Saturday, May 18, 2024

ಪ್ರಾಯೋಗಿಕ ಆವೃತ್ತಿ

ಹಿಂದೂತ್ವಕ್ಕೇ ಜಾಗವಿಲ್ಲದ ಈ ಚುನಾವಣೆಯಲ್ಲಿ ‘ಭಜರಂಗ’ಕ್ಕೆ ಆತಂಕ ಪಡಬೇಕೆ?

✍️ ಮಾಚಯ್ಯ ಎಂ ಹಿಪ್ಪರಗಿ

ಚುನಾವಣೆಯ ದಿನಾಂಕ ಹತ್ತಿರವಾಗುತ್ತಿದೆ. ಪ್ರಗತಿಪರ ಗೆಳೆಯರಲ್ಲಿ ಆತಂಕವೂ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣವಾಗಿರೋದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಭಜರಂಗದಳ ಮತ್ತು ಪಿಎಫ್‌ಐ ಸಂಘಟನೆಗಳ ಪ್ರಸ್ತಾಪ. ನಿನ್ನೆಯಿಂದ ಸುಮಾರು ನಾಲ್ಕೈದು ಮಂದಿ ಗೆಳೆಯರು ಫೋನ್ ಮಾಡಿ, ಆತಂಕದೊಟ್ಟಿಗೆ ಮಾತಾಡಿದರು. ಸಲೀಸಾಗಿದ್ದ ಚುನಾವಣೆಯನ್ನು ಕಾಂಗ್ರೆಸ್ ಸ್ವತಃ ಕಗ್ಗಂಟು ಮಾಡಿಕೊಂಡಿದೆ, ಬಿಜೆಪಿಗೆ ತಾನಾಗಿಯೇ ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡಿದೆ, ಇದರಿಂದ ಬರಲಿದ್ದ ಫಲಿತಾಂಶ ಏರುಪೇರಾಗಲಿದೆ ಎಂದು ಗಾಬರಿಗೊಂಡಿದ್ದರು. ಅವರ ಆತಂಕ, ಕಾಳಜಿಯ ಬಗ್ಗೆ ನನಗೆ ಅಪಾರ ಗೌರವವಿದೆ. ಯಾಕೆಂದರೆ, ಈ ನಾಡಿನ ಒಳಿತಿಗಾಗಿ ಮತ್ತು ಸಂವಿಧಾನದ ನೆಲೆಗಟ್ಟಿನ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಈ ಸಲ ಬಿಜೆಪಿ ಸೋಲಬೇಕು ಎಂಬುದು ಅವರ ಆಶಯ. ಇದು ನನ್ನದೂ ಹೌದು. ಆದರೆ ಭಜರಂಗದಳದ ಇಶ್ಯೂ ಆಧರಿಸಿ ಅವರಲ್ಲಿ ಹುಟ್ಟಿರುವ ಆತಂಕದ ಬಗ್ಗೆ ನನಗೆ ಅಷ್ಟೇನೂ ಆಸಕ್ತಿಯಿಲ್ಲ!

ನನ್ನ ಈ ಅಭಿಪ್ರಾಯಕ್ಕೆ ಖಂಡಿತ ಒಂದು ಕಾರಣವಿದೆ.

ಕರ್ನಾಟಕದ ಚುನಾವಣಾ ರಾಜಕೀಯ ಇತಿಹಾಸವನ್ನು ನೀವು ಗಮನಿಸಿದರೆ, ಹಿಂದೂತ್ವದ ಅಲೆ ಮೇಲೆ ಇಲ್ಲಿ ಇದುವರೆಗೆ ಯಾವ ವಿಧಾನಸಭಾ ಚುನಾವಣೆಯೂ ನಡೆದಿಲ್ಲ. ಇಲ್ಲಿ ಜಾತಿಯೇ ಪ್ರಧಾನ. ಆ ಜಾತಿಯನ್ನು ಪ್ರತಿನಿಧಿಸುವ ನಾಯಕನಿಗೆ ಎರಡನೇ ಸ್ಥಾನ. ಹಣಕ್ಕೆ ಮೂರನೇ ಸನ್ಮಾನ. ಸ್ವಾತಂತ್ರ್ಯಾನಂತರದ ಕರ್ನಾಟಕದ ಮುಖ್ಯಮಂತ್ರಿಗಳ ಆಳ್ವಿಕೆಯ ವರ್ಷಗಳನ್ನು ಗಣನೆಗೆ ತೆಗೆದುಕೊಂಡಾಗ ಶೇ.70ರಷ್ಟು ವರ್ಷಗಳ (ಅಂದರೆ 76 ವರ್ಷಗಳಲ್ಲಿ ಸುಮಾರು 50 ವರ್ಷಗಳಷ್ಟು ಕಾಲ) ಆಳ್ವಿಕೆಯನ್ನು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿಗಳೇ ಆಳಿದ್ದಾರೆ! ಇಲ್ಲಿ ಜಾತಿಯೇ ಪ್ರಧಾನ ಎನ್ನುವುದಕ್ಕೆ ಇದಕ್ಕಿಂತ ನಿದರ್ಶನ ಬೇಕೆ? ಬಿಜೆಪಿ ಗಮನಾರ್ಹ ಸಾಧನೆ ತೋರಲು ಶುರು ಮಾಡಿದ 1994ರ ಚುನಾವಣೆಯಿಂದ ಮೊದಲ್ಗೊಂಡು ಇಲ್ಲಿಯವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಗೆ ಶಕ್ತಿಯಾದದ್ದು ಲಿಂಗಾಯತ ಸಮುದಾಯದ ಯಡಿಯೂರಪ್ಪನವರೇ ಹೊರತು, ಹಿಂದೂತ್ವವಲ್ಲ. 2013ರ ಚುನಾವಣೆಯಲ್ಲಿ ಯಡಿಯೂರಪ್ಪನವರು ಪಕ್ಷದಿಂದ ಹೊರನಡೆದು ಕೆಜೆಪಿ ಕಟ್ಟಿಕೊಂಡಾಗ, ಬಿಜೆಪಿ ತಲುಪಿದ ಪಾತಾಳ ಸ್ಥಿತಿಯೇ ಇದಕ್ಕೆ ಸಾಕ್ಷಿ. ಹಾಗಂತ ಕರ್ನಾಟಕದಲ್ಲಿ ಹಿಂದೂತ್ವ ಬಲಗೊಂಡಿಲ್ಲ ಎಂದು ನಾನು ಹೇಳುತ್ತಿಲ್ಲ. ಸಮಾಜದ ನಡುವೆ ಅದು ತುಂಬಾ ವ್ಯವಸ್ಥಿತವಾಗಿ, ವೇಗವಾಗಿ ಪಸರಿಸುತ್ತಿದೆ. ಆದರೆ ಚುನಾವಣೆಯನ್ನು ಏಕಾಏಕಿ ನಿರ್ಧರಿಸುವಷ್ಟು ಬಲಾಢ್ಯವಾಗಿ ರೂಪುಗೊಳ್ಳಲು ಅದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಕರ್ನಾಟಕದ ಮಟ್ಟಿಗೆ ಅದಕ್ಕೊಂದು ಕೊರತೆ ಕಾಡುತ್ತಿದೆ.

ಹಿಂದೂತ್ವವಿರಬಹುದು ಅಥವಾ ಬೇರಾವುದೇ ಪಂಥೀಯ ಸಿದ್ಧಾಂತವಿರಬಹುದು, ಸಮಾಜದಲ್ಲಿ ಅದಕ್ಕೆ ಎಷ್ಟೇ ಸಹಮತವಿದ್ದರೂ, ಆ ಸಹಮತವನ್ನು ಶಕ್ತಿಯಾಗಿ ಕ್ರೋಢೀಕರಿಸುವ ಮಾಸ್ ಲೀಡರಿಕೆಯ ‘ನಾಯಕ’ನ ಒಂದು ಮುಖ ಬೇಕಾಗುತ್ತದೆ. ಹಿಂದಿ ಭಾಷೆಗಳ ಪ್ರಭಾವವಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಹಿಂದೂತ್ವದ ಮಾಸ್ ಲೀಡರ್ ನಾಯಕನ ಸ್ಥಾನವನ್ನು ಮೋದಿ ನಿರಾಯಾಸವಾಗಿ ತುಂಬುತ್ತಾರೆ. ಆದರೆ, ಕರ್ನಾಟಕವೂ ಸೇರಿದಂತೆ ಭಾಷಾ ವೈವಿಧ್ಯತೆಯಿರುವ ದಕ್ಷಿಣ ಭಾರತದ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಮಟ್ಟಿಗೆ ಮೋದಿ ಕೂಡಾ ಹೊರಗಿನವರೆನಿಸುತ್ತಾರೆ. ಶಾಖೆಗಳು, ಬೈಠಕ್‌ಗಳ ಹಂತದಲ್ಲಿ ಹಿಂದೂತ್ವಕ್ಕೆ ಕರ್ನಾಟಕದಲ್ಲಿ ಒಳ್ಳೆಯ ಹರವು ಸಿಕ್ಕಿರಬಹುದು, ಆದರೆ ಅದನ್ನು ರಾಜಕೀಯ ನಿರ್ಣಾಯಕ ಶಕ್ತಿಯಾಗಿ ಕ್ರೋಢೀಕರಿಸುವಂತಹ ಪೊಲಿಟಿಕಲ್ ಮಾಸ್ ಲೀಡರ್ ಇದುವರೆಗೆ ಬಿಜೆಪಿಗೆ ಸಿಕ್ಕಿಲ್ಲ; ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸಿಕ್ಕಂತೆ.

ಅದನ್ನು ಸಾಧಿಸಿಕೊಳ್ಳುವ ಸಲುವಾಗಿಯೇ ಅನಂತಕುಮಾರ್ ಹೆಗಡೆಯನ್ನು ಕೇಂದ್ರ ಮಂತ್ರಿ ಮಾಡಿದ್ದು, ನಳೀನ್‌ಕುಮಾರ್ ಕಟೀಲರನ್ನು ರಾಜ್ಯ ಬಿಜೆಪಿ ಅಧ್ಯಕ್ಷನನ್ನಾಗಿ ಮಾಡಿದ್ದು. ಆದರೆ ಅವರಿಬ್ಬರೂ ಸಂಘ ಪರಿವಾರದ ಆ ನಿರೀಕ್ಷೆಯನ್ನು ಇದುವರೆಗೆ ಈಡೇರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಜಾತಿಯನ್ನು ಓವರ್‌ಟೇಕ್ ಮಾಡಿ ಸ್ಥಳೀಯ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವ ‘ಪೊಲಿಟಿಕಲ್ ಶಕ್ತಿ ಹಿಂದೂತ್ವಕ್ಕೆ ಕರ್ನಾಟಕದಲ್ಲಿ ಇದುವರೆಗೆ ಲಭಿಸಿಲ್ಲ. ಮುಂದಿನ ದಿನಗಳಲ್ಲಿ ಹೇಗೋ ಗೊತ್ತಿಲ್ಲ. ನಾವೀಗ ಕರ್ನಾಟಕದಲ್ಲಿ ಕಾಣುತ್ತಿರುವ ಸಂಘ ಪರಿವಾರ ಅಥವಾ ಕೋಮುವಾದದ ವಿಸ್ತಾರಕ್ಕೆ ಜಾತಿಯ ಅಡಿಪಾಯದ ಪೊಲಿಟಿಕಲ್ ಪವರ್ ಆಧಾರವಾಗಿದೆ. ಈ ಜಾತಿ ಅಡಿಪಾಯದ ಜಾಗದಲ್ಲಿ (ಪ್ರಧಾನವಾಗಿ ಲಿಂಗಾಯತ ಸಮುದಾಯದ) ಪ್ಯೂರ್ ಹಿಂದೂತ್ವದ (ಅಲಿಯಾಸ್ ಬ್ರಾಹ್ಮಣ್ಯದ) ಅಡಿಪಾಯವನ್ನು ಪುನರ್‌ಸ್ಥಾಪಿಸಬೇಕೆಂದು ಬಿಜೆಪಿ ಈ ಸಲ ಲಿಂಗಾಯತ ಸಮುದಾಯದ ಲೀಡರ್‌ಗಳನ್ನು ಸೈಡ್‌ಲೈನ್ ಮಾಡುವ ಪ್ರಯೋಗಕ್ಕೆ ಮುಂದಾಗಿತ್ತು. ಆದರೆ, ಕರ್ನಾಟಕದ ವಿಚಾರದಲ್ಲಿ ಹಿಂದೂತ್ವಕ್ಕೆ ತಾನು ಅನುಭವಿಸುತ್ತಿರುವ ನಾಯಕನ ಕೊರತೆ ಅರ್ಥವಾಗುತ್ತಿದ್ದಂತೆಯೇ, ಅದು ಲಿಂಗಾಯತರ ಮತಗಳಿಗಾಗಿ ‘ವಯೋವೃದ್ಧ’ (ಬಿಎಸ್‌ವೈ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಬಿಜೆಪಿ ಇದೇ ಕಾರಣ ಮುಂದೊಡ್ಡಿತ್ತು) ಯಡಿಯೂರಪ್ಪನವರನ್ನು ಮತ್ತೆ ವೇದಿಕೆಯ ಮೇಲೆ ಎಳೆದಾಡಲು ಶುರು ಮಾಡಿದೆ.

ಹಿಂದೂತ್ವಕ್ಕಿರುವ ಈ ಸ್ಥಳೀಯ ಕೊರತೆಯ ಕಾರಣಕ್ಕೆ, ಕರ್ನಾಟಕದ ಈ ಹಿಂದಿನ ಯಾವ ಸ್ಥಳೀಯ ಚುನಾವಣೆಗಳೂ ಹಿಂದೂತ್ವದ ಪ್ರಧಾನ ಚರ್ಚೆಯ ಮೇಲೆ ನಡೆದಿಲ್ಲ. ಈ ಸಲದ ಚುನಾವಣೆಯೂ ಹಿಂದೂತ್ವದ ಮೇಲೆ ನಡೆಯುತ್ತಿಲ್ಲ. ಹಿಂದೂತ್ವದ ನೆಲೆಗಟ್ಟಿನ ಮೇಲೆ 2023ರ ಅಸೆಂಬ್ಲಿ ಚುನಾವಣೆಯನ್ನು ನಡೆಸಬೇಕೆಂದು ಬಿಜೆಪಿ ಮತ್ತು ಸಂಘ ಪರಿವಾರ ಪ್ರಯತ್ನಿಸಿದ ಹಲಾಲ್ ಕಟ್ ಅಭಿಯಾನ, ಹಿಜಾಬ್ ನಿಷೇಧದ ಹುನ್ನಾರ, ಟಿಪ್ಪೂ ವರ್ಸಸ್ ಸಾವರ್ಕರ್ ನೆರೇಷನ್, ಉರೀಗೌಡ ಮತ್ತು ನಂಜೇಗೌಡ ಕಟ್ಟುಕಥೆಗಳು, ಮಸೀದಿ ಮೈಕ್‌ಗಳಿಗೆ ಕಲ್ಲು ಹೊಡೆಯಿರಿ ಎಂಬ ಈಶ್ವರಪ್ಪನ ಕರೆಗಳು ಸತತವಾಗಿ ಮಕಾಡೆ ಮುಗ್ಗರಿಸುತ್ತಾ ಬಂದದ್ದು, ಈ ಚುನಾವಣೆಯಲ್ಲಿ ಹಿಂದೂತ್ವಕ್ಕೆ ಯಾವ ಪ್ರಭಾವವೂ ಇಲ್ಲ ಅನ್ನೋದನ್ನು ಸಾಬೀತು ಮಾಡಿವೆ. ಸ್ವತಃ ಸಿಎಂ ಬೊಮ್ಮಾಯಿಯವರೇ, ಹಲಾಲ್-ಹಿಜಾಬ್‌ಗಳು ಮುಗಿದ ಅಧ್ಯಾಯ, ಅವು ಚುನಾವಣೆಯ ವಿಷಯಗಳಲ್ಲ ಎಂದು ಘೋಷಿಸಿಯಾಗಿದೆ. ಹಿಂದೂತ್ವದ ಇಶ್ಯೂಗಳಿಗೆ ಈಗ ಅಷ್ಟು ಮಾತ್ರ ಶಕ್ತಿ ಇದ್ದಿದ್ದರೆ, ಇವ್ಯಾವುವೂ ನೆಲಕಚ್ಚಲು ಬಿಜೆಪಿ ಬಿಟ್ಟುಕೊಡುತ್ತಿರಲಿಲ್ಲ. ಬೊಮ್ಮಾಯಿಯವರೇ ಅವುಗಳನ್ನು ಕೈಚೆಲ್ಲಿ ಮಾತಾಡುತ್ತಾರೆಂದರೆ, ಈ ಚುನಾವಣೆಯ ಸಾಗುತ್ತಿರುವ ದಿಕ್ಕನ್ನು ನಾವು ಗ್ರಹಿಸಬಹುದಾಗಿದೆ.

ಹಾಗಾಗಿ, ಭಜರಂಗದಳದ ಇಶ್ಯೂವನ್ನು ಬಿಜೆಪಿಯವರು, ಸಂಘ ಪರಿದಾವರು ಮತ್ತು ಮಾನಗೆಟ್ಟ ಮಾರಿಕೊಂಡ ಮೀಡಿಯಾಗಳು ದೊಡ್ಡ ದನಿಯಲ್ಲಿ ಚರ್ಚಿಸಿದ ಮಾತ್ರಕ್ಕೆ ಜನರ ವೋಟಿಂಗ್ ಸೈಕಾಲಜಿಯ ಮೇಲೆ ಭಾರೀ ಪರಿಣಾಮವನ್ನೇನೂ ಬೀರದು. ಅಖಂಡ ಭ್ರಷ್ಟಾಚಾರ, ಅಗಾಧ ಆಡಳಿತ ವೈಫಲ್ಯ ಮತ್ತು ವಿಪರೀತ ಬೆಲೆಯೇರಿಕೆಯ ಹೊರತಾಗಿಯೂ ಯಾರೆಲ್ಲ ಬಿಜೆಪಿಗೇ ಮತ ಹಾಕಬೇಕೆಂದು ನಿರ್ಧರಿಸಿಕೊಂಡಿದ್ದ ಖಟ್ಟರ್ ಬಿಜೆಪಿ ಮತದಾರರಿದ್ದರೋ, ಅಂತವರಿಗೆ ತಾವು ಭ್ರಷ್ಟ ಬಿಜೆಪಿಗೆ ಯಾಕೆ ಮತ ಹಾಕುತ್ತಿದ್ದೇವೆಂದು ಸಮರ್ಥಿಸಿಕೊಳ್ಳಲು ಒಂದು ಕಾರಣ ಸಿಕ್ಕಂತಾಗಿದೆಯಷ್ಟೆ. ಅದೇರೀತಿ, ಪ್ರಚಾರಕ್ಕೆ ಯಾವ ಸಾಮಗ್ರಿಯೂ ಇಲ್ಲದೆ ಜೋಲು ಮೋರೆ ಹಾಕಿಕೊಂಡಿದ್ದ ಬಿಜೆಪಿಯವರಿಗೆ ಮತ್ತು ಅವರ ಕೃಪಾಪೋಷಿತ ಮೀಡಿಯಾದವರಿಗೆ ಗಂಟಲು ಹರಿದುಕೊಳ್ಳಲು ಒಂದು ಸರಕು ಸಿಕ್ಕಿದೆಯಷ್ಟೆ. ಸೋಶಿಯಲ್ ಮೀಡಿಯಾವೂ ಸೇರಿದಂತೆ, ಬಹುತೇಕ ಸಂವಹನ ಮಾಧ್ಯಮಗಳನ್ನು ಅವರೇ ಕಬ್ಜಾ ಮಾಡಿಕೊಂಡಿರುವುದರಿಂದ ಅವರ ಆ ಧ್ವನಿ, ನಮಗೆ ದೊಡ್ಡ ಪ್ರತಿಧ್ವನಿಯಾಗಿ ಅಪ್ಪಳಿಸಿ, ಇಂಡಿಯಾ-ಪಾಕಿಸ್ತಾನ್ ಕ್ರಿಕೆಟ್ ಮ್ಯಾಚ್‌ನ ಕೊನೆಯ ಓವರ್‌ಗೆ ಆತಂಕಗೊಂಡಂತೆ, ಭಯಗೊಳ್ಳುತ್ತಿದ್ದೇವೆ. ಇದು ನನ್ನ ಅಭಿಪ್ರಾಯ.

ಹಾಗಂತ, ಬಿಜೆಪಿ ಈ ಚುನಾವಣೆಯಲ್ಲಿ ಸೋತು ಮನೆ ಸೇರುತ್ತದೆ, ಕಾಂಗ್ರೆಸ್ ಸಿಂಪಲ್ ಮೆಜಾರಿಟಿಯನ್ನು ದಾಟಿ ಅಧಿಕಾರಕ್ಕೇರುತ್ತದೆ ಎಂಬ ಭ್ರಮೆ ನನಗಿಲ್ಲ! ಬಿಜೆಪಿ ಪಾಲಿಗೆ ಕರ್ನಾಟಕ ಕೇವಲ ಒಂದು ರಾಜ್ಯ ಮಾತ್ರವಲ್ಲ, ತನ್ನ ಹಿಂದಿ-ಹಿಂದೂತ್ವದ (ಬ್ರಾಹ್ಮಣ್ಯ) ಅಜೆಂಡಾವನ್ನು ದಕ್ಷಿಣ ಭಾರತದ ಮೇಲೆ ಹೇರಲು ಒಂದು ಕೀಲಿಕೈ ಕೂಡಾ ಹೌದು.

ಕರ್ನಾಟಕದ ಮೂಲಕ ತಮಿಳುನಾಡಿಗೆ ಎಂಟ್ರಿ ಕೊಡಬೇಕೆಂಬ ದೂರಾಲೋಚನೆಯಿಂದಲೇ ಕರ್ನಾಟಕದ ಚುನಾವಣೆಯ ಉಸ್ತುವಾರಿಯನ್ನು ಬಿಜೆಪಿಯು ಅನುಭವವಿಲ್ಲದ ಅಣ್ಣಾಮಲೈ ಕೈಗೆ ಒಪ್ಪಿಸಿದೆ. ಹಾಗಾಗಿ ಅದು ಅಷ್ಟು ಸುಲಭವಾಗಿ ಕರ್ನಾಟಕವನ್ನು ಬಿಟ್ಟುಕೊಡಲೊಲ್ಲದು. ಎಲ್ಲಾ ಬಾಗಿಲುಗಳು ಮುಚ್ಚಿದರೂ, ಚುನಾವಣಾ ಅಕ್ರಮವೆಂಬ ಕಿಂಡಿಯ ಮೂಲಕ ಅದು ಗೆಲ್ಲಲು ಹವಣಿಸುತ್ತದೆ. ಆ ಚುನಾವಣಾ ಅಕ್ರಮಗಳು ಹೇಗೆಲ್ಲಾ ಇರಬಹುದೆಂಬ ಅಂದಾಜು ಬಹುಶಃ ನಮಗೆ ಊಹಿಸಲಿಕ್ಕೂ ಆಗದಿರಬಹುದು. ಅಷ್ಟು ತಯಾರಿಯನ್ನು ಬಿಜೆಪಿ ಮಾಡಿಕೊಂಡಿದೆ.

ಸಿದ್ದರಾಮಯ್ಯನವರ ಹೇಳಿಕೆ, ಭಜರಂಗದಳದ ಈ ಅರ್ಥವಿಲ್ಲದ ಚರ್ಚೆಗಳು ಜನರ ವೋಟಿಂಗ್ ಸೈಕಾಲಜಿಯ ಮೇಲೆ ಪ್ರಭಾವ ಬೀರದೇ ಹೋದರೂ, ಫಲಿತಾಂಶದ ನಂತರ ಬಿಜೆಪಿ ತನ್ನ ಚುನಾವಣಾ ಅಕ್ರಮವನ್ನು ಮುಚ್ಚಿಕೊಳ್ಳಲು ಇವುಗಳನ್ನು ಖಂಡಿತ ಬಳಸಿಕೊಳ್ಳುತ್ತದೆ. ಅದಕ್ಕೆ ಪೂರಕವಾಗಿಯೇ ಇಂಥಾ ಚರ್ಚೆಗಳನ್ನು, ಮೀಡಿಯಾ ಬಳಸಿಕೊಂಡು ಈಗ ಜೋರು ದನಿಯಲ್ಲಿ ನಡೆಸುತ್ತಿದ್ದಾರೆ. ಇನ್ನು ಮೂರ‍್ನಾಲ್ಕು ದಿನಗಳಲ್ಲಿ ಅಂತಹ ಇನ್ನಷ್ಟು ಚರ್ಚೆಗಳು ಬಂದರೂ ಅಚ್ಚರಿಯಿಲ್ಲ. ಫಲಿತಾಂಶದ ನಂತರ ಬಲಪಂಥೀಯರಿರಲಿ, ಜಾತ್ಯತೀತರು-ಪ್ರಗತಿಪರರು ಅನ್ನಿಸಿಕೊಂಡ ನಾವೇ, ಸಿದ್ದರಾಮಯ್ಯನವರ ಹೇಳಿಕೆಯಿಂದ ಇಷ್ಟು ಸೀಟು ಕಳೆದುಕೊಳ್ಳಬೇಕಾಯ್ತು, ಭಜರಂಗದಳದ ಚರ್ಚೆಯಿಂದ ಅಷ್ಟು ಸೀಟುಗಳು ಕೈಬಿಟ್ಟುಹೋದವು, ಡಿಕೆ ಶಿವಕುಮಾರ್ ಅವಾಂತರದಿಂದ ಹೀಗಾಯ್ತು, ರಾಹುಲ್‌ಗಾಂಧಿ ಮೀನಿನ ಪ್ರಕರಣ ನಮಗೆ ಮುಳ್ಳಾಯ್ತು, ಹಿಂದೂತ್ವದ ಅಮಲು ಜನರ ಮಿದುಳನ್ನು ಇನ್ಫೆಕ್ಟ್ ಮಾಡಿದೆ, ಶೆಟ್ಟರ್ ಸಹಿತ ಘಟಾನುಘಟಿ ನಾಯಕರಿಗೆ ಟಿಕೆಟ್ ತಪ್ಪಿಸಿ ಹೊಸಬರಿಗೆ ಟಿಕೆಟ್ ಕೊಟ್ಟಿದ್ದರಿಂದ ಬಿಜೆಪಿಯು ಆಡಳಿತ ವಿರೋಧಿ ಅಲೆಯಿಂದ ಬಚಾವಾಗಿ ಗೆಲ್ಲಲು ಸಾಧ್ಯವಾಯ್ತು ಅಂತ ಲೆಕ್ಕಹಾಕುತ್ತಾ ಕೂರುತ್ತೇವೆ. ಆಗ ಬಿಜೆಪಿಯ ಅಕ್ರಮಗಳು ತೆರೆಮರೆಗೆ ಸರಿದುಹೋಗುತ್ತವೆ. ಅದು ಆಗಲೆಂದೇ ಅವರು ಈಗ ಭಜರಂಗದಳದಂತಹ ಇಶ್ಯೂವನ್ನು ದೊಡ್ಡ ಚುನಾವಣೆಯ ವಿಚಾರದಂತೆ ಜೋರಾಗಿ ಅಬ್ಬರಿಸುತ್ತಿದ್ದಾರೆ. ಹಿಂದೂತ್ವವೇ ಆಬ್ಸೆಂಟ್ ಆಗಿರುವ ಈ ಚುನಾವಣೆಯಲ್ಲಿ, ಭಜರಂಗದಳದ ಚರ್ಚೆ ಹೇಗೆ ತಾನೇ ಪ್ರಭಾವ ಬೀರೀತು? ಹಲಾಲ್, ಹಿಜಾಬ್, ಟಿಪ್ಪೂ-ಉರಿನಂಜು ಮಲಗಿದಂತೆ ಅದೂ ಮಕಾಡೆ ಮಲಗುವ ಅರಚಾಟವಷ್ಟೆ. ಹಾಗೇನಾದರೂ ನಾವು ನಿಜಕ್ಕೂ ಆತಂಕಗೊಳ್ಳಬೇಕಿದ್ದರೆ, ಎಚ್ಚರಿಕೆ ತೆಗೆದುಕೊಳ್ಳಬೇಕಿದ್ದರೆ, ಅದು ಬಿಜೆಪಿ ನಡೆಸಬಹುದಾದ ಚುನಾವಣಾ ಅಕ್ರಮಗಳ ವಿಚಾರದ ಬಗ್ಗೆ ಮಾತ್ರ!

ಸುದೀರ್ಘ ಬರಹಕ್ಕೆ ಒಂದು ಸೇರ್ಪಡೆ

ಕರ್ನಾಟಕದಲ್ಲಿ ಅದುವರೆಗೆ ಕೇವಲ 2, 4 ಎಂಬ ಬಿಡಿ ಅಂಕಿಗಳಿಗಷ್ಟೇ ಸೀಮಿತವಾಗಿದ್ದ ಬಿಜೆಪಿ ಮೊಟ್ಟಮೊದಲ ಬಾರಿಗೆ 40 ಸ್ಥಾನಗಳ ಗಮನಾರ್ಹ ಸೀಟು ದಕ್ಕಿಸಿಕೊಂಡದ್ದು 1994ರ ವಿಧಾನಸಭಾ ಚುನಾವಣೆಯಲ್ಲಿ. 1992ರ ಬಾಬ್ರೀ ಮಸೀದಿ ಧ್ವಂಸದ ನಂತರ ನಡೆದ ಈ ಚುನಾವಣೆಯಲ್ಲಿ ಬಿಜೆಪಿಗೆ ಹಿಂದೂತ್ವದ ಬಲ ಸಿಕ್ಕಿದ್ದರಿಂದಲೇ ಅದು ಆ ಸಾಧನೆ ಮಾಡಿತು, ಹಾಗಾಗಿ ಕರ್ನಾಟಕದ ಸ್ಥಳೀಯ ಚುನಾವಣೆಯಲ್ಲಿ ಹಿಂದೂತ್ವದ ಪಾತ್ರವನ್ನು ನಿರ್ಲಕ್ಷಿಸಲಿಕ್ಕಾಗದು ಎಂದು ಕೆಲವರು ಹೇಳಬಹುದು. ಜನಸಂಘ ಅಥವಾ ಬಿಜೆಪಿ ಎಂಬ ಪೊಲಿಟಿಕಲ್ ಪಾರ್ಟಿ ಜನ್ಮವೆತ್ತಿದ್ದೆ ಕೋಮುವಾದದ ಅಜೆಂಡಾದ ಮೇಲೆ. ಹಾಗಾಗಿ ಅದರ ಏಳುಬೀಳಿನಲ್ಲಿ ಕೋಮುವಾದಿ ಕೃತ್ಯಗಳ ಛಾಯೆ ಇದ್ದೇ ಇರುತ್ತೆ. ಹಾಗಂತ 1994ರ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿ ಸಾಧನೆಯನ್ನು ಸಾರಾಸಗಟಾಗಿ ಬಾಬ್ರೀ ಮಸೀದಿ ಧ್ವಂಸದ ಮೇಲೆ ಆರೋಪಿಸುವುದಕ್ಕು ಮುನ್ನ, ಆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವೀರೇಂದ್ರ ಪಾಟೀಲರ ಪದಚ್ಯುತಿ ಪ್ರಕರಣವನ್ನು ನಾವು ನೆನಪಿಸಿಕೊಳ್ಳಲೇಬೇಕು. ಲಿಂಗಾಯತ ಸಮುದಾಯದ ಪಾಟೀಲರನ್ನು ಕಾಂಗ್ರೆಸ್ ಅವಮಾನಕರವಾಗಿ ನಡೆಸಿಕೊಂಡಿತು ಎಂದು ಹುಟ್ಟಿಕೊಂಡ ಪೊಲಿಟಿಕಲ್ ನೆರೇಷನ್ ಅನ್ನು, ಅಷ್ಟರಲ್ಲಾಗಲೇ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪನವರು ತಮ್ಮ ವಿಸ್ತಾರಕ್ಕೆ ವ್ಯವಸ್ಥಿತವಾಗಿ ಬಳಸಿಕೊಂಡಿದ್ದರಿಂದ, ಲಿಂಗಾಯತ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಯತ್ತ ಚಲಿಸಿತು. ಅದರ ಪರಿಣಾಮವಾಗಿ ಆ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನ ಗಳಿಸಿತು, ಯಡಿಯೂರಪ್ಪನವರೂ ವಿರೋಧ ಪಕ್ಷದ ನಾಯಕನಾಗಿ ಹೊಮ್ಮಲು ಸಾಧ್ಯವಾಯ್ತು. ಅಕಸ್ಮಾತ್, ಆ ಫಲಿತಾಂಶದಲ್ಲಿ ಬಾಬ್ರೀ ಮಸೀದಿ ಧ್ವಂಸದ ಕೋಮುವಾದಿ ಪ್ರಭಾವ ಸಣ್ಣ ಮಟ್ಟಿಗೆ ಇದ್ದಿದ್ದು ಸಂಘಪರಿವಾರಕ್ಕೆ ಮನದಟ್ಟಾಗಿದ್ದರೂ, ಅದು ಯಡಿಯೂರಪ್ಪನವರನ್ನು ‘ಲಿಂಗಾಯತ ಲೀಡರ್ ಇಮೇಜಿನಲ್ಲಿ ಇಷ್ಟು ಪ್ರಬಲವಾಗಿ ಬೆಳೆಯಲು ಅವಕಾಶ ಕೊಡುತ್ತಲೇ ಇರಲಿಲ್ಲ. ಸಾರಾಂಶದಲ್ಲಿ ಹೇಳಬೇಕೆಂದರೆ, ಅಂದಿನಿಂದ ಇಂದಿನವರೆಗೆ ಕರ್ನಾಟಕದ ಸ್ಥಳೀಯ ಚುನಾವಣೆಗಳಲ್ಲಿ ಹಿಂದೂತ್ವಕ್ಕೆ ಹೇಳಿಕೊಳ್ಳುವ ಮಹತ್ವ ಸಿಕ್ಕಿಲ್ಲ. ಈ ಚುನಾವಣೆಯಲ್ಲೂ ಸಹಾ….

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!