Friday, September 20, 2024

ಪ್ರಾಯೋಗಿಕ ಆವೃತ್ತಿ

ತಾಪಮಾನ ಹೆಚ್ಚಳದಿಂದ ಅತಿವೃಷ್ಟಿ-ಅನಾವೃಷ್ಟಿ

ನದಿಗಳಿಗೆ ಅಣೆಕಟ್ಟು ನಿರ್ಮಾಣ, ವಿದ್ಯುಚ್ಛಕ್ತಿ ಘಟಕಗಳ ಸ್ಥಾಪನೆ,ರಾಸಾಯನಿಕಗಳ ಬಳಕೆ,ಪರಿಸರ ನಾಶದಿಂದ ಭೂಮಿಯ ತಾಪಮಾನ ಹೆಚ್ಚಳವಾಗಿ ಅತಿವೃಷ್ಠಿ ಮತ್ತು ಅನಾವೃಷ್ಠಿಗೆ ಕಾರಣವಾಗಿದೆ ಎಂದು ಹಿರಿಯ ವಿಜ್ಞಾನಿ, ಪತ್ರಕರ್ತ ನಾಗೇಶ್ ಹೆಗಡೆ ತಿಳಿಸಿದರು.

ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ಉಳುಮೆ ಪ್ರತಿಷ್ಠಾನ ವತಿಯಿಂದ ನಡೆದ ಜಾಗತಿಕ ತಾಪಮಾನ ಮತ್ತು ಕೃಷಿ ಜಾಗೃತಿ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ದೇಶದಲ್ಲಿ ಅತಿಯಾಗಿ ಕಲ್ಲಿದ್ದಲು, ಪೆಟ್ರೋಲ್, ಡೀಸಲ್ ಸೇರಿದಂತೆ ವ್ಯವಸಾಯದಲ್ಲಿ ಅತಿಯಾದ ರಾಸಾನಿಯಕ ಗೊಬ್ಬರ ಬಳಕೆ ಮಾಡಲಾಗುತ್ತಿದೆ.ಇದರಿಂದ ಮೀಥೇನ್ ಹಾಗೂ ಇಂಗಾಲ ಡೈ ಆಕ್ಸೈಡ್ ಹೆಚ್ಚಾಗಿ ಪರಿಸರ ನಾಶ ಹೊಂದುತ್ತಿದೆ ಎಂದರು.

ವಿದೇಶಗಳು 2050ನೇ ಇಸವಿಯ ಹೊತ್ತಿಗೆ ಕಲ್ಲಿದ್ದಲು ಬಳಕೆಯನ್ನು ನಿಲ್ಲಿಸುತ್ತೇವೆಂದು ಹೇಳುತ್ತಾರೆ. ಆದರೆ ಪ್ರಧಾನಿ ನರೇಂದ್ರಮೋದಿ ಅವರು 2075ಕ್ಕೆ ಕಲ್ಲಿದ್ದಲು ಬಳಕೆಯನ್ನು ಭಾರತ ನಿಲ್ಲಿಸುತ್ತದೆ ಎಂದು ಹೇಳುತ್ತಾರೆ. ಅಷ್ಟರ ಮಟ್ಟಿಗೆ ಕಲ್ಲಿದ್ದಲನ್ನು ನಾವು ಬಳಕೆ ಮಾಡುತ್ತಿದ್ದೇವೆ. ನೈಸರ್ಗಿಕವಾಗಿ ಸಿಗುವ ಗಾಳಿ, ಸೌರಶಕ್ತಿಯನ್ನು ಬಳಸಿಕೊಂಡಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಬಹುದಾಗಿದೆ ಎಂದರು.

ಪ್ರಕೃತಿಗೆ ವಿರುದ್ಧವಾಗಿ ಇಂಧನಗಳನ್ನು ಬಳಸುತ್ತಿರುವುದರಿಂದ ಭೂಮಿ ಮತ್ತು ಸಮುದ್ರ ಒತ್ತಡದಲ್ಲಿ ಸಿಲುಕಿ ಅತಿವೃಷ್ಠಿ ಮತ್ತು ಅನಾವೃಷ್ಠಿಯನ್ನು ಕಾಣುತ್ತಿದ್ದೇವೆ.ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಕಷ್ಟವನ್ನು ಅನುಭವಿಸುವಂತಾಗಿದೆ ಎಂದರು.

ಪ್ರಗತಿಪರ ರೈತ ಮಹಿಳೆ ಗಾಯಿತ್ರಿ ಮಾತನಾಡಿ, ರೈತರು ಹೆಚ್ಚು ಇಳುವರಿ ಪಡೆಯಲು ಹಲವಾರು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಹಲವು ಬೆಳೆಗಳನ್ನು ಬೆಳೆಯುತ್ತಿದ್ದ ಸ್ಥಳದಲ್ಲಿ ಕೇವಲ ಒಂದರೆಡು ಬೆಳೆಗೆ ಸೀಮಿತವಾಗುತ್ತಿರುವುದರಿಂದ ದಿನದಿಂದ ದಿನಕ್ಕೆ ಭೂಮಿ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.

ಸಮಾವೇಶದಲ್ಲಿ ಎಂ.ವಿ ಕೃಷ್ಣ, ಶಿವಲಿಂಗು, ಶಿವಕುಮಾರ್, ಅವಿನಾಶ್ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!