Thursday, September 19, 2024

ಪ್ರಾಯೋಗಿಕ ಆವೃತ್ತಿ

ಜನರ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಸಲು ಆಗ್ರಹ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜನರು, ರೈತರ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸ ಬೇಕು ಎಂದು ಒತ್ತಾಯಿಸಿ ಕನ್ನಡ ಸೇನೆ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಸರ್‌ಎಂವಿ ಪ್ರತಿಮೆ ಮುಂಭಾಗದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿ ಧರಣಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 10 ಸಾವಿರ ಕೋಟಿ ರೂ. ಯೋಜನೆಯ ಬೆಂಗಳೂರು-ಮೈಸೂರು ಹೆದ್ದಾರಿಯ ದಶಪಥದ ರಸ್ತೆಯ ಕಾರಿಡಾರ್ ನಿರ್ಮಾಣ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ.

ಹೆದ್ದಾರಿಯಲ್ಲಿ ಮೈಸೂರು- ಬೆಂಗಳೂರು ಪ್ರಯಾಣಿಸುವ ನೇರ ಪ್ರಯಾಣಿಕರಿಗಷ್ಟೇ ಅವಕಾಶ ನೀಡಲಾಗಿದೆ. ಮಂಡ್ಯ, ರಾಮನಗರ, ಮದ್ದೂರು, ಚನ್ನಪಟ್ಟಣದ ಸ್ಥಳೀಯ ಜನರಿಗೆ ಹೆದ್ದಾರಿಯಲ್ಲಿ ಓಡಾಡಲು ಪ್ರವೇಶಕ್ಕೆ ಅವಕಾಶವೇ ಇಲ್ಲದಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ದಿಂದ ಮಂಡ್ಯ, ರಾಮನಗರ ಜನರಿಗೆ ಅನುಕೂಲವೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರಿಡಾರ್ ನಿರ್ಮಾಣ ದಿಂದ ಸ್ಥಳೀಯ ಜನರಿಗೆ ಅನಾನುಕೂಲಗಳೇ ಹೆಚ್ಚಾಗಿವೆ. ರೈತರು, ನೌಕರರು, ವಿದ್ಯಾರ್ಥಿಗಳು, ಸಣ್ಣಪುಟ್ಟ ವ್ಯಾಪಾರಿಗಳು, ಉದ್ಯಮಿಗಳಿಗೆ ತೊಂದರೆಯಾಗಿದೆ. ಭೂಮಿ ನೀಡಿದ ರೈತರು, ಸ್ಥಳೀಯ ನಿವಾಸಿಗಳಿಗೆ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಸ್ಥಳೀಯ ರೋಗಿಗಳು ತುರ್ತು ತೆರಳಲು ಅವಕಾಶವೇ ಇಲ್ಲ. ಕೆಎಸ್‌ಆರ್‌ಟಿಸಿ, ಆಟೋ, ಗೂಡ್ಸ್, ಬೈಕ್ ಸವಾರರಿಗೂ ತೊಂದರೆಯಾಗಲಿದೆ ಎಂದು ಕಿಡಿಕಾರಿದರು.

ಹೋಟೆಲ್, ಬೇಕರಿ, ಟೀ-ಕಾಫಿ, ಹಣ್ಣು, ತರಕಾರಿ, ಎಳನೀರು, ಬೀದಿ ಬದಿ ವ್ಯಾಪಾರಸ್ಥರಿಗೆ ಅವಕಾಶವೇ ಇಲ್ಲದಂತಾಗಿದೆ. ಅವೈಜ್ಞಾನಿಕ ಕಾರಿಡಾರ್ ನಿರ್ಮಾಣದಿಂದ ಉದ್ದೇಶವೇ ಬುಡಮೇಲಾಗಿದೆ. ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಂಡ್ಯ, ರಾಮನಗರ ಸೇರಿದಂತೆ ಸ್ಥಳೀಯ ಜನರ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಮಂಜುನಾಥ್, ನಂದೀಶ್, ಶಶಿಕುಮಾರ್, ಅಂದಾನಿ, ರಮೇಶ್, ಮನು, ಶಿವ, ಜಯಮ್ಮ, ರಾಮಕೃಷ್ಣ, ಅರುಣ್‌ಕುಮಾರ್, ಮಂಜು, ಭರತ್, ಸೌಭಾಗ್ಯ, ಶಿವು, ರವಿ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!