಪರೋಕ್ಷವಾಗಿ ಟಾಂಗ್ ನೀಡಿದರು.

ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಾಗಲೂ ತಮಗೆ ಬೆದರಿಕೆಗಳು ಸಾಮಾನ್ಯವಾಗಿದ್ದು ಈಗಲೂ ಅನೇಕ ರೀತಿಯ ಬೆದರಿಕೆ ಬರುತ್ತಿದ್ದು ಗಂಭೀರವಾಗಿ ತೆಗೆದುಕೊಂಡು ಈ ಬಗ್ಗೆ ದೂರು ನೀಡುವುದಾಗಿ ಹೇಳಿದರು.

ಬಿಜೆಪಿ ಪಕ್ಷದಲ್ಲಿ ಹಿರಿಯ ನಾಯಕರನ್ನು ಕೈಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ತಾವು ಮಾತನಾಡುವುದಿಲ್ಲ ಪಕ್ಷವು ಹೊಸಬರಿಗೆ ಮತ್ತು ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟಿದ್ದು ಗುಜರಾತ್ ಹಾಗೂ ಉತ್ತರ ಪ್ರದೇಶ ರೀತಿಯ ಪ್ರಯೋಗ ರಾಜ್ಯದಲ್ಲಿ ನಡೆದಿರುವುದಾಗಿ ಸ್ಪಷ್ಟನೆ ನೀಡಿದರು.

ಈ ವೇಳೆ  ಜಿ.ಪಂ. ಮಾಜಿ ಅಧ್ಯಕ್ಷೆ ನಾಗರತ್ನ ಸ್ವಾಮಿ, ಮಾಜಿ ಸದಸ್ಯರಾದ ಬೋರಯ್ಯ, ಮರಿಹೆಗಡೆ, ಕೃಷ್ಣೇಗೌಡ, ಶಿಂಷಾ ಬ್ಯಾಂಕ್ ನಿರ್ದೇಶಕ ಯಶವಂತ್, ಮುಖಂಡರಾದ ಮನುಕುಮಾರ್, ಶಿವರಾಮು, ಅಭಿಷೇಕ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!