Friday, September 20, 2024

ಪ್ರಾಯೋಗಿಕ ಆವೃತ್ತಿ

ಹೇಳುವವರು ಕೇಳುವವರಿಲ್ಲದ ಟ್ಯೂಷನ್ ಸೆಂಟರ್ ಗಳು !

ಮಂಡ್ಯ ಜಿಲ್ಲೆಯಾದ್ಯಂತ ಮಳವಳ್ಳಿ ತರಹದ ತಾಲ್ಲೂಕುಗಳನ್ನು ಒಳಗೊಂಡಂತೆ ಮಕ್ಕಳಿಗೆ ಪಾಠ ಹೇಳಿಕೊಡುವ ಟ್ಯೂಷನ್ ಸೆಂಟರ್ ಗಳು ಯಾವುದೇ ನೀತಿ- ನಿಯಮಗಳಿಲ್ಲದೆ,ಹೇಳುವವರು-ಕೇಳುವವರು ಇಲ್ಲದೆ ನಡೆಯುತ್ತಿವೆ.

ಎತ್ತರದ ಬಿಲ್ಡಿಂಗ್ ಗಳಲ್ಲಿ, ಜನಸಂಚಾರವಿಲ್ಲದ ಪ್ರದೇಶಗಳಲ್ಲಿ, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಸಹ ಇಲ್ಲದ ಕಡೆಗಳಲ್ಲಿ ಹಣದ ಆಸೆಗೆ ಟ್ಯೂಷನ್ ಸೆಂಟರ್ ಗಳು ನಾಯಿಕೊಡೆಗಳಂತೆ ನಡೆಯುತ್ತಿವೆ.

ಶಾಲೆಗಳಲ್ಲಿ ಯಾವ ರೀತಿಯ ಸೌಕರ್ಯ ಮತ್ತು ಭದ್ರತೆ (ಸೆಕ್ಯುರಿಟಿ) ಇರಬೇಕೆಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ( NCPCR ) ಮ್ಯಾನ್ಯುಯಲ್ ಜಾರಿ ಮಾಡಿದ್ದು, ಅದಕ್ಕೆ ಅನುಗುಣವಾಗಿ ಶಾಲೆಗಳು ಕಾರ್ಯಾಚರಿಸಬೇಕಿರುತ್ತದೆ. ಒಂದು ವೇಳೆ ಮಕ್ಕಳ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಜರುಗಿಸಬಹುದಾಗಿರುತ್ತದೆ.

ಆದರೆ ಟ್ಯೂಷನ್ ಸೆಂಟರ್ ಗಳು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರದೇ ಇರುವ ಕಾರಣ ಆ ಟ್ಯೂಷನ್ ಸೆಂಟರ್ ಗಳನ್ನು ಪರಿಶೀಲಿಸುವ, ಕ್ರಮ ಜರುಗಿಸುವ ಅಧಿಕಾರ ತಮಗಿಲ್ಲವೆಂದು ಹೆಸರು ಹೇಳಲಿಚ್ಚಿಸದ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು “ನುಡಿ ಕರ್ನಾಟಕ.ಕಾಮ್” ವೆಬ್ ಪೋರ್ಟಲ್ ಜೊತೆ ಮಾತನಾಡುತ್ತಾ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಯಾವುದೇ ನೀತಿ- ನಿಯಮಗಳಿಲ್ಲದೆ ನಡೆಯುತ್ತಿರುವ ಇಂತಹ ಟ್ಯೂಷನ್ ಸೆಂಟರ್ ಗಳೇ ಮಳವಳ್ಳಿ ಪಟ್ಟಣದ ಹತ್ತು ವರ್ಷದ ಮುಗ್ಧ ಬಾಲಕಿಯ ಅತ್ಯಾಚಾರ ಮತ್ತು ಕೊಲೆಗೆ ಕಾರಣವಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಮಾರ್ಗಸೂಚಿ ಜಾರಿಯಾಗಲಿ
ಇಂದು ಖಾಸಗಿ ಟ್ಯೂಷನ್ ಗಳು ಸಾಕಷ್ಟು ಸಂಖ್ಯೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ. ಮನೆಗಳಲ್ಲಿ,ಜನವಸತಿ ಇಲ್ಲದ ಮೂರು,ನಾಲ್ಕನೇ ಮಹಡಿಗಳಲ್ಲಿ ಟ್ಯೂಷನ್ ಸೆಂಟರ್, ಕಂಪ್ಯೂಟರ್ ಸೆಂಟರ್ ಗಳು ನಡೆಯುತ್ತಿವೆ.ಪೋಷಕರು ನಮ್ಮ ಮಕ್ಕಳು ಟ್ಯೂಷನ್ ಸೇರಿ ಮತ್ತಷ್ಟು ಚೆನ್ನಾಗಿ ಓದಿ ಅಂಕ ಗಳಿಸಲಿ ಎಂಬ ಆಸೆಯಿಂದ ಸೇರಿಸುತ್ತಾರೆ.ಆದರೆ ಈ ಟ್ಯೂಷನ್ ಸೆಂಟರ್ ಗಳಲ್ಲಿ ಶಾಲೆಗಳಿಗೆ ಇರುವ ಮಾರ್ಗಸೂಚಿಯಂತೆ ಭದ್ರತಾ ಸಿಬ್ಬಂದಿಗಳು, ಸಿಸಿ ಟಿವಿ ಕ್ಯಾಮೆರಾ, ಶೌಚಾಲಯ, ಕುಡಿಯುವ ನೀರಿನ ಯಾವ ವ್ಯವಸ್ಥೆಯೂ ಇರುವುದಿಲ್ಲ.ಹಾಗಾಗಿ ಮಳವಳ್ಳಿ ಪಟ್ಟಣದ ಬಾಲಕಿಯಂತಹವರು ಆಗಾಗ್ಗೆ ಕಾಮುಕರ ಕೈಗೆ ಸಿಕ್ಕಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯೂ ಆಗಿ ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಒಂದೈದು ದಿನ ಈ ಸುದ್ದಿ ಇರುತ್ತದೆ.ನಂತರ ಸರ್ಕಾರ,ಜನರು ಎಲ್ಲಾ ಮರೆತು ಬಿಡುತ್ತಾರೆ.

ಆದ್ದರಿಂದ ಸರ್ಕಾರ,ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಮಳವಳ್ಳಿಯ ಬಾಲಕಿಯ ಮೇಲೆ ನಡೆದ ಪೈಶಾಚಿಕ ಕೃತ್ಯ ಮತ್ತೆಂದೂ ನಡೆಯದಂತೆ ಖಾಸಗಿ ಟ್ಯೂಷನ್, ಕಂಪ್ಯೂಟರ್ ಸೆಂಟರ್ ಗಳಿಗೆ ಶಾಲಾ,ಕಾಲೇಜುಗಳಿಗೆ ವಿಧಿಸಿರುವ ಮಾರ್ಗಸೂಚಿ ಜಾರಿ ಮಾಡಲಿ.

ಖಾಸಗಿ ಟ್ಯೂಷನ್ ನಡೆಸುವವರು ಕೂಡ ನೋಂದಣಿ ಮಾಡಿಸಿಕೊಂಡು,ಅಧಿಕೃತ ಪರವಾನಗಿ ಪಡೆದು ಮಕ್ಕಳ ಆಯೋಗದ ಮಾರ್ಗಸೂಚಿಯಂತೆ ನಡೆಯಲಿ ಎಂಬುದು ಜನರ ಆಗ್ರಹವಾಗಿದೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!