Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಗ್ರಾಪಂ ಅಧ್ಯಕ್ಷರ ಅಕ್ರಮ ಮುಚ್ಚಿಹಾಕುವ ಹುನ್ನಾರ: ಪ್ರತಿಭಟನೆ

ಮಂಡ್ಯ ತಾಲ್ಲೂಕು ಬೂದನೂರು ಗ್ರಾಮ ಪಂಚಾಯತಿ ಅಧ್ಯಕ್ಷರು ಸರ್ಕಾರಿ ಸೌಲಭ್ಯ ಪಡೆಯಲು ಸುಳ್ಳು ಮಾಹಿತಿ ನೀಡಿ ಅಕ್ರಮ ಎಸಗಿರುವ ಕುರಿತಂತೆ ತನಿಖೆ ನಡೆಸಿರುವ ಅಧಿಕಾರಿಗಳು ಅಧ್ಯಕ್ಷರ ಆಮಿಷ, ಪ್ರಭಾವಕ್ಕೆ ಒಳಗಾಗಿ ಅಧ್ಯಕ್ಷರ ಅಕ್ರಮವನ್ನು ಮುಚ್ಚಿಹಾಕಲು ಮುಂದಾಗಿದ್ದಾರೆಂದು ಖಂಡಿಸಿ ಸ್ವಂತ ಮನೆ ನಮ್ಮಹಕ್ಕು ಹೋರಾಟ ಸಮಿತಿ ಹಾಗೂ ನಿವೇಶನರಹಿತರು ಇಂದು ಪ್ರತಿಭಟನೆ ನಡೆಸಿದರು.

ಮಂಡ್ಯಜಿಲ್ಲಾ ಪಂಚಾಯಿತಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಅಕ್ರಮ ಮುಚ್ಚಿಹಾಕಲು ಯತ್ನಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.

ಸ್ವಂತ ಮನೆ ನಮ್ಮ ಹಕ್ಕು ಸಂಚಾಲಕ ಬಿ.ಕೆ.ಸತೀಶ್ ಮಾತನಾಡಿ, ಮಂಡ್ಯ ತಾಪಂ ಸಹಾಯಕ ಆಡಳಿತಾಧಿಕಾರಿ ಶ್ರೀಧರ್ ಎಂಬುವವರು ಸದರಿ ಅಧ್ಯಕ್ಷರನ್ನು ಮುಖಾಮುಖಿ ಭೇಟಿ ಮಾಡಿ ತನಿಖೆ ಮಾಡಿದರೂ ಅಧ್ಯಕ್ಷರಾದ ಮಾನಸ ಎಂಬುವವರ ವಂಶವೃಕ್ಷ ವರದಿ ಮಾಡದೇ ಅಮಿಷ, ಪ್ರಭಾವಕ್ಕೆ ಒಳಗಾಗಿ ಸ್ಪಷ್ಟ ಮಾಹಿತಿ ನೀಡದೆ ಅಧ್ಯಕ್ಷರ ಅಕ್ರಮವನ್ನು ಮುಚ್ಚಿ ಹಾಕಲು ಮುಂದಾಗಿದ್ದಾರೆಂದು ದೂರಿದರು.

ಸದರಿ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಸಹ ಅಧ್ಯಕ್ಷರ ಅಕ್ರಮ ಮುಚ್ಚಲು ಸಹಕರಿಸಿ, ಬಡ ಜನರನ್ನು ವಂಚಿಸುತ್ತಿದ್ದಾರೆ. ಸರ್ಕಾರಿ ಸೌಲಭ್ಯ ಪಡೆಯಲು ಅಧ್ಯಕ್ಷೆ ಮಾನಸ ಎಂಬುವವರು ಸುಳ್ಳು ದಾಖಲೆ, ಮಾಹಿತಿ ನೀಡಿದ್ದರೂ ಅವರ ವಿರುದ್ದ ಕ್ರಮ ವಹಿಸದ ಕ್ರಮವನ್ನು ಖಂಡಿಸಿ ವಾರದೊಳಗೆ ಅಧ್ಯಕ್ಷರ ವಿರುದ್ದ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಗ್ರಾಪಂ ಅಡಿಯಲ್ಲಿ ಸಕಾಲ, ಬಾಪೂಜಿ ಸೇವಾ ಕೇಂದ್ರ, ಸ್ವಚ್ಚಭಾರತ್ ಮಿಷನ್ ಅಡಿ ಘನ-ದ್ರವ ತ್ಯಾಜ್ಯ ನಿರ್ವಹಣೆ ನಡೆಯುತ್ತಿಲ್ಲ,2020-25ರ ಆಡಳಿತ ಮಂಡಳಿಯಲ್ಲಿ ಡಿ.ಸಿ ಬಿಲ್ಲನ್ನು ಸಭೆಯ ಅನುಮತಿ ಚರ್ಚೆ ಇಲ್ಲದೆ ಬಹುಮುಖ್ಯವಾಗಿ ಯಾವುದೇ ಮನವಿ, ದೂರು ಇಲ್ಲದೆ ಕಾಮಗಾರಿ ಕೈಗೊಂಡು ಎಸ್.ಆರ್ ದರ ಎಂದು ಅವೈಜ್ಞಾನಿಕವಾಗಿ ಹಣ ಡ್ರಾ ಮಾಡಿ ಭ್ರಷ್ಟಾಚಾರ ಎಸಗಲಾಗುತ್ತಿದೆ. ಈ ವಿಚಾರವಾಗಿ ಇಡೀ ಅಡಳಿತ ಮಂಡಳಿ, ಪಿಡಿಒ ಅವರರಿಂದ ಸಾರ್ವಜನಿಕ ತೆರಿಗೆ ಹಣ ಅಪವ್ಯಯವಾಗುತ್ತಿದೆ ಎಂದು ದೂರಿದರು.

ಸುಮಾರು 15 ಆರೋಪಗಳನ್ನು ಪಟ್ಟಿ ಈ ಬಗ್ಗೆ ತನಿಖೆ ನಡೆಸಿ ಸಾಂವಿಧಾನಿಕ ಸಂಸ್ಥೆಯಾದ ಗ್ರಾಮ ಪಂಚಾಯತ್ ಆಡಳಿತ ಸರಿಪಡಿಸಿ ಆಡಳಿತದಲ್ಲಿ ಜನರ ಸಹಭಾಗಿತ್ವವನ್ನು ಖಾತರಿಪಡಿಸಬೇಕೆಂದು ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿಯ ಸವಿತಾ, ಸುಧಾ, ಕುಳ್ಳ, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಕರುನಾಡ ಸೇವಕರು ಸಂಘಟನೆಯ ಚಂದ್ರು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!